ನಮ್ಮ ನಡುವಿನ ಸಾವಿರಾರು ಸರ್ದಾರರನ್ನು ಗೌರವಿಸೋಣ

| ತರುಣ್​ ವಿಜಯ್​

ಲೋಹಪುರುಷ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ವಿಶ್ವದಲ್ಲೇ ಅತಿ ಎತ್ತರವಾದ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹೊಸದೊಂದು ಕೀರ್ತಿ ಸ್ಥಾಪಿಸಿದ್ದಾರೆ. ರಾಷ್ಟ್ರಕ್ಕಾಗಿ ವಿಭಿನ್ನ ನೆಲೆ, ಆಯಾಮಗಳಲ್ಲಿ ಕೆಲಸ ಮಾಡಿದವರನ್ನು, ರಾಷ್ಟ್ರಕ್ಕಾಗಿ ಜೀವನವನ್ನೇ ಸಮರ್ಪಿಸಿದವರನ್ನು ಸರ್ಕಾರಗಳು/ಪ್ರಭುತ್ವಗಳು ಅದುಮಿಡಲು ಅಥವಾ ಅವರ ಕೊಡುಗೆಗಳನ್ನು ಗೌಣ ಮಾಡಿ ತೋರಿಸಲು ಎಷ್ಟೇ ಪ್ರಯತ್ನಿಸಿದರೂ ಕಾಲದ ವೇಗ ಸತ್ಯದ ದರ್ಪಣದ ಮೇಲಿನ ಧೂಳನ್ನು ತೊಲಗಿಸಿ, ನೈಜ ಮುಖದ ದರ್ಶನ ಮಾಡಿಸುತ್ತದೆ. ಸರ್ದಾರ ಪಟೇಲರ ಅತಿ ಎತ್ತರದ ಪ್ರತಿಮೆ ನಿಸ್ಸಂಶಯವಾಗಿಯೂ ಭಾರತದ ಸ್ವಾಭಿಮಾನ ಮತ್ತು ಗೌರವವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದೆ.

ಬದುಕಿನಲ್ಲಿ ಲೋಭ, ಆಮಿಷ ಮತ್ತು ಸ್ವಾರ್ಥದಿಂದ ಮೇಲೇದ್ದು ದೇಶ ಮತ್ತು ಸಮಾಜಕ್ಕಾಗಿ ಸಣ್ಣ-ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿರುವವರು ಮತ್ತು ಮಾಡುತ್ತಿರುವವರು ನಮ್ಮ ನಡುವಿನ ಸರ್ದಾರರು(ನೈಜ ಹೀರೋಗಳು) ಎಂದೇ ನಾನು ಭಾವಿಸುತ್ತೇನೆ. ಸಮಾಜ ವಿಭಜನೆ ಆಗುವುದರಿಂದ ರಕ್ಷಿಸಿದವರು, ವಿದೇಶಿ ಆಕ್ರಮಣದಿಂದ ರಾಷ್ಟ್ರದ ಅಸ್ಮಿತೆ ಮತ್ತು ಪರಂಪರೆಯನ್ನು ಕಾಪಾಡಲು ಜೀವನ ಅರ್ಪಿಸಿದವರು ಇವರೆಲ್ಲ ಸರ್ದಾರರೇ ಅಲ್ಲವೇ? ಇಂಥ ಸಾವಿರಾರು ಜನ ರಾಜನೀತಿ/ರಾಜಕಾರಣದಲ್ಲಿ ಇರಲಿಲ್ಲ. ಆದರೆ, ರಾಜಕಾರಣದಲ್ಲಿ ಇರುವವರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ, ರಚನಾತ್ಮಕವಾಗಿ ಕೆಲಸ ಮಾಡಿದರು. ಇವರೆಲ್ಲರ ಕೊಡುಗೆ ಮಹತ್ವಪೂರ್ಣ, ಅದ್ವಿತೀಯ. ಉದಾಹರಣೆಗೆ ಹೇಳುವುದಾದರೆ ಏಕನಾಥ ರಾನಡೆ. ಅವರು ವಿವೇಕಾನಂದ ಕೇಂದ್ರವನ್ನು ಸ್ಥಾಪಿಸಿದರು, ಕನ್ಯಾಕುಮಾರಿಯ ಶ್ರೀಪಾದ ಶಿಲೆಯಲ್ಲಿ ವಿವೇಕಾನಂದರ ಭವ್ಯ ಸ್ಮಾರಕ ನಿರ್ವಿುಸಿದರು. ರಾನಡೆ ಅವರ ವ್ಯಕ್ತಿತ್ವ ವಿಶಿಷ್ಟವಾಗಿತ್ತಲ್ಲದೆ ಎಲ್ಲರೊಂದಿಗೆ ಸ್ನೇಹಭಾವ ಹೊಂದಿದ್ದರು. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದರೂ ವಿವೇಕಾನಂದ ಕೇಂದ್ರ ಮತ್ತು ಸ್ಮಾರಕ ನಿರ್ಮಾಣ ಮಾಡುವ ಮಹತ್ವಪೂರ್ಣ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಆಗಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಸೂಕ್ತ ಸಹಕಾರ ನೀಡಿದರು. ಇದು ರಾಷ್ಟ್ರೀಯ ಏಕಾತ್ಮತೆಯ ಭಾವವನ್ನು ಸೂಚಿಸುತ್ತದೆ. ಸರ್ದಾರ ವಲ್ಲಭಭಾಯಿ ಪಟೇಲರ ಇಡೀ ಬದುಕು ಮತ್ತು ವ್ಯಕ್ತಿತ್ವ ಕೂಡ ಇದೇ ರಾಷ್ಟ್ರೀಯ ಐಕ್ಯತೆಯನ್ನು ಪ್ರತಿಪಾದಿಸುತ್ತದೆ. ಏಕೆಂದರೆ, ಹರಿದು ಹಂಚುಹೋಗಿದ್ದ ನೂರಾರು ಪ್ರಾಂತ್ಯ/ಸಂಸ್ಥಾನಗಳನ್ನು ಅವರು ಒಟ್ಟು ಮಾಡಿ ಭಾರತದಲ್ಲಿ ಒಂದಾಗಿಸಿದರು. ಅವರ ಕಾರ್ಯಗಳು ಮತ್ತು ಕನಸುಗಳು ಭಾರತದ ಕುರಿತಾಗಿಯೇ ಇದ್ದವು. ಹಾಗಾಗಿ, ನಿಜಾರ್ಥದಲ್ಲಿ ದೇಶಕ್ಕಾಗಿ ದುಡಿಯುವವರನ್ನು ಅವರು ಗುರುತಿಸುತ್ತಿದ್ದರು, ಗೌರವಿಸುತ್ತಿದ್ದರು. ಅದಕ್ಕೆಂದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಿಗೆ ಕಾಂಗ್ರೆಸ್ಸಿನ ಸದಸ್ಯರಾಗಲು ಅನುಮತಿ ನೀಡಬೇಕು ಎಂಬ ಪ್ರಸ್ತಾವನೆಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲೇ ಪಟೇಲರು ಇರಿಸಿದ್ದರು. ಪೂರ್ವಗ್ರಹದ ಕನ್ನಡಕವನ್ನು ಬದಿಗಿಟ್ಟು ವಾಸ್ತವ ದೃಷ್ಟಿಯಿಂದ ಗಮನಿಸಿದರೆ ರಾಷ್ಟ್ರನಿರ್ವಣದಲ್ಲಿ ತೊಡಗಿರುವ ಇಂಥ ಸಾವಿರಾರು ಸರ್ದಾರರು ಗೋಚರಿಸುತ್ತಾರೆ. ಇವರೆಲ್ಲ ನಮ್ಮ ಜೀವನವನ್ನು ಸುರಕ್ಷಿತವಾಗಿಸಲು ಮತ್ತು ಭವಿಷ್ಯವನ್ನು ಆನಂದಮಯವಾಗಿಸಲು ಮಹತ್ತರ ಕೊಡುಗೆ ನೀಡುತ್ತಾರೆ. ವಿಪರ್ಯಾಸವೆಂದರೆ, ನಾವು ಇಂಥ ನೈಜ ಹೀರೋಗಳನ್ನು ಗಮನಿಸುವುದಿಲ್ಲ, ಗೌರವಿಸುವುದಿಲ್ಲ.

ಇಲ್ಲಿ ಒಂದು ಪ್ರಸಂಗವನ್ನು ಹಂಚಿಕೊಳ್ಳಲೇಬೇಕು. ಇತ್ತೀಚೆಗೆ ನಾನು ಏರ್​ವಾರ್ಶಲ್ ಹೇಮಂತ್ ನಾರಾಯಣ ಭಾಗವತ್ ಅವರನ್ನು ಭೇಟಿ ಮಾಡಿದೆ. 60 ವರ್ಷ ಪೂರ್ಣಗೊಂಡ ನಿಮಿತ್ತ ಕಳೆದ ತಿಂಗಳಷ್ಟೇ ಸೇನೆಯಿಂದ ನಿವೃತ್ತರಾಗಿದ್ದಾರೆ. ವಾಯುಸೇನೆಯಲ್ಲಿ 38 ವರ್ಷಗಳ ದೀರ್ಘಕಾಲದವರೆಗೆ ಸೇವೆ ಸಲ್ಲಿಸಿರುವ ಹೇಮಂತ್ ತಮ್ಮ ನಿವೃತ್ತಿಯ ಕೆಲ ದಿನಗಳ ಮುನ್ನವೇ ಅಂದರೆ ಅಕ್ಟೋಬರ್ 24ರಂದು ವೃತ್ತಿಯ 2000ನೇ ‘ಫ್ರೀ ಫಾಲ್’ ಪೂರ್ಣಗೊಳಿಸಿದರು. (ಫ್ರೀ ಫಾಲ್ ಎಂದರೆ ವಿಮಾನ ಇಲ್ಲವೆ ಹೆಲಿಕಾಪ್ಟರ್​ನಿಂದ ಸಾವಿರಾರು ಕಿಲೋಮೀಟರ್ ಎತ್ತರದಿಂದ ಕೆಳಗೆ ಧುಮುಕುವುದು ಮತ್ತು ಭೂವಿಯ ಸಮೀಪ ಬಂದ ಬಳಿಕವಷ್ಟೇ ಪ್ಯಾರಾಷೂಟ್ ಅನ್ನು ತೆರೆಯುವುದು). ಇದು ಅತ್ಯಂತ ಅಪಾಯಕಾರಿ ಮತ್ತು ಸಾಮಾನ್ಯ ವ್ಯಕ್ತಿ ಬೆಚ್ಚಿಬೀಳುವ ಯುದ್ಧಕಾರ್ಯವಾಗಿದೆ. ವಾಯುಸೇನೆಯಲ್ಲಿ ಈ ‘ಫ್ರೀ ಫಾಲ್’ನ ತರಬೇತಿ ಕೊಡುವಲ್ಲಿ ಹೇಮಂತ್ ಭಾಗವತ್ ನಿಷ್ಣಾತರಾಗಿದ್ದರು. ಬಹುತೇಕ 20 ಸಾವಿರ ಅಡಿ ಎತ್ತರದಿಂದ ಹಾರಾಡುವ ವಿಮಾನ ಅಥವಾ ಹೆಲಿಕಾಪ್ಟರ್​ನಿಂದ ಸೈನಿಕರು (ವಾಯುಸೇನೆಗೆ ಸೇರಿದವರು) ಪ್ಯಾರಾಷೂಟ್​ನ ನೆರವಿನಿಂದ ಭೂಮಿ/ನೆಲದ ಮೇಲೆ ಧುಮುಕುತ್ತಾರೆ. ಹೀಗೆ ಎತ್ತರದಿಂದ ಜಿಗಿಯುತ್ತ ಭೂಮಿಗೆ ಮರಳುವಾಗ ತಾಪಮಾನದಲ್ಲಿ ಅಗಾಧ ವ್ಯತ್ಯಾಸವಾಗುತ್ತದೆ. -30 ಡಿಗ್ರಿ ಸೆಲ್ಸಿಯಸ್​ನಿಂದ ಹಿಡಿದು ಭೂಮಿಯ ಸಮೀಪದ ವಾತಾವರಣದ ಉಷ್ಣತೆಯವರೆಗಿನ ಬದಲಾವಣೆ ಕ್ಷಣಾರ್ಧದಲ್ಲೇ ಆಗಿಬಿಡುತ್ತದೆ ಮತ್ತು ಈ ಕ್ಷಣಾರ್ಧದ ಬದಲಾವಣೆಗೆ ಸೈನಿಕ ತನ್ನನ್ನು ಒಡ್ಡಿಕೊಳ್ಳಬೇಕಾಗುತ್ತದೆ. ಒಂಚೂರು ವ್ಯತ್ಯಾಸವಾದರೂ ಪ್ರಾಣಕ್ಕೇ ಸಂಚಕಾರ! ಅಷ್ಟೇ ಅಲ್ಲ ವಿಮಾನ ಅಥವಾ ಹೆಲಿಕಾಪ್ಟರ್​ನಿಂದ ಜಿಗಿಯುವಾಗ ಭೂಮಿಗೆ ನೇರ ಅಂತರ ಅಥವಾ ದೂರ 20-25 ಕಿ.ಮೀ. ಇದ್ದರೂ ಗಾಳಿಯ ವೇಗ, ದಿಕ್ಕನ್ನು ಗಮನಿಸಿ ಈ ಸೈನಿಕರು ಕೆಲವೊಮ್ಮೆ 40-50 ಕಿ.ಮೀ. ಕೂಡ ಕ್ರಮಿಸಬೇಕಾಗುತ್ತದೆ. ಭೂಮಿಯ ಸಮೀಪ ಬಂದ ಬಳಿಕವಷ್ಟೇ ಪ್ಯಾರಾಷೂಟ್ ತೆರೆದುಕೊಳ್ಳುತ್ತದೆ.

ಆದರೆ, ಇದು ಯುದ್ಧಕಾರ್ಯದ ಪ್ರಮುಖ ಮತ್ತು ಅನಿವಾರ್ಯ ಭಾಗವಾಗಿರುವುದರಿಂದ ಸೈನಿಕರಿಗೆ ಸೂಕ್ತ ತರಬೇತಿ ನೀಡಲೇಬೇಕು. ಹೇಮಂತ್ ಭಾಗವತ್ ಈ ಬಗೆಯ ತರಬೇತಿಗೆ ಹೆಸರುವಾಸಿಯಾದವರು. 20 ಸಾವಿರ ಅಡಿ ಎತ್ತರದಿಂದ ಧುಮುಕುವ ಸಾಹಸಕ್ಕೆ ಒಂದು ಬಾರಿ ಮುಂದಾದರೂ ಜೀವ ಹೆದರಿ ಕಂಗಾಲಾಗುತ್ತದೆ. ಆದರೆ, ಭಾಗವತ್ ಇಂಥ 2000 ಜಿಗಿತಗಳನ್ನು (ಫ್ರೀ ಫಾಲ್) ಮಾಡಿದ್ದಾರೆಂದರೆ ಇವರು ನಿಜಕ್ಕೂ ಅಸಾಮಾನ್ಯ ಹೀರೋ ಅಲ್ಲವೆ? ಆದರೆ, ನಮ್ಮಲ್ಲಿ ‘ನಾಯಕ’ ಪಾತ್ರದ ನಟನೆ ಮಾಡುವವರನ್ನು ಹೀರೋ ಎಂದು ತಿಳಿಯಲಾಗುತ್ತದೆ ಮತ್ತು ಭಾಗವತ್​ನಂಥ ರಿಯಲ್ ಹೀರೋಗಳ ದೇಶಕಾರ್ಯ ಸಮಾಜದ ಕಣ್ಣಿಗೆ ಕಾಣುವುದಿಲ್ಲ. ಹೇಮಂತ್ ಅವರೊಂದಿಗೆ ಮಾತನಾಡುವಾಗ ಅವರು ಅನೇಕ ಸಂದರ್ಭಗಳನ್ನು, ನೆನಪುಗಳನ್ನು ಹಂಚಿಕೊಂಡರು. ನಿಜಕ್ಕೂ ಈ ಸೈನಿಕರು ಮಾಡುವ ಧೈರ್ಯ, ತೋರುವ ಸ್ಥೈರ್ಯ, ಇತರರಿಗೆ ನೀಡುವ ಆತ್ಮವಿಶ್ವಾಸ ಇದೆಲ್ಲವೂ ಅಸಾಧಾರಣ ಎನಿಸಿತು. ಅವರು ಒಂದೊಂದು ಘಟನೆ ವಿವರಿಸುತ್ತ ಇರಬೇಕಾದರೂ ರೋಮಾಂಚಿತನಾಗುತ್ತಿದ್ದೆ. ಹೀಗೆ ಸಾವಿರಾರು ಸೈನಿಕರಿಗೆ ‘ಫ್ರೀ ಫಾಲ್’ನ ತರಬೇತಿ ನೀಡಿರುವ ಹೇಮಂತ್ 60ರ ವಯಸ್ಸಲ್ಲೂ ಒಂಚೂರೂ ಉತ್ಸಾಹ, ಛಲ ಕಳೆದುಕೊಂಡಿಲ್ಲ. ‘ನಿಯಮದ ಪ್ರಕಾರ ಸೇನೆ ನಿವೃತ್ತಿ ನೀಡಿದೆ. ನಾನು ಈಗಲೂ 20 ಸಾವಿರ ಅಡಿ ಎತ್ತರದಿಂದ ಜಿಗಿಯಲು ಸಿದ್ಧ’ ಎನ್ನುವ ಅವರ ಉತ್ಸಾಹ, ಸೇನೆ ಮತ್ತು ಸೈನಿಕರ ಕಠೋರ ಸಂಕಲ್ಪ ಮತ್ತು ರಾಷ್ಟ್ರಪ್ರೀತಿಗೆ ಸಾಕ್ಷಿ. ನಿವೃತ್ತಿಯ ದಿನ ಭಾಗವತ್ ಅವರ ಮುಖದಲ್ಲಿ ಸಂತೋಷ, ಸಮಾಧಾನ ಕಂಡುಬರುತ್ತಿತ್ತು. ಏಕೆಂದರೆ ಅವರೊಬ್ಬ ಸೇನಾಧಿಕಾರಿಯಾಗಿ ಸಂತೋಷಕರ ಮತ್ತು ಗೌರವಯುತ ಬದುಕು ನಡೆಸಿದರು. ಅದೆಷ್ಟೇ ಕಠಿಣ ಸವಾಲುಗಳು ಬಂದೆರಗಿದರೂ ಸೋಲೊಪ್ಪಿಕೊಳ್ಳದೆ ಮುಂದೆ ಸಾಗಿದರು.

ಈ ಸ್ವಾಭಿಮಾನ ಮತ್ತು ಆತ್ಮಸಂತೋಷಕ್ಕೆ ಇನ್ನೊಂದು ಕಾರಣವೂ ಇದೆಯೆನ್ನಿ. ಹೇಮಂತ್ ನಾರಾಯಣ ಭಾಗವತ್ ಮೂಲತಃ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯವರು. ಇವರ ಪೂರ್ವಜರು 18ನೇ ಶತಮಾನದಲ್ಲಿ ಬಾಜಿರಾವ್ ಪೇಶ್ವೆ ಅವರ ಸೇನೆಯಲ್ಲಿ ಸೈನಿಕರಾಗಿದ್ದರು. ಆ ವೀರತ್ವದ ಗುಣವೇ ಇವರನ್ನೂ ಇಂಥ ಸಾಹಸಕ್ಕೆ ನೂಕಿರಬಹುದು. ಪೇಶ್ವೆಯ ಸೇನೆ 1758ರಲ್ಲಿ ಸಿಂಧು ತೀರದ ಅಟಕ್ ಕೋಟೆ ಬಳಿ ಶತ್ರುಗಳನ್ನು ಸೋಲಿಸಿ ವಿಜಯದ ಸಂಕೇತವಾಗಿ ಭಗವಾ ಧ್ವಜ ಹಾರಾಡುವಂತೆ ಮಾಡಿತ್ತು. ‘ಅಟಕ್​ನಿಂದ ಕಟಕ್​ವರೆಗೂ ಭಗವಾಧ್ವಜ ಹಾರಾಡುತ್ತಿದೆ’ ಎಂಬ ಮಾತು ಆಗಿನಿಂದಲೇ ಪ್ರಚಲಿತಕ್ಕೆ ಬಂತು.

ದೇಶಸೇವೆಯ ಸಂಕಲ್ಪ ಮಾಡಿಕೊಂಡು ಸೇನೆ ಸೇರಿರುವ ಸಾವಿರಾರು ಸೈನಿಕರ ವೀರಜೀವನವನ್ನು ತಿಳಿದುಕೊಳ್ಳಲು ಭಾಗವತ್ ಅಂಥವರ ಬದುಕು, ಜೀವನ ಕಾರ್ಯ ಪ್ರೇರಣೆ ನೀಡುತ್ತದೆ. ವೈಯಕ್ತಿಕ ಬದುಕನ್ನು ಬದಿಗಿರಿಸಿ, ಬಂಧು-ಬಾಂಧವರಿಂದ ದೂರವಿದ್ದು, ಮದುವೆ ಇತರೆ ಸಮಾರಂಭಗಳ ಖುಷಿ ಅನುಭವಿಸದೆ ದೂರದಿಂದಲೇ ಶುಭಾಶಯ ಕೋರಿ ಕಾರ್ಯದಲ್ಲಿ ಮಗ್ನವಾಗುವ ನಮ್ಮ ಸೈನಿಕರು ನಿಜವಾದ ಮಹಾಪುರುಷರಲ್ಲವೇ?

ನಾವು ನಮ್ಮ ಸುತ್ತಮುತ್ತ ಕಣ್ಣಾಡಿಸಿದರೆ ಸಾಧಾರಣ ಬದುಕು ಸಾಗಿಸುತ್ತಿದ್ದರೂ ಪ್ರಾಮಾಣಿಕತೆ, ನೈಜತೆ ಮತ್ತು ಪರಿಶ್ರಮದಿಂದ ಭಾರತ-ಭಾರತಿಯ ಸಾಂಸ್ಕೃತಿಕ ಏಕತೆಸೂತ್ರವನ್ನು ರಕ್ಷಿಸುವ ಸಾವಿರಾರು ಸರ್ದಾರರು ಕಾಣಸಿಗುತ್ತಾರೆ. ಇವರಿಂದಲೇ ದೇಶ ಮತ್ತು ದೇಶದ ಏಕತೆ ಜೀವಂತವಾಗಿದೆ. ಅಲ್ಲವೇ?

(ಲೇಖಕರು ನಿಕಟಪೂರ್ವ ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)