ಗ್ರಾಮೀಣ ಬ್ಯಾಂಕ್ ಕಳ್ಳತನಕ್ಕೆ ಯತ್ನ

<< ಸಿಸಿ ಕ್ಯಾಮರಾ ಕಿತ್ತ ಕಳ್ಳರು > ಯಾವುದೇ ಹಾನಿಯಾಗಿಲ್ಲ ಎಂದ ವ್ಯವಸ್ಥಾಪಕ >>

ಮುದ್ದೇಬಿಹಾಳ: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ದರೋಡೆಗೆ ಯತ್ನ ನಡೆದಿದೆ.

ಮಂಗಳವಾರ ಅಥವಾ ಬುಧವಾರ ರಾತ್ರಿ ಕಳ್ಳರು ಬ್ಯಾಂಕ್ ಮುಖ್ಯ ಗೇಟ್‌ನ ಬೀಗ ಮುರಿಯಲು ಯತ್ನ ನಡೆಸಿದ್ದು, ಕಿಟಕಿಗೂ ಹಾಕಿದ್ದ ಲಾಕ್ ಒಡೆದಿದ್ದಾರೆ. ಬ್ಯಾಂಕ್‌ನ ಹೊರಗಡೆ ಅಳವಡಿಸಿರುವ ಸಿಸಿಟಿವಿ ಸಂಪರ್ಕವನ್ನು ಕಳ್ಳ ಮುಖಕ್ಕೆ ಬಟ್ಟೆ ಸುತ್ತಿಕೊಂಡು, ಸಿಸಿ ಟಿವಿಗೆ ಸಂಪರ್ಕ ಕಲ್ಪಿಸಿದ್ದ ವೈರ್‌ನ್ನು ತುಂಡರಿಸುವ ದೃಶ್ಯ ದಾಖಲಾಗಿದೆ.

ಬ್ಯಾಂಕ್ ವ್ಯವಸ್ಥಾಪಕ ಸೌಭಾಗ್ಯಕುಮಾರ ಸ್ವಾಮೀನ್ ಮಾತನಾಡಿ, ನ.13 ರಂದು ಸಂಜೆ 7 ಗಂಟೆವರೆಗೆ ಶಾಖೆಯಲ್ಲಿ ಸಿಬ್ಬಂದಿ ಸಮೇತ ನಾವು ಕಾರ್ಯನಿರ್ವಹಿಸಿ ಎಲ್ಲ ಬೀಗಗಳನ್ನು ಹಾಕಿಕೊಂಡು ಹೋಗಿದ್ದೇವು. ಅಲ್ಲದೆ, ಬ್ಯಾಂಕ್‌ನಲ್ಲಿದ್ದ ಅಲಾರಂ ಅನ್ನು ಚಾಲನೆಯಲ್ಲಿಟ್ಟು ಹೋಗಿದ್ದೇವು. ನ.14 ರಂದು ಸಿಬ್ಬಂದಿ ಗುರುರಾಜ ಕುಲಕರ್ಣಿ ಬೀಗ ತೆರೆಯಲು ಹೋದಾಗ ಗೇಟ್‌ಗೆ ಹಾಕಿದ್ದ ಬೀಗ ಒಡೆದಿರುವುದು ಗಮನಕ್ಕೆ ಬಂದಿದೆ.

ಸಿಟಿವಿ ಕಿತ್ತು ಡಸ್ಟ್‌ಬಿನ್‌ಗೆ ಹಾಕಿದ್ದಾರೆ. ಕಳ್ಳರಿಗೆ ಬ್ಯಾಂಕ್‌ನೊಳಗೆ ಹೋಗಲು ಆಗಿಲ್ಲ. ಆದರೆ ಕಳ್ಳತನ ಮಾಡುವ ಉದ್ದೇಶದಿಂದಲೇ ಅವರು ಬಂದಿರುವುದು ಗೋಚರವಾಗುತ್ತಿದೆ. ಈ ವಿಷಯ ತಿಳಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಬ್ಯಾಂಕ್‌ನ ಯಾವುದೇ ಕಾಗದ ಪತ್ರಗಳಿಗೆ ಹಾನಿಯಾಗಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಲಾಗಿದೆ ಎಂದು ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದ್ದಾರೆ.

ಘಟನೆ ವಿಷಯ ತಿಳಿಯುತ್ತಿದ್ದಂತೆ ಕ್ರೈಂ ಪಿಎಸ್‌ಐ ಟಿ.ಜಿ. ನೆಲವಾಸಿ, ಪೊಲೀಸರು ಬ್ಯಾಂಕ್‌ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿ ಟಿವಿಯಲ್ಲಿ ಸೆರೆ: 20 ಸೆಕೆಂಡ್ ಅವಧಿಯ ವಿಡಿಯೋದಲ್ಲಿ ಕಳ್ಳ ಸಿಸಿ ಕ್ಯಾಮರಾಗೆ ಅಳವಡಿಸಿದ ವೈರ್ ಕಿತ್ತು ಹಾಕುವ ದೃಶ್ಯ ದಾಖಲಾಗಿದೆ. ಈ ಕೃತ್ಯ ಮಾಡುವ ವೇಳೆ ಗುರುತು ಪತ್ತೆಯಾಗದಿರಲಿ ಎಂದು ಕಳ್ಳ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದು, ಆತನಿಗೆ ಇನ್ನೊಂದಿಬ್ಬರು ಸಹಕರಿಸಿರುವ ಸಾಧ್ಯತೆಗಳು ಇವೆ ಎಂದು ಪೊಲೀಸರು ಶಂಕಿಸಿದ್ದಾರೆ.