ನಾಡಿನ ಅಖಂಡತೆಗೆ ಕಸಾಪ ಶ್ರಮಿಸಲಿ

ವಿಜಯಪುರ: ಕನ್ನಡ ನಾಡಿನ ಅಖಂಡತ್ವಕ್ಕಾಗಿ ಕಸಾಪ ಶ್ರಮಿಸಲಿ ಎಂದು ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಹೇಳಿದರು.

ಜಿಲ್ಲೆಯ ತಾಳಿಕೋಟೆ ಪಟ್ಟಣದ ಖಾಸ್ಗತ ಶಿವಯೋಗಿಗಳ ಪ್ರಧಾನ ವೇದಿಕೆಯಲ್ಲಿ ಸೋಮವಾರ ನಡೆದ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ನಾಡಿನ ಅಭಿವೃದ್ಧಿಗೆ ಸರ್ವರೂ ಶ್ರಮಿಸೋಣ. ಕನ್ನಡ ತಾಯಿ ಸೇವೆಗೆ ಕಸಾಪ ಜತೆ ನಿರಂತರ ಕೈ ಜೋಡಿಸುವೆ. ತೋಟಗಾರಿಕೆ ಮತ್ತು ಜಿಲ್ಲೆ ಉಸ್ತುವಾರಿ ಸಚಿವನಾಗಿ ಈ ಭಾಗದ ಅಭಿವೃದ್ಧಿಗೆ ನಿರಂತರ ಶ್ರಮಿಸುವೆ. ನೂತನ ತಾಳಿಕೋಟೆ ತಾಲೂಕಿಗೆ ಮೂಲ ಸೌಲಭ್ಯಗಳನ್ನು ಒದಗಿಸಿ ಪೂರ್ಣ ಪ್ರಮಾಣದ ತಾಲೂಕನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದು ಹೇಳಿದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮಾತನಾಡಿ, ವಿಜಯನಗರದ ಅರಸರು ಹಾಗೂ ಬಹುಮನಿ ಸುಲ್ತಾನರ ಕಾಳಗಕ್ಕೆ ವೇದಿಕೆಯಾಗಿದ್ದ ತಾಳಿಕೋಟೆ ಕನ್ನಡಿಗರಿಗೆ ಹಲವು ಬಾರಿ ವಿಜಯ ದೊರಕಿಸಿಕೊಟ್ಟ ಪುಣ್ಯ ನೆಲ. ಜಿಲ್ಲೆಯ ಗಡಿಭಾಗದಲ್ಲಿ ಕನ್ನಡದ ಕಹಳೆ ಮೊಳಗಿಸಿದ ಈ ನಾಡಿನ ಜನ ಹೃದಯ ಶ್ರೀಮಂತಿಕೆಯುಳ್ಳವರು ಎಂದರು.

ರನ್ನ ಅಖಂಡ ವಿಜಯಪುರ ಜಿಲ್ಲೆಯ ಮುಧೋಳದವರು. ಕನ್ನಡ ಸಾಹಿತ್ಯಕ್ಕೆ ರನ್ನನ ಕೊಡುಗೆ ಅಪಾರ. ಉದಯವಾಗಲಿ ಚೆಲುವ ಕನ್ನಡ ನಾಡು ಆಂದೋಲನ ಆರಂಭಿಸಿದ ಆಲೂರ ವೆಂಕಟರಾಯರು, ಕನ್ನಡಕ್ಕಾಗಿ ಕೈ ಎತ್ತು ಕೈ ಕಲ್ಪವಕ್ಷವಾಗಲಿ ಎಂದ ಕುವೆಂಪು ಅವರ ಮಾರ್ಗ ದಲ್ಲಿ ನಾವೆಲ್ಲ ನಡೆಯಬೇಕು. ಪುಸ್ತಕ ಕೊಂಡು ಓದುವ ಸಂಸ್ಕೃತಿ ನಮ್ಮದಾಗಬೇಕು ಎಂದರು.

ಕಸಾಪ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಆಶಯ ನುಡಿ ವ್ಯಕ್ತಪಡಿಸಿದರು. ಕೇಂದ್ರ ಕಸಾಪ ಪ್ರತಿನಿಧಿ ಶೇಖರಗೌಡ ಮಾಲಿಪಾಟೀಲ, ಸನ್ಮಾನ ಸ್ವೀಕರಿಸಿದ ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ. ಬಿರಾದಾರ ಮಾತನಾಡಿದರು.

ವಿಪ ಸದಸ್ಯ ಅರುಣ ಶಹಾಪುರ ವಾಣಿಜ್ಯ ಮಳಿಗೆಗಳನ್ನು ಹಾಗೂ ಶಾಸಕ ಸೋಮನಗೌಡ ಪಾಟೀಲ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ಕಸಾಪ ತಾಲೂಕಾಧ್ಯಕ್ಷ ಎಂ.ಬಿ. ನಾವದಗಿ, ಜಿಪಂ ಉಪಾಧ್ಯಕ್ಷ ಪ್ರಭು ದೇಸಾಯಿ, ಜಿಪಂ ಸದಸ್ಯೆ ಜ್ಯೋತಿ ಅಸ್ಕಿ, ಬಸನಗೌಡ ವಣಿಕ್ಯಾಳ, ಶಿವಾನಂದ ದೇಸಾಯಿ, ತಾಪಂ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಪುರಸಭೆ ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ, ಸಿದ್ದಲಿಂಗ ಚೌದ್ರಿ, ಕಾಂತು ಇಂಡಿ, ಚಂದ್ರಶೇಖರ ದೇವರಡ್ಡಿ, ಶಾಂತಾಬಾಯಿ ನೂಲಿಕರ, ಆರ್.ಎಸ್. ಪಾಟೀಲ ಕೂಚಬಾಳ, ಬಿ.ಎಸ್. ಪಾಟೀಲ ಯಾಳಗಿ, ಪ್ರಶಾಂತ ಹಾವರಗಿ, ಎಚ್.ಎಸ್.ಪಾಟೀಲ, ಸೋಮನಗೌಡ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ. ಗಾಂಜಿ ಸೇರಿದಂತೆ ಇತರರು ಇದ್ದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎನ್.ಜಿ. ಕೆರೂರ ಪರಿಷತ್ ಧ್ವಜ ಹಸ್ತಾಂತರಿಸಿದರು.

ಮೋದಿ ಸರ್ಕಾರ ಕನ್ನಡ ಭಾಷೆ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುತ್ತಿದೆ. ಶಾಸೀಯ ಸ್ಥಾನಮಾನ ನೀಡಿದೆ. ದೆಹಲಿಯಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಿದೆ. ರೈಲ್ವೆ ಪರೀಕ್ಷೆ ಕನ್ನಡ ಭಾಷೆಯಲ್ಲಿ ನಡೆಸಿದೆ. ಮೆಟ್ರೋದಲ್ಲಿ ಕನ್ನಡ ಬಳಕೆ ಮಾಡಿದೆ. ದೆಹಲಿ ಮೆಟ್ರೋ ನಿಲ್ದಾಣವೊಂದಕ್ಕೆ ವಿಶ್ವೇಶ್ವರಯ್ಯ ಅವರ ಹೆಸರನ್ನಿರಿಸಿದೆ. ಕನ್ನಡದ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ ಹಮ್ಮಿಕೊಂಡಿದೆ.
– ರಮೇಶ ಜಿಗಜಿಣಗಿ ಕೇಂದ್ರ ಸಚಿವ