ಠಾಣೆ ಎದುರೇ ಮಹಿಳೆ ವಿಷ ಸೇವನೆ

ವಿಜಯಪುರ: ಗೃಹ ಸಚಿವ ಎಂ.ಬಿ. ಪಾಟೀಲರ ತವರು ಕ್ಷೇತ್ರದಲ್ಲೇ ಮಹಿಳೆಯೊಬ್ಬರು ಪೊಲೀಸ್ ಠಾಣೆ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ನಗರದ ಹೃದಯ ಭಾಗದಲ್ಲಿರುವ ಗಾಂಧಿ ಚೌಕ್ ಬಳಿಯ ಮಹಿಳಾ ಪೊಲೀಸ್ ಠಾಣೆ ಎದುರು ಗುರುವಾರ ಇಂಥದ್ದೊಂದು ಘಟನೆ ನಡೆದಿದ್ದು, ಇದೀಗ ಆ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಗರದ ಯೋಗಾಪುರ ಕಾಲನಿ ನಿವಾಸಿ ಸಾಯಿರಾ ಎಂಬ ಮಹಿಳೆ ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದ್ದು, ಪೊಲೀಸ್ ಇಲಾಖೆ ಆಕೆಯ ಸಂಪೂರ್ಣ ವಿವರ ಮರೆಮಾಚಿದೆ.

ಏನಿದು ಘಟನೆ?
ಕೌಟುಂಬಿಕ ಕಲಹ ಹಿನ್ನೆಲೆ ಮಹಿಳೆಯೋರ್ವಳು ದೂರು ನೀಡಲು ಹೋದಾಗ ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ದೂರು ಸ್ವೀಕರಿಸಿಲ್ಲ ಎಂಬುದು ಮಹಿಳೆ ಆರೋಪ. ಎರಡ್ಮೂರು ದಿನ ಎಡತಾಕಿದರೂ ದೂರು ಸ್ವೀಕರಿಸದ ಪೊಲೀಸರ ವರ್ತನೆಗೆ ಬೇಸತ್ತು ಮಹಿಳೆ ವಿಷ ಸೇವಿಸಿದ್ದಾಳೆ. ಇದನ್ನು ಕಂಡ ಮಕ್ಕಳು ಅಬ್ಬರಿಸಿ ಅಳುತ್ತಿದ್ದ ದೃಶ್ಯ ಸಾರ್ವಜನಿಕರ ಕರಳು ಕಿವುಚುತ್ತವೆ.

ಘಟನೆ ಸಂದರ್ಭ ಸ್ಥಳದಲ್ಲಿದ್ದ ಮಹಿಳಾ ಪೊಲೀಸರು ಮಹಿಳೆಯನ್ನು ಆಟೋ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ಯತ್ನ ನಡೆಸಿದ್ದಾರೆ. ಬಲವಂತವಾಗಿ ಆಟೋ ಹತ್ತಿಸಿದರೂ ಸಂತ್ರಸ್ತ ಮಹಿಳೆ ಕೆಳಗೆ ಜಿಗಿದು ಒದ್ದಾಡಿದಲ್ಲದೆ, ನೆಲಕ್ಕೆ ಹಣೆ ಹೊಡೆದುಕೊಂಡಿದ್ದಾಳೆ. ಇದನ್ನು ಕಂಡ ಮಕ್ಕಳು ತಾಯಿ ಎದೆ ಮೇಲೆ ಬಿದ್ದು ಬೋರಾಡಿ ಅಳುತ್ತಿರುವುದನ್ನು ಸುತ್ತಲಿನ ಜನ ಮೂಕ ಪ್ರೇಕ್ಷಕರಂತೆ ಕಂಡಿದ್ದಾರೆ.

ಅಂತಿಮವಾಗಿ ಏನಾಯ್ತು?
ಮಹಿಳಾ ಪೊಲೀಸ್ ಠಾಣೆ ರಾಣಿ ಚನ್ನಮ್ಮ ವಿಂಗ್ ಸಿಬ್ಬಂದಿ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಗೆ ದಾಖಲಾಗಲು ಸಂತ್ರಸ್ತೆ ತೀವ್ರ ಹಿಂದೇಟು ಹಾಕಿದ್ದಾರೆ. ಹೀಗಾಗಿ ಹೊರ ರೋಗಿಗಳ ನೋಂದಣಿ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ. ಅಟ್ರೋಪಿನ್ ಎಂಬ 30 ಇಂಜೆಕ್ಸನ್ ನೀಡಿರುವುದಾಗಿ ಆಸ್ಪತ್ರೆ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಪರಿಸ್ಥಿತಿ ಗಂಭೀರ ಎನ್ನುವ ಕಾರಣಕ್ಕೆ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಲ್ ಅಮೀನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾಗಿ ಪಿಎಸ್‌ಐ ಪಿಂಜಾರ ತಿಳಿಸಿದ್ದಾರೆ.

ಆದರೆ, ಮಹಿಳೆ ಹೆಸರು, ವಿಳಾಸ, ಈ ಕೃತ್ಯ ಎಸಗಲು ಕಾರಣ ಎಂಬಿತ್ಯಾದಿ ಬಗ್ಗೆ ಮಾಹಿತಿ ನೀಡಲು ಪಿಎಸ್‌ಐ ಪಿಂಜಾರ ಜಾರಿಕೊಂಡರು. ಅಂತಿಮವಾಗಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವಾದರೂ ದಾಖಲಾಗಿದೆಯಾ ಎಂಬ ಪ್ರಶ್ನೆಗೂ ಅವರಿಂದ ಸಮರ್ಪಕ ಉತ್ತರ ಬರಲಿಲ್ಲ.