ವಿಶಾಲ ಮನೋಭಾವ ಇರದವನು ಅಜ್ಞಾನಿ

ವಿಜಯಪುರ: ಧರ್ಮಗಳಲ್ಲಿ ದೊಡ್ಡ ಧರ್ಮವೆಂದರೆ ಮಾನವ ಧರ್ಮ. ಪರಮಾತ್ಮನಲ್ಲಿ ವಿಶೇಷ ಪ್ರೀತಿ ಉಳ್ಳವರು ಭಾರತೀಯರು. ಅನೇಕತ್ವದಲ್ಲಿ ಏಕತ್ವವನ್ನು ಕಾಣುವ ಸಂಸ್ಕಾರವನ್ನು ನಮ್ಮ ಹಿರಿಯರು ತಂದು ಕೊಟ್ಟಿದ್ದಾರೆ ಎಂದು ಅಧ್ಯಾತ್ಮ ಚಿಂತಕ ಪ್ರದ್ಮಶ್ರೀ ಇಬ್ರಾಹಿಂ ಸುತಾರ್ ಹೇಳಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದ ಭಾಷಾ ವೇದಿಕೆ ಹಾಗೂ ಕನ್ನಡ ವಿಭಾಗದ ಆಶ್ರಯದಲ್ಲಿ ಭಾರತೀಯ ಸಂಸ್ಕೃತಿ ಎಂಬ ವಿಷಯ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾಷೆ ಮಾತ್ರ ನಮ್ಮ ಸಂಸ್ಕೃತಿಯಲ್ಲ, ಉತ್ತಮ ನಡೆ ನುಡಿ, ಭಾವೈಕ್ಯತೆ, ಎಲ್ಲ ಧರ್ಮಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಭಾವೈಕ್ಯತೆ ಎಂಬುದು ಪ್ರಾಮಾಣಿಕವಾದ ಆಚಾರ. ವಿಶಾಲ ತಳಹದಿ ಮೇಲೆ ಗ್ರಂಥಗಳ ಅಧ್ಯಯನ ಮಾಡಬೇಕು. ವಿಶಾಲ ಮನೋಭಾವ ಇರದವನು ಅಜ್ಞಾನಿ. ರೂಪಗಳನ್ನು ದಾಟಿ ನೋಡುವುದೇ ತತ್ವಜ್ಞಾನ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ಸಂಸ್ಕೃತಿ ಎಂದರು.

ಪ್ರಾಚಾರ್ಯ ಡಾ.ಕೆ.ಜಿ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಆರ್.ಅಂಬಲಿ, ಯು.ಎಸ್.ಪೂಜೇರಿ, ಎಲ್ಲ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಶ್ವಿನಿ ಹಿರೇಮಠ ಹಾಗೂ ಸಮೀತ್ ಶಿಂಧೆ ಪ್ರಾರ್ಥಿಸಿದರು. ಉಷಾದೇವಿ ಹಿರೇಮಠ ಪರಿಚಯಿಸಿದರು. ಎಸ್.ಟಿ. ಮೇರವಾಡೆ ವಂದಿಸಿದರು.