ಶರಣರ ಸಂಸ್ಕಾರ, ಸಂಸ್ಕೃತಿ ಉಳಿಸಿ ಬೆಳೆಸಿ


ವಿಜಯಪುರ: 12ನೇ ಶತಮಾನ ಬಸವಾದಿ ಶರಣರ ಸಂಸ್ಕಾರ, ಸಂಸ್ಕೃತಿ ಉಳಿಯಬೇಕಿದೆ. ಅದಕ್ಕಾಗಿ ಯುವಜನಾಂಗ ಶರಣರ ಬಗ್ಗೆ ಅರಿತು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಿವಬಸವ ಯೋಗಾಶ್ರಮದ ಶಂಭುಲಿಂಗ ಸ್ವಾಮೀಜಿ ಸಲಹೆ ನೀಡಿದರು.

ನಗರದ ಅಖಿಲ ಭಾರತ ವೀರಶೈವ ಮಹಾಸಭೆಯ ಲಿಂಗಾಯತ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಸಾಂಸ್ಕೃತಿಕ ಸಂಗಮ, ಗುರುಮಾಚಯ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುಬಸವ ಮಾಚಿದೇವ ಸಾಂಸ್ಕೃತಿಕ ಉತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿ ಶರಣರನ್ನು ಒಗ್ಗೂಡಿಸಿ ಸಮಾನತೆಗಾಗಿ ಕ್ರಾಂತಿಯನ್ನೇ ಮಾಡಿದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ರಾಮಪ್ಪ ಉಪ್ಪಿನ ಮಾತನಾಡಿ, ಸಣ್ಣ ಸಮುದಾಯಗಳ ಒಕ್ಕೂಟದಿಂದ ಗುರುಬಸವ ಮಾಚಿದೇವ ಸಾಂಸ್ಕೃತಿಕ ಉತ್ಸವ ಆಯೋಜಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳ ಮೂಲಕ ಶರಣ ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಡಾ.ಎಂ.ಎನ್.ವಾಲಿ ಶರಣರು ಹಾಗೂ ಜಾನಪದ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು. ನಾಗೂರ ಎಜ್ಯುಕೇಷನ್ ಸಮೂಹ ಅಧ್ಯಕ್ಷ ಡಾ.ಕೆ.ಬಿ. ನಾಗೂರ ಉದ್ಘಾಟಿಸಿದರು. ಹಿರಿಯ ಸಾಹಿತಿ ದಾನಪ್ಪ ಬಗಲಿ, ಜಿಲ್ಲಾ ಶಸಾಪ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ಎಂ.ಜಿ.ಯಾದವಾಡ, ವಿ.ಸಿ. ನಾಗಠಾಣ, ದೊಡ್ಡಣ್ಣ ಭಜಂತ್ರಿ, ಸುಮಂಗಲಾ ಕೋಟೆ, ರಾಜ್ಯ ಸಣ್ಣ, ಅತಿ ಸಣ್ಣ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಸಾಯಬಣ್ಣ ಮಡಿವಾಳರ, ಉತ್ಸವ ಸಮಿತಿ ಸಂಚಾಲಕ ಪ್ರಕಾಶ ಕುಂಬಾರ ಸೇರಿದಂತೆ ಉತ್ಸವ ಸಮಿತಿ ಪದಾಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಇದ್ದರು.

ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತೆ ವೈಶಾಲಿ ಆರ್.ಪಾಟೀಲ ಭರತ ನಾಟ್ಯ ಪ್ರದರ್ಶಿಸಿದರು. ವೈಭವಿ ನಾಗೇಶ ಅಹಿರಸಂಗ ವಚನ ಗಾಯನ ಪ್ರಸ್ತುತಪಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ, ವಿವಿಧ ಸಮುದಾಯಕ ಕಾಯಕ ನಿರತ ಶರಣ, ಶರಣೆಯರಿಗೆ ‘ಕಾಯಕ ಯೋಗಿ’ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.