ಜಿಲ್ಲೆಗೆ 10 ಕೋಟಿ ರೂ. ಅನುದಾನ ಬಿಡುಗಡೆ

ವಿಜಯಪುರ: ಭೀಕರ ಬರದ ಹಿನ್ನೆಲೆ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಜಾನುವಾರಿಗೆ ಮೇವಿನ ಬ್ಯಾಂಕ್ ಹಾಗೂ ಗೋಶಾಲೆ ಸ್ಥಾಪಿಸಲು ಸರ್ಕಾರ ಜಿಲ್ಲೆಗೆ 10 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಿ ಸೋಮವಾರ ಆದೇಶಿಸಿದೆ.

ಕಳೆದ 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗಲಿಲ್ಲ. ಜಿಲ್ಲೆಯ ಐದು ತಾಲೂಕುಗಳು ಬರ ಪೀಡಿತ ಎಂದು ಘೋಷಿಸಲಾಯಿತು. ಪ್ರಸ್ತುತ ಬೇಸಿಗೆ ಹಿನ್ನೆಲೆ ನೀರಿನ ಅಭಾವ ತೀವ್ರವಾಗಿದೆ. ಜಾನುವಾರು ಸಹ ಮೇವಿಗಾಗಿ ಪರಿತಪಿಸುತ್ತಿವೆ. ಹೀಗಾಗಿ ಕುಡಿಯುವ ನೀರು ಮತ್ತು ಮೇವಿಗಾಗಿ ಜಿಲ್ಲಾಡಳಿತ ಅನುದಾನಕ್ಕಾಗಿ ಮೇ 15, 2019ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಸೋಮವಾರ ಪ್ರಸ್ತಾವನೆಗೆ ಮಂಜೂರಾತಿ ನೀಡಲಾಗಿದ್ದು ಪ್ರಕೃತಿ ವಿಕೋಪ ನಿಧಿಯಡಿ ತ್ವರಿತವಾಗಿ ಹಣ ನೀಡಿ ಸರ್ಕಾರ ಆದೇಶಿಸಿದೆ. ಅಲ್ಲದೇ, ಅನುದಾನ ಬಳಕೆಗೆ ಸಂಬಂಧಿಸಿದಂತೆ ಕೆಲ ನಿಬಂಧನೆಗಳನ್ನು ಹಾಕಿದೆ. ಸರ್ಕಾರದ ಈ ಅನುದಾನವನ್ನು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರವೇ ಬಳಸಬೇಕು. ಉದ್ಧೇಶಿತ ಕೆಲಸಕ್ಕೆ ಮಾತ್ರ ಹಣ ವಿನಿಯೋಗಿಸಿ ಆ ಬಗ್ಗೆ ಪ್ರಮಾಣ ಪತ್ರ ನೀಡಬೇಕು. ಹಣ ಬಳಕೆಯಲ್ಲಿ ಯಾವುದೇ ಲೋಪವಾದಲ್ಲಿ ಜಿಲ್ಲಾಧಿಕಾರಿಗಳನ್ನೇ ಹೊಣೆಯಾಗಿಸಿ ಕ್ರಮಕ್ಕೆ ಮುಂದಾಗುವುದಾಗಿ ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.





Leave a Reply

Your email address will not be published. Required fields are marked *