ಸಮಾಜದ ಜ್ಞಾನ ಪುಸ್ತಕಗಳಲ್ಲಿದೆ

ವಿಜಯಪುರ: ದೈಹಿಕ ಶಿಕ್ಷಣ ಕ್ಷೇತ್ರದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಜ್ಞಾನವನ್ನು ಮಕ್ಕಳಿಗೆ ನೀಡಲು ಹೆಚ್ಚು ಹೆಚ್ಚು ಕೃತಿಗಳ ಅಗತ್ಯವಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಂ.ಎಸ್. ಪಾಸೋಡಿ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿವಿಯ ಜ್ಞಾನಶಕ್ತಿ ಆವರಣದ ಶಿಕ್ಷಣ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಹಾಯಕ ಪ್ರಾಧ್ಯಾಪಕ ಡಾ.ಹನುಮಂತಯ್ಯ ಪೂಜಾರಿ ಅವರ ‘ದೈಹಿಕ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಹೊರ ಜಗತ್ತಿನ ಬುದ್ಧಿವಂತರು ಅಕ್ಷರ ಜಗತ್ತಿನ ಮಿತಿಯನ್ನು ತಮ್ಮ ಜಗತ್ತಿಗೆ ಹೋಲಿಕೆ ಮಾಡಬಾರದು. ಅಕ್ಷರ ಜಗತ್ತಿನಿಂದ ಬಂದವರು ವಿಜ್ಞಾನಿಗಳಾಗುತ್ತಾರೆ. ಸಮಾಜದ ದೊಡ್ಡ ಜ್ಞಾನವು ಪುಸ್ತಕಗಳಲ್ಲಿರುತ್ತದೆ. ಪುಸ್ತಕ ಬರೆಯುವುದು ಸುಲಭದ ಕೆಲಸವಲ್ಲ, ಅದು ನಿರಂತರ ಓದಿನ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಮಹಿಳಾ ವಿವಿಯ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಮಾತನಾಡಿ, ಮೊದಲು ನಾವು ಅಕ್ಷರಗಳನ್ನು ಜೋಡಿಸುವ ಕಲೆ ರೂಢಿಸಿಕೊಳ್ಳಬೇಕು. ಆಗ ಮಾತ್ರ ವಾಕ್ಯ ರಚಿಸಲು ಸಾಧ್ಯವಾಗುತ್ತದೆ. ಸವಲತ್ತುಗಳು ಸಿಕ್ಕಾಗ ಅವುಗಳನ್ನು ಅನುಭವಿಸಿ, ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಅವಕಾಶಗಳನ್ನು ಬಳಸದಿದ್ದರೆ ನಾವು ಮೂರ್ಖರಾಗುತ್ತೇವೆ. ನಮ್ಮ ಬದುಕನ್ನು ಕಟ್ಟಿಕೊಡುವುದು ನಮ್ಮ ಕಾಯಕವೇ. ಆದ್ದರಿಂದ ನಿರಂತರ ಕಾಯಕದಲ್ಲಿ ತೊಡಗಬೇಕು ಎಂದು ಹೇಳಿದರು.

ಮಹಿಳಾ ವಿವಿಯ ಕುಲಪತಿ ಪ್ರೊ.ಸಬಿಹಾ ಅಧ್ಯಕ್ಷತೆ ವಹಿಸಿ, ಬರವಣಿಗೆಯಲ್ಲಿ ಆತಂಕ, ಅತೃಪ್ತಿ, ಅಂಜಿಕೆ ಇರುವುದು ಸಹಜ. ಆದರೆ, ನಾವು ಅವುಗಳನ್ನೆಲ್ಲ ಮೆಟ್ಟಿನಿಲ್ಲಬೇಕು. ಮೊದಲು ನಮ್ಮ ಸಾಮರ್ಥ್ಯವನ್ನು ತುಲನೆ ಮಾಡಿಕೊಳ್ಳುವ ವಿಮರ್ಶಕರಾಗಬೇಕು. ನಮ್ಮತನವನ್ನು ನಾವೇ ತಟ್ಟಿ ಎಚ್ಚರಿಸಬೇಕು. ನಮ್ಮ ಬದುಕಿನ ಪರಿಸರವು ಓದು, ಬರಹದ ಜೀವನವನ್ನು ರೂಪಿಸುತ್ತವೆ ಎಂದು ಹೇಳಿದರು.

ಅತಿಥಿಗಳಾಗಿ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಧಮ್ಮ ಜ್ಯೋತಿ ಪ್ರಕಾಶ ಮತ್ತು ಶಿಕ್ಷಣ ನಿಖಾಯದ ಡೀನ್ ಪ್ರೊ.ಬಿ.ಎಲ್. ಲಕ್ಕಣ್ಣವರ, ಮಹಿಳಾ ವಿವಿಯ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿಷ್ಣು ಶಿಂಧೆ ನಿರೂಪಿಸಿದರು. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಕಾಶ ಬಡಿಗೇರ ವಂದಿಸಿದರು.

Leave a Reply

Your email address will not be published. Required fields are marked *