ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಗೋರಕ್ಷಣೆ ಸಂಕಲ್ಪ

| ಹೀರಾನಾಯ್ಕ ಟಿ.

ವಿಜಯಪುರ: ‘ಗಾವೋ ವಿಶ್ವಸ್ಯ ಮಾತರಃ’ ಎಂಬ ಮಾತಿನಂತೆ ಭಾರತದ ಸಂಸ್ಕೃತಿಯಲ್ಲಿ ಗೋವುಗಳಿಗೆ ಪ್ರಧಾನ ಪಾತ್ರವಿದೆ. ಕಗ್ಗೋಡದಲ್ಲಿ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಜ್ಞಾನಿಗಳು, ಚಿಂತಕರು, ಯೋಗಿಗಳು, ಸಾಧು- ಸಂತರು ಗೋವುಗಳ ರಕ್ಷಣೆಗೆ ಸಂಕಲ್ಪ ಮಾಡಿದ್ದಾರೆ.

ಉತ್ಸವದಲ್ಲಿ ಯಾದಗಿರಿ ಜಿಲ್ಲೆ ಶಹಾಪುರದ ವಿಶ್ವಮಾತಾ ಗುರುಕುಲ ಗೋಶಾಲೆ ವತಿಯಿಂದ 28 ದೇಸಿ ತಳಿಯ ಗೋವುಗಳ ಪ್ರದರ್ಶನ ಆಕರ್ಷಣೆಯಾಗಿದ್ದು, ಪ್ರತಿ ತಳಿಯೂ ವಿಶಿಷ್ಟವಾಗಿತ್ತು. ಅವುಗಳಲ್ಲಿ ಲಾಲ್​ಸಿಂಧಿ, ಮೇವತಿ, ಕೋಸಿ, ಅಮೃತಮಹಲ್, ಗೀರ್, ಸಾಹಿವಾಲ್, ರಾಠಿ, ಥರ್ಪಾರ್ಕರ್, ಢೇವಣಿ, ಕಾಂಕ್ರೀಜ್, ಲಾಲ್ ಕಂದಹಾರ್, ಓಂಗೋಲ್, ಮಾಳವಿ, ಡಾಂಗಿ, ಮಲೆನಾಡು ಗಿಡ್ಡ, ಕಂಕಥಾ, ನಿಮಾರಿ, ಖಿಲಾರಿ, ಹಳ್ಳಿಕಾರ್, ಕರಿಗಾಯಂ, ನಾಗೋರಿ, ಬರಗೂರು, ಬಚೌರ್, ಖೆರಿಘರ್, ಅಂಬ್ಲಾಚೇರಿ, ಕೃಷ್ಣಾವ್ಯಾಲಿ, ವೆಚೂರ್, ಕಾಸರಗೋಡು, ಹರಿಯಾಣ್ವಿ ದೇಸಿ ತಳಿಗಳ ಗೋವುಗಳ ಪ್ರದರ್ಶನ ಗಮನ ಸೆಳೆಯಿತು.

ದೇಸಿ ತಳಿಗಳಲ್ಲಿ ಔಷಧೀಯ ಗುಣ: ಕರ್ನಾಟಕದ ಮಲೆನಾಡು ಗಿಡ್ಡ , ಹಳ್ಳಿಕಾರ ತಳಿ, ಕರಾವಳಿಯಲ್ಲಿ ಕಾಣಿಸುವ ಕಾಸರಗೋಡು ತಳಿಯು ಔಷಧೀಯ ಗುಣದ ಹಾಲಿಗೆ ಪ್ರಸಿದ್ಧಿ ಪಡೆದಿದೆ. ಇನ್ನು ರಾಜಸ್ಥಾನದ ಗೀರ್ ತಳಿ ಹೈನುಗಾರಿಕೆಗೆ ಪ್ರಸಿದ್ಧಿ. ಇವೆಲ್ಲವೂ ನಮ್ಮ ದೇಶದ ಹವಾಗುಣಕ್ಕೆ ಹೊಂದಿಕೊಂಡು ಬದುಕುವ ಸಾಮರ್ಥ್ಯ ಹೊಂದಿವೆ. ಅವುಗಳ ಗೋಮೂತ್ರ, ಹಾಲು, ಸೆಗಣಿ ಸೇರಿ ಇನ್ನಿತರ ಗೋ ಉತ್ಪನ್ನಗಳಲ್ಲಿ ಔಷಧೀಯ ಗುಣಗಳಿರುವುದು ಸಂಶೋಧನೆಯಲ್ಲಿ ದೃಢಪಟ್ಟಿವೆ. ಅದಕ್ಕಾಗಿ ದೇಸಿ ತಳಿಗಳ ರಕ್ಷಣೆಗೆ ವಿವಿಧ ಮಠಾಧೀಶರು ಅಭಿಯಾನ ಪ್ರಾರಂಭಿಸಿದ್ದು, ಗೋವುಗಳ ಸಂರಕ್ಷಣೆ, ಸಂವರ್ಧನೆ, ಸಂಶೋಧನೆಗೆ ಮುಂದಾಗಿದ್ದಾರೆ ಎನ್ನುತ್ತಾರೆ ರೈತ ಉಮೇಶ ಮಹಮನಿ.

ಸುತ್ತೂರು ಶ್ರೀಗಳಿಂದ ಪ್ರಶಂಸೆ: ಗೋ ರಕ್ಷಣೆ ಪುಣ್ಯದ ಕೆಲಸ. ಗೋವುಗಳ ಸಂರಕ್ಷಣೆಗಾಗಿ ಅನೇಕ ಮಠಾಧೀಶರು ಅಭಿಯಾನ ಕೈಗೊಳ್ಳುತ್ತಿದ್ದು, ಕಗ್ಗೋಡದ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಆಗಮಿಸಿದ್ದ ದೇಸಿ ತಳಿಯ ಗೋವುಗಳನ್ನು ಕಂಡು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು. ಉತ್ಸವಕ್ಕೆ ಆಗಮಿಸಿದ್ದ ಶ್ರೀಗಳು, ಪ್ರದರ್ಶನ ಸ್ಥಳಕ್ಕೆ ತೆರಳಿ ದೇಸಿ ಗೋವುಗಳ ಕಂಡು ಹರ್ಷಗೊಂಡರು.

ಗಮನ ಸೆಳೆದ ಜ್ಞಾನಸಂಗಮ: ಉತ್ಸವದ ಮೂರನೇ ದಿನ ನಡೆದ ಜ್ಞಾನ ಸಂಗಮ ಸಭಿಕರ ಗಮನ ಸೆಳೆಯಿತು. ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯವಹಿಸಿ, ಭಾರತ ಜಗತ್ತಿಗೆ ಜ್ಞಾನವನ್ನು ಕೊಟ್ಟಿದೆ. ಭಾರತ ಅಧ್ಯಾತ್ಮ, ಇತಿಹಾಸ, ವಿಜ್ಞಾನ ಹಾಗೂ ಪರಂಪರೆಯ ಮಹಾತಾಯಿ ಇದ್ದಂತೆ ಎಂದರು. ಶ್ರೀ ಶಿವಪುತ್ರಪ್ಪ ಸ್ವಾಮೀಜಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸುಪ್ರೀಂ ಕೋರ್ಟ್​ನ

ನಿವೃತ್ತ ಮುಖ್ಯನ್ಯಾಯಮೂರ್ತಿ ಶಿವರಾಜ ಪಾಟೀಲ, ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಇತರರು ಉಪಸ್ಥಿತರಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ದಕ್ಷಿಣಕನ್ನಡದ ಮೋಹನ್ ಆಳ್ವ ಸೇರಿ ಏಳು ಸಾಧಕರಿಗೆ ಜ್ಞಾನ ಸಂಗಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾತ್ರಿ ನಡೆದ ಮೂಡುಬಿದರೆಯ ಆಳ್ವಾಸ್ ನುಡಿಸಿರಿ ತಂಡದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು.

ಡಾ. ವಿಜಯ ಸಂಕೇಶ್ವರ ವೀರೇಂದ್ರ ಹೆಗ್ಗಡೆ ಭಾಗಿ

ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಡಿ.27ರಂದು ನಡೆಯಲಿರುವ ಕೃಷಿ ಸಂಗಮದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಮತ್ತಿತರರು ಭಾಗವಹಿಸಲಿದ್ದಾರೆ. ಬೆಳಗಿನ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸಾನ್ನಿಧ್ಯ ವಹಿಸಲಿದ್ದಾರೆ. ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ, ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.