ಬಣ್ಣದಲೋಕ ಅನಾವರಣಕ್ಕೆ ಗುಮ್ಮಟನಗರಿ ಸಜ್ಜು

ಹೀರಾನಾಯ್ಕ ಟಿ.
ವಿಜಯಪುರ: ರಂಗು ರಂಗಿನ ಹೋಳಿ ಹಬ್ಬಕ್ಕೆ ಗುಮ್ಮಟನಗರಿ ಸಿದ್ಧಗೊಳ್ಳುತ್ತಿದೆ. ಪ್ರಸಕ್ತ ಸಾಲಿನಲ್ಲಿ ಬರದಿಂದ ತತ್ತರಿಸಿರುವ ವಿಜಯಪುರ ಜಿಲ್ಲೆಯಲ್ಲಿ ಹೋಳಿ ಸಂಭ್ರಮ ಭರದಿಂದ ಸಾಗುತ್ತಿದೆ.

ಲೋಕಸಭೆ ಚುನಾವಣೆ ಕಾವು ಒಂದೆಡೆಯಾದರೆ ಮತ್ತೊಂದೆಡೆ ನೆತ್ತಿಯ ಮೇಲೆ ಸುಡು ಬಿಸಿಲು. ಆದರೂ ಬಣ್ಣದಾಟ ಆಡಲು ವಿಜಯಪುರ ಜನತೆ ತುದಿಗಾಲ ಮೇಲೆ ನಿಂತಿದ್ದಾರೆ. ಈಗಾಗಲೇ ಗುಮ್ಮಟನಗರಿಯಲ್ಲಿ ಹಲಗೆ ನಿನಾದ ಮಾರ್ದನಿಸುತ್ತಿದ್ದು, ಬಣ್ಣದ ಲೋಕ ಅನಾವರಣಕ್ಕೆ ಬರದನಾಡು ಸಜ್ಜುಗೊಂಡಿದೆ.

ಎಲ್ಲೆಲ್ಲೂ ಹಲಗೆ ನಿನಾದ
ಹಲಗೆಯ ಸದ್ದು ಮೊಳಗಿದಾಗಲೇ ಹೋಳಿ ಹುಣ್ಣಿಮೆ ಸಮೀಪಿಸುತ್ತಿದೆ ಎಂಬುದು ಗೊತ್ತಾಗುತ್ತದೆ. ಗಲ್ಲಿ-ಗಲ್ಲಿಗಳಲ್ಲಿ ಹಲಗೆಯ ಸದ್ದು ಮೊಳಗುತ್ತಿದೆ. ಸಾಂಪ್ರದಾಯಿಕ ಹಲಗೆಗಳು 200 ರೂ. 600 ರೂ.ವರೆಗೆ ಮಾರಾಟವಾಗುತ್ತಿದ್ದರೆ, ನವೀನ ಮಾದರಿಯ ಹಲಗೆಗಳು 100 ರೂ. 500 ರೂ.ಗಳವರೆಗೆ ಮಾರಾಟ ವಾಗುತ್ತಿವೆ. ಸಾಂಪ್ರದಾಯಿಕ ಹಲಗೆಗಳಿಗಿಂತಲೂ ಆಧುನಿಕತೆಗೆ ಮಾರು ಹೋಗಿರುವ ಯುವಜನತೆ ವಿಶೇಷ ಬಗೆಯ ಪ್ಲಾಸ್ಟಿಕ್ (ಡ್ರಂ ಮಾದರಿ)ಯ ಹಲಗೆಯನ್ನು ಬಾರಿಸುವಲ್ಲಿ ಮಜಾ ಅನುಭವಿಸುತ್ತಿದ್ದಾರೆ. ಬಡಾವಣೆಗಳಲ್ಲಿ ಗುಂಪು ಕಟ್ಟಿಕೊಂಡು ಕಾಮ-ದಹನ ಕಾರ್ಯಕ್ರಮಕ್ಕೆ ಪಟ್ಟಿ ಸಂಗ್ರಹಣೆ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ನೈಸರ್ಗಿಕ ಬಣ್ಣಕ್ಕೆ ಭಾರೀ ಬೇಡಿಕೆ
ರಾಸಾಯನಿಕ ಬಣ್ಣ ಬಳಸಿ ತೊಂದರೆಗೊಳಗಾಗುವ ಬದಲು ನೈಸರ್ಗಿಕ ಬಣ್ಣ ಬಳಸಿ ಪರಿಸರ ಸ್ನೇಹಿಯಾಗಿ ಹೋಳಿ ಹಬ್ಬ ಆಚರಣೆಗೆ ಜನತೆ ಮುಂದಾಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ನೈಸರ್ಗಿಕ ಬಣ್ಣಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಐದು ರೂ. ಪ್ಯಾಕೆಟ್‌ನಿಂದ ಹಿಡಿದು ಕೆಜಿಗಟ್ಟಲೇ ಬಣ್ಣ ಖರೀದಿಯಾಗುತ್ತಿದೆ. ಅದರಲ್ಲೂ ನೈಸರ್ಗಿಕ ಬಣ್ಣವನ್ನು ಜನತೆ ಕೇಳಿ ಪಡೆಯುತ್ತಿದ್ದಾರೆ. ಕಳೆದ ಬಾರಿ ಸುಮಾರು 6 ಟನ್‌ಗಳಷ್ಟು ನೈಸರ್ಗಿಕ ಬಣ್ಣ ತರಿಸಿದ್ದೆವು, ಆದರೆ ಜನರ ಬೇಡಿಕೆ ನೋಡಿದರೆ ಈಗ 10 ಕ್ಕೂ ಹೆಚ್ಚು ಟನ್ ನೈಸರ್ಗಿಕ ಬಣ್ಣ ಬಂದಿದೆ ಎಂದು ವ್ಯಾಪಾರಿಗಳು ನೈಸರ್ಗಿಕ ಬಣ್ಣದ ಬೇಡಿಕೆ ವಿವರಿಸುತ್ತಾರೆ.

ಲಂಬಾಣಿಗರಿಂದ ವೈಶಿಷ್ಟ್ಯವಾಗಿ ಆಚರಣೆ
ಹೋಳಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಹೋಳಿ ಹಬ್ಬವನ್ನು ಅರ್ಥಪೂರ್ಣವಾಗಿ, ಸಡಗರದಿಂದ ಆಚರಿಸಲು ಸಜ್ಜಾಗಿದ್ದಾರೆ. ಅದರಲ್ಲೂ ರಾಜ್ಯದಲ್ಲಿಯೇ ಅತಿ ಹೆಚ್ಚು ಲಂಬಾಣಿ ಸಮುದಾಯದ ಜನರನ್ನು ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಲಂಬಾಣಿಗರು ವೈಶಿಷ್ಟ್ಯವಾಗಿ ಹೋಳಿ ಆಚರಿಸುತ್ತಾರೆ. ವಿಜಯಪುರ ತಾಲೂಕಿನ ಅಲ್ಲಾಪುರ ತಾಂಡಾ ಸೇರಿದಂತೆ ವಿವಿಧೆಡೆ ‘ಧೂಂಡ್’ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅಲ್ಲದೆ ಲಂಬಾಣಿ ಸಮುದಾಯದ ಹೆಣ್ಣು ಮಕ್ಕಳು ಸಾಂಪ್ರಾದಾಯಿಕ ಉಡುಗೆತೊಟ್ಟು ತಮ್ಮ ಆರಾಧ್ಯ ದೈವ ಸೇವಾಲಾಲರ ದೇವಸ್ಥಾನದ ಮುಂದೆ ಲಂಬಾಣಿ ನೃತ್ಯ ಮಾಡುವುದು ಹೀಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಬರದ ನಡುವೆಯೂ ಭರದ ಸಿದ್ಧತೆ
ನೆತ್ತಿಮೇಲೆ ಸುಡು ಬಿಸಿಲು. ಮನೆಯಿಂದ ಹೊರ ಬರುವುದೇ ಕಷ್ಟ. ಅದರಲ್ಲೂ ಪ್ರಸಕ್ತ ಸಾಲಿನಲ್ಲಿ ವರುಣನ ದರ್ಶನವಾಗದೇ ಬರ ತಾಂಡವಾಡುತ್ತಿದ್ದು, ಅದಲ್ಲಿಯೇ ಹೋಳಿ ಹುಣ್ಣಿಮೆ ಆಚರಣೆಗೆ ಭರ್ಜರಿ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ನಗರ ಸೇರಿದಂತೆ ಪಟ್ಟಣ, ಗ್ರಾಮೀಣ ಭಾಗದ ಅಂಗಡಿಗಳಲ್ಲಿ ಬಣ್ಣ ಖರೀದಿ ಜೋರು ನಡೆಯುತ್ತಿದೆ. 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೂ ಯುವಜನತೆಯಲ್ಲಿ ಉತ್ಸಾಹ ಹೆಚ್ಚಿದೆ. ಮಾ.20 ರಂದು ರಾತ್ರಿ ಕಾಮದಹನ, 21 ರಂದು ಬಣ್ಣ ಎರಚುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ.