ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಪ್ರಾರಂಭ

ವಿಜಯಪುರ: ಸೈಕ್ಲಿಂಗ್ ಕ್ಷೇತ್ರದಲ್ಲಿ 10 ಏಕಲವ್ಯ ಪ್ರಶಸ್ತಿಯನ್ನು ಪಡೆದ ರಾಜ್ಯದ ಏಕೈಕ ಜಿಲ್ಲೆ ವಿಜಯಪುರದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಕ್ರೀಡಾಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಪ್ರೋತ್ಸಾಹವಿದೆ ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಗೊಂಡಿರಲಿಲ್ಲ. ಈ ಕುರಿತು ‘ವಿಜಯವಾಣಿ’ ಕ್ರೀಡೆ ನಿರ್ಲಕ್ಷ್ಯ ಶೀರ್ಷಿಕೆಯಡಿ ಸರಣಿ ವಿಶೇಷ ವರದಿ ಪ್ರಕಟಿಸಿತ್ತು. ಈ ಬಗ್ಗೆ ಗಮನಿಸಿದ ಅಧಿಕಾರಿಗಳು ಟೆಂಡರ್ ಕರೆದ ನಂತರ ಇದೀಗ ಕಾಮಗಾರಿ ಪ್ರಾರಂಭಿಸಲಾಗಿದೆ.

ಏನಿದು ಸಿಂಥೆಟಿಕ್ ಟ್ರ್ಯಾಕ್ ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ ಕ್ರೀಡಾಕೂಟ (ಓಟದ ಸ್ಪರ್ಧೆ) ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲಾಗುತ್ತದೆ. 400 ಮೀ.ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಈಗಾಗಲೇ ಜಿಲ್ಲಾಡಳಿತ ಆಡಳಿತಾತ್ಮಕವಾಗಿ ಅನುಮೋದನೆ ನೀಡಲಾಗಿದ್ದು, 15 ಮಿಲಿ ಮೀಟರ್ ದಪ್ಪದ ಸಿಂಥೆಟಿಕ್ ಅಳವಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಹೈದರಬಾದ್ ಮೂಲದ ಕಂಪನಿಯೊಂದಕ್ಕೆ ಟೆಂಡರ್ ನೀಡಲಾಗಿದೆ. ಟ್ರ್ಯಾಕ್‌ಗೆ 7 ವರ್ಷಗಳ ವಾರಂಟಿಯನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಸಿಂಥೆಟಿಕ್ ಟ್ರ್ಯಾಕ್ ಒಳಭಾಗದಲ್ಲಿ ನೆಲಹಾಸು ಅಳವಡಿಸುವುದು, ಸ್ಪಿಂಕ್ಲರ್ ಅಳವಡಿಸುವುದು, ಭೂಗತ ತೊಟ್ಟಿ ನಿರ್ಮಿಸುವುದು ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳಬೇಕಿದ್ದು, ಅದಕ್ಕೆ ಈಗಾಗಲೇ 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.

ನೆಲದಲ್ಲೆ ಓಟ
ಸದ್ಯ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಸೇರಿದಂತೆ ಅನೇಕ ಅಥ್ಲೆಟಿಕ್ ಕ್ರೀಡಾ ಚಟುವಟಿಕೆಗಳು ಜಿಲ್ಲಾ ಕ್ರೀಡಾಂಗಣದಲ್ಲಿಯೇ ನಡೆಯುತ್ತಿವೆ. ನೆಲದಲ್ಲೆ ಕ್ರೀಡಾಳುಗಳು ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಅನೇಕ ಬಾರಿ ಎಡವಿ ಬಿದ್ದು ಕ್ರೀಡಾಪಟುಗಳು ಗಾಯ ಮಾಡಿಕೊಂಡಿರುವ ನಿದರ್ಶನಗಳಿವೆ. ಮಣ್ಣಿನ ನೆಲದಲ್ಲಿ ಓಡುವುದರಿಂದ ಕೈ, ಕಾಲು ಮುರಿದುಕೊಂಡರೂ ಅಚ್ಚರಿಯಿಲ್ಲ. ಅದಕ್ಕಾಗಿ ಕ್ರೀಡಾಪಟುಗಳ ಹಿತಾದೃಷ್ಟಿಯಿಂದ ವಿಜಯವಾಣಿ 2018ರ ಅ.23ರಂದು ‘ಪ್ರೋತ್ಸಾಹ ಅಷ್ಟಕಷ್ಟೆ..!’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ಶೀಘ್ರದಲ್ಲೇ ಈಜುಗೊಳ ನಿರ್ಮಾಣ
‘ಈಜುಪಟುಗಳಿಗೆ ಬಾವಿಗಳೇ ಗತಿ’ ಕ್ರೀಡೆ ನಿರ್ಲಕ್ಷ್ಯ ಸರಣಿ ವಿಶೇಷ ವರದಿ ಪ್ರಕಟಿಸಿದ ಪರಿಣಾಮವಾಗಿ ಅದಕ್ಕೂ ಮೈಸೂರು ಮೂಲದ ಕಂಪನಿಯೊಂದಕ್ಕೆ ಟೆಂಡರ್ ನೀಡಲಾಗಿದ್ದು, ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ. ವಿಜಯಪುರದ ಕನಕದಾಸ ಬಡಾವಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈಜುಗೊಳ ಕಾಮಗಾರಿಗೆ 2.20 ಕೋಟಿ ರೂ. ಬಿಡುಗಡೆಯಾಗಿದೆ. ಅದು ಕೂಡ ಸದ್ಯದಲ್ಲೆ ಪೂರ್ಣಗೊಳ್ಳಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯ ನಿರ್ದೇಶಕ ಎಸ್.ಜಿ.ಲೋಣಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *