ಮಗಳ ಕೊಲೆಗೆ ತಂದೆಯಿಂದಲೇ ಸುಪಾರಿ

ವಿಜಯಪುರ: ಅಪ್ರಾಪ್ತ ಬಾಲಕಿ ಮೇಲೆ ಮುಸುಕುಧಾರಿಗಳು ಹಲ್ಲೆ ನಡೆಸಿದ್ದು, ತಂದೆಯೇ ಮಗಳ ಕೊಲೆಗೆ ಸುಪಾರಿ ಕೊಟ್ಟಿರುವ ಆರೋಪ ಕೇಳಿಬಂದಿದೆ.

ಇಂಡಿ ಪಟ್ಟಣದ ಹೊರವಲಯದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಬೆಳಗ್ಗೆ ಪ್ರಕರಣ ಬಯಲಾಗಿದೆ. ಚಿಕ್ಕಲೋಣಿ ಗಾಮದ ಜಕ್ಕಣ್ಣ ಗಿರಿಗೌಡ ಎಂಬಾತನೇ ಮಗಳ ಮೇಲೆ ದೌರ್ಜನ್ಯ ಎಸಗಿದ್ದು, ಗಂಭೀರ ಗಾಯಗೊಂಡಿರುವ ಬಾಲಕಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಏನಿದು ಘಟನೆ?
ಸಾಲೋಟಗಿ ಗ್ರಾಮದ ಸಾವಿತ್ರಿ ಎಂಬುವರು ಚಿಕ್ಕಲೋಣಿ ಗ್ರಾಮದ ಜಕ್ಕಣ್ಣ ಗಿರಿಗೌಡರ ಜತೆ ವಿವಾಹವಾಗಿದ್ದರು. ಇವರ ಮಧ್ಯೆ ಆಸ್ತಿಗಾಗಿ ಜಗಳ ನಡೆದಿತ್ತು. ಹೀಗಾಗಿ ಸಾವಿತ್ರಿ ಸಾಲೋಟಗಿಯಲ್ಲಿರುವ ತವರು ಮನೆಯಲ್ಲಿ ವಾಸವಾಗಿದ್ದರು. 20 ವರ್ಷಗಳಿಂದ ಸಾವಿತ್ರಿ ತವರು ಮನೆಯಲ್ಲೇ ಇದ್ದಾರೆ. ಗಿರಿಗೌಡ ಆಗಾಗ ಸಾವಿತ್ರಿ ಬಳಿ ಬಂದು ಹೋಗುತ್ತಿದ್ದನಲ್ಲದೆ, ಮಗಳನ್ನು ಕೆಲ ದಿನ ಕರೆದುಕೊಂಡು ಹೋಗಿ ಮತ್ತೆ ತಂದು ಬಿಡುತ್ತಿದ್ದನು.

ಇದೀಗ ಮಗಳನ್ನು ಕರೆದೊಯ್ದು ಆತ ಮತ್ತು ಆತನ ಅಕ್ಕ ಸೇರಿ ಬಾಲಕಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಅಲ್ಲದೆ, ಕೆಲ ಮುಸುಕುಧಾರಿಗಳ ಕೈಗೆ ಕೊಟ್ಟು ಹೋಗಿದ್ದಾರೆ. ಅವರು ಬಾಲಕಿ ಸತ್ತಿರಬಹುದೆಂದು ಇಂಡಿ ಪಟ್ಟಣದ ಹೊರವಲಯದಲ್ಲಿ ಎಸೆದು ಹೋಗಿದ್ದಾರೆ.

ಪತಿ ಮೇಲೆ ಸಾವಿತ್ರಿ ಆರೋಪ
ಗಂಭೀರ ಗಾಯಗೊಂಡ ಬಾಲಕಿ ಬೆಳಗಾವಿಯಲ್ಲಿರುವ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಬಳಿಕ ತಾಯಿ ಸಾವಿತ್ರಿ ಮಗಳನ್ನು ಕರೆದುಕೊಂಡು ಹೋಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆಸ್ತಿಗಾಗಿ ಪತಿ ಹಾಗೂ ಆತನ ಅಕ್ಕನೇ ಈ ಕೃತ್ಯ ಎಸಗಿದ್ದಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, 4-5 ಮುಸುಕುಧಾರಿಗಳು ಮಗಳನ್ನು ಕೊಲೆ ಮಾಡುವ ಪ್ರಯತ್ನ ಮಾಡಿದ್ದಾರೆಂದು ತಿಳಿಸಿದ್ದಾರೆ. ಇಂಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಿರಿಗೌಡನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.