ಬಡವರಿಗೆ ಸರ್ಕಾರಿ ಯೋಜನೆಗಳು ದೊರೆಯಲಿ

ಪಿಂಚಣಿ ಅದಾಲತ್ ಕಾರ್ಯಕ್ರಮ >>

ಹೂವಿನಹಿಪ್ಪರಗಿ: ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಪಡಿತರ ಚೀಟಿದಾರರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಬೇಕು ಎಂದು ಉಪ ತಹಸೀಲ್ದಾರ್ ಜಗದೀಶ ಹಾರಿವಾಳ ಹೇಳಿದರು.

ಗ್ರಾಮದ ನಾಡ ಕಚೇರಿಯಲ್ಲಿ ಶನಿವಾರ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ನೀಡಿ ಅವರು ಮಾತನಾಡಿದರು.

ಸರ್ಕಾರ ಸಾಮಾಜಿಕ ಭದ್ರತೆ ಅಡಿ ನಿರ್ಗತಿಕ ವಿಧವಾ ವೇತನ, ಇಂದಿರಾ ಗಾಂಧಿ ರಾಷ್ಟ್ರೀಯ ಪಿಂಚಣಿ, ವೃದ್ಧಾಪ್ಯ, ಅಂಗವಿಕಲ ಮಕ್ಕಳ ಪಿಂಚಣಿ, ಮನಸ್ವಿನಿ ಯೋಜನೆ ಹೀಗೆ ಹಲವು ಪಿಂಚಣಿಗಳನ್ನು ಜಾರಿ ಮಾಡಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಜೀವನ ನಡೆಸಬೇಕು ಎಂದರು.

ಕಂದಾಯ ನಿರೀಕ್ಷಕ ವಿ.ಜಿ. ಸಿಂದಗಿ ಮಾತನಾಡಿ, ಫಲಾನುಭವಿಗಳು ಅರ್ಜಿ ಸಲ್ಲಿಸುವಾಗ ಸಂಬಂಧಿಸಿದ ಎಲ್ಲ ದಾಖಾಲಾತಿಗಳನ್ನು ತರಬೇಕು ಮತ್ತು ಯಾವುದೇ ಏಜೆಂಟರ್ ಮೂಲಕ ಕಚೇರಿಗೆ ಬರಬೇಡಿ. ವಾಸ್ತವ ಸ್ಥಿತಿ ಅವಲೊಕಿಸಿ ನಾವೇ ಖುದ್ದು ನಿಮ್ಮ ಮನೆಗೆ ಭೇಟಿ ನೀಡಿ ಪ್ರಾಮಾಣಿಕವಾಗಿ ನಿಮಗೆ ಮಂಜೂರಾತಿ ಪತ್ರ ನೀಡುತ್ತೇವೆ ಎಂದು ಹೇಳಿದರು.

ಹತ್ತು ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ಮಂಜೂರಾದ ಆದೇಶ ಪತ್ರ ನೀಡಲಾಯಿತು. ಗ್ರಾಮ ಲೆಕ್ಕಾಧಿಕಾರಿ ಎಸ್.ಕೆ. ಯಲಗೋಡ, ಎಸ್.ಬಿ. ನಂದಿ, ಸಿಬ್ಬಂದಿ ಶಿವರಾಜ ಚೌದ್ರಿ, ಹೊನ್ನಪ್ಪ ವಾಲಿಕಾರ ಇತರರು ಭಾಗವಹಿಸಿದ್ದರು.