ಸಿದ್ದುಗೆ ಮುಖ್ಯಮಂತ್ರಿ ಹುಚ್ಚು ಬಿಡಿಸಿ

ವಿಜಯಪುರ: ‘ಸಿದ್ದರಾಮಯ್ಯಗೆ ಹುಚ್ಚು ಹಿಡಿದಿದೆ. ಈ ಹುಚ್ಚು ಬಿಡಿಸಲು ಬೀರೇಶ್ವರ (ದೇವರು) ನಿಂದಲೂ ಸಾಧ್ಯವಿಲ್ಲ. ಹೇಗಾದರೂ ಮಾಡಿ ಅವರಿಗೆ ಚಿಕಿತ್ಸೆ ಕೊಡಿಸಿ ಎಂದು ಖರ್ಗೆ ಅವರಲ್ಲಿ ಮನವಿ ಮಾಡುವೆ’ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತಾದ ವ್ಯಂಗ್ಯ, ಸಿಟ್ಟು, ಸೆಡವುಗಳೆಲ್ಲವನ್ನೂ ಒಟ್ಟಿಗೆ ಹೊರಹಾಕಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ ಅವರು ಸಿದ್ದರಾಮಯ್ಯ ಅವರಿಗೆ ಬುದ್ಧಿ ಕೊಡಲಿ ಎಂದಿದ್ದರೆ ಅದು ಅಸಾಧ್ಯ. ಸಿದ್ದರಾಮಯ್ಯಗೆ ಬುದ್ಧಿ ಕೊಡಲು ಬೀರೇಶ್ವರನಿಗೂ ಸಾಧ್ಯವಿಲ್ಲ ಎಂದು ಸೋಮವಾರ ಶಿವಣಗಿಯ ಮರಡಿಸಿದ್ಧೇಶ್ವರ ಜಾತ್ರೆಯಲ್ಲಿ ಭಾಗವಹಿಸುವ ಮುನ್ನ ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಯಾರೇ ಆಗಲಿ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಬಯಸುತ್ತಾರೆ. ಆದರೆ, ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಎನ್ನುತ್ತಾರೆ. ನನ್ನ ಜೀವನದಲ್ಲಿ ಇಂಥ ವ್ಯಕ್ತಿಯನ್ನು ಕಂಡಿಲ್ಲ. ವಾಟಾಳ ನಾಗರಾಜ್ ಸಹ ತಾನೆಂದೂ ಮುಖ್ಯಮಂತ್ರಿಯಾಗಬೇಕೆಂದು ಹೇಳಿಲ್ಲ. ಹಗಲು- ರಾತ್ರಿ ನಾನೇ ಮುಖ್ಯಮಂತ್ರಿ ಎಂದು ಬಡಬಡಿಸುತ್ತಿದ್ದಾರೆ. ನಾನು ಕಾಂಗ್ರೆಸ್‌ನ ಕೇಂದ್ರ ಹಾಗೂ ರಾಜ್ಯ ಮುಖಂಡರಿಗೆ ಮೊದಲು ಈ ಹುಚ್ಚನಿಗೆ ಚಿಕಿತ್ಸೆ ಕೊಡಿಸಿ ಎಂದು ಮನವಿ ಮಾಡುತ್ತೇನೆಂದರು.

ಸಿದ್ದರಾಮಯ್ಯ ಥರ ನನಗೆ ಹುಚ್ಚಿಲ್ಲ
ಸಿದ್ದರಾಮಯ್ಯ ಅವರು ನನಗೆ ಧಮ್ ಇದ್ದರೆ ಸಿಎಂ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ನನಗೆ ಆ ಥರದ ಹುಚ್ಚಿಲ್ಲ. ನಾನು ಸಿಎಂ ಮತ್ತು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಬಿಜೆಪಿಯಲ್ಲಿ ಒಂದು ಶಿಸ್ತಿದೆ. ಕಾಂಗ್ರೆಸ್‌ನಲ್ಲಿರೋ ಥರ ಯಾರು ಬೇಕಾದರೂ ಇಲ್ಲಿ ಸಿಎಂ ಎಂದು ಹೇಳಿಕೊಂಡು ತಿರುಗಾಡಲ್ಲ. ಸಿದ್ದರಾಮಯ್ಯನ ಥರ ಸರ್ವಾಧಿಕಾರಿ ಧೋರಣೆ ನಮ್ಮಲ್ಲಿಲ್ಲ.

ಸಿದ್ದರಾಮಯ್ಯ ತಾವೊಬ್ಬರೇ ಹಿಂದುಳಿದವ. ಬೇರೆ ಯಾರೂ ಹಿಂದುಳಿದವರು, ದಲಿತರು ಅಲ್ಲ. ಎಲ್ಲ ತನಗೇ ಸಿಗಬೇಕು ಅನ್ನೋ ಬುದ್ಧಿ ಅವರಲ್ಲಿದೆ. ಕಾಂಗ್ರೆಸ್‌ನಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಎಲ್ಲ ಸಿದ್ದರಾಮಯ್ಯಂದೆ ಇದೆ. ಕೆಲವೇ ಕೆಲವರು ಸಿದ್ದರಾಮಯ್ಯನೇ ಸಿಎಂ ಆಗಬೇಕೆಂದು ಹೇಳಿಕೊಂಡು ಹೊರಟಿದ್ದಾರೆ. ಅವರಿಗೆ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಬುದ್ಧಿ ಹೇಳುತ್ತಿಲ್ಲ ಎಂದು ಟೀಕಿಸಿದರು.

ಮೈತ್ರಿಯಲ್ಲಿ ಭಿನ್ನಮತ ಸ್ಫೋಟ
ಮೈತ್ರಿಯಲ್ಲಿ ಈಗಾಗಲೇ ಭಿನ್ನಾಭಿಪ್ರಾಯ ಹೆಚ್ಚಿದೆ. ರಾಜ್ಯದಲ್ಲಿ ಕಾಂಗ್ರೆಸ್ ಜೀವಂತ ಇದೆಯೋ ಇಲ್ಲವೋ ಗೊತ್ತಿಲ್ಲ. ಈ ಎರಡು ಪಕ್ಷಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲು ಹಾಕುತ್ತಿವೆ. ಹೀಗಾಗಿ ಜನರು ರೊಚ್ಚಿಗೆದ್ದಿದ್ದಾರೆ. ಜೆಡಿಎಸ್- ಕಾಂಗ್ರೆಸ್ ನಾಯಕರು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರನ್ನು ಕಣ್ಣೀರು ಹಾಕಿಸುತ್ತಲೇ ಇದ್ದಾರೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ. ಉಪ ಚುನಾವಣೆ ಮುಗಿದು ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಭಿನ್ನಮತ ಸ್ಫೋಟಗೊಂಡು ಸರ್ಕಾರ ಬಿದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರೆ ಅವರ ಮನೆಯ ವಾಚ್‌ಮನ್ ಆಗುವುದಾಗಿ ಜಮೀರ್ ಅಹ್ಮದ್ ಸವಾಲು ಹಾಕಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಹಾಗೆ ಮಾಡಿದರೆ ಜಮೀರ್ ಯಡಿಯೂರಪ್ಪ ಅವರ ಮನೆಯನ್ನೇ ಕಳವು ಮಾಡಿ ಬಿಡುತ್ತಾನೆ. ಖಂಡಿತ ಅವನನ್ನು ವಾಚ್‌ಮನ್ ಮಾಡಿಕೊಳ್ಳದಂತೆ ಯಡಿಯೂಪ್ಪಗೆ ಮನವಿ ಮಾಡುವುದಾಗಿ ಈಶ್ವರಪ್ಪ ವ್ಯಂಗ್ಯವಾಡಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ, ಮುಖಂಡರಾದ ವಿಜುಗೌಡ ಪಾಟೀಲ, ರವಿಕಾಂತ ಬಗಲಿ, ರಾಜು ಬಿರಾದಾರ, ವಿವೇಕಾನಂದ ಡಬ್ಬಿ, ವಿಜು ಜೋಶಿ ಇತರರಿದ್ದರು.

ಸಿದ್ದರಾಮಯ್ಯ ದೇವೇಗೌಡರಿಗೆ ಟೋಪಿ ಹಾಕಿ ಕಾಂಗ್ರೆಸ್ ಸೇರಿಕೊಂಡವರು. ಅವರೊಬ್ಬ ನಾಟಕಕಾರ. ಖರ್ಗೆ ಅವರಿಗೆ ಪ್ರಾರ್ಥನೆ ಮಾಡುವೆ. ತಾವು ಕಾಂಗ್ರೆಸ್ ಕಟ್ಟಿಕೊಂಡು ಬಂದಿದ್ದೀರಿ. ಈ ಹುಚ್ಚನ ಹುಚ್ಚು ಮೊದಲು ಬಿಡಿಸಿ. ಸಿದ್ದರಾಮಯ್ಯನಿಗೆ ಬಾಯಿ ಮುಚ್ಕೊಂಡು ಇರ‌್ರಿ.. ಅಂತ ಹೇಳೋಕಾಗಲ್ವ?, ಖರ್ಗೆಗೆ ಆ ತಾಕತ್ತು ಇಲ್ವ?. ಮುಖ್ಯಮಂತ್ರಿ ಕನಸಿನಿಂದಾಗಿ ಸಿದ್ದರಾಮಯ್ಯ ವೇಷಭೂಷಣಗಳನ್ನು ಇನ್ನೂ ಹಾಗೆ ಇಟ್ಕೊಂಡಿದ್ದಾರೆ.
ಕೆ.ಎಸ್. ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ

ಖರ್ಗೆ ನೇಣು ಹಾಕಿಕೊಳ್ಳಬಾರದು
‘ಖರ್ಗೆ ಅವರು ದಯವಿಟ್ಟು ನೇಣು ಹಾಕಿಕೊಳ್ಳಬಾರದು, ಅವರು ಹಿರಿಯ ರಾಜಕಾರಣಿ, ಅವರಿಂದಲಂತೂ ರಾಜ್ಯ ಮತ್ತು ಕ್ಷೇತ್ರ ಉದ್ದಾರ ಮಾಡಲಾಗಲಿಲ್ಲ, ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಅವರು ನೋಡಬೇಕು, ಹೀಗಾಗಿ ನೇಣು ಹಾಕಿಕೊಳ್ಳದಂತೆ ಮನವಿ ಮಾಡುವೆ’ ಎಂದು ಈಶ್ವರಪ್ಪ ನುಡಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೋದಿ ನೇಣು ಹಾಕಿಕೊಳ್ಳುತ್ತಾರಾ ಕೇಳಿ? ಎಂಬ ಖರ್ಗೆ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಈಶ್ವರಪ್ಪು ಈ ರೀತಿ ನುಡಿದರು. ಬಳಿಕ ಖರ್ಗೆ ಹೇಳಿಕೆ ಕುರಿತು ಮನವರಿಕೆ ಮಾಡಲಾಗಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಖರ್ಗೆ ಅವರು ಮೊದಲು ತಮ್ಮ ಮನೆ ತೊಳೆದುಕೊಳ್ಳಲಿ ಎಂದು ಮಾತು ಮುಗಿಸಿದರು.

ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಬಳಿಕ ನಾನೆ ಸಿಎಂ ಎಂದು ಯತ್ನಾಳ ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ‘ಅದು ಇನ್ನೊಂದು ಹುಚ್ಚು’ ಎಂದರು.