ಮಾಸಾಶನ ಹೆಚ್ಚಿಸಲು ಅಂಗವಿಕಲರ ಆಗ್ರಹ

ವಿಜಯಪುರ: ಬಜೆಟ್‌ನಲ್ಲಿ ಅಂಗವಿಲಕರ ಮಾಸಾಶನ ಹೆಚ್ಚಿಸುವ ಹಾಗೂ ಇನ್ನಿತರ ಬೇಡಿಕೆಗಳನ್ನು ಮರುಸೇರ್ಪಡೆ ಮಾಡುವಂತೆ ಒತ್ತಾಯಿಸಿ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ವಿನೋದ ಖೇಡ ಮಾತನಾಡಿ, 2019-20ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಂಗವಿಕಲರನ್ನು ಕಡೆಗಣಿಸಿದ್ದು ಖಂಡನೀಯ. ಅಂಗವಿಕಲರ ಕುರಿತು ಬಜೆಟ್‌ನಲ್ಲಿ ಯಾವ ಯೋಜನೆಗಳನ್ನು ಮಂಡಿಸದೆ ಇರುವುದು ಪ್ರಜಾಪ್ರಭುತ್ವ ವಿರೋಧಿ ನೀತಿ ತೋರಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ವಾಲಿಕಾರ ಮಾತನಾಡಿ, ರಾಜ್ಯದ ವಿದ್ಯಾವಂತ ಅಂಗವಿಕಲರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.

ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ರಾಜ್ಯದ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಗೌರವಧನ ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಉಮರಾಣಿ ಮಾತನಾಡಿ, ರಾಜ್ಯದ ಎಲ್ಲ ಅಂಗವಿಕಲರಿಗೆ ಪ್ರತಿ ತಿಂಗಳು 5 ಸಾವಿರ ರೂ. ಮಾಸಾಶನ ನೀಡಬೇಕೆಂದು ಒತ್ತಾಯಿಸಿದರು.

ಸಾವಿತ್ರಿ ಮೋರೆ, ವಿಜಯಪುರ ತಾಲೂಕಿನ ಅಧ್ಯಕ್ಷ ಎ.ಎ. ಹಕೀಂ, ತಾಲೂಕು ಕಾರ್ಯದರ್ಶಿ ಅಂಬಣ್ಣ ಗುನ್ನಾಪುರ, ಇಂಡಿ ತಾಲೂಕಾಧ್ಯಕ್ಷ ಸರ್ರಾಜ ಮಕಾಂದಾರ್, ಉಪಾಧ್ಯಕ್ಷ ನಿಂಗರಾಜ ಬಿಸನಾಳ, ಸಿಂದಗಿ ತಾಲೂಕಾಧ್ಯಕ್ಷ ವಿಠಲ ಕರ್ಜಗಿ, ವಸಂತ ಕುಲಕರ್ಣಿ, ವಿಠಲ ಹಂಚನಾಳ, ಭಾಶ್ಯಾ ಮಕಾಂದಾರ್, ಬಾಬು ಸಾತಿಹಾಳ, ನಿಮಿಷ ಆಚಾರ್ಯ, ಭೀಮನಗೌಡ ಪಾಟೀಲ, ಶಂಕ್ರೆಮ್ಮ ಕೋರಿ, ತುಳಸಾ ಕನಸೆ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.