ವೋಟ್ ಹಾಕಿವ್ರೀ.. ಮತ್ತೆ ಗುಳೆ ಹೊಂಟಿವ್ರೀ..!

ಹೀರಾನಾಯ್ಕ ಟಿ.
ವಿಜಯಪುರ: ತುತ್ತಿನ ಚೀಲ ತುಂಬಿಸಿಕೊಳ್ಳಲು ಮಹಾರಾಷ್ಟ್ರ- ಗೋವಾ ಭಾಗದ ಕಡೆಗಳಲ್ಲಿ ಗುಳೆ ಹೋಗಿದ್ದ ಮತದಾರರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಗಮಿಸಿ, ಮತದಾನ ಚಲಾಯಿಸಿದ ದೃಶ್ಯಗಳು ಕಂಡು ಬಂದವು.

ಬರದ ಜಿಲ್ಲೆ ಎನಿಸಿದ ವಿಜಯಪುರ ಸೇರಿದಂತೆ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ವರುಣ ಕೈ ಕೊಟ್ಟ ಹಿನ್ನೆಲೆಯಲ್ಲಿ ಜನ, ಜಾನುವಾರುಗಳ ಪರಿಸ್ಥಿತಿ ಸಾಕಷ್ಟು ಉಲ್ಬಣಗೊಂಡಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ಸಮೇತರಾಗಿ ಜಿಲ್ಲೆಯ ಮತದಾರರು ಮಹಾರಾಷ್ಟ್ರ- ಗೋವಾ ಕಡೆಗಳಲ್ಲಿ ಗುಳೆ ಹೋಗಿದ್ದಾರೆ. ಇದೀಗ ಮತ್ತೆ ತಮ್ಮ ಆಗಮಿಸಿದ ಮತದಾರರನ್ನು ಕಂಡು ತಾಂಡಾಗಳಲ್ಲಿ ಒಂದು ರೀತಿ ಹಬ್ಬದ ವಾತಾವರಣ ಮೂಡಿತ್ತು.

ವಿಜಯಪುರ ಲೋಕಸಭೆ ಮೀಸಲು ಕ್ಷೇತ್ರದ ತಾಂಡಾಗಳಲ್ಲಿ ಡಿಸೆಂಬರ್ ಅಂತ್ಯಕ್ಕೆ ಲಂಬಾಣಿ ಸಮುದಾಯದ ಜನರು ಗುಳೆ ಹೋಗುವುದು ಪರಿಪಾಠವಾಗಿದ್ದು, ಕುಟುಂಬ ಸಮೇತರಾಗಿ ಮನೆಗೆ ಬೀಗ ಜಡಿದು ಹೋದರೆ ಮತ್ತೆ ಜೂನ್ ಇಲ್ಲವೇ ಜುಲೈನಲ್ಲಿ ಬರುತ್ತಾರೆ.

ಮತ್ತೆ ಗುಳೆ ಹೊಂಟಿವ್ರೀ..!
ಯಾವ ಸರ್ಕಾರ ಬಂದ್ರೇನೂ ನಮಗೇನೂ?. ಮನೆ ಬಾಗಿಲಿಗೆ ವೋಟ್ ಕೇಳುವವರು ಮತ್ತೆ ಬರುವುದು ಐದು ವರ್ಷಕ್ಕೊಮ್ಮೆ ಅಲ್ಲಿ ವರೆಗೆ ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳಬೇಕು. ಹಸಿವಿದ್ದವರೂ ಹೊಟ್ಟೆ ತುಂಬಿಸಿಕೊಳ್ಳಲು ಎಲ್ಲಾದರೂ ಹೋಗಿ ದುಡಿಯುತ್ತಾರೆ. ಹೊಟ್ಟೆ ತುಂಬಿದವರು ನಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದ್ದರಿಂದ ಮತ್ತೆ ಗುಳೆ ಹೊರಟಿದ್ದೇವೆ ಎಂದು ಇಟ್ಟಂಗಿಹಾಳ ಸಮೀಪದ ಕರಡದೊಡ್ಡಿ ತಾಂಡಾದ ನಿವಾಸಿ ಭೀಮುಸಿಂಗ ರಾಠೋಡ ಹೇಳುತ್ತಾರೆ.

ಮತ ಹಾಕುವುದು ನಮ್ಮ ಹಕ್ಕು. ಆದ್ದರಿಂದ ದೂರದ ಮಹಾರಾಷ್ಟ್ರದಿಂದ ಇಲ್ಲಿಗೆ ವೋಟು ಹಾಕಲು ಬಂದಿದ್ದೇವೆ. ಮಕ್ಕಳನ್ನು ಅಲ್ಲಿಯೇ ಬಿಟ್ಟು ಬಂದಿರುವುದರಿಂದ ಮತ್ತೆ ವಾಪಸ್ ಹೋಗುತ್ತೇವೆ. ಇಲ್ಲದಿದ್ದರೆ ಜೀವನ ಸಾಗಬೇಕಲ್ಲವೇ ? ಎನ್ನುತ್ತಾರೆ ಸಾವಿತ್ರಿ ಚವಾಣ್.

ಜಿಲ್ಲೆಯ ಮದಭಾವಿ ತಾಂಡಾ, ಹಡಗಲಿ, ನವಲಗಿ, ಕೋಳೂರ, ಹಂಜಗಿ, ಕೇಸರಾಳ, ಹಡಲಸಂಗ, ಬೂದಿಹಾಳ, ಬರಡೋಲ, ಖಿರೂನ ತಾಂಡಾ, ಅರಕೇರಿ, ಭೂತನಾಳ ಇನ್ನಿತರೆ ತಾಂಡಾಗಳಲ್ಲಿ ಕೆಲ ತಾಂಡಾ ನಿವಾಸಿಗಳು ಬರದೇ ಇದ್ದಿದ್ದರಿಂದ ಮನೆಗಳಿಗೆ ಬೀಗ ಹಾಕಿರುವುದು ಇನ್ನೂ ದರ್ಶನವಾಗುತ್ತಿದೆ.

ಬಿಸಿಲಿಗೆ ಬಸವಳಿದ ಮತದಾರ
ಜಿಲ್ಲೆಯಲ್ಲಿ ಮಂಗಳವಾರ 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಬೆಳಗ್ಗೆ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ ಗಣನೀಯವಾಗಿತ್ತು. ನಂತರದಲ್ಲಿ ಮಧ್ಯಾಹ್ನದ ವೇಳೆಗೆ ಬಿರು ಬಿಸಿಲಿಗೆ ಮನೆಬಿಟ್ಟು ಮತದಾರರು ಹೊರಬರುವುದೇ ಕಷ್ಟವಾಗಿತ್ತು. ಅದರಲ್ಲಿಯೂ ತಿಕೋಟಾದ ಗಂಡುಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಮೂರು ತಿಂಗಳ ಹಸುಗೂಸನ್ನು ಹೊತ್ತು ಗೃಹಿಣಿ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದ್ದು ವಿಶೇಷವಾಗಿತ್ತು. ಅದಲ್ಲದೇ ಕೆಲವು ಕಡೆಗಳಲ್ಲಿ ಹಿರಿಯರು, ಅಂಗವಿಕಲರು ಬೇರೆಯವರ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದ ದೃಶ್ಯಗಳು ಕಂಡವು.

ಜಿಲ್ಲೆಯ ಏಕೈಕ ಅಂಗವಿಕಲರ ಮಾದರಿ ಮತಗಟ್ಟೆ ಕಲೇಬಾಗ ಗಂಡು ಮಕ್ಕಳ ಶಾಲೆಯಲ್ಲಿ ಸ್ಥಾಪಿಸಲಾಗಿದ್ದು, ಅಂಗವಿಕಲರು ವೀಲ್‌ಚೇರ್ ಸಹಾಯದಿಂದ ಆಗಮಿಸಿ ಮತದಾನ ಮಾಡಿದರು. ಅವರನ್ನು ಮತಗಟ್ಟೆಗೆ ಕರೆದುಕೊಂಡು ಬರುವ ಜವಾಬ್ದಾರಿಯನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಲಾಗಿತ್ತು. ಇನ್ನು ತಿಕೋಟಾದ ಸರ್ಕಾರಿ ಹೆಣ್ಣುಮಕ್ಕಳ ಶಾಲೆ ಸೇರಿದಂತೆ ಜಿಲ್ಲೆಯಲ್ಲಿ 8 ಸಖಿ ಮತಗಟ್ಟೆಗಳನ್ನು ಪ್ರಾರಂಭಿಸಲಾಗಿತ್ತು. ಅಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೂ ಪುರುಷರೇ ಹೆಚ್ಚಾಗಿ ಮತದಾನ ಮಾಡಿದ್ದು ವಿಶೇಷ.

ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಕಳೆದ ಆರು ತಿಂಗಳ ಹಿಂದೆ ಕೆಲಸಕ್ಕೆ ಹೋಗಿದ್ದು, ಇದೀಗ ಚುನಾವಣೆಗೆ ಮತದಾನ ಹಾಕಲು ಬಂದಿದ್ದೇವೆ. ಮತ್ತೆ ನಾಳೆ ಹೋಗುತ್ತೇವೆ.
ಸಾವಿತ್ರಿ ಚವಾಣ್, ಮತದಾರ