ವಿಜಯಪುರ: ಮಹಾತ್ಮಾ ಗಾಂಧೀಜಿ ತತ್ವಾದರ್ಶ ವಿಚಾರ ಧಾರೆಗಳನ್ನು ಪ್ರಚಾರಪಡಿಸಲು ಗಾಂಧಿ ಭವನ ಸದುಪಯೋಗವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಗಾಂಧಿ ಭವನ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗಾಂಧಿ ಭವನದಲ್ಲಿ ಗಾಂಧಿ ತತ್ವ, ವಿಚಾರಧಾರೆಯನ್ನೊಳಗೊಂಡ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವುದಲ್ಲದೇ, ಗಾಂಧಿ ಭವನವನ್ನು ಪ್ರವಾಸಿ ತಾಣವನ್ನಾಗಿಸಬೇಕು ಎಂದು ಹೇಳಿದರು.
ಗಾಂಧೀಜಿಯವರ ವಿಚಾರಧಾರೆಯುಳ್ಳ ಸದಭಿರುಚಿಯ ಕಾರ್ಯಕ್ರಮ ಆಯೋಜಿಸಬೇಕು. ಗಾಂಧೀಜಿಯ ಜೀವನ ಸ್ವಾತಂತ್ರೃ ಚಳವಳಿಗಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಗಾಂಧಿ ಆಚಾರ-ವಿಚಾರ ತಿಳಿದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಗಾಂಧಿ ಭವನ ಸ್ಥಾಪನೆ ಮಾಡಲಾಗಿದೆ. ಮಹಾತ್ಮಾ ಗಾಂಧೀಜಿಯವರ ಜೀವನ ಘಟ್ಟದ ಮಾಹಿತಿ ಆಗರವನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವಂತಾಗಬೇಕು. ನಗರದಲ್ಲಿರುವ ಗಾಂಧಿ ಭವನವನ್ನು ಹೆಚ್ಚಿನ ಜನರು ವೀಕ್ಷಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸೂಕ್ತ ಪ್ರಚಾರ ಕೈಗೊಳ್ಳಲು ನಗರದ ವಿವಿಧ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಗಾಂಧಿ ಭವನದ ಪ್ರಚಾರಕ್ಕಾಗಿ ಲಕ ಅಳವಡಿಸಬೇಕು ಎಂದರು.
ಶಿಕ್ಷಣ ಇಲಾಖೆ ಮೂಲಕ ಶೈಕ್ಷಣಿಕ ಪ್ರವಾಸಕೈಗೊಳ್ಳುವ ವೇಳೆ ಗಾಂಧಿ ಆದರ್ಶ ವಿಚಾರಧಾರೆಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಗಾಂಧಿ ಭವನ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ಸಭೆಯಲ್ಲಿ ವಿಜಯಪುರ ಎಸಿ ಕ್ಯಾ. ಮಹೇಶ ಮಾಲಗಿತ್ತಿ, ಗಾಂಧಿ ಭವನದ ಸದಸ್ಯ ಕಾರ್ಯದರ್ಶಿ ಅಮರೇಶ ದೊಡಮನಿ, ನಿರ್ವಹಣಾ ಸಮಿತಿ ಸದಸ್ಯರಾದ ಪೀಟರ್ ಅಲೆಕ್ಸಾಂಡರ್, ಫಿರೋಜ್ ರೋಜಿಂದಾರ್ ಹಾಗೂ ನೇತಾಜಿ ಗಾಂಧಿ ಉಪಸ್ಥಿತರಿದ್ದರು.