ದೇವರ ಚರಣಕ್ಕೆ ಹಿಪ್ಪರಗಿಯ ಹೂವು !

ವಿಜಯಪುರ: ಗಾಂಧಿವಾದಿ, ಸಾತ್ವಿಕ ರಾಜಕಾರಣಿ ಹಾಗೂ ಶಿಸ್ತಿನ ಸಿಪಾಯಿ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ಬಿ.ಎಸ್. ಪಾಟೀಲ ಸಾಸನೂರ (87) ಭಾನುವಾರ ಸಂಜೆ ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಸಲುತ್ತಿದ್ದ ಬಿ.ಎಸ್. ಪಾಟೀಲರು ಕಳೆದೊಂದು ವಾರದ ಹಿಂದೆ ವಿಜಯಪುರದ ಬಿಎಲ್​ಡಿಇ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಸಂಜೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು. ನೇತ್ರದಾನದ ಮೂಲಕ ಸಾವಿನಲ್ಲೂ ಮಾನವೀಯ ಕಳಕಳಿ ಮೆರೆದ ಮಹಾನುಭಾವರು ಸಾಸನೂರ. ಬಿಜೆಪಿ ಹಾಲಿ ಶಾಸಕ ದೇವರಹಿಪ್ಪರಗಿಯ ಸೋಮನಗೌಡ ಪಾಟೀಲ ಸಾಸನೂರ ಸೇರಿದಂತೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದು ಈಚೆಗಷ್ಟೇ ಅಂದರೆ 2018ರಲ್ಲಿ ರಾಜಕೀಯ ನಿವೃತ್ತಿ ಹೊಂದಿದ್ದರು.

ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ರಾಜಕೀಯ ರಂಗದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಇವರು ಸದಾ ಖಾದಿ ದಾರಿಯಾಗಿ ಆಧುನಿಕ ಗಾಂಧಿಯಂತೆ ಕಂಗೊಳಿಸುತ್ತಿದ್ದರು. ಗರಿಗರಿ ಬಿಳೆ ಅಂಗಿ, ಪಂಚೆ ಅಂದರೆ ಸಾಸನೂರ ಅವರಿಗೆ ಎಲ್ಲಿಲ್ಲದ ಪ್ರೀತಿ. ಆದರೆ, ಅದೇಕೋ ದೇವರಿಗೆ ಬಿ.ಎಸ್. ಪಾಟೀಲರೇ ಬಹು ಪ್ರೀತಿಪ್ರಿಯರಾಗಿಬಿಟ್ಟರೆಂದು ಕ್ಷೇತ್ರದ ಜನ ಕಂಬನಿ ಮಿಡಿದಿದ್ದಾರೆ.

ಜೀವನ ಮತ್ತು ಸಾಧನೆ

1932 ರಲ್ಲಿ ಸಾಸನೂರಿನಲ್ಲಿ ಜನಿಸಿದ ಬಿ.ಎಸ್. ಪಾಟೀಲರು ರೆಡ್ಡಿ ಸಾಮ್ರಾಜ್ಯದ ದೊರೆ ಎಂದೇ ಬಿಂಬಿತಗೊಂಡವರು. ಮೂಲತಃ ಒಕ್ಕಲುತನ ಕುಟುಂಬದಿಂದ ಬಂದ ಬಿ.ಎಸ್. ಪಾಟೀಲರು ತಂದೆಗೆ ಇಬ್ಬರು ಪುತ್ರರು. ಜನಸೇವೆ ಜನಾರ್ದನ ಸೇವೆ ಎಂಬ ಧ್ಯೇಯದೊಂದಿಗೆ ಮೊದಲ ಬಾರಿಗೆ ಬಸವನಬಾಗೇವಾಡಿ ತಾಲೂಕು ಬೋರ್ಡ್ ಸದಸ್ಯರಾಗಿ ರಾಜಕೀಯ ಪ್ರಾರಂಭಿಸಿರುವ ಬಿ.ಎಸ್. ಪಾಟೀಲರು ಆ ನಂತರ ಹಂತಹಂತವಾಗಿ ರಾಜಕೀಯ ಚದುರಂಗದಾಟದಲ್ಲಿ ಏಳು ಬೀಳು ಸಾಗಿಸುತ್ತಲೇ ಬಂದರು. 2008ರಲ್ಲಿ ರಾಜಕೀಯ ನಿವೃತ್ತಿ ಘೊಷಿಸಿದರೂ ಕೊನೇ ಬಾರಿಗೆ ಮನೆತನದ ರಾಜಕೀಯ ಪತಾಕೆ ಹಾರಿಸಬೇಕೆಂಬ ಮಹದಾಸೆ ಹೊಂದಿದ್ದರು. ಅಂದುಕೊಂಡಂತೆ ಕೊನೆಗೂ ಪುತ್ರ ಸೋಮನಗೌಡ ಪಾಟೀಲರನ್ನು ಜನ ತುಂಬು ಮನಸ್ಸಿನಂದ ಆಶೀರ್ವದಿಸುವ ಮೂಲಕ ಸಾಸನೂರ ಮನೆತನಕ್ಕೆ ಹರಸಿದ್ದರು.

ರಾಜಕೀಯ ಜೀವನ

1978 ರಲ್ಲಿ ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸಾಸನೂರ ಅವರು ಶಾಸನಸಭೆ ಪ್ರವೇಶಿಸಿದರು. 1983 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪುನರಾಯ್ಕೆಯಾದರು. 1994 ರಲ್ಲಿ ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ನೇಮಕಗೊಂಡರು. 1999 ರಲ್ಲಿ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿಯೂ ಪಕ್ಷ ಸಂಘಟನೆಯ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ನಂತರ 2008 ರಲ್ಲಿ ಸಕ್ರೀಯ ರಾಜಕಾರಣದಿಂದ ನಿವೃತ್ತರಾಗಿದ್ದರು. ಒಟ್ಟು 4 ಬಾರಿ ಶಾಸಕರಾಗಿ ಹಾಗೂ ಎರಡು ಬಾರಿ ಸಚಿವರಾಗಿ, ಸಕ್ಕರೆ, ಆರೋಗ್ಯ ಸಚಿವ, ಹಾಗೂ ಕೃಷಿ ಮಾರುಕಟ್ಟೆ ಸಚಿವರಾಗಿ ಕಾರ್ಯನಿರ್ವಹಿದರು.

ರಾಜಕೀಯ ಏಳುಬೀಳಿನ ಕಥೆ

1978ರಲ್ಲಿ ಜನತಾ ಪಕ್ಷದಿಂದ ಅಖಾಡಕ್ಕಿಳಿದ ಬಿ.ಎಸ್. ಪಾಟೀಲ (ಸಾಸನೂರ) ರು ಪ್ರಥಮ ಬಾರಿಗೆ ಜನತಾ ಪಕ್ಷದ ವಿಜಯ ಪತಾಕೆ ಹಾರಿಸಿದರು. ನಂತರ ಅವರು ಕಾಂಗ್ರೆಸ್​ನತ್ತ ಮುಖ ಮಾಡಿದರು. 1983ರಲ್ಲಿ ಸತತ ಎರಡನೇ ಬಾರಿಗೆ ಆಯ್ಕೆಯಾದರು. ಆದರೆ, ಈ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದರು. 1985ರಲ್ಲಿ ಶಿವಪುತ್ರಪ್ಪ ದೇಸಾಯಿ ವಿರುದ್ಧ ಪರಾಜಯಗೊಂಡರು. ಬಳಿಕ 1989 ಚುನಾವಣೆಯಲ್ಲಿ ಮೈಕೊಡವಿಕೊಂಡು ಎದ್ದ ಬಸನಗೌಡ ಪಾಟೀಲ ಸಾಸನೂರ ಅವರು ಶಿವಪುತ್ರಪ್ಪ ದೇಸಾಯಿ ಅವರನ್ನು 15395 ಮತಗಳಿಂದ ಸೋಲಿಸಿದರು. ಆಗ ದೇಸಾಯಿ ಅವರು ಜನತಾ ದಳದಿಂದ ಸ್ಪರ್ಧಿಸಿದ್ದರೆ ಜನತಾ ಪಕ್ಷದ ಅಭ್ಯರ್ಥಿಯಾಗಿ ಬಸನಗೌಡ ಲಿಂಗನಗೌಡ ಪಾಟೀಲ ಕಣಕ್ಕಿಳಿದ್ದು ತೃತೀಯ ಸ್ಥಾನಕ್ಕಿಳಿದಿದ್ದರು.

ಅಳಿಯ ಮಾವನ ಕಾಳಗ 1994ರಲ್ಲಿ ಮತ್ತಷ್ಟು ತೀವ್ರಗೊಂಡು ಜನತಾ ದಳದಿಂದಲೇ ಸ್ಪರ್ಧಿಸುವ ಮೂಲಕ ದೇಸಾಯಿ 12427 ಮತಗಳ ಅಂತರದಿಂದ ಬಸನಗೌಡ ಸೋಮನಗೌಡ ಪಾಟೀಲರನ್ನು ಮಣ್ಣು ಮುಕ್ಕಿಸಿದರು. ಆಗ ಬಿಜೆಪಿಯಿಂದ ಬಿ.ಎಸ್. ಕುಂಬಾರ (6080 ಪಡೆದ ಮತ) ಕಣದಲ್ಲಿದ್ದರು. 1999ರಲ್ಲಿ ಮತ್ತೆ ಬಸನಗೌಡ ಪಾಟೀಲರು 17596 ಮತಗಳ ಅಂತರದಿಂದ ದೇಸಾಯಿ ಅವರನ್ನು ಕೆಡವಿದರು. ಆ ಸಲ ದೇಸಾಯಿ ಅವರು ಜೆಡಿಯುನಿಂದ ಕಣಕ್ಕಿಳಿದರೆ ಜೆಡಿಎಸ್​ನಿಂದ ರಾಯಣ್ಣಗೌಡ ಬಸನಗೌಡ ಪಾಟೀಲ (6510 ಪಡೆದ ಮತ) ಕಣದಲ್ಲಿದ್ದರು. 2004ರಲ್ಲಿ ಮತ್ತದೇ ಅಳಿಯ ಮಾವರ ನಡುವೆ ತುರುಸಿನ ಕಾಳಗ ನಡೆದು 6299 ಮತಗಳ ಅಂತರದಿಂದ ದೇಸಾಯಿ ಅವರು ಬಿ.ಎಸ್.ಪಾಟೀಲರನ್ನು ಸೋಲಿಸಿದರು. ಆಗ ದೇಸಾಯಿ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರೆ ಸಾಸನೂರ ಅವರು ಎಂದಿನಂತೆ ಕಾಂಗ್ರೆಸ್​ನಿಂದಲೇ ಕಣಕ್ಕಿಳಿದಿದ್ದರು. ಜೆಡಿಎಸ್​ನಿಂದ ಮಲಕೇಂದ್ರಗೌಡ ಬಸನಗೌಡ ಪಾಟೀಲ (12774 ಪಡೆದ ಮತ) ಕಣದಲ್ಲಿದ್ದರು. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಬಳಿಕ ಹೂವಿನಹಿಪ್ಪರಗಿ ದೇವರಹಿಪ್ಪರ ಕ್ಷೇತ್ರವಾಗಿ ಪರಿವರ್ತನೆಯಾಯಿತು. ಆ ಬಳಿಕವೇ ಸಾಸನೂರ ಅವರು ರಾಜಕೀಯದಿಂದ ದೂರ ಸರಿದಿದ್ದರು.

ಇಂದು ಅಂತ್ಯಕ್ರಿಯೆ

ದಿ.ಬಿ.ಎಸ್. ಪಾಟೀಲ ಸಾಸನೂರ ಅವರ ಅಂತ್ಯಕ್ರಿಯೆ ಹಿರೂರ ಗ್ರಾಮದ ಭೋಗೇಶ್ವರ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಅವರ ಸ್ವಗ್ರಾಮ ಸಾಸನೂರ ಗ್ರಾಮದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಸಂತಾಪ ಸೂಚನೆ

ಮಾಜಿ ಸಚಿವ ಬಿ.ಎಸ್. ಪಾಟೀಲ ಸಾಸನೂರ ಅವರ ಅಕಾಲಿಕ ನಿಧನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ, ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಶಾಸಕ ಹಾಗೂ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಡಾ.ದೇವಾನಂದ ಚವ್ಹಾಣ, ಬಸನಗೌಡ ಪಾಟೀಲ ಯತ್ನಾಳ, ಯಶವಂತರಾಯಗೌಡ ಪಾಟೀಲ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸಿ.ಎಸ್. ನಾಡಗೌಡ, ವಿ.ಪ. ಮಾಜಿ ಸದಸ್ಯ ಪ್ರಕಾಶ ರಾಠೋಡ, ನಗರಾಭಿವೃದ್ಧಿ ಖಾತೆ ಮಾಜಿ ಸಂಸದೀಯ ಕಾರ್ಯದರ್ಶಿ ಡಾ.ಮಕ್ಬೂಲ್ ಬಾಗವಾನ ಮೊದಲಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *