ಸಿಎಂ ಬಳಿ ದ್ರಾಕ್ಷಿ ಬೆಳೆಗಾರರ ನಿಯೋಗ

ವಿಜಯಪುರ: ಬರದ ಜಿಲ್ಲೆಯ ಬಹುದಿನದ ಬೇಡಿಕೆಯಾದ ದ್ರಾಕ್ಷಿ ಬೆಳೆಗಾರರ ಸಾಲಮನ್ನಾಕ್ಕೆ ಸಿಎಂ ಕುಮಾರಸ್ವಾಮಿ ಸಮ್ಮತಿ ಸೂಚಿಸಿದ್ದಾರೆ.

ಗುರುವಾರ ರಾಜ್ಯದ ವಿವಿಧ ಭಾಗಗಳ 100ಕ್ಕೂ ಅಧಿಕ ಬೆಳೆಗಾರರ ನಿಯೋಗ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಾಗಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ರೈತರ ಬೇಡಿಕೆಗೆ ಸಚಿವರಾದ ಎಂ.ಬಿ. ಪಾಟೀಲ, ಕೃಷ್ಣ ಭೈರೇಗೌಡ, ಶಾಸಕರಾದ ದೇವಾನಂದ ಚವ್ಹಾಣ, ಆನಂದ ನ್ಯಾಮಗೌಡ ಸೇರಿದಂತೆ ಹಲವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ.

ಪ್ರಸಕ್ತ ಬಜೆಟ್‌ನಲ್ಲಿ ದ್ರಾಕ್ಷಿ-ದಾಳಿಂಬೆ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಿಎಂ ಕುಮಾರಸ್ವಾಮಿ ಅವರು 150 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು ಇದಕ್ಕೆ ಎಲ್ಲ ಬೆಳೆಗಾರರು ಅಭಿನಂದನೆ ಸಲ್ಲಿಸಿದರು. ಜತೆಗೆ ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಮಾಡಲು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಮುಂಬರುವ ದಿನಗಳಲ್ಲಿ ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಮಾಡುವ ಪ್ರಯತ್ನ ಮಾಡುವೆ. ಜತೆಗೆ ವಿಜಯಪುರದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪಿಸುವ ಭರವಸೆ ನೀಡಿದರು.

ದ್ರಾಕ್ಷಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಅಭಯಕುಮಾರ ನಾಂದ್ರೇಕರ, ಡಾ.ಕೆ.ಎಚ್. ಮುಂಬಾರಡ್ಡಿ, ಎಸ್.ಎಚ್. ನಿಗಡೆ, ಯಶವಂತ ಗೋರ್ಪಡೆ, ಶೇಕಪ್ಪ ಚಿಕ್ಕಗಲಗಲಿ, ಆನಂದಪ್ಪಗೌಡ ಹುಣಸಗಿ, ಧರ್ಮಣ್ಣ ಬಿಳೂರ ಸೇರಿದಂತೆ ಹಲವರು ಇದ್ದರು.