ವಸ್ತು ಸಂಗ್ರಹಾಲಯಗಳ ರಕ್ಷಣೆ ಅವಶ್ಯ

ವಿಜಯಪುರ: ವಸ್ತುಸಂಗ್ರಹಾಲಯಗಳು ಮಾನವನ ಸಂಗ್ರಹದ ಬುದ್ಧಿಯ ಅನಾವರಣವಿದ್ದಂತೆ. ವಸ್ತುಸಂಗ್ರಹಾಲಯಗಳು ಮೌನ ವಿಶ್ವವಿದ್ಯಾಲಯವಿದ್ದಂತೆ ಎಂದು ಖ್ಯಾತ ಇತಿಹಾಸ ಸಂಶೋಧಕ ಡಾ.ಆನಂದ ಕುಲಕರ್ಣಿ ಹೇಳಿದರು.

ಇಲ್ಲಿನ ಐತಿಹಾಸಿಕ ಗೋಳಗುಮ್ಮಟದ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸ ಮಂಡಿಸಿದ ಅವರು, ವಸ್ತುಸಂಗ್ರಹಾಲಯ ಮನುಷ್ಯನ ಅದ್ಭುತ ಪರಿಕಲ್ಪನೆ. ಇಲ್ಲಿನ ವಸ್ತುಸಂಗ್ರಹಾಲಯ ಅಪರೂಪವಾದದ್ದು, ಮಹತ್ವವಾದದ್ದು, ಹತ್ತಾರು ವೈವಿಧ್ಯಮಯ ಹಾಗೂ ಇತಿಹಾಸ ದೃಷ್ಟಿಯಿಂದ ಮಹತ್ವದ ದಾಖಲೆ, ಕುರುಹುಗಳು ಇಲ್ಲಿನ ಸಂಗ್ರಹಾಲಯದಲ್ಲಿ ಇಡಲಾಗಿದೆ. ಅವುಗಳನ್ನು ರಕ್ಷಿಸಿ, ಮುಂದಿನ ಪೀಳಿಗೆಗಳಿಗೆ ಪರಿಚಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿವೃತ್ತ ಉಪ ಅಧೀಕ್ಷಕ ಕೆ.ವಿ. ರಾವ್ ಮಾತನಾಡಿ, ಹಿಂದಿನ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ ರಾಜಮನೆತನಗಳ ಸಂಸ್ಕೃತಿ, ಆಚಾರ-ವಿಚಾರ, ವ್ಯಾಪಾರ-ವಾಣಿಜ್ಯೋದ್ಯಮ ಮೊದಲಾದ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ವಸ್ತುಸಂಗ್ರಹಾಲಯಗಳು ಸಹಾಯಕಾರಿಯಾಗಿವೆ. ಬಹುಹಿಂದಿನಿಂದಲೂ ವಸ್ತು ಸಂಗ್ರಹಾಲಯ ನಿರ್ಮಿಸುವ ಪರಂಪರೆ ಇದೆ. ಅನೇಕ ರಾಜಮಹಾರಾಜರು ನಿರ್ಮಿಸಿದ ಅನೇಕ ಉದಾಹರಣೆಗಳಿವೆ. ಸಂಸ್ಕೃತಿ, ಪರಂಪರೆಯ ರಾಯಭಾರಿಗಳಂತಿರುವ ವಸ್ತುಸಂಗ್ರಹಾಲಯಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದರು.

ಪುರಾತತ್ವ ಇಲಾಖೆ ಹಿರಿಯ ಅಧಿಕಾರಿ ಭಗತ್, ವಸ್ತುಸಂಗ್ರಹಾಲಯದ ಅಧಿಕಾರಿ ಎ.ವಿ. ನಾಗನೂರ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *