ಪುನಾಳೆಕರ ಬಂಧನ ಖಂಡಿಸಿ ಪ್ರತಿಭಟನೆ

ವಿಜಯಪುರ: ಮುಂಬೈನ ನ್ಯಾಯವಾದಿ ಸಂಜೀವ ಪುನಾಳೆಕರ ಬಂಧನ ಖಂಡಿಸಿ ಹಿಂದು ಜನಜಾಗೃತಿ ಸಮಿತಿ ಕಾರ್ಯಕರ್ತರು ಭಾನುವಾರ ಸಂಜೆ ಪ್ರತಿಭಟನೆ ನಡೆಸಿದರು.

ನಗರದ ಸಿದ್ಧೇಶ್ವರ ದೇವಸ್ಥಾನ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಹಿಂದು ವಿಧಿಜ್ಞ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಸಂಜೀವ ಪುನಾಳೆಕರ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ವಿಕ್ರಮ ಭಾವೆ ಅವರನ್ನು ಕೇಂದ್ರೀಯ ತನಿಖಾ ತಂಡ (ಸಿಬಿಐ) ದಾಭೊಲಕರ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿಯೊಬ್ಬ ನೀಡಿರುವ ಹೇಳಿಕೆ ಮೇರೆಗೆ ಬಂಧಿಸಿರುವುದು ಖಂಡನೀಯ.

ಈ ಪ್ರಕರಣಗಳಲ್ಲಿ ಸಿಬಿಐ ನಡೆ ಸಂದೇಹಾಸ್ಪದ ಹಾಗೂ ಹಿಂದುತ್ವವಾದಿಗಳ ಮೇಲೆ ಒತ್ತಡದ ನಿರ್ಮಾಣ ಮಾಡುವಂತಿದೆ. ಹಿಂದುತ್ವವಾದಿ ಎಂದು ಹೇಳಿಕೊಳ್ಳುವ ಸರ್ಕಾರ ಅಧಿಕಾರದಲ್ಲಿರುವಾಗಲೇ ಇದೆಲ್ಲ ಆಗುತ್ತಿದೆ. ಇದು ಹಿಂದುಗಳಿಗೆ ಆಘಾತಕಾರಿಯಾಗಿದೆ. ಪುನಾಳೆಕರ ಅವರನ್ನು ಷಡ್ಯಂತ್ರದಿಂದ ಬಂಧಿಸಿ, ಉದ್ದೇಶಪೂರ್ವಕವಾಗಿ ಹಿಂದುಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಆದ್ದರಿಂದ ಸಿಬಿಐ ಮಾಡಿದ ಈ ಕೃತ್ಯ ಸಂವಿಧಾನದ ಹಕ್ಕು ಹಿಸುಕುವಂತಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಇಡೀ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ಸಿಬಿಐ ನಿಲುವಿನ ಬಗ್ಗೆಯೂ ತನಿಖೆಯಾಗಬೇಕು. ಸಿಬಿಐ ಅಧಿಕಾರಿ ನಂದಕುಮಾರ ನಾಯಕ ಅವರಿಂದ ಡಾ.ದಾಭೊಲಕರ ಪ್ರಕರಣದ ತನಿಖೆ ಹಿಂಪಡೆದು, ಅದನ್ನು ಇತರ ಅಧಿಕಾರಿಗೆ ಒಪ್ಪಿಸಬೇಕು ಅಥವಾ ಆ ತನಿಖೆಯನ್ನು ನ್ಯಾಯಾಲಯದ ನಿರೀಕ್ಷಣೆಯಲ್ಲಿಡಬೇಕು. ಕೂಡಲೇ ಅಮಾಯಕ ನ್ಯಾಯವಾದಿ ಸಂಜೀವ ಪುನಾಳೆಕರ ಹಾಗೂ ವಿಕ್ರಮ ಭಾವೆ ಅವರನ್ನು ಬಿಡುಗಡೆ ಮಾಡಬೇಕು ಎಂದು ಹಿಂದು ಜನಜಾಗೃತಿ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದರು.

Leave a Reply

Your email address will not be published. Required fields are marked *