ಉಗ್ರರ ವಿರುದ್ಧ ವಿಶ್ವಸಂಸ್ಥೆ ಕಠಿಣ ಕ್ರಮ ಕೈಗೊಳ್ಳಲಿ

ವಿಜಯಪುರ: ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದಲ್ಲಿ ವೀರ ಯೋಧರನ್ನು ಹತ್ಯೆಗೈದ ಉಗ್ರರ ವಿಧ್ವಂಸಕ ಕೃತ್ಯ ಖಂಡಿಸಿ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ವೀರ ಯೋಧರ ಆತ್ಮಕ್ಕೆ ಶಾಂತಿ ಕೋರುವ ನಿಟ್ಟಿನಲ್ಲಿ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಶನಿವಾರ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ ಮೇಣಬತ್ತಿ ಬೆಳಗಿಸಿ, ಮೌನಾಚರಣೆ ಮಾಡುವ ಮೂಲಕ ವೀರ ಯೋಧರ ಆತ್ಮಕ್ಕೆ ದೇವರಲ್ಲಿ ಶಾಂತಿ ಕೋರಿ ಪ್ರಾರ್ಥಿಸಲಾಯಿತು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಮಾತನಾಡಿ, ಉಗ್ರರು ಭಾರತದ ಸೈನಿಕರ ಮೇಲೆ ಹಿಂಬದಿಯಿಂದ ದಾಳಿ ಮಾಡಿ ವಿಧ್ವಂಸಕ ಕೃತ್ಯ ಎಸಗಿದ್ದು ಮಾನವೀಯತೆಗೆ ಮಾಡಿದ ಅಪಮಾನವಾಗಿದೆ. ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಧೈರ್ಯ ತುಂಬಿ ಅವರ ಜತೆಗೆ ಸರ್ಕಾರ ನಿಲ್ಲಬೇಕು ಆಗ ಮಾತ್ರ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು.

ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಮಾತನಾಡಿ, ದೇಶದ ಮೇಲೆ ಉಗ್ರರು ದಾಳಿ ನಡೆಸುತ್ತಿರುವುದು ಖಂಡನೀಯ. ವಿಶ್ವ ಸಂಸ್ಥೆ ಗಂಭೀರವಾಗಿ ಪರಿಗಣಿಸಿ ಕೃತ್ಯವೆಸಗಿದ ಉಗ್ರರ ಮೇಲೆ ಕಠಿಣ ಕ್ರಮ ಕೈಗೊಂಡು ಅವರಿಗೆ ಪಾಠ ಕಲಿಸಬೇಕಾಗಿದೆ ಈ ಉಗ್ರವಾದಿಗಳು ಮಾನವ ಕುಲಕ್ಕೆ ಕಂಟಕವಾಗಿದ್ದು ಅವರನ್ನು ಬೆಂಬಲಿಸುತ್ತಿರುವ ದೇಶಗಳಿಗೂ ಕೇಂದ್ರ ಸರ್ಕಾರ ಸದೆಬಡಿದು ಇಡೀ ಜಗತ್ತಿಗೆ ಮಾದರಿಯಾಗಬೇಕಾಗಿದೆ. ಈ ದಾಳಿಯಲ್ಲಿ ಹುತಾತ್ಮರಾದ ಎಲ್ಲ ಸೈನಿಕರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಅವರ ಕುಟುಂಬಗಳಿಗೆ ದೇವರು ಧೈರ್ಯ ನೀಡಲಿ ಎಂದು ಪ್ರಾರ್ಥಿಸಿದರು.

ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಲಕ್ಷ್ಮೀ ದೇಸಾಯಿ, ಶ್ರೀದೇವಿ ಉತ್ಲಾಸರ, ಶಬ್ಬೀರ ಜಾಗೀರದಾರ, ಅಜೀತ್‌ಸಿಂಗ್ ಪರದೇಶಿ, ಜಮೀರ್ ಅಹ್ಮದ್ ಬಕ್ಷಿ, ಆರತಿ ಶಹಾಪುರ, ಪೀರಪ್ಪ ನಡುವಿನಮನಿ, ಗಂಗಾಧರ ಸಂಬಣ್ಣಿ, ಜಮೀರ ಅಹ್ಮದ್ ಬಾಗಲಕೋಟ, ಸಾಹೇಬಗೌಡ ಬಿರಾದಾರ, ದತ್ತಾತ್ರೇಯ ಆಲಮೇಲಕರ, ಸಿದ್ದು ಗೌಡನ್ನವರ, ಈರಗೊಂಡ ಬಿರಾದಾರ, ವಸಂತ ಹೊನಮೊಡೆ ಇನ್ನಿತರರಿದ್ದರು.