ಉತಾರೆಗಾಗಿ ಅನಿರ್ದಿಷ್ಟಾವಧಿ ಧರಣಿ

ವಿಜಯಪುರ: ಕರ್ನಾಟಕ ಗೃಹ ಮಂಡಳಿಯಿಂದ ಮಂಜೂರಾದ ನಿವೇಶನಗಳ ಉತಾರೆಯಲ್ಲಿ ವಾರ್ಡ್ ನಂ. 16 ಹಮಾಲ ಕಾಲನಿ ನಿವಾಸಿಗಳ ಹೆಸರು ದಾಖಲು ಮಾಡಲು ಒತ್ತಾಯಿಸಿ ಜಿಲ್ಲಾಡಳಿತ ಕಚೇರಿ ಮುಂಭಾಗ ಪೀರಪಾಶ್ಯಾ ಗಚ್ಚಿಮಹಲ್ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಗೊಂಡಿತು.

ಶುಕ್ರವಾರ ಬೆಳಗ್ಗೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಆರಂಭಿಸಿದ ನಿವಾಸಿಗಳು ಶೀಘ್ರದಲ್ಲೇ ನಿವಾಸಿಗಳ ಹೆಸರು ಉತಾರೆಯಲ್ಲಿ ನಮೂದಾಗದಿದ್ದರೆ ದಿನದಿಂದ ದಿನಕ್ಕೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಕರ್ನಾಟಕ ಗೃಹ ಮಂಡಳಿಯಿಂದ 1984 ರಲ್ಲಿ ನಿವೇಶನ ಮಂಜೂರು ಮಾಡಲಾಗಿದೆ. ಆದರೆ ಸುಮಾರು 34 ವರ್ಷಗಳಾದರೂ ಸದರಿ ನಿವೇಶನದಾರರ ಹೆಸರು ಸಂಬಂಧಪಟ್ಟ ಕಂದಾಯ ದಾಖಲೆ ಉತಾರೆಯಲ್ಲಿ ಹಾಗೂ ಹಕ್ಕು ರಿಜಿಸ್ಟಾರ್‌ನಲ್ಲಿ ದಾಖಲು ಆಗಿಲ್ಲ. ಇದರಿಂದ ನಿವೇಶನದ ಮಾಲೀಕರಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಅಲ್ಲಿರುವ ಎಲ್ಲ ಜಾತಿಯ ಜನರು ಸದರಿ ನಿವೇಶನಗಳಲ್ಲಿ ವಾಸ ಮಾಡುತ್ತಿದ್ದು ಎಲ್ಲರೂ ದಿನಗೂಲಿ ಮಾಡಿ ಜೀವನವನ್ನು ಸಾಗಿಸುತ್ತಾರೆ. ನಿವೇಶನಗಳಿಂದ ಸಾಲ ಪಡೆಯಲು ಹೋದರೆ ಸಂಬಂಧಿಸಿದ ಬ್ಯಾಂಕ್‌ನವರು ಉತಾರೆ ಕೇಳುತ್ತಾರೆ. ಹಾಗೂ ನಿವೇಶನಗಳಿಗೆ ವಿದ್ಯುತ್ ಸಂಪರ್ಕ ಕುಡಿಯುವ ನೀರಿನ ಸೌಲಭ್ಯ ಪಡೆಯಲು ಸಹ ಕಂದಾಯ ದಾಖಲೆಗಳನ್ನು ಕೇಳುತ್ತಾರೆ. ಇದರಿಂದ ಅಲ್ಲಿ ವಾಸಿಸುವ ಜನರಿಗೆ ಬಹಳ ತೊಂದರೆಯಾ ಗುತ್ತಿದೆ. ಆದಷ್ಟು ಬೇಗನೆ ಸದರಿ ನಿವೇಶನಗಳ ಉತಾರೆ ಮಾಡಿಕೊಡಬೇಕೆಂದು ಧರಣಿ ನಿರತರು ವಿನಂತಿಸಿದರು.

ಜತೆಗೆ ಯೋಗಾಪುರ ಕಾಲನಿ, ಗಾಂಧಿ ನಗರ, ಬಸವ ನಗರ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ನಿವೇಶನಗಳ ಹಾಗೂ ಮನೆಗಳ ನಮೂನೆ ನಂ.3 ಮತ್ತು ಹಕ್ಕು ಪತ್ರ ಇತ್ಯಾದಿಗಳ ಬಗ್ಗೆ ಮಹಾನಗರ ಪಾಲಿಕೆಯ ಕಾರ್ಯಾಲಯದಲ್ಲಿ ದಾಖಲೆಯೇ ಇಲ್ಲ. ಸಾರ್ವಜನಿಕರು ಅರ್ಜಿ ಸಲ್ಲಿಸಿದರು ಸಿಆರ್ ನಂಬರ್ ಹಾಗೂ ನಮೂನೆ ನಂಬರ್ 3ನ್ನು ಈವರೆಗೆ ಪೂರೈಸಿಲ್ಲ. ಕೂಡಲೇ ಈ ಮೇಲಿನ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ನಿವಾಸಿಗಳು ಆಗ್ರಹಿಸಿದರು. ಮುಖಂಡರಾದ ಇಸ್ಮಾಯಿಲ ಹೊನ್ನುಟಗಿ, ನಿಸಾರ ಪಠಾಣ, ಶಿರಾಜ ಗಚ್ಚಿನಮಹಲ, ಶೇಷರಾವ ಮಾನೆ, ಡಾ. ಕೊರೊಶಿ, ಜೈನುದ್ದಿನ ಇತರರಿದ್ದರು.