ಹಲಸಂಗಿ ಗೆಳೆಯರ ಕೊಡುಗೆ ಅಪಾರ

ವಿಜಯಪುರ: ಜಿಲ್ಲೆ ಆರ್ಥಿಕವಾಗಿ ಹಿಂದುಳಿದರೂ ಸಾಂಸ್ಕೃತಿಕವಾಗಿ ಹಿಂದುಳಿದಿಲ್ಲ. ಹಲಸಂಗಿ ಗೆಳೆಯರ ಸಾರಸ್ವತ ಸೇವೆ ಜತೆಗೆ ವಿವಿಧ ಕಾರಣಗಳಿಂದಾಗಿ ಈ ನೆಲ ಸಾಂಸ್ಕೃತಿಕವಾಗಿ ಶ್ರೀಮಂತಗೊಂಡಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ ಹೇಳಿದರು.

ಇಲ್ಲಿನ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಲಸಂಗಿ ಗೆಳೆಯರ ಪ್ರತಿಷ್ಠಾನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಲಸಂಗಿ ಗೆಳೆಯರು ರಚಿಸಿದ ಸಾಹಿತ್ಯ ದೊಡ್ಡ ದೊಡ್ಡ ಪಂಡಿತರನ್ನೇ ನಿಬ್ಬೆರಗಾಗಿತ್ತದೆ. ನವೋದಯ ಕಾಲಘಟ್ಟ ಪ್ರಾರಂಭವಾಗಿದ್ದೆ ಹಲಸಂಗಿ ಗೆಳೆಯರಿಂದ. ಹಲಸಂಗಿ ಗೆಳೆಯರು ಆಧುನಿಕ ಕನ್ನಡ ಸಾಹಿತ್ಯದ ಅವಿಭಾಜ್ಯ ಅಂಗ ಎಂದರು. ಅನೇಕರು ಕನ್ನಡ ಸಾರಸ್ವತ ದಿಗ್ಗಜರು ಸಾರಸ್ವತ ಲೋಕವನ್ನು ಬೆಳಗಿಸಿದ್ದಾರೆ. ಈ ಪರಂಪರೆ ಮುಂದುವರೆಯಬೇಕಿದೆ. ಸಾರಸ್ವತ ಲೋಕ ಬೆಳಗಿಸುವ ಅನೇಕ ಸಾಹಿತ್ಯಕ ದಿಗ್ಗಜರು ಇನ್ನೂ ಬೆಳೆದು ಬರಬೇಕಿದೆ. ಸಾಹಿತ್ಯ ಕೃಷಿ ಸಾಗಬೇಕಿದೆ ಎಂದರು.

ಹಲಸಂಗಿ ಗೆಳೆಯರ ಸಾಧನೆ ಕುರಿತು ಉಪನ್ಯಾಸ ನೀಡಿದ ಖ್ಯಾತ ಸಂಶೋಧಕ ಡಾ.ಎಸ್.ಕೆ. ಕೊಪ್ಪ, ಜಾನಪದ ಎಂದರೆ ನೆನಪಾಗುವುದು ಹಲಸಂಗಿ ಗೆಳೆಯರ ಬಳಗ. ಹಲಸಂಗಿ ಗೆಳೆಯರು ಕೂಡಿಕೊಂಡು ಓದುವ ಹವ್ಯಾಸವನ್ನು ಬೆಳೆಸಿದರು, ಶಾರದಾ ವಾಚನಾಲಯವನ್ನು ತೆರೆದರು. ಹಲಸಂಗಿ ಗೆಳೆಯರ ಬಳಗದಲ್ಲಿ ನೂರಾರು ಗೆಳೆಯರಿದ್ದರು. ಅವರಲ್ಲಿ ಮಧುರಚೆನ್ನರು, ಡಾ.ಸಿಂಪಿ ಲಿಂಗಣ್ಣನವರು, ಕಾಪಸೆ ರೇವಪ್ಪ, ಪಿ. ಧೂಲಾಸಾಹೇಬ ಪ್ರಮುಖರು. ಪಿ. ಧೂಲಾ ಸಾಹೇಬ ದೇಶಕ್ಕೆ ಸ್ವಾತಂತ್ರ್ಯ ದೊರಕುವವರೆಗೂ ತಲೆಗೂದಲು ಕತ್ತರಿಸುವುದಿಲ್ಲ, ಮದುವೆಯಾಗುವುದಿಲ್ಲ ಎಂಬ ಸಂಕಲ್ಪ ಮಾಡಿದ್ದರು. ಅವರು 39ನೇ ಸಣ್ಣ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದರು. ಪಿ. ಧೂಲಾಸಾಹೇಬ ಕನ್ನಡದ ಪ್ರಥಮ ಮೊಹ್ಮದೀಯ ಕವಿ ಎಂದರು.

ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಎಚ್.ಬಿ., ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ.ಸೋಮಶೇಖರ ವಾಲಿ, ಡಾ.ಎಂ.ಎಸ್. ಮದಭಾವಿ ಮೊದಲಾದವರು ಪಾಲ್ಗೊಂಡಿದ್ದರು.

ವಿವಿಧ ಸಾಧಕರಿಗೆ ಪ್ರಶಸ್ತಿ
ಖ್ಯಾತ ಸಾಹಿತಿ ಡಾ.ಎಂ.ಬಿ. ಬಿರಾದಾರ ಸೇರಿ ಹಲವಾರು ಸಾರಸ್ವತ ಸಾಧಕರಿಗೆ ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2016 ನೇ ಸಾಲಿನ ಪ್ರಶಸ್ತಿಯನ್ನು ಕಲಬುರಗಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಬಿ. ಬಿರಾದಾರ, ಯುವ ಸಾಹಿತಿ ಪ್ರಕಾಶ ಗಿರಿಮಲ್ಲನವರ ಅವರಿಗೆ ಪ್ರದಾನ ಮಾಡಲಾಯಿತು. ಪ್ರಸಕ್ತ ವರ್ಷದ ಪ್ರಶಸ್ತಿಗೆ ಖ್ಯಾತ ಕವಿ ನಾಡೋಜ ಚೆನ್ನವೀರ ಕಣವಿ ಹಾಗೂ ಖ್ಯಾತ ಸಂಶೋಧಕ ಡಾ.ಷ ಶೆಟ್ಟರ್ ಅವರನ್ನು ಸಹ ಆಯ್ಕೆ ಮಾಡಲಾಗಿತ್ತು. ಇಬ್ಬರು ಸಾಧಕರು ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. 2018 ನೇ ಸಾಲಿನ ಪ್ರಶಸ್ತಿಯನ್ನು ಸಾಹಿತಿ ಡಾ.ಜಿ.ವಿ. ಕುಲಕರ್ಣಿ, ಡಾ.ವೀರಣ್ಣ ರಾಜಪೂರ, ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ, ಯುವ ಪತ್ರಕರ್ತೆ ಮಂಜುಳಾ ಹುಲಕುಂಟೆ ಅವರಿಗೆ ನೀಡಿ ಗೌರವಿಸಲಾಯಿತು. ಸಾಧಕರಿಗೆ 50 ಸಾವಿರ ರೂ. ನಗದು, ಪ್ರಶಸ್ತಿ ಲಕ, ಸ್ಮರಣಿಕೆ ನೀಡಿ ಹೃದಯಸ್ಪರ್ಶಿಯಾಗಿ ಗೌರವಿಸಲಾಯಿತು.