ನೀರು ಕೊಡ್ರೀ.. ಹೆಂಗಾರಾ ಬದುಕೊಳ್ತೀವ್ರೀ..!

ಹೀರಾನಾಯ್ಕ ಟಿ.,

ವಿಜಯಪುರ: ಕುಡಿಯ್ಯಕ ನೀರು ಕೊಡ್ರೀ ಸಾಹೇಬ್ರ.. ಹೆಂಗಾರಾ ಮಾಡಿ ಬಂದಿಕೊಳ್ತಿವ್ರೀ..ನಿಮ್ ಋಣನಾ ಮರಿಯಂಗಿಲ್ರೀ..ಬರಗಾಲ ಬಿದ್ದು, ನಮ್ಮ ಬಾಳ್ವೆ ಮೂರಾಬಟ್ಟೆ ಆಗೈತ್ರೀ.. ನೀವೇ ನಮಗ ದಾರಿ ತೋರಿಸಬೇಕ್ರಿ… ಇದು ಬರ ವೀಕ್ಷಣೆಗೆ ಭೇಟಿ ನೀಡಿದ ಸಚಿವರ ಮುಂದೆ ಜನರು ತೋಡಿಕೊಂಡ ಅಳಲು.

ಬರಗಾಲ ಅಧ್ಯಯನ ಹಿನ್ನೆಲೆಯಲ್ಲಿ ವಿಜಯಪುರ ತಾಲೂಕಿನ ನಾಗಠಾಣಕ್ಕೆ ಭೇಟಿ ನೀಡಿದ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದ ತಂಡದ ಸಚಿವರು, ಅಧಿಕಾರಿಗಳ ಮುಂದೆ ಬರ ಪರಿಸ್ಥಿತಿ ಕುರಿತು ಜನರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು ಹೀಗೆ.

ನರೇಗಾ ಯೋಜನೆಯಡಿಯಲ್ಲಿ ನಾಗಠಾಣ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಿಸಿದ ಸಚಿವತ್ರಯರಿಗೆ ಅಲ್ಲಿ ಕರ್ತವ್ಯ ನಿರತ ಕೂಲಿ ಕಾರ್ಮಿಕರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಳಲು ತೋಡಿಕೊಂಡರು.

ಬರಕ್ಕೆ ತತ್ತರಿಸಿದ ಲಿಂಬೆನಾಡು
ಮುಂಗಾರು ಹಾಗೂ ಹಿಂಗಾರು ಮಳೆ ಅಭಾವದಿಂದಾಗಿ ತೋಟಗಾರಿಕೆ ಬೆಳೆಗಳು ಸಂಪೂರ್ಣ ನೆಲಕಚ್ಚಿದೆ. ಗುಣಕಿ, ತಿಡಗುಂದಿ ಇನ್ನಿತರ ಭಾಗದಲ್ಲಿ ಭೇಟಿ ನೀಡಿದ ಸಚಿವರು, ಒಣಗಿದ ಲಿಂಬೆಗಿಡಗಳನ್ನು ಕಂಡು ಮರುಗುವಂತಾಯಿತು. ಮಳೆ ಇಲ್ಲ. ಬೆಳೆಯೂ ಇಲ್ಲ. ಟ್ಯಾಂಕರ್ ನೀರು ಹಾಕಿಸಿ, ಬೆಳೆ ಉಳಿಸಿಕೊಳ್ಳಲು ರೊಕ್ಕಾ ಇಲ್ಲ. ಈ ರೀತಿ ಪರಿಸ್ಥಿತಿಯಾಗಿದೆ. ಆದ್ದರಿಂದ ಸರ್ಕಾರದಿಂದಲೇ ತೋಟಗಾರಿಕೆ ಬೆಳೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಬೇಕೆಂದು ರೈತರು ಒತ್ತಾಯಿಸಿದರು.

ಸಚಿವರಿಗೂ ತಟ್ಟಿದ ಬಿಸಿ !
ನಾಗಠಾಣ ಕೆರೆ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿ ಸಚಿವರಿಗೆ ಶಾಕ್ ಕಾದಿತ್ತು. ಕೆರೆ ಹೂಳು ಎಂದಿನಿಂದ ತಗೆಯುತ್ತಿದ್ದೀರಿ. ನಿಮಗೆ ಸರಿಯಾಗಿ ಕೂಲಿ ಹಣ ಪಾವತಿಯಾಗುತ್ತಿದ್ದೀಯಾ ಎಂದು ಕೇಳಿದ್ದೇ ತಡ, ಕೆರೆಗೆ ನೀರು ತುಂಬಿಸಿ, ಅಲ್ಲಿವರೆಗೂ ನಿಮಗೆ ಬಿಡುವುದಿಲ್ಲ. ಕೆರೆಗೆ ನೀರು ತುಂಬಿಸಿಯೇ ಹೊಗಬೇಕು ಎಂದು ರೈತ ಮಹಿಳೆ ಸುಜ್ಞಾನಿ ಅರಳಿ ಅವರು ಸಚಿವರಲ್ಲಿ ಬೇಡಿಕೆವಿಟ್ಟರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ದೇಶಪಾಂಡೆ, ಕೆರೆ ಹೂಳೆತ್ತುವ ಕಾರ್ಯ ಮುಗಿದ ನಂತರ ನೀರು ತುಂಬಿಸಲು ತಿಳಿಸಲಾಗುವುದು ಎಂದು ಮಹಿಳೆಗೆ ಸಮಾಧಾನಪಡಿಸಿದರು. ನಂತರ ವಿವಿಧೆಡೆ ಭೇಟಿ ನೀಡಿದ ಸಚಿವರು, ಬಿರುಬಿಸಿಲಿಗೆ ಎಳೆನೀರು ಮೊರೆ ಹೋಗಬೇಕಾಯಿತು.

ಜನ-ಜಾನುವಾರಗಳ ಸ್ಥಿತಿ ದುಸ್ತರ
ಜಿಲ್ಲೆಯಲ್ಲಿ ಬರ ಆವರಿಸಿದ್ದು, ಜನ-ಜಾನುವಾರಗಳ ಸ್ಥಿತಿ ದುಸ್ತರಗೊಂಡಿದೆ. ಕೆರೆಗಳು ಬತ್ತಿಹೋಗಿದ್ದು, ಜಾನುವಾರುಗಳು ನೀರಿಗಾಗಿ ಕೆರೆ ಅಂಗಳಕ್ಕೆ ಬರತೊಡಗಿದ ದೃಶ್ಯಗಳು ಕಂಡು ಬಂದವು. ಕುರಿ, ಮೇಕೆ ದನಗಾಯಿಗಳು ಸುಮಾರು ಕಿ.ಮೀ ದೂರ ನಡೆದುಕೊಂಡು ಹೋಗಿ ಹೊಂಡ, ಕಾಲುವೆ, ಕೆರೆಗಳಿಗೆ ನೀರುಣಿಸುವ ಚಿತ್ರಣ ಮನಕಲಕುವಂತಿತ್ತು. ಜಿಲ್ಲೆಯ ನೀರಾವರಿ ಯೋಜನೆಗಳು ಅರ್ಧಕ್ಕೆ ಸ್ಥಗಿತಗೊಂಡಿದ್ದು, ಇದರಿಂದಾಗಿ ರೈತರ ಹೊಲಗಳಿಗೆ ನೀರು ಹರಿಸುವ ಕಷ್ಟಕರವಾಗಿದೆ. ಮುಂಗಾರು ಪೂರ್ವದಲ್ಲಿ ಮಳೆ ಅಭಾವ ಎದುರಾಗಿರುವುದರಿಂದ ಇನ್ನೂ 15 ದಿನಗಳಲ್ಲಿ ಮಳೆ ಆಗದಿದ್ದರೆ ಜೀವನ ದುಸ್ತರಗೊಳ್ಳಲಿದೆ ಎಂದು ರೈತ ಮಹಿಳೆ ಭಾರತಿ ಸಾರವಾಡ ತಿಳಿಸುತ್ತಾರೆ.

ಕೈ ಹಿಡಿದ ನರೇಗಾ !
ಮಾಜಿ ಸೈನಿಕ ಹಾಗೂ ಪಿಡಿಒ ಬಿ.ಆರ್.ರಾಠೋಡ ಅವರ ಕಾರ್ಯಕ್ಷಮತೆಯಿಂದಾಗಿ ನರೇಗಾ ಜನರ ಕೈ ಹಿಡಿದಿದೆ. ನಾಗಠಾಣ ಕೆರೆ ಹೂಳೆತ್ತುವ ಕಾರ್ಯ ಈಗಾಗಲೇ ತಿಂಗಳಿಂದ ನಡೆಯುತ್ತಿದೆ. ನರೇಗಾ ಯೋಜನೆಯಡಿ 250ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ 18 ಲಕ್ಷ ರೂ. ವೆಚ್ಚದ ಕಾಮಗಾರಿಗಳು ನಡೆದಿದ್ದು, ಇನ್ನು ಹೆಚ್ಚುವರಿಯಾಗಿ 50 ಲಕ್ಷ ರೂ. ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 160 ಎಕರೆ ವಿಸ್ತೀರ್ಣ ಇರುವ ನಾಗಠಾಣ ಕೆರೆ ಅಭಿವೃದ್ಧಿಗೆ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *