ಡಿಕೆಶಿ ಉದ್ದೇಶ ಶೀಘ್ರ ಬಹಿರಂಗ

ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಗೆ ಬದ್ಧರಾಗಿರುವುದಾಗಿ ಹೇಳಿರುವ ವಿರುದ್ಧ ಮತ್ತೆ ಹರಿಹಾಯ್ದ ಸಚಿವ ಎಂ.ಬಿ. ಪಾಟೀಲ, ಡಿಕೆಶಿ ಉದ್ದೇಶ ಏನೆಂಬುದು ಗೊತ್ತಾಗಿದೆ. ಶೀಘ್ರದಲ್ಲಿ ವಿಶೇಷ ಸುದ್ದಿಗೋಷ್ಠಿ ಏರ್ಪಡಿಸಿ ಅದನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಸಾಕಷ್ಟು ಕಾರಣಗಳಿವೆ. ಅದರಲ್ಲಿ ಇದೂ ಒಂದಿರಬಹುದು. ಆ ಬಗ್ಗೆ ನೋಡೋಣ, ಚರ್ಚೆ ಮಾಡೋಣ. ಏಪ್ರಿಲ್ 23ರತನಕ ಆ ಬಗ್ಗೆ ಏನೂ ಮಾತನಾಡಲ್ಲ. ಆ ಬಳಿಕ ಸೋನಿಯಾ ಗಾಂಧಿ ಅವರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಪಕ್ಷ ಸಂಪೂರ್ಣ ನಿರ್ನಾಮ ಆಗಿದೆ. ಸಿದ್ದರಾಮಯ್ಯ ಸರ್ಕಾರ ಒಂದು ಒಳ್ಳೆಯ ಸರ್ಕಾರ. ಕೆಲವೊಬ್ಬರ ದರ್ಪ, ಆಂಗಿಕ ಭಾಷೆ, ಕೆಲವೊಬ್ಬರ ಮೇಲಿನ ದಬ್ಬಾಳಿಕೆಯಿಂದ ಪಕ್ಷ ಸೋತಿದೆ. ಕೆಲವೊಬ್ಬರ ಮೇಲೆ ಐಟಿ ದಾಳಿಯಾಯಿತು. ದೆಹಲಿಯಲ್ಲಿ ಹಣ ಸಿಕ್ಕಿತು. ಇದು ಕಾಂಗ್ರೆಸ್ ಮಂತ್ರಿಯೊಬ್ಬರ ಹಣ ಎಂದು ಮಾಧ್ಯಮಗಳಲ್ಲಿ ತೋರಿಸಿದ್ದೆ ತೋರಿಸಿದ್ದು. ಆದರೆ, ಅದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎಂಬುದು ಗೊತ್ತಿಲ್ಲ. ನೋಡೋಣ, ಆ ಎಲ್ಲ ಅಂಶಗಳ ಬಗ್ಗೆನೂ ಚರ್ಚೆ ಮಾಡೋಣ ಎಂದರು.

ಒಂದು ಸಮುದಾಯದ ಬಗ್ಗೆ ಮಾತನಾಡೋದು ಸರಿಯಲ್ಲ. ಒಕ್ಕಲಿಗರ ಸಮುದಾಯದ ಬಗ್ಗೆ ನನಗೆ ಅಪಾರ ಗೌರವವಿದೆ. ಕೆಂಪೇಗೌಡರು, ಬಾಲ ಗಂಗಾಧರ ಶ್ರೀಗಳು, ನಿರ್ಮಲಾನಂದ ಸ್ವಾಮೀಜಿಗಳ ಕಾರ್ಯದಿಂದ ಎಲ್ಲರೂ ಸಮಾಜದ ಬಗ್ಗೆ ಹೆಮ್ಮೆ ಪಡುವಂತಾಗಿದೆ. ಬಸವ ಸಂಸ್ಕೃತಿ ಎಲ್ಲ ಸಮಾಜವನ್ನು ಗೌರವಿಸುವಂತೆ ತಿಳಿಸಿದೆ. ಆದರೆ, ಕೆಲವು ವ್ಯಕ್ತಿಗಳು ಮಾಡುವ ಕೆಲಸ ಸಮಾಜಕ್ಕೆ ಕೆಟ್ಟ ಹೆಸರು ತರುತ್ತದೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.