ಮತ್ತೆ ಮುನ್ನೆಲೆಗೆ ಬಂದ ಪ್ರತ್ಯೇಕ ಧರ್ಮ ವಿಚಾರ

ವಿಜಯಪುರ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸದ್ದು ಮಾಡಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಇದೀಗ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಮುನ್ನೆಲೆಗೆ ಬಂದಿದೆ !

ಅಣ್ಣ ಬಸವಣ್ಣನ ತವರು ಜಿಲ್ಲೆಯಲ್ಲೇ ಇಂಥದ್ದೊಂದು ಕೂಗು ಮೊಳಗಿದ್ದು ವಾದ- ಪ್ರತಿವಾದಗಳು ಏಳಲಾರಂಭಿಸಿವೆ. ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿದ್ದ ಸಚಿವ ಎಂ.ಬಿ. ಪಾಟೀಲರ ವಿರುದ್ಧ ಮುದ್ದೇಬಿಹಾಳ ಶಾಸಕ ನಡಹಳ್ಳಿ ತೀವ್ರ ವಾಕ್ಸಮರ ನಡೆಸಿದ್ದಾರೆ.

ಶಾಸಕ ನಡಹಳ್ಳಿ ಆರೋಪ
ಮುದ್ದೇಬಿಹಾಳ ಪಟ್ಟಣದಲ್ಲಿ ಪಕ್ಷದ ಪ್ರಚಾರ ಸಂದರ್ಭ ವಿಷಯ ಮಂಡಿಸಿರುವ ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು, ಗೃಹ ಸಚಿವ ಎಂ.ಬಿ. ಪಾಟೀಲ ಹಾಗೂ ಶರಣ ಪ್ರಕಾಶ ಪಾಟೀಲರು ಧರ್ಮ ದ್ರೋಹಿಗಳು. ಅವರು ಸಮಾಜ ಒಡೆಯುವ ಕೆಲಸ ಮಾಡಿದ್ದಾರೆಂದು ಹೀಗಳೆದಿದ್ದಾರೆ.

ಇತರೇ ಧರ್ಮದಲ್ಲಿ ಹುಟ್ಟಿ ಇಂಥ ಕೆಲಸ ಮಾಡಿದ್ದರೆ ಜನರು ಕಲ್ಲಿಂದ ಹೊಡೆಯುವ ಶಿಕ್ಷೆ ಕೊಡುತ್ತಿದ್ದರು. ಆದರೆ ಇಲ್ಲಿ ಧರ್ಮ ಒಡೆಯುವ ಕೆಲಸ ಮಾಡಿದ್ರೆ ಪಂಚಪೀಠಗಳ ಧರ್ಮ ಗುರುಗಳ ಪಾದರಕ್ಷೆ ತಲೆ ಮೇಲೆ ಇಟ್ಟುಕೊಂಡು ತಪ್ಪಾಯಿತು ಎಂದು ಹೇಳಬೇಕು ಎಂದಿದ್ದಾರೆ.

ಎಂ.ಬಿ. ಪಾಟೀಲ ಮಾಡಬಾರದಂತಹ ತಪ್ಪು ಮಾಡಿದ್ದಾರೆ. ಲಿಂಗಾಯತ ಸಮಾವೇಶ ಮಾಡಲು ಎಂ.ಬಿ. ಪಾಟೀಲರಿಗೆ ಎಲ್ಲಿಂದ ಹಣ ಬಂತು? ನೀರಾವರಿ ಇಲಾಖೆಯಲ್ಲಿ ಹಣ ಲೂಟಿ ಮಾಡಿ ಸಮಾವೇಶ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಎಂ.ಬಿ. ಪಾಟೀಲ ಹೇಳಿಕೆ
ಲಿಂಗಾಯತ ಹೋರಾಟಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ತಮ್ಮ ನಿಲುವು ಸ್ಪಷ್ಟಪಡಿಸಿರುವ ಸಚಿವ ಎಂ.ಬಿ. ಪಾಟೀಲರು, ಲಿಂಗಾಯತ ಧರ್ಮ ನನ್ನ ಅಸ್ಮಿತೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಲಿಂಗಾಯತ ಧರ್ಮವನ್ನು ಬಳಸಿಕೊಂಡಿಲ್ಲ. ಲಿಂಗಾಯತರನ್ನು ಕೂಡ ನಾನು ಬಳಸಿಕೊಂಡಿಲ್ಲ. ಲಿಂಗಾಯತ ಧರ್ಮದ ಹೋರಾಟ ಯಾವುದೇ ಪಕ್ಷಕ್ಕೆ ಸಂಬಂಧಪಟ್ಟಿಲ್ಲ. ಲಿಂಗಾಯತ ಧರ್ಮ ಚುನಾವಣೆಯ ವಿಚಾರವಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಕೋರ್ಟ್‌ಗೆ ಹೋಗಬೇಕು ಅಥವಾ ಬೇಡ್ವೋ ಜಾಗತಿಕ ಲಿಂಗಾಯತ ಮಹಾಸಭಾದವರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ.

ಒಟ್ಟಿನಲ್ಲಿ ಪ್ರತ್ಯೇಕ ಲಿಂಗಾಯತ ಕೂಗಿನ ವಿರುದ್ಧ ಆರೋಪ ಪ್ರತ್ಯಾರೋಪ ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಈ ವಿಚಾರ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಚುನಾವಣೆ ಸಂದರ್ಭ ಆ ವಿಷಯದ ಬಗ್ಗೆ ಮಾತನಾಡಲ್ಲ. ಯಾರೋ ಆರೋಪ ಮಾಡಿದ್ದಕ್ಕೆ ಪ್ರತಿಕ್ರಿಯಿಸಲ್ಲ. ನನ್ನ ಲೇವಲ್ ತಕ್ಕಂತೆ ಇರುವವರ ಬಗ್ಗೆ ಮಾತ್ರ ಮಾತನಾಡುತ್ತೇನೆ. ಪ್ರಧಾನಿ ಮೋದಿ, ಬಿಎಸ್‌ವೈ ಅಂಥವರ ಕುರಿತು ಪ್ರತಿಕ್ರಿಯೆ ನೀಡುತ್ತೇನೆ ಹೊರತು ಸಣ್ಣ ವ್ಯಕ್ತಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ.
ಡಾ. ಎಂ.ಬಿ. ಪಾಟೀಲ, ಗೃಹ ಸಚಿವರು