ನೀರಾವರಿಗಾಗಿ ಸಿಎಂ ಸ್ಥಾನವೂ ನೀರಾಕರಿಸುವೆ

ವಿಜಯಪುರ: ನೀರಾವರಿ ಯೋಜನೆಗಳಿಗಾಗಿ ಸಿಎಂ ಸ್ಥಾನ ಕೊಟ್ಟರೂ ನಿರಾಕರಿಸುವೆ ಎಂದಿರುವ ಗೃಹ ಸಚಿವ ಎಂ.ಬಿ. ಪಾಟೀಲ, ನೀರಾವರಿ ಯೋಜನೆಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಅರೆಬೆಂದ ಪ್ರಜ್ಞಾವಂತರಿಗೆ ದಾಖಲೆ ಸಮೇತ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.

ಏಳು ತಿಂಗಳ ವನವಾಸದ ನಂತರ ಗೃಹ ಮಂತ್ರಿಯಾಗಿರುವೆ. ಇದಕ್ಕೆ ನಾನು ಮಾಡಿರುವ ಸಾಧನೆಯೇ ಕಾರಣ. ಗೃಹ ಖಾತೆ ಎಂದರೆ ಮುಖ್ಯಮಂತ್ರಿ ಸ್ಥಾನದ ನಂತರದ ಹುದ್ದೆ. ಆದರೆ, ಈ ಖಾತೆಯಿಂದ ನನಗೆ ತೃಪ್ತಿಯಿಲ್ಲ. ನನಗಾಗಿ ಅಲ್ಲದಿದ್ದರೂ ನಾಡಿನ ಜನತೆಗಾಗಿ ನಾನು ಇನ್ನೊಂದು ಅವಧಿಗೆ ನೀರಾವರಿ ಮಂತ್ರಿಯಾಗಬೇಕಿತ್ತು. ಹಾಗಾಗಿದ್ದರೆ ಇಡೀ ರಾಜ್ಯದ ಚಿತ್ರಣವೇ ಬದಲಾಗುತ್ತಿತ್ತು ಎಂದರು.

ನಗರದ ಪಾಟೀಲ ಗಾರ್ಡೇನಿಯಾದಲ್ಲಿ ಗುರುವಾರ ಸಂಜೆ ನಡೆದ ಬಬಲೇಶ್ವರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವರ ಈ ಮಾತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು.

ಜನರ ಸರ್ಟಿಫಿಕೇಟ್ ಸಾಕು
ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನನಗೆ ಪೂಜ್ಯ ಸಿದ್ಧೇಶ್ವರ ಶ್ರೀಗಳು ಸರ್ಟಿಫಿಕೇಟ್ ನೀಡಿದ್ದಾರೆ. ಜಿಲ್ಲೆ ಜನತೆ ಸರ್ಟಿಫಿಕೇಟ್ ನೀಡಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಎಂದ ಸಚಿವ ಪಾಟೀಲ, ನನ್ನ ಸಾಧನೆ ಮೆಚ್ಚಿ ಜನ ದಾಖಲೆ ಮತಗಳಿಂದ ಆರಿಸಿ ತಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಂದರೂ ಕ್ಷೇತ್ರದ ಜನ ಎಂ.ಬಿ. ಪಾಟೀಲರ ಕೈ ಬಿಡಲಿಲ್ಲ. ರಾಜ್ಯದಲ್ಲಿ ಇಪ್ಪತ್ತು ವರ್ಷದಲ್ಲಿ ಆಗದ ಕೆಲಸ ಕೇವಲ ಐದು ವರ್ಷದಲ್ಲಿ ಮಾಡಿ ತೋರಿಸಿರುವೆ. ಕೇವಲ ಬಬಲೇಶ್ವರ ಮಾತ್ರವಲ್ಲ ಇಡೀ ಜಿಲ್ಲೆ ನೀರಾವರಿ ಯೋಜನೆಗಳಿಗೆ ಶ್ರಮಿಸಿದ್ದೇನೆ. ಅಂಥದರಲ್ಲಿ ಯಾರದೋ ಟೀಕೆಗೆ ಉತ್ತರಿಸುವ ಪ್ರಮೇಯ ಬರಲ್ಲ ಎಂದರು.

ಮೈತ್ರಿ ಅಭ್ಯರ್ಥಿ ಸುನೀತಾ ಚವಾಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ, ವಿಪ ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಶಾಸಕ ರಾಜು ಆಲಗೂರ, ಅರ್ಜುನ ರಾಠೋಡ, ವಿ.ಎಸ್. ಪಾಟೀಲ, ಬಾಪುಗೌಡ ಪಾಟೀಲ ಶೇಗುಣಸಿ ಇತರರಿದ್ದರು.

ಒಂದು ಲಕ್ಷಗಳ ಮತಗಳನ್ನು ನೀಡಿ ನನ್ನನ್ನು ಆಶೀರ್ವದಿಸಿದಂತೆ ಮೈತ್ರಿಕೂಟದ ಅಭ್ಯರ್ಥಿ ಡಾ.ಸುನೀತಾ ಚವಾಣ್ ಅವರನ್ನು ಬಬಲೇಶ್ವರ ಜನತೆ ಆಶೀರ್ವದಿಸಬೇಕು.
– ಡಾ.ಎಂ.ಬಿ. ಪಾಟೀಲ ಗೃಹ ಸಚಿವ