ಅಷ್ಟದಿಕ್ಕುಗಳಿಂದಲೂ ಪ್ರಹಾರ, ಎಲ್ಲಿದೆ ಪರಿಹಾರ?

| ತರುಣ್​ ವಿಜಯ್​

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕೇರಳದಿಂದ ಕರ್ನಾಟಕದವರೆಗೆ ಎಲ್ಲಿ ನೋಡಿದರಲ್ಲಿ ಹಿಂದೂಗಳ ಮೇಲೆ ಆಕ್ರಮಣ, ಅನ್ಯಾಯ ನಡೆಯುತ್ತಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗೆ ಮದ್ದರೆಯಲು ಯತ್ನಿಸಬೇಕಾದವರೇ ಜವಾಬ್ದಾರಿ ಮರೆತಂತೆ ವರ್ತಿಸುತ್ತಿದ್ದಾರೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ.

ಮೂರು ದಶಕಗಳ ಕಮ್ಯೂನಿಸ್ಟ್ ಆಳ್ವಿಕೆಯಿಂದ ಮುಕ್ತಗೊಂಡ ಪಶ್ಚಿಮ ಬಂಗಾಳ ಹೊಸ ದಾರಿಯಲ್ಲಿ ಹೊರಳಿ, ಅಭಿವೃದ್ಧಿಯತ್ತ ಮುಖಮಾಡುತ್ತದೆ ಎಂಬ ನಿರೀಕ್ಷೆ ವ್ಯಾಪಕವಾಗಿತ್ತು. ಮಹಾನ್ ಸಾಹಿತಿ, ಬುದ್ಧಿಜೀವಿಗಳನ್ನು ನೀಡಿರುವ ಬಂಗಾಳ ಪರಿವರ್ತನೆಯ ಯಾತ್ರೆಯತ್ತ ಸಾಗಲಿದೆ ಎಂದು ಅಲ್ಲಿನ ಜನಸಾಮಾನ್ಯರು ಭಾವಿಸಿದ್ದರು. ಆದರೆ, ತೃಣಮೂಲ ಕಾಂಗ್ರೆಸ್ ತುಷ್ಟೀಕರಣ ನೀತಿ ಅನುಸರಿಸುತ್ತ ತಾನು ಇತರೆ ಪಕ್ಷಗಳಿಗಿಂತ ಭಿನ್ನವಲ್ಲ ಎಂಬುದನ್ನು ತೋರಿಸಿದೆ. ಕಮ್ಯೂನಿಸ್ಟರಿಗಿಂತಲೂ ಒಂದು ಕೈ ಮೇಲು ಎಂಬಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಭಜನಕಾರಿ ನೀತಿಯಲ್ಲಿ ತೊಡಗಿದ್ದಾರೆ. ಒಂದು ನಿರ್ದಿಷ್ಟ ಕೋಮನ್ನು ಓಲೈಸಲು ಹೊರಟಿರುವ ಅವರು ಅದಕ್ಕಾಗಿ ರಾಜಕೀಯ ಮೌಲ್ಯ, ಜನಪರ ಕಾಳಜಿ, ಅಭಿವೃದ್ಧಿ ಆಶಯ ಎಲ್ಲವನ್ನೂ ಮರೆತಿದ್ದಾರೆ. ನಿಮಗೆ ಆಶ್ಚರ್ಯವಾಗಬಹುದು, ಮೊಹರಂ ಆಚರಣೆಗೆ ಅನುವು ಮಾಡಿಕೊಡಲು ಮಮತಾ ದುರ್ಗಾ ವಿಸರ್ಜನೆಯ ದಿನಾಂಕವನ್ನೇ ಬದಲಿಸಿದ್ದರು!

ಹಿಂದೂಗಳನ್ನು ದೂರವಿರಿಸಿದರೆ ತಾನು ‘ಜಾತ್ಯತೀತ’ ಅನಿಸಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ಮುಳುಗಿರುವ ‘ದೀದಿ’ ಮಾಡುತ್ತಿರುವ ಅವಾಂತರಗಳು, ಅವರ ಸರ್ಕಾರದ ಕ್ರಮದಿಂದ ಸೃಷ್ಟಿಯಾಗುತ್ತಿರುವ ಕಲಹಗಳು ಅಷ್ಟಿಷ್ಟಲ್ಲ. ಅಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತರನ್ನು ದ್ವೇಷಿಸುವಂಥ ವಾತಾವರಣ ಸೃಷ್ಟಿಯಾಗುತ್ತಿದೆ. ‘ಜಾತ್ಯತೀತ’ ಎಂಬ ಭ್ರಮೆಯ ಪ್ರಯೋಗಶಾಲೆಯಲ್ಲಿ ವಿಚಿತ್ರ ರಾಜಕೀಯ ಸಮೀಕರಣ ಕೈಗೊಳ್ಳಲಾಗುತ್ತಿದ್ದು, ಇದೆಲ್ಲದರ ಪರಿಣಾಮ ಪ.ಬಂಗಾಳ ಅಶಾಂತ ಬಂಗಾಳವಾಗುತ್ತಿದೆ. ಇತ್ತೀಚಿನ ಘಟನೆಯೊಂದನ್ನು ಇಲ್ಲಿ ಉದಾಹರಿಸುತ್ತೇನೆ. ರಾಮನವಮಿ ಹಿಂದೂಗಳ ಪಾಲಿನ ಪವಿತ್ರ ಪರ್ವಗಳಲ್ಲೊಂದು. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಜನಿಸಿದ ಆ ದಿನವನ್ನು ದೇಶಾದ್ಯಂತ ಸಂಭ್ರಮ, ಉತ್ಸಾಹ, ಉಲ್ಲಾಸದಿಂದ ಆಚರಿಸಲಾಗುತ್ತದೆ. ಆದರೆ. ಪ.ಬಂಗಾಳದಲ್ಲಿ ಹಿಂದೂಗಳು ಈ ಹಬ್ಬ ಆಚರಿಸಲು ಅಡ್ಡಿಪಡಿಸಲಾಗಿದೆ. ವಾಸ್ತವದಲ್ಲಿ ಇಂಥ ಪರ್ವಗಳು ಸಮಾಜದ ಸಾಮರಸ್ಯ ಹೆಚ್ಚಿಸಿ, ಸೌಹಾರ್ದವನ್ನು ಗಟ್ಟಿಗೊಳಿಸುತ್ತವೆ. ಆದರೆ, ಸರ್ಕಾರದಲ್ಲಿರುವವರೇ ಈ ನೆಲದ ಸಂಪ್ರದಾಯ, ಆಚರಣೆಗಳ ವಿರುದ್ಧ ನಿಂತುಬಿಟ್ಟರೆ… ಜನರ ಪಾಡೇನು? ಪ.ಬಂಗಾಳದ ರಾಣಿಗಂಜ್​ನಲ್ಲಿ ಶಾಂತಿಯುತವಾಗಿ ರಾಮನವಮಿ ಆಚರಿಸುತ್ತಿದ್ದ ಹಿಂದೂಗಳ ಮೇಲೆ ದಾಳಿ ನಡೆಯಿತು. ಅಷ್ಟೇ ಅಲ್ಲ, ಸ್ಪೋಟಕದಿಂದ ಡಿಎಸ್​ಪಿಯ ಕೈಯನ್ನೇ ತುಂಡರಿಸಲಾಯಿತು. ಆದರೂ, ತಮ್ಮನ್ನು ‘ಜಾತ್ಯತೀತ’ ಎಂದು ಹೇಳಿಕೊಳ್ಳುವ ಕೆಲ ಮಾಧ್ಯಮಗಳು ಘಟನೆಯನ್ನು ತಿರುಚಿ ಬರೆದವು, ಬಹುಸಂಖ್ಯಾತರದ್ದೇ ತಪು್ಪ ಎಂಬಂತೆ ಬಿಂಬಿಸಲು ಹೊರಟವು. ಎಷ್ಟು ವಿಚಿತ್ರವಲ್ಲವೇ? ಇಂಥ ಘಟನೆಗಳಿಂದ ಪ.ಬಂಗಾಳದ ಹಿಂದೂಗಳು ಭಯಭೀತಗೊಂಡಿದ್ದಾರೆ.

ಇದನ್ನೆಲ್ಲ ನೋಡಿದಾಗ ಹಳೆಯ ಕಲ್ಕತ್ತ ನೆನಪಾಗುತ್ತದೆ. 1946ರ ಸಂದರ್ಭ. ಮುಸ್ಲಿಂ ಲೀಗ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಮೊಹಮ್ಮದ್ ಅಲಿ ಜಿನ್ನಾ ‘ಐ ಹ್ಯಾವ್ ಎ ಪಿಸ್ತೂಲ್ ಆಂಡ್ ಐ ನೋ ಹೌ ಟು ಯೂಸ್ ಇಟ್’ (‘ನನ್ನ ಬಳಿ ಪಿಸ್ತೂಲ್ ಇದೆ ಮತ್ತು ಅದನ್ನು ಹೇಗೆ ಬಳಸಬೇಕೆಂಬುದೂ ನನಗೆ ಗೊತ್ತು’) ಎಂದಿದ್ದರು. ಇದಾದ ಕೆಲ ದಿನಗಳಲ್ಲೇ ಕಲ್ಕತ್ತ ಹಿಂದೆಂದೂ ಕಂಡರಿಯದ ನರಮೇಧಕ್ಕೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಹಿಂದೂಗಳ ಮಾರಣಹೋಮ ನಡೆಯಿತು, ಅವರ ಮನೆಗಳನ್ನು ಸುಟ್ಟುಹಾಕಲಾಯಿತು, ಹಲವು ಬಗೆಯಲ್ಲಿ ಕಿರುಕುಳ ನೀಡಲಾಯಿತು. ಪ್ರಾಯಶಃ ಈ ಘಟನೆ ಬಳಿಕವೇ ದೇಶ ವಿಭಜನೆ ಮಾಡುವ ನಿರ್ಧಾರವಾಯಿತು.

1946ಕ್ಕೂ 2018ಕ್ಕೂ ಸ್ಥಿತಿಯಲ್ಲಿ ಎಷ್ಟು ಬದಲಾವಣೆಯಾಗಿದೆ? ಹಿಂದೂಗಳ ಜನಸಂಖ್ಯೆಗೆ ಹೋಲಿಸಿದರೆ ಮುಸ್ಲಿಮರ ಜನಸಂಖ್ಯೆ ಅಪಾರವಾಗಿ ಹೆಚ್ಚಳವಾಗಿದೆ. ಹಿಂದೂಗಳ ಹಬ್ಬ, ಆಚರಣೆಗಳಿಗೆ ಅಡ್ಡಿಪಡಿಸಲಾಗುತ್ತಿದೆ. ಆದರೆ, ಈಗ ಹಿಂದೂಗಳು ಹಿಂದಿನಂತಿಲ್ಲ. 1946ರ ಸಮಯದಂತೆ ಎಲ್ಲವನ್ನೂ ಸುಮ್ಮನೆ ಸಹಿಸಿಕೊಳ್ಳುವುದಿಲ್ಲ. ಈ ಸ್ಥಿತಿಯನ್ನು ಬದಲಿಸುವ ತಹತಹಿಕೆ ಬಂಗಾಳದ ಹಿಂದೂಗಳಲ್ಲಿದೆ. ಆದರೆ, ಹಿಂದೂಗಳ ತಾಳ್ಮೆಯ ಜ್ವಾಲಾಮುಖಿ ಸ್ಪೋಟವಾಗುವ ಮುನ್ನವೇ ಸಂಬಂಧಪಟ್ಟವರು ಸಾಮಾಜಿಕ ಸಮೀಕರಣಗಳನ್ನು ಸರಿಮಾಡುವ, ಸಾಮರಸ್ಯ ಬಿತ್ತುವ ಕೆಲಸ ಮಾಡಬೇಕಿದೆ.

ಹಿಂದೂಗಳ ಮೇಲಿನ ದಾಳಿ ಪಶ್ಚಿಮ ಬಂಗಾಳಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾಶ್ಮೀರ, ಕೇರಳ, ಕರ್ನಾಟಕ ಮತ್ತು ಕಮ್ಯೂನಿಸ್ಟ್ ಪ್ರಭಾವವಿರುವ ನಕ್ಸಲ್​ಪೀಡಿತ ಪ್ರದೇಶಗಳತ್ತ ಕಣ್ಣು ಹಾಯಿಸಿದರೆ ಅಲ್ಲೆಲ್ಲ ಹಿಂದೂಗಳ ಮೇಲೆ ಪ್ರಹಾರ, ಶೋಷಣೆ ನಡೆಯುತ್ತಿರುವುದು ಢಾಳಾಗಿ ಕಂಡುಬರುತ್ತದೆ. ಹಿಂದೂಗಳ ದುಸ್ಥಿತಿ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ, ಸಮೂಹ ಮಾಧ್ಯಮಗಳಲ್ಲಿ ದನಿ ಎತ್ತಿದರೆ ಬೆನ್ನಿಗೇ ಜಿಹಾದಿಗಳ ಬೆದರಿಕೆ ಟ್ವೀಟ್​ಗಳು ಬರತೊಡಗುತ್ತವೆ. ಅಷ್ಟಕ್ಕೂ, ಈ ದೇಶದ ಬಹುಸಂಖ್ಯಾತ ಹಿಂದೂಗಳನ್ನು ದ್ವೇಷಿಸುವವರು ಒಂದಂಶವನ್ನು ಗಮನಿಸಿಯೇ ಇಲ್ಲ. ಈ ದೇಶದಲ್ಲಿ ಇರುವ ಮುಸಲ್ಮಾನರು ಅರಬ್, ಟರ್ಕಿಯಿಂದ ಬಂದವರೇನಲ್ಲ. ಬದಲಾಗಿ, ನಮ್ಮವರಲ್ಲೇ ಒಬ್ಬರಾಗಿದ್ದಾರೆ. ಇಲ್ಲಿನ ಪರಂಪರೆ, ಸಂಸ್ಕೃತಿ, ಭಾಷೆ, ಆಚರಣೆ, ಗೀತ-ಸಂಗೀತ ಸೇರಿದಂತೆ ಒಂದೇ ನೆಲದ ಭಾಗೀದಾರರಾಗಿದ್ದಾರೆ. ದೇಶ ವಿಭಜನೆ ನಂತರವೂ ಸಾಮರಸ್ಯದ ಬಾಳು ಸಾಗಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು. ಕಾಶ್ಮೀರದಿಂದ ಅಲ್ಲಿನ ಮೂಲನಿವಾಸಿ ಹಿಂದೂ ಪಂಡಿತರನ್ನೇ ಹೊರದಬ್ಬಲಾಯಿತು. ಇಂದಿಗೂ ಮಾತೃಭೂಮಿಗೆ ಮರಳಲು ಆಗದ ಲಕ್ಷಾಂತರ ಪಂಡಿತರು ದೇಶದ ವಿವಿಧ ಭಾಗಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ದೇಶ ವಿಭಜನೆ ಮುಂಚಿನ ಚಿತ್ರಣವನ್ನೊಮ್ಮೆ ನೆನಪಿಸಿಕೊಳ್ಳಬೇಕು. ಕರಾಚಿ, ರಾವಲ್ಪಿಂಡಿ, ಲಾಹೋರ್, ಪೇಶಾವರಗಳಲ್ಲಿ ಕೂಡ ಹಿಂದೂಗಳು ಪ್ರಭಾವಿಯಾಗಿದ್ದರು, ಧನಾಢ್ಯರಾಗಿದ್ದರು. ವಿಭಜನೆಯ ಕೊನೇ ಕ್ಷಣದವರೆಗೂ ಇವರೆಲ್ಲ ತಾವಿದ್ದ ಜಾಗವನ್ನು ಮಾತೃಭೂಮಿಯೆಂದು ಪೂಜಿಸಿ, ಅಲ್ಲಿಂದ ಕದಲಲು ಸಿದ್ಧವಿರಲಿಲ್ಲ. ತಾವಿದ್ದ ಸ್ಥಳಗಳನ್ನು ತೊರೆಯಬೇಕಾಗುತ್ತದೆ ಎಂದು ಅವರು ಊಹಿಸಿಯೂ ಇರಲಿಲ್ಲ. ಆದರೆ, ದುರದೃಷ್ಟ ನೋಡಿ. ತಮ್ಮ ಆಸ್ತಿಪಾಸ್ತಿ, ಆ ಭೂಮಿಯೊಂದಿಗೆ ಬೆಸೆದ ಭಾವನೆಗಳು ಎಲ್ಲವನ್ನೂ ಬಿಟ್ಟು ಅವರು ಬರಬೇಕಾಯಿತು. ಅಲ್ಲಿನ ಹಿಂದೂಗಳು ವಿಭಜನೆ ಕೇಳಿರಲಿಲ್ಲ, ಪ್ರತ್ಯೇಕವಾಗುವುದನ್ನು ಬಯಸಿರಲಿಲ್ಲ. ಆದರೂ, ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದರು. ವಿಭಜನೆಯ ಘೋರ ಯಾತನೆಗಳನ್ನು ಅನುಭವಿಸಿದರು. ಅವರಷ್ಟೇ ಅಲ್ಲ ಢಾಕಾ, ಚಟ್​ಗಾಂವ್ ತೊರೆದು ಬಂದ ಹಿಂದೂಗಳ ಸ್ಥಿತಿಯೂ ಭಿನ್ನವಾಗಿರಲಿಲ್ಲ.

ಈ ಘಟನೆಯನ್ನು ಏಕೆ ಉಲ್ಲೇಖಿಸಿದೆ ಎಂದರೆ ವಿಭಜನೆ ಸಂದರ್ಭದಲ್ಲಿ ಆರಂಭವಾದ ಹಿಂದೂಗಳ ಯಾತನೆ, ದೇಶಕ್ಕೆ ಸ್ವಾತಂತ್ರ್ಯಪ್ರಾಪ್ತಿಯಾಗಿ ಏಳು ದಶಕ ಕಳೆದರೂ ಕೊನೆಗೊಂಡಿಲ್ಲ. ಬದಲಾಗಿ, ಹೆಚ್ಚುತ್ತಲೇ ಇದೆ.

ಪಾಕಿಸ್ತಾನದತ್ತ ನೋಡಿ. ಅಲ್ಲಿನ ಹಿಂದೂಗಳ ಸ್ಥಿತಿ ಇನ್ನೂ ದಾರುಣ. ಹಿಂದೂ ಬಾಲಕಿಯರ, ಯುವತಿಯರ ಅಪಹರಣ, ಮತಾಂತರ, ಮಾನಭಂಗ, ಒತ್ತಾಯಪೂರ್ವಕವಾಗಿ ನಿಕಾಹ್ ಮಾಡುವ ಕೃತ್ಯಗಳು ಅಲ್ಲಿ ಸರ್ವೆಸಾಮಾನ್ಯ ಎಂಬಂತೆ ನಡೆಯುತ್ತಿವೆ. ಪಾಲಕರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಹೋದರೆ, ಪೊಲೀಸರು ಏನೋ ಸಬೂಬು ಹೇಳಿ ಪ್ರಕರಣವನ್ನೇ ದಾಖಲಿಸಿಕೊಳ್ಳುವುದಿಲ್ಲ. ಅಕಸ್ಮಾತ್, ದೂರು ದಾಖಲಿಸಿಕೊಂಡರೂ ಏನೂ ಕ್ರಮ ಜರುಗಿಸುವುದಿಲ್ಲ. ಹೀಗಿರುವಾಗ ಅಲ್ಲಿನ ಹಿಂದೂಗಳು ನ್ಯಾಯಕ್ಕಾಗಿ ಯಾರಲ್ಲಿ ಮೊರೆ ಇಡಬೇಕು? ಬಾಂಗ್ಲಾದೇಶದಲ್ಲೂ ಹಿಂದೂಗಳ ಸ್ಥಿತಿ ಶೋಚನೀಯ. ಹಿಂದೂಗಳ ಕೊಲೆ, ಅಪಹರಣದ ಪ್ರಕರಣಗಳಿಗೆ ಲೆಕ್ಕವೇ ಇಲ್ಲದಂತಾಗಿದೆ. ಇಷ್ಟೆಲ್ಲ ಆದರೂ ಅವರ ಗಾಯಕ್ಕೆ ಮುಲಾಮು ಹಚ್ಚುವ ಬದಲು ಗಾಯದ ಮೇಲೆ ಬರೆ ಎಳೆಯಲಾಗುತ್ತಿದೆ ಎಂಬುದು ವಿಷಾದಕರ.

ಇತ್ತ, ಕರ್ನಾಟಕ, ಕಾಶ್ಮೀರ, ಕೇರಳದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗೆ ಕಡಿವಾಣ ಬೀಳುತ್ತಿಲ್ಲ. ಕರ್ನಾಟಕದಲ್ಲಿ ಮತ್ತೊಂದು ಸಂದಿಗ್ಧತೆ ಎದುರಾಗಿದೆ. ಜಾತಿ-ಮತಗಳ ಅಂತರ ತೊಡೆಯಲು ಶ್ರಮಿಸಿದ, ಮೇಲು-ಕೀಳು ಎಂಬ ಭೇದಭಾವ ಕಿತ್ತೊಗೆಯಲು ಯತ್ನಿಸಿದ ಬಸವಣ್ಣನ ನಾಡಿನಲ್ಲೇ ಅವರ ಹೆಸರು ಹೇಳಿಕೊಂಡೇ ಹಿಂದೂ ಧರ್ಮವನ್ನು ವಿಭಜಿಸುವ ಷಡ್ಯಂತ್ರ ನಡೆದಿದೆ. ಆಚರಣೆ, ಸಂಸ್ಕೃತಿ, ಪೂಜಾಪದ್ಧತಿ, ಹಬ್ಬಹರಿದಿನ… ಹೀಗೆ ಎಲ್ಲ ಸಂಗತಿಗಳಲ್ಲಿ ಸಮಾನತೆ, ಸಾಮರಸ್ಯ ಹೊಂದಿರುವ ವೀರಶೈವ ಲಿಂಗಾಯತರನ್ನು ಹಿಂದೂ ಧರ್ಮದಿಂದ ಹೊರಗಿಡುವ ಪ್ರಯತ್ನಕ್ಕೆ ರಾಜಕೀಯ ವೇಗ ಸಿಕ್ಕಿದೆ. ಮತಗಳ ಆಸೆಗಾಗಿ, ಅಧಿಕಾರದ ಲಾಲಸೆಗಾಗಿ ಹಿಂದೂಗಳೇ ಹಿಂದೂಗಳ ನಡುವೆ ವಿಭಜನೆಯ ಬೀಜ ಬಿತ್ತುತ್ತಿದ್ದಾರಲ್ಲ, ಇದಕ್ಕೆ ಏನು ಹೇಳೋಣ?

ಜಮ್ಮು-ಕಾಶ್ಮೀರದ ಓರ್ವ ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಮುಖ್ಯ ಕಾರ್ಯದರ್ಶಿ ಹುದ್ದೆವರೆಗೂ ತಲುಪಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ನಿವೃತ್ತರಾದರು. ಕಾಶ್ಮೀರ ಕಣಿವೆಯಲ್ಲಿನ ಸೇವಾ ಅನುಭವಗಳ ಬಗ್ಗೆ ಅವರು ನಿವೃತ್ತಿ ಬಳಿಕ ಪುಸ್ತಕ ಬರೆದರು. ಅದರಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ಹಲವು ಸೂಕ್ಷ್ಮ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಆ ಪೈಕಿ ಒಂದು ವಿಚಾರ ಚಿಂತನೆಗೆ ಹಚ್ಚುವಂಥದ್ದು. ‘ಕಾಶ್ಮೀರ ಕಣಿವೆಯಲ್ಲಿ ಮಹಿಳೆಯರು ಬಿಂದಿ(ಕುಂಕುಮ) ಹಚ್ಚಿಕೊಳ್ಳುವುದೆಂದರೆ ಸ್ವತಃ ತಮ್ಮ ಮೇಲೆ ಆಕ್ರಮಣಕ್ಕೆ ಆಹ್ವಾನ ನೀಡಿದಂತೆ. ಬಿಂದಿ ಹಚ್ಚಿದ ಮಹಿಳೆಯರನ್ನು ಮೂಲಭೂತವಾದಿಗಳು ಸಹಿಸಿಕೊಳ್ಳುತ್ತಲೇ ಇರಲಿಲ್ಲ. ಹಾಗಾಗಿ, ದಾಳಿಗಳಿಂದ ಧೃತಿಗೆಟ್ಟ ಹಿಂದೂ ಮಹಿಳೆಯರು ಮುಸ್ಲಿಂ ಮಹಿಳೆಯರಂತೆಯೇ ವೇಷಭೂಷಣ ಮಾಡಿಕೊಳ್ಳುತ್ತಿದ್ದಾರೆ. ನಿಜಕ್ಕೂ, ಇದು ಉಸಿರುಗಟ್ಟಿಸುವ ಸಂಗತಿ’ ಎಂದು ಆ ಅಧಿಕಾರಿ ಹೇಳಿಕೊಂಡಿದ್ದಾರೆ.

ನಾನು ಕೆಲ ಸಮಯದ ಹಿಂದೆ ಕರಾಚಿ ಮತ್ತು ಲಾಹೋರ್​ಗೆ ಹೋಗಿದ್ದೆ. ಅಲ್ಲಿ ನೆಲೆಸಿರುವ ಹಿಂದೂ ಪರಿವಾರಗಳನ್ನು ಭೇಟಿ ಮಾಡಿದಾಗ ಅಚ್ಚರಿಗೊಂಡೆ. ಅಲ್ಲಿನ ಮಹಿಳೆಯರು ಬಳೆ ತೊಡುತ್ತಿಲ್ಲ, ಹಣೆಗೆ ಸಿಂಧೂರ ಇಡುತ್ತಿಲ್ಲ. ಅಷ್ಟೇ ಏಕೆ, ಸೌಭಾಗ್ಯದ ಪ್ರತೀಕ ಮಂಗಳಸೂತ್ರವನ್ನು ಸಹ ಹಾಕಿಕೊಳ್ಳುತ್ತಿಲ್ಲ. ಮದುವೆ ಸಮಾರಂಭದಲ್ಲಿ ಹೋಮ-ಹವನ ಮಾಡುತ್ತಿಲ್ಲ. ಹಾಗೇನಾದರೂ ಮಾಡಿದರೆ ಪ್ರಾಣಕ್ಕೇ ಕುತ್ತು ಬರುತ್ತದೆ ಎನ್ನುತ್ತಾರೆ ಅಲ್ಲಿನ ಹಿಂದೂಗಳು.

ಒಟ್ಟಾರೆ ಅಷ್ಟದಿಕ್ಕುಗಳಿಂದಲೂ ಹಿಂದೂ ಸಮಾಜ ಪ್ರಹಾರ ಎದುರಿಸುತ್ತಿದೆ. ಕೆಲವೆಡೆ ಬೇರೆ ಶಕ್ತಿಗಳು ಆಕ್ರಮಣ ಮಾಡುತ್ತಿದ್ದರೆ, ಮತ್ತೆ ಕೆಲವೆಡೆ ಹಿಂದೂಗಳೇ ಒಡಕು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ತಾವು ಯಾವ ದಾರಿಯಲ್ಲಿ ಸಾಗುತ್ತಿದ್ದೇವೆ ಎಂಬುದನ್ನು ಹಿಂದೂಗಳು ಅವಲೋಕನ ಮಾಡಿಕೊಂಡು ಮುಂದಿನ ಹೆಜ್ಜೆಯನ್ನು ಜಾಗ್ರತೆಯಿಂದ ಇರಿಸುವುದು ಒಳಿತು. ಹಿಂದೂ ದುರ್ಬಲನಾದರೆ ಈ ದೇಶದ ಸಂಸ್ಕೃತಿ, ಶಕ್ತಿ ಎಲ್ಲವೂ ದುರ್ಬಲವಾಗುತ್ತದೆ ಎಂಬುದನ್ನು ಮರೆಯಬಾರದು. ಆ ಸ್ಥಿತಿ ಬರುವ ಮುನ್ನವೇ ಎಚ್ಚೆತ್ತುಕೊಂಡರೆ ಒಳಿತು.

(ಲೇಖಕರು ನಿಕಟಪೂರ್ವ ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)

Leave a Reply

Your email address will not be published. Required fields are marked *