ಜಿಗಜಿಣಗಿ ಜನ ತಕ್ಕ ಪಾಠ ಕಲಿಸಲಿದ್ದಾರೆ

ವಿಜಯಪುರ: ಅಸ್ಪಶ್ಯ ಎಂದು ಹೇಳಿಕೊಂಡು ದೇವಸ್ಥಾನಗಳ ಹೊರಗೆ ನಿಲ್ಲುವುದು ಹಾಗೂ ಊರ ಹೊರಗಿನ ಕಟ್ಟೆಗಳಲ್ಲಿ ಕುಳಿತುಕೊಳ್ಳುವ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ವರ್ತನೆ ಹೇಡಿತನದಿಂದ ಕೂಡಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಜಲಜಾ ನಾಯಕ ದೂರಿದರು.

ಅಣ್ಣ ಬಸವಣ್ಣನ ನಾಡಿನಲ್ಲಿ ಜನಿಸಿದ ರಮೇಶ ಜಿಗಜಿಣಗಿ ಅಸ್ಪಶ್ಯತೆಯನ್ನು ಹೋಗಲಾಡಿಸುವ ಬದಲು ತಾವೇ ಅದನ್ನು ಪೋಷಿಸುತ್ತಿದ್ದಾರೆ. ಆ ಮೂಲಕ ಜನರ ಅನುಕಂಪ ಪಡೆದು ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರ ಹೊಂದಿದ್ದಾರೆ. ಇದಕ್ಕೆ ಜನ ಸೊಪ್ಪು ಹಾಕುವುದಿಲ್ಲವೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ನಾಯಕನಾದವನು ತನ್ನೊಂದಿಗೆ ಇತರರನ್ನು ಮುನ್ನಡೆಸಿಕೊಂಡು ಹೋಗಬೇಕು. ಅಣ್ಣ ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಮೊದಲಾದವರು ಅಸ್ಪಶ್ಯತೆಯನ್ನು ಧಿಕ್ಕರಿಸಿ ಮುನ್ನಡೆದರು. ಆದರೆ ರಮೇಶ ಜಿಗಜಿಣಗಿ ಅವರು ಅಸ್ಪಶ್ಯತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಜಿಗಜಿಣಗಿ ಅವರ ಲೋಪಗಳೇ ಅವರಿಗೆ ತಿರುಗಿ ಬೀಳಲಿದ್ದು, ಅವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಬಿಜೆಪಿಯ ಕಟ್ಟಾ ಮತದಾರರೇ ಮೋದಿ ಅವರನ್ನು ನೋಡಿ ವೋಟು ಹಾಕುತ್ತೇವೆ. ದನ ನಿಂತರೂ ಹಾಕುತ್ತೇವೆ ಎನ್ನುತ್ತಾರೆ ಎಂದರೆ ಬಿಜೆಪಿಗರಲ್ಲಿಯೇ ಜಿಗಜಿಣಗಿ ಅವರು ಏನೂ ಕೆಲಸ ಮಾಡಿಲ್ಲ ಎಂಬ ಭಾವನೆ ಇರುವುದು ಗೊತ್ತಾಗುತ್ತದೆ ಅಲ್ಲವೇ ? ಎಂದು ಪ್ರಶ್ನಿಸಿದ ಅವರು, ಜಿಗಜಿಣಗಿ ಅವರು ಹಿರಿಯ ರಾಜಕಾರಣಿ. ಭಾರತೀಯ ಸಂವಿಧಾನ ಕರುಣಿಸಿದ ಮೀಸಲಾತಿಯ ಪ್ರಯೋಜನದಿಂದಾಗಿ ಅಧಿಕಾರಕ್ಕೆ ಬಂದ ಅವರು ಯಾವುದೇ ರೀತಿ ಅಭಿವೃದ್ಧಿ ಮಾಡಿಲ್ಲ ಎಂದರು.

ನೈರ್ಮಲ್ಯ ಹಾಗೂ ಕುಡಿಯುವ ನೀರಿನ ಸಚಿವರಾಗಿ ಅವರೇನೂ ಅಭಿವೃದ್ಧಿ ಮಾಡಿಲ್ಲ, ಕುಡಿಯುವ ನೀರಿನ ಒಂದೇ ಒಂದು ಸಣ್ಣ ಯೋಜನೆಯನ್ನು ಜಿಲ್ಲೆಗೆ ನೀಡಿಲ್ಲ. ಅನುದಾನ ಸಹ ಪರಿಪೂರ್ಣವಾಗಿ ಬಳಸಿಲ್ಲ. ಅನುದಾನ ಸದ್ಬಳಕೆ ಮಾಡಿಕೊಳ್ಳಲು ಶ್ರಮವೇ ಹಾಕಲಿಲ್ಲ. ಜನರ ಮುಗ್ಧತೆಯನ್ನು ಬಳಸಿ ಅಧಿಕಾರಕ್ಕೆ ಬಂದು ಅದೇ ಜನರನ್ನು ಮೂರ್ಖರನ್ನಾಗಿಸಿದ್ದಾರೆ. ಜನತೆ ಅವರಿಗೆ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಪಕ್ಷ ಮಾಡಿರುವ ಕೆಲಸವನ್ನು ತಾವೇ ಮಾಡಿದ್ದು ಎಂದು ಹೇಳಿಕೊಂಡು ಹೊರಟಿದ್ದಾರೆ ಎಂದು ಆರೋಪಿಸಿದರು.

ಎನ್‌ಟಿಪಿಸಿ ಸ್ಥಾಪನೆಯಾಗಿದ್ದು ಯುಪಿಎ ಸರ್ಕಾರದ ಸಂದರ್ಭದಲ್ಲಿ. ಕೇಂದ್ರ ಇಂಧನ ಸಚಿವರಾಗಿದ್ದ ಸುಶೀಲ್‌ಕುಮಾರ ಶಿಂಧೆ ಅವರ ಪ್ರಯತ್ನದ ಲವಾಗಿ ಎನ್‌ಟಿಪಿಸಿ ಸ್ಥಾಪನೆಯಾಗಿದೆ. ಆದರೆ ಅದು ತಮ್ಮ ಸಾಧನೆ ಎಂದು ಜಿಗಜಿಣಗಿ ಅವರು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು.

ಈ ಎಲ್ಲ ಕಾರಣಗಳಿಂದಾಗಿ ಈ ಬಾರಿ ಮೈತ್ರಿ ಅಭ್ಯರ್ಥಿ ಡಾ.ಸುನೀತಾ ಚವಾಣ್ ಅವರು ಗೆಲುವು ಸಾಧಿಸುವುದು ನಿಶ್ಚಿತ. ಅನುಭವಿ, ವಿದ್ಯಾವಂತೆಯಾಗಿರುವ ಡಾ.ಸುನೀತಾ ಅವರನ್ನು ಜನತೆ ಬೆಂಬಲಿಸಬೇಕು. ಎರಡೂ ಪಕ್ಷಗಳ ನಾಯಕರು ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಸಂಕಲ್ಪ ಮಾಡಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಹಾದೇವಿ ಗೋಕಾಕ, ವಸಂತ ಹೊನಮೋಡೆ ಇತರರಿದ್ದರು.

Leave a Reply

Your email address will not be published. Required fields are marked *