ಕಪ್ಪು ಬಟ್ಟೆ ಕಟ್ಟಿಕೊಂಡು ತಮಟೆ ಚಳವಳಿ

ವಿಜಯಪುರ: ಹೂವಿನ ಹಿಪ್ಪರಗಿ ಗ್ರಾಮದ ದಲಿತ ಬಾಲಕಿಯ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಬೇಕು ಮತ್ತು ವಾರದೊಳಗಾಗಿ ಆರೋಪಿಗಳನ್ನು ಬಂಧಿಸದಿದ್ದರೆ ಫೆ. 12 ರಂದು ಜಿಲ್ಲಾ ಬಂದ್​ಗೆ ಕರೆ ನೀಡುವುದಾಗಿ ಅಖಿಲ ಭಾರತ ವಾಲ್ಮೀಕ ಸಮಾಜ ಸೇವಾ ಸಂಘ ಎಚ್ಚರಿಸಿದೆ.

ಜಿಲ್ಲಾಡಳಿತ ಕಚೇರಿ ಎದುರು ತುಮಕೂರಿನ ಶಿಡ್ಲಕೋಣದ ವಾಲ್ಮೀಕಿ ಗುರುಪೀಠದ ಪೂಜ್ಯ ಸಂಜಯಕುಮಾರಾನಂದ ಶ್ರೀಗಳ ಸಮ್ಮುಖದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದ ಸಂಘದ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಂದೇಶ ರವಾನಿಸಿದರು. ಇದಕ್ಕೂ ಮುನ್ನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕೈಗೆ ಕಪ್ಪು ಬಟ್ಟೆ ಧರಿಸಿ ತಮಟೆ ಚಳವಳಿ ನಡೆಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, ರಾಜ್ಯದಲ್ಲಿ ಮೇಲಿಂದ ಮೇಲೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದಗ್ಯೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ದೇವರಹಿಪ್ಪರಗಿಯಲ್ಲಿ ದಲಿತ ಬಾಲಕಿ 4ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ನೇಣು ಬಿಗಿದು ಕೊಲೆ ಮಾಡಲಾಗಿದೆ. ಬಾಲಕಿ ಸಾವು ಅಸಹಜವೆಂದು ಈಗಾಗಲೇ ಪ್ರಕರಣ ಕೂಡ ದಾಖಲಾಗಿದೆ. ಆದರೆ, ಈವರೆಗೂ ಆರೋಪಿಗಳನ್ನು ಪತ್ತೆ ಹಚ್ಚಲಾಗಿಲ್ಲ. ಜನಪ್ರತಿನಿಧಿಗಳು ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನ ಮಾಡಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ಹೀಗಳೆದರು.

ಘಟನೆಯಿಂದ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ದುಸ್ತರವಾಗಿದೆ. ಚಿಕ್ಕ ಮಕ್ಕಳ ಮೇಲೆ ನಡೆಯುತ್ತಿರುವ ಈ ಪೈಶಾಚಿಕ ಕೃತ್ಯ ನಾಗರಿಕ ಸಮಾಜವನ್ನು ತಲ್ಲಣಗೊಳಿಸಿದೆ. ಈ ಹಿಂದೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬಸವನ ಬಾಗೇವಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತಾದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದರು. ಆ ಭರವಸೆ ಭರವಸೆಯಾಗಿಯೇ ಉಳಿದಿದೆ ಎಂದು ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಮನವಿ ಸಲ್ಲಿಸುವ ಸಂದರ್ಭ ಕುಟುಂಬ ಸದಸ್ಯನೋರ್ವ ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಕಾಲಿಗೆ ಎರಗಿದ ದೃಶ್ಯ ಮನಕಲುಕಿತು.

ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ , ಮುಖಂಡರಾದ ಸುರೇಶ ತಳವಾರ, ಶರಣಗೌಡ ಪಾಟೀಲ, ಸಿದ್ಧು ಮೇಟಿ ಇತರರಿದ್ದರು.