ರಾಜ್ಯದಲ್ಲಿ ದೋಸ್ತಿಗೆ ಇಪ್ಪತ್ತಕ್ಕೂ ಅಧಿಕ ಸ್ಥಾನ: ಎಂ.ಬಿ. ಪಾಟೀಲ ವಿಶ್ವಾಸ

ವಿಜಯಪುರ: ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಲಾಗುತ್ತಿದ್ದು ರಾಜ್ಯದಲ್ಲಿ ಮೈತ್ರಿ ಪಡೆಗೆ ಇಪ್ಪತ್ತಕ್ಕೂ ಅಧಿಕ ಸ್ಥಾನ ಲಭಿಸಲಿವೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಅಚಲ ವಿಶ್ವಾಸ ವ್ಯಕ್ತಪಡಿಸಿದರು.

ಉಭಯ ಪಕ್ಷಗಳ ನಾಯಕರು ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಬಿಜೆಪಿಯ ಸುಳ್ಳು ಆಶ್ವಾಸನೆಗೆ ಜನ ಬೇಸತ್ತಿದ್ದು ಈ ಬಾರಿ ಬಿಜೆಪಿಗೆ ಪಾಠ ಕಲಿಸುವುದು ನಿಶ್ಚಿತ ಎಂದು ಗುರುವಾರ ನಾಮಪತ್ರ ಸಲ್ಲಿಕೆ ಬಳಿಕ ಕಾಂಗ್ರೆಸ್-ಜೆಡಿಎಸ್‌ನ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿಯನ್ನು ಅಧಿಕಾರದಿಂದ ಕೆಳಗೆ ಇಳಿಸುವುದು, ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿಸುವ ಮೂಲಕ ಕೇಂದ್ರದಲ್ಲಿ ಜಾತ್ಯತೀತ ಸರ್ಕಾರ ಅಧಿಕಾರಕ್ಕೆ ತರುವುದು ಮೈತ್ರಿ ಪಡೆಯ ಪ್ರಮುಖ ಉದ್ದೇಶ. ಅದಕ್ಕಾಗಿ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಸಾಮೂಹಿಕ ನಾಯಕತ್ವದಲ್ಲಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಸೈನ್ಯದ ದುರ್ಬಳಕೆ:
ದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲ್ಲ ಎಂಬುದು ಗೊತ್ತಾಗಿದೆ. ದೇಶದ ಜನರ ಮುಂದೆ ಬಿಜೆಪಿ ಬಂಡವಾಳ ಎಲ್ಲ ಬಯಲಾಗಿದೆ. ಹೀಗಾಗಿ ಬಾಲಾಕೋಟ್ ದಾಳಿ, ಏರ್‌ಸ್ಟ್ರೈಕ್ ಮುಂದಿಟ್ಟುಕೊಂಡು ಚುನಾವಣೆ ತಂತ್ರ ಹೆಣೆಯುತ್ತಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಮೋದಿ ದೇಶದ ಸೈನಿಕರ ದಾಳಿಯನ್ನು ಬಳಸಿಕೊಳ್ಳುತ್ತಿದ್ದು ಜನ ಇದಕ್ಕೆ ಸೊಪ್ಪು ಹಾಕಲ್ಲ ಎಂದರು.

ಬಿಜೆಪಿ ಅಭ್ಯರ್ಥಿಗಳು ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಅಷ್ಟಕ್ಕೂ ಮೋದಿ ಮಾಡಿದ್ದಾದರೂ ಏನು? ಮನ್ ಕೀ ಬಾತ್‌ನಲ್ಲೇ ಕಾಲ ಕಳೆದಿರುವ ಮೋದಿಯಿಂದ ಕಾಮ್ ಕಿ ಬಾತ್ ಬರಲೇ ಇಲ್ಲ. ಏರ್ ಸ್ಟ್ರೈಕ್ ಹವಾದಲ್ಲಿ ಆಡಳಿತ ವೈಫಲ್ಯ ಮುಚ್ಚಲಿವೆ ಎಂದು ಬಿಜೆಪಿ ಭಾವಿಸಿದೆ. ಆದರೆ, ದೇಶದ ಜನ ಜಾಣರು. ಖಂಡಿತ ಬದಲಾವಣೆ ಬಯಸಿದ್ದಾರೆ. ಇಂಥ ಆಡಳಿತ ಬದಲಿಸುವುದೇ ಮೈತ್ರಿ ಉದ್ದೇಶವಾಗಿದೆ. ಆಂತರಿಕ ಅಸಮಾಧಾನ ಬದಿಗೊತ್ತಿ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ರಾಜ್ಯದಲ್ಲಿ ಇಪ್ಪತ್ತಕ್ಕೂ ಅಧಿಕ ಸ್ಥಾನ ತಂದೇ ತರುತ್ತೇವೆ ಎಂದರು.

ವಿಪ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಮೋದಿ ಮಾತು ಕೇಳಿದದರೆ ಗಿಡದೊಳಗಿನ ಮಂಗ್ಯಾ ಸಹ ಕೈ ಬಿಡುತ್ತವೆ ಎಂಬ ಮಾತಿದೆ. ಅಂದರೆ ಬರೀ ಮಾತಿನಲ್ಲೇ ಮೋದಿ ಆಡಳಿತ ನಡೆಸಿದ್ದು ಈ ಬಾರಿ ಜಾಣ ಮತದಾರರು ತಕ್ಕ ಪಾಠ ಕಲಿಸುವರೆಂದರು.

ಸಚಿವ ಶಿವಾನಂದ ಪಾಟೀಲ ಮಾತನಾಡಿ, ದೇಶದ ಜನತೆಗೆ ಮೋದಿ ಮುಖ ನೋಡಿ ಸಾಕಾಗಿದೆ. ಓರಿಜನಲ್ ಬಿಜೆಪಿ ಈಗ ಉಳಿದಿಲ್ಲ. ಮೋದಿ ನೇತೃತ್ವ ಬಿಜೆಪಿ ಜನರಿಗೆ ಬೇಡವಾಗಿದೆ ಎಂದರು.

ಸಚಿವ ಬಂಡೆಪ್ಪ ಕಾಶಂಪುರ ಮಾತನಾಡಿ, ಜನ ದೆಹಲಿ ನೋಡುತ್ತಿಲ್ಲ. ರಾಜ್ಯ ನೋಡುತ್ತಿದ್ದಾರೆ. ಮೈತ್ರಿ ಸರ್ಕಾರದ ಯೋಜನೆಗಳು ಜನರ ಮನೆ ಮನೆಗೂ ಪಲುಪಿವೆ. ನಮ್ಮ ಸರ್ಕಾರ ಉದ್ರಿಯಲ್ಲ ನಗದಿ ಎಂದ ಅವರು, ಸರ್ಕಾರದ ಸಾಲ ಮನ್ನಾ ಪ್ರಯೋಜನದ ಬಹುತೇಕ ಪಾಲು ಉತ್ತರ ಕರ್ನಾಟಕಕ್ಕೆ ಸಿಕ್ಕಿದೆ ಎಂದರು.

ವಿಪ ಸದಸ್ಯ ಪ್ರಕಾಶ ರಾಠೋಡ ಅವರು, ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಪರ ಕಾಂಗ್ರೆಸ್ ಬಾವುಟ ಬೀಸಿದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲ. ಹೀಗಾಗಿ ಅಂಥವರ ಮೇಲೆ ಕ್ರಮ ಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷರು ಮುಂದಾಗಿದ್ದಾರೆಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಚಿವ ಎಂ.ಸಿ. ಮನಗೂಳಿ, ಬಂಡೆಪ್ಪ ಮಾಶಂಪುರ, ಶಾಸಕ ಯಶವಂತರಾಯಗೌಡ ಪಾಟೀಲ್, ಸುನೀಲಗೌಡ ಪಾಟೀಲ, ಸಿ.ಎಸ್. ನಾಡಗೌಡ, ಬಸವರಾಜ ಹೊರಟ್ಟಿ, ಪ್ರಕಾಶ ರಾಠೋಡ, ರವಿಗೌಡ ಪಾಟೀಲ ಧೂಳಖೇಡ, ವಿಠಲ್ ಕಟಕಧೋಂಡ ಇತರರಿದ್ದರು.

ಚಲವಾದಿ ಸಮಾಜ ಕಾಂಗ್ರೆಸ್ ಜತೆಗಿದೆ. ನೆರೆಯ ಕಲಬುರ್ಗಿ ಕ್ಷೇತ್ರದಿಂದ ಅದೇ ಸಮುದಾಯಕ್ಕೆ ಆದ್ಯತೆ ಕಲ್ಪಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಪಕ್ಷ ನಾಯಕರನ್ನಾಗಿಸಿದ್ದು ಕಾಂಗ್ರೆಸ್ ಪಕ್ಷ. ಮಾತ್ರವಲ್ಲ, ಜಿ. ಪರಮೇಶ್ವರ ಅವರನ್ನು ಉಪಮುಖ್ಯಮಂತ್ರಿಯನ್ನಾಗಿಸಿದ್ದೂ ಇದೇ ಕಾಂಗ್ರೆಸ್ ಪಕ್ಷ. ಬಿಜೆಪಿ ಎಷ್ಟರ ಮಟ್ಟಿಗೆ ಆ ಸಮುದಾಯಕ್ಕೆ ಆದ್ಯತೆ ನೀಡಿದೆ ಎಂಬುದನ್ನು ಅವರು ಗಮನಿಸಿದ್ದಾರೆ.
– ಕಾಂಗ್ರೆಸ್ ಮುಖಂಡರ ಜಂಟಿ ಹೇಳಿಕೆ

2 Replies to “ರಾಜ್ಯದಲ್ಲಿ ದೋಸ್ತಿಗೆ ಇಪ್ಪತ್ತಕ್ಕೂ ಅಧಿಕ ಸ್ಥಾನ: ಎಂ.ಬಿ. ಪಾಟೀಲ ವಿಶ್ವಾಸ”

  1. Gowdre modalu vijayapurada Ella halligalli neerina vyavasthe madikodi. Amele 20 seat gello kanasu kani.

  2. ಎಲ್ಲರೂ ನಮಗ ೨೦+ ನಮಗ ೨೨ ಬರ್ತಾವು ಅಂದ್ರ ಹೆಂಗ ಇರುವ ೨೮ ಸೀಟ್ ಅದಾವು

Comments are closed.