ಲೋಕಪಾಲ ಸಾರ್ವಜನಿಕ ಹಿತಾಸಕ್ತಿ ಕಾಪಾಡಲಿ

ವಿಜಯಪುರ: ಲೋಕಪಾಲ ಸಂಸ್ಥೆ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಕೆಲಸ ಮಾಡಬೇಕು. ಯಾವುದೇ ರಾಜಕೀಯಕ್ಕೆ ಮಣಿಯಬಾರದು ಎಂದು ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ ಶತಮಾನದ 60ರ ದಶಕದಲ್ಲಿಯೇ ಆಗಿನ ಕೇಂದ್ರ ಸರ್ಕಾರದ ದುರಾಡಳಿತವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲೋಕಪಾಲ ಮಸೂದೆ ಜಾರಿಗೊಳಿಸಲು ನಿರ್ಧಾರಿಸಲಾಗಿತ್ತು. ಆದರೆ ಅಂದಿನ ಸರ್ಕಾರ, ಆ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಲೋಕಪಾಲ ಮಸೂದೆ ಜಾರಿಗೊಳಿಸಲಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

1986ರಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಆದರೆ, ಕೇಂದ್ರದಲ್ಲಿ ಅಂತಹ ಸಂಸ್ಥೆ ಹುಟ್ಟು ಹಾಕಲು ಸಾಧ್ಯವಾಗಲಿಲ್ಲ. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದಲ್ಲಿ 2011ರಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಹೋರಾಟ ಮಾಡಲಾಯಿತು. ಆಗಿನ ಸರ್ಕಾರ ತಾನು ಕೊಟ್ಟ ಭರವಸೆಯಂತೆ ನಡೆದುಕೊಳ್ಳದೆ ಲೋಕಪಾಲ ಕಾಯ್ದೆ ಜಾರಿಗೆ ವಿಳಂಬ ಧೋರಣೆ ಅನುಸರಿಸಿತು. ಪ್ರಸಕ್ತ ಕೇಂದ್ರ ಸರ್ಕಾರ ಅದನ್ನು ಅನುಷ್ಠಾನಕ್ಕೆ ತಂದಿದೆ. ಆದರೆ, ಕೇಂದ್ರದ ಈ ನಿರ್ಧಾರ ಚುನಾವಣೆ ಗಿಮಿಕ್ ಇರಬಹುದು ಎನ್ನುವ ಚರ್ಚೆ ದೇಶಾದ್ಯಂತ ನಡೆದಿದೆ ಎಂದರು.

ಏನೇ ಇರಲಿ ಲೋಕಪಾಲ ಜಾರಿಗೆ ಬಂದಿದೆ. ಉತ್ತಮ ರೀತಿ ಕೆಲಸ ಮಾಡಿ ಜನರ ಪ್ರೀತಿ ಗಳಿಸಬೇಕಿದೆ. ಭ್ರಷ್ಟಾಚಾರ, ದುರಾಡಳಿತ ವಿರುದ್ಧ ನೇರವಾಗಿ ಕ್ರಮ ಕೈಗೊಳ್ಳಬೇಕಿದೆ. ಈ ಸಂಸ್ಥೆ ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವುದನ್ನು ನೋಡಬೇಕಿದೆ ಎಂದು ತಿಳಿಸಿದರು.

ಎಸಿಬಿ ಮುಚ್ಚಿದರೆ ಒಳಿತು
ರಾಜ್ಯದಲ್ಲಿ ಎಸಿಬಿ ಮುಚ್ಚಿದರೆ ಒಳಿತಾಗಲಿದೆ ಎಂದು ಹೆಗ್ಡೆ ಹೇಳಿದರು.
ಗಣಿ ಲೂಟಿ ಮಾಡಿದ ಲಂಚಕೋರರ ವಿರುದ್ಧ ಕ್ರಮ ಕೈಗೊಂಡಿದ್ದು ಲೋಕಾಯುಕ್ತ ಸಂಸ್ಥೆ. ಅದನ್ನು ರಾಜಕೀಯ ಪಕ್ಷಗಳು ದುರುಪಯೋಗ ಮಾಡಿಕೊಂಡು ಅಧಿಕಾರಕ್ಕೆ ಬಂದಿವೆ. ನಂತರ ಲೋಕಾಯುಕ್ತಕ್ಕೆ ನೀಡಿದ್ದ ಅಧಿಕಾರವನ್ನು ಎಸಿಬಿಗೆ ನೀಡಿ ಸ್ವತಂತ್ರ ತನಿಖಾ ಸಂಸ್ಥೆಯನ್ನು ದುರ್ಬಲಗೊಳಿಸಲಾಯಿತು. ಸ್ವತಂತ್ರವಾಗಿ ಕೆಲಸ ಮಾಡಲು ಅಧಿಕಾರದಲ್ಲಿರುವ ಪಕ್ಷಗಳು ಎಸಿಬಿ ಅಧಿಕಾರಿಗಳಿಗೆ ಅವಕಾಶ ನೀಡುತ್ತಿಲ್ಲ. ಮತ್ತೆ ಲೋಕಾಯುಕ್ತ ಸಂಸ್ಥೆಗೆ ಸಂಪೂರ್ಣ ಅಧಿಕಾರ ನೀಡಬೇಕಿದೆ ಎಂದು ಹೆಗ್ಡೆ ತಿಳಿಸಿದರು.

ಸಿಎಂ ಪ್ರತಿಭಟನೆ ಅಸಂಬದ್ಧ
ಐಟಿ ದಾಳಿ ಹಿನ್ನೆಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಅನೇಕ ನಾಯಕರು ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದು ಸರಿಯಲ್ಲ. ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಬಾರದು. ಆ ಹುದ್ದೆಗೆ ಗೌರವ ತರುವ ಕೆಲಸ ಮಾಡಬೇಕು. ಐಟಿ ದಾಳಿ ಕೆಲವರನ್ನೆ ಟಾರ್ಗೆಟ್ ಮಾಡುವುದಿಲ್ಲ. ಅನೇಕ ತಿಂಗಳಿಂದ ಐಟಿ ಅಧಿಕಾರಿಗಳು ಹಣದ ಅಕ್ರಮ ವರ್ಗಾವಣೆ ಗಮನಿಸಿ ದಾಳಿ ಯೋಜನೆ ರೂಪಿಸಿರುತ್ತಾರೆ. ಐಟಿ ದಾಳಿಯಿಂದ ಅನ್ಯಾಯವಾಗಿದ್ದರೆ ಕಾನೂನು ಹೋರಾಟ ಮಾಡಬೇಕು ಹೊರತು ಬೀದಿಗಿಳಿದು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಸಂತೋಷ ಹೆಗ್ಡೆ ತಿಳಿಸಿದರು.

ಇವಿಎಂ ಮಷಿನ್ ಬಗ್ಗೆ ಸಂಶಯ ಸಲ್ಲ
ಕೆಲ ನಾಯಕರು ಇವಿಎಂ ಮಷಿನ್ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾತನಾಡಿದ ಹೆಗ್ಡೆ, ಕ್ರಿಕೆಟ್ ಆಡುವವನು ಬ್ಯಾಟ್ ಸರಿಯಿಲ್ಲ ಎಂದರೆ ಹೇಗೆ? ಇವಿಎಂ ಮಷಿನ್‌ಗಳ ಬಗ್ಗೆ ಸಂಶಯ ವ್ಯಕ್ತಪಡಿಸುವುದು ಸರಿಯಲ್ಲ ಎಂದರು. ಜಾತಿ, ಧರ್ಮದ ಮೇಲೆ ಮತ ಹಾಕಬೇಡಿ. ಉತ್ತಮ ಅಭ್ಯರ್ಥಿಗೆ ಮತ ಹಾಕಿ ಎಂದು ಮತದಾರರಿಗೆ ಮನವಿ ಮಾಡಿದರು.

ರಾಜ್ಯದಲ್ಲಿ ಯೋಧರ ಸ್ಮಾರಕ ನಿರ್ಮಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆಯಲಾಗಿದೆ. ಏಳು ವರ್ಷಗಳ ಹಿಂದೆಯೇ ವೀರಗಲ್ಲು ತಯಾರಾಗಿದೆ. ಶೀಘ್ರ ಅದು ಸ್ಮಾರಕವಾಗಬೇಕಿದೆ.
ಸಂತೋಷ ಹೆಗ್ಡೆ, ಮಾಜಿ ಲೋಕಾಯುಕ್ತ