ಬರದ ವಿಷಯದಲ್ಲಿ ಹುಡುಗಾಟ ಬೇಡ

ವಿಜಯಪುರ: ಅಲರ್ಟ್ ಆಗಿರಿ, ಅಪ್‌ಡೇಟ್ ಆಗಿರಿ.. ಪರ್ಫೆಕ್ಟ್ ಆಗಿರಿ…ಬರದ ವಿಷಯದಲ್ಲಿ ಹುಡುಗಾಟ ಆಡದಿರಿ, ಗಂಭೀರವಾಗಿರಿ. ಮುಂಜಾಗ್ರತೆಯಿಂದ ಜವಾಬ್ದಾರಿ ಯುತವಾಗಿ ಕಾರ್ಯನಿರ್ವಹಿಸಿ, ಯಾವುದೇ ಕಾರಣಕ್ಕೂ ಈ ಕಿವಿಗೆ ಸಮಸ್ಯೆ ಬೀಳದಂತೆ ಕ್ರಮ ಕೈಗೊಳ್ಳಿ!

ಭೀಕರ ಬರದ ಹಿನ್ನೆಲೆ ಜಿಲ್ಲಾ ಪ್ರವಾಸ ಕೈಗೊಂಡಿರುವ ಬರ ಪರಿಶೀಲನೆ ತಂಡದ ನೇತೃತ್ವ ವಹಿಸಿರುವ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆಸಿದ ಸಭೆಯಲ್ಲಿ ಅಧಿಕಾರಿಗಳಿಗೆ ನೀಡಿದ ಸೂಚನೆಗಳಿವು.

ಬರ ಇಂದು ನಿನ್ನೆಯದಲ್ಲ. ಅದನ್ನು ನಿಭಾಯಿಸುವುದು ದೊಡ್ಡ ವಿಷಯವೇನಲ್ಲ. ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಆಸಕ್ತಿ ವಹಿಸಬೇಕಷ್ಟೆ. ಜನಪರ ಕಾಳಜಿಯೊಂದಿಗೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ದುಡಿಯುವ ಕೈಗಳಿಗೆ ಉದ್ಯೋಗ, ಜನರಿಗೆ ಕುಡಿಯಲು ನೀರು, ದನಕರುಗಳಿಗೆ ಮೇವು ನೀಡಿದರೆ ಯಾವುದೇ ಸಮಸ್ಯೆ ಉದ್ಭವಿಸದು. ಈ ನಿಟ್ಟಿನಲ್ಲಿ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಿಂದ ಹಿಡಿದು ಕೆಳ ಹಂತದ ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಎಲ್ಲರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಉತ್ತಮ ಫಲಿತಾಂಶ ಕಂಡುಕೊಳ್ಳಲು ಸಾಧ್ಯ ಎಂದರು.

ಮೇವು ಬ್ಯಾಂಕ್ ಸ್ಥಾಪನೆ

ಜಿಲ್ಲೆಯ ಮೇವು ಬ್ಯಾಂಕ್‌ಗಳ ಮಾಹಿತಿ ಕಲೆ ಹಾಕಿದ ಸಚಿವ ದೇಶಪಾಂಡೆ, ಮೇವು ಬ್ಯಾಂಕ್ ಸ್ಥಾಪನೆಗೆ 25 ಕೋಟಿ ರೂ. ಅನುದಾನ ನೀಡಲಾಗಿದೆ. ದನಕರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕೆಂದರು. ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರಾಣೇಶ ಜಹಾಗೀರದಾರ, ಈಗಾಗಲೇ ಅವಶ್ಯವಿರುವ ಕಡೆಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. ಸರ್ಕಾರ ಒದಗಿಸಿದ 36,530 ಮೇವಿನ ಕಿಟ್‌ಗಳಲ್ಲಿ ಹಾಲು ಉತ್ಪಾದಕರ ಒಕ್ಕೂಟದಿಂದ 2422 ಹಾಗೂ ಇಲಾಖೆಯಿಂದ ನೇರವಾಗಿ 34999 ರೈತರಿಗೆ ನೀಡಲಾಗಿದೆ. ಮೇವಿನ ಕಿಟ್‌ಗಳಿಂದ 2,17,424 ಮೆಟ್ರಿಕ್ ಟನ್ ಮೇವು ಬರುವ ನಿರೀಕ್ಷೆ ಇದೆ ಎಂದರು. ಮೇವು ಕಿಟ್ ಪೂರೈಕೆಗಾಗಿ ರಾಜ್ಯಮಟ್ಟದಲ್ಲಿ ಮೂರು ಕಂಪನಿಗಳಿಗೆ ಟೆಂಡರ್ ನೀಡಲಾಗಿದೆ. ಆ ಪೈಕಿ ಒಂದು ಕಂಪನಿ ಕಿಟ್ ಪೂರೈಸಿಲ್ಲವೆಂದು ಜಹಾಗೀರದಾರ ತಿಳಿಸಿದಾಗ, ಆ ಕಂಪನಿ ಬಗ್ಗೆ ವರದಿ ಕೊಡಿ, ಕ್ರಮ ಕೈಗೊಳ್ಳೋಣ ಎಂದು ಸಚಿವ ದೇಶಪಾಂಡೆ ಪ್ರತಿಕ್ರಿಯಿಸಿದರು.

ಬೆಳೆಹಾನಿ ಸಮೀಕ್ಷೆ

ಬೆಳೆ ಹಾನಿ ನಷ್ಟ ಸಮೀಕ್ಷೆ ಕಾರ್ಯ ಅತ್ಯಂತ ನಿಖರವಾಗಿ ನಡೆಯಬೇಕು. ಸಮೀಕ್ಷೆ ವರದಿ ಆಧರಿಸಿಯೇ ರೈತರಿಗೆ ಇನ್‌ಪುಟ್ ಸಬ್ಸಿಡಿ ಮೊದಲಾದ ಸೌಲಭ್ಯಗಳು ದೊರಕುತ್ತವೆ. ವರದಿಯನ್ನು ಅತ್ಯಂತ ನಿಖರವಾಗಿ ಸಿದ್ಧಪಡಿಸಿ. ಸ್ಥಳೀಯ ಜನಪ್ರತಿನಿಧಿಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದು ಸಚಿವ ದೇಶಪಾಂಡೆ ಸೂಚಿಸಿದರು. ಸಚಿವ ಶಿವಾನಂದ ಪಾಟೀಲ ಮಾತನಾಡಿ, ಆಲಮಟ್ಟಿ ಅಣೆಕಟ್ಟೆ ಅಚ್ಚುಕಟ್ಟು ಪ್ರದೇಶವನ್ನು ನೀರಾವರಿ ಎಂದು ಪರಿಗಣಿಸಲಾಗಿದೆ. ಈ ಬಾರಿ ಹಿಂಗಾರಿಗೆ ನೀರು ಹರಿಸದ ಕಾರಣ ಅಚ್ಚುಕಟ್ಟು ಪ್ರದೇಶದ ರೈತರು ಸಹ ಹೈರಾಣಾಗಿದ್ದಾರೆ. ಅವರನ್ನೂ ನೀರಾವರಿ ಕ್ಷೇತ್ರಕ್ಕೊಳಪಡಿಸಿರುವುದು ಅವೈಜ್ಞಾನಿಕವಲ್ಲವೇ? ಅಲ್ಲಿ ನೀರಿಲ್ಲವೆಂದ ಮೇಲೆ ನೀರಾವರಿ ಹೇಗಾಗುತ್ತದೆ? ಅವರನ್ನೂ ಹಾನಿ ವ್ಯಾಪ್ತಿಗೆ ಒಳಪಡಿಸಿ ಎಂದರು.