ಹುತಾತ್ಮರ ವೃತ್ತ ಸ್ವಚ್ಛಗೊಳಿಸಿದ ಸಂಘಟಕರು

ವಿಜಯಪುರ : ನಗರದ ಹೃದಯ ಭಾಗದಲ್ಲಿರುವ ಹುತಾತ್ಮರ ವೃತ್ತವನ್ನು ವಿವಿಧ ಸಂಘಟನೆಗಳ ಸಂಘಟಕರು ಭಾನುವಾರ ಬೆಳಗ್ಗೆ ಸ್ವಚ್ಛಗೊಳಿಸಿದರು.

ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಹುತಾತ್ಮರ ವೃತ್ತವನ್ನು ಸ್ವಚ್ಛಗೊಳಿಸದೇ ನಿರ್ಲಕ್ಷ್ಯವಹಿಸಿದ್ದನ್ನು ಸಂಘಟಕರು ಖಂಡಿಸಿದರು.

ಹುತಾತ್ಮರ ವೃತ್ತವನ್ನು ಸಂಪೂರ್ಣ ಕಸಮುಕ್ತಗೊಳಿಸಿ ನೀರಿನಿಂದ ಸ್ವಚ್ಛಗೊಳಿಸಿ ಕ್ರಿಮಿನಾಶಕವನ್ನು ಸಿಂಪಡಿಸಿ ಆ ವೃತ್ತಕ್ಕೆ ಗೌರವ ಸೂಚಿಸಬೇಕಾಗಿದ್ದು ಜಿಲ್ಲಾಡಳಿತ ಆದ್ಯ ಕರ್ತವ್ಯ. ಆದರೆ ಬೇಜವಾಬ್ದಾರಿತನದಿಂದ ವರ್ತಿಸಿದ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಲ್ಲಿ ಬಿದ್ದಿರುವ ತ್ಯಾಜ್ಯವಸ್ತುಗಳನ್ನ ತೆರವುಗೊಳಿಸಿರುವುದಿಲ್ಲ. ವೃತ್ತದ ಮೇಲಿರುವ ಧೂಳನ್ನು ಸಹ ಸ್ವಚ್ಛಗೊಳಿಸಿಲ್ಲ. ವೃತ್ತದ ಸುತ್ತಮುತ್ತಲು ತಂಪುಪಾನೀಯ ಕೈಗಾಡಿಗಳು ಆವರಿಸಿಕೊಂಡು ಎಲ್ಲ ತ್ಯಾಜ್ಯಗಳನ್ನ ವೃತ್ತದಲ್ಲಿಯೇ ಎಸಗಿರುವುದಕ್ಕೆ ಸಂಘಟಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿರುವ ವಿವಿಧ ಸಮುದಾಯಗಳ ಮಹಾತ್ಮರ ವೃತ್ತವನ್ನು ದಿನಾಚರಣೆ, ಜಯಂತಿ ಅಂಗವಾಗಿ ಒಂದು ದಿನ ಪೂರ್ವದಲ್ಲಿ ಸ್ವಚ್ಛಗೊಳಿಸಿ ಹೇಗೆ ಅವುಗಳಿಗೆ ವಿಶೇಷತೆ ನೀಡುತ್ತಾರೋ ಹಾಗೆಯೇ ಹುತಾತ್ಮರ ವೃತ್ತವನ್ನು ಪರಿಗಣಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಡಳಿತ ಮತ್ತು ನಗರಾಡಳಿತಕ್ಕೆ ಎಚ್ಚರಿಕೆ ನೀಡಿದರು.

ವಿವಿಧ ಸಂಘಟನೆಗಳ ಮುಖಂಡರಾದ ಪ್ರಕಾಶ ಕುಂಬಾರ, ಯಾಜ ಕಲಾದಗಿ, ಸಾಯಿಬಣ್ಣ ಮಡಿವಾಳರ, ಸಮೀರ ಇನಾಂದಾರ, ಭರತ ಕೋಳಿ, ಎ.ಎ.ಜಾಗೀರದಾರ, ಬಸವರಾಜ ಬಿ.ಕೆ., ದತ್ತು ಪೂಜಾರಿ, ಪುನೀತ ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.