ಬಸವಣ್ಣ ಸರ್ವಶ್ರೇಷ್ಠ ತತ್ತ್ವಜ್ಞಾನಿ

ಬಸವರತ್ನ, ಬಸವಜ್ಯೋತಿ ಪ್ರಶಸ್ತಿ ಪ್ರದಾನ ಸಮಾರಂಭ >>

ವಿಜಯಪುರ: 12ನೇ ಶತಮಾನದಲ್ಲಿ ಪ್ರಜಾಸತ್ತಾತ್ಮಕ ತತ್ತ್ವಗಳನ್ನು ಆಧರಿಸಿ ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದವರಲ್ಲಿ ಬಸವಣ್ಣನವರು ಮೊದಲಿಗರು ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ. ಕೆ.ಎನ್. ಕಟ್ಟಿಮನಿ ಹೇಳಿದರು.

ನಗರದ ವನಶ್ರೀ ಕಲ್ಯಾಣ ಮಂಟಪದಲ್ಲಿ ವಿಜಯಪುರ ತಾಲೂಕಿನ ಆಹೇರಿ ಬಸವೇಶ್ವರ ಕರ್ಮವೀರ ಕಲಾ, ಸಾಹಿತ್ಯ, ಸಂಸ್ಕೃತಿ ವೇದಿಕೆಯ 14ನೇ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಚನ ವಿಜಯೋತ್ಸವ ಹಾಗೂ ಬಸವರತ್ನ ರಾಷ್ಟ್ರಪ್ರಶಸ್ತಿ ಹಾಗೂ ಬಸವಜ್ಯೋತಿ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿಶ್ವದ ಸರ್ವಶ್ರೇಷ್ಠ ತತ್ತ್ವಜ್ಞಾನಿಗಳಲೊಬ್ಬರಾದ ಬಸವಣ್ಣನವರ ವಚನ ಸಾಹಿತ್ಯ ವಿಶ್ವಕ್ಕೆ ಮಾದರಿಯಾಗಿದೆ. ಅವರ ವಚನಗಳು ಸಾಮಾಜಿಕ ಪರಿವರ್ತನೆಗೆ ಪ್ರೇರಕ ಶಕ್ತಿಗಳಾಗಿವೆ. ವಿವಿಧ ಕ್ಷೇತ್ರಗಳ ಸಾಧಕರು ಬಸವಣ್ಣನವರ ಹೆಸರಿನಲ್ಲಿ ಪಡೆದುಕೊಂಡ ಪ್ರಶಸ್ತಿಗಳು ಮೌಲ್ಯಾಧಾರಿತವಾದುದು ಎಂದರು.

ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಮಾತನಾಡಿ, 12ನೇ ಶತಮಾನದಲ್ಲೇ ಬಸವಣ್ಣನವರು ಮಹಿಳೆಯರಿಗೆ ಸಾಮಾಜಿಕ, ಆರ್ಥಿಕ ಸಮಾನತೆ ನೀಡುವ ಜತೆಗೆ ಅನುಭವ ಮಂಟಪದಲ್ಲಿ ಮುಕ್ತ ಅವಕಾಶ ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಣ್ಣನವರು ಜಾತಿ ವ್ಯವಸ್ಥೆ ನಿರ್ಮೂಲನೆಗೆ ಹಲವಾರು ಕ್ರಾಂತಿಕಾರ ವಿಚಾರಗಳನ್ನು ಪ್ರತಿಪಾದಿಸಿದ ಯುಗಪುರುಷರಾಗಿದ್ದಾರೆ. ಅವರ ಆಚಾರ ವಿಚಾರಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

ಆಹೇರಿ ಬಸವ ಸಾಹಿತ್ಯ ವೇದಿಕೆ ಅಧ್ಯಕ್ಷ ಬಂಡೆಪ್ಪ ತೇಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವ ವೇದಿಕೆಯಿಂದ ಪ್ರತಿವರ್ಷ ವಚನ ವಿಜಯೋತ್ಸವ ಆಚರಿಸಿ ಬಸವಣ್ಣನವರ ತತ್ತ್ವ ಸಿದ್ಧಾಂತಗಳನ್ನು ಪ್ರಚಾರ ಮಾಡಲಾಗುತ್ತದೆ. ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಬಸವಣ್ಣನವರ ಹೆಸರಿನಲ್ಲಿ ಬಸವರತ್ನ ಹಾಗೂ ಬಸವಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು.

ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಮುಖಂಡ ಡಿ.ಎಸ್. ಗುಡ್ಡೋಡಗಿ, ಖಾದಿ ಗ್ರಾಮೋದ್ಯೋಗ ಅಧ್ಯಕ್ಷ ಬಾಪುಗೌಡ ಪಾಟೀಲ, ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳದ ನಿರ್ದೇಶಕ ಶಿವನಗೌಡ ಬಿರಾದಾರ, ವಿಜಯಪುರ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಮಾತನಾಡಿದರು. ಮುಖಂಡರಾದ ಸುರೇಶ ಶಿವೂರ, ಮನೋಹರ ಮೇಟಿ, ಹಣಮಂತ ತೇಲಿ, ಬಲಭೀಮ ಕರಜಗಿ, ಮಹೇಶ ಚಟ್ಟರಕಿ, ಜಗದೀಶ ಬಿರಾದಾರ, ಈಶ್ವರ ಬೆಣ್ಣೂರ, ವೈ.ಎನ್. ಗೊಳಸಂಗಿ, ಎಸ್.ಐ. ಕಲ್ಯಾಣಿ, ಜೇತನ ಪಟ್ಟಣಶೆಟ್ಟಿ, ಪ್ರಕಾಶ ಲೋಣಿ, ಕಲ್ಲು ಹಡಗಲಿ, ಬಸಲಿಂಗ ತೇಲಿ ಇದ್ದರು. ಡೆಪ್ಪ ತೇಲಿ ಸ್ವಾಗತಿಸಿದರು. ಶರಣಗೌಡ ಪಾಟೀಲ ನಿರೂಪಿಸಿದರು. ಹಣಮಂತ ತೇಲಿ ವಂದಿಸಿದರು.

ಸಂಗೀತ ಸೇವೆ, ಪ್ರಶಸ್ತಿ ಪ್ರದಾನ

ಜಮಖಂಡಿ ತಾಲೂಕು ರಬಕವಿಯ ಭಾರತಿ ಮದಿನವರ ಹಾಗೂ ಸಾಹಿತಿಗಳಾದ ಪಿ.ಎಸ್. ಕಟ್ಟಿಮನಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ರಾಜ್ಯದ 30 ಜನರಿಗೆ ಬಸವರತ್ನ ಹಾಗೂ 40 ಜನರಿಗೆ ಬಸವಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.