ಬಿಜೆಪಿಯಿಂದ ಬೃಹತ್ ಬೈಕ್ ರ‌್ಯಾಲಿ

ವಿಜಯಪುರ : ಲೋಕಸಭೆ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರವಾಗಿ ಬಿಜೆಪಿ ನಗರ ಘಟಕದ ವತಿಯಿಂದ ಭಾನುವಾರ ಬೃಹತ್ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಯಿತು.

ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಎರಡು ಸಾವಿರಕ್ಕೂ ಹೆಚ್ಚು ಬೈಕ್‌ಗಳ ಮೇಲೆ ಪಕ್ಷದ ಧ್ವಜ ಹಿಡಿದುಕೊಂಡು, ಮೋದಿ ಅವರಿಗೆ ಜಯವಾಗಲಿ, ಜಿಗಜಿಣಗಿ ಅವರಿಗೆ ಜಯವಾಗಲಿ…ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸುತ್ತಾ ಉದ್ಘೋಷ ಮಾಡಿದರು.

ನಗರದ ಗೋದಾವರಿ ಹೋಟೆಲ್ ಮುಂಭಾಗದಲ್ಲಿ ಆರಂಭಗೊಂಡ ರ‌್ಯಾಲಿ ಬಂಜಾರಾ ಕ್ರಾಸ್, ಶಿವಾಜಿ ಸರ್ಕಲ್, ಗಾಂಧಿಚೌಕ್, ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್ ವೃತ್ತ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.

ಸ್ವತಃ ಬೈಕ್ ಓಡಿಸುವ ಮೂಲಕ ಪ್ರಚಾರ ಕಾರ್ಯದಲ್ಲಿ ಭಾಗಿಯಾದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ದೇಶದ ಅಭಿವೃದ್ಧಿಗೆ ಇನ್ನೊಮ್ಮೆ ಮೋದಿ ಅವರು ಪ್ರಧಾನಿಯಾಗಬೇಕಾಗಿರುವುದು ಅವಶ್ಯವಾಗಿದೆ. ಜಿಗಜಿಣಗಿ ಅವರು ಸರಳ, ಸಾತ್ವಿಕ ಸ್ವಭಾವದ ರಾಜಕಾರಣಿ. ಜನತೆ ಅವರನ್ನು ಇನ್ನೊಮ್ಮೆ ಸಂಸದರನ್ನಾಗಿ ಆಯ್ಕೆ ಮಾಡುವ ಮೂಲಕ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಸಂಕಲ್ಪ ಮಾಡಬೇಕಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ, ಈ ಬಾರಿ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ. ಜಿಗಜಿಣಗಿ ಅವರು ಸಂಸದರಾಗಿ ಹ್ಯಾಟ್ರಿಕ್ ಸಾಧನೆ ಮಾಡುವುದು ನಿಶ್ಚಿತ. ಜನತೆ ಬಿಜೆಪಿಯ ಪರವಾಗಿ ಒಲವು ಹೊಂದಿದೆ. ಮೋದಿ ಅವರ ಜನಪರ ಕಾರ್ಯಗಳನ್ನು ಜನತೆ ಅಪಾರವಾಗಿ ಮೆಚ್ಚಿಕೊಂಡಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಉಪ ಮೇಯರ್ ಗೋಪಾಲ ಘಟಕಾಂಬಳೆ, ಪಾಲಿಕೆ ಸದಸ್ಯ ಗೂಳಪ್ಪ ಶೆಟಗಾರ, ನಗರ ಘಟಕದ ಅಧ್ಯಕ್ಷ ಶಿವರುದ್ರ ಬಾಗಲಕೋಟ, ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಪಕ್ಷದ ಮುಖಂಡರಾದ ಆನಂದ ಧುಮಾಳೆ, ಪ್ರಕಾಶ ಮಿರ್ಜಿ, ಶಂಕರ ಕುಂಬಾರ, ಅಲ್ತಾ ಇಟಗಿ, ಭೀಮಾಶಂಕರ ಹದನೂರ, ಚಿದಾನಂದ ಚಲವಾದಿ, ಸಿದ್ಧು ಮಲ್ಲಿಕಾರ್ಜುನಮಠ, ಮಲ್ಲಮ್ಮ ಜೋಗೂರ, ವಿವೇಕಾನಂದ ಡಬ್ಬಿ, ರಜನಿ ಸಂಬಣ್ಣಿ, ಮಂಜುಳಾ ಅಂಗಡಿ, ಭಾರತಿ ಭುಯ್ಯರ, ಪಾಪುಸಿಂಗ ರಜಪೂತ, ವಿಜಯ ಜೋಶಿ, ಶಂಕರ ಹೂಗಾರ, ಗೀತಾ ಕೂಗನೂರ ಮೊದಲಾದವರು ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *