Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಸಮಸ್ಯೆಗಳಿಗೆ ಪರಿಹಾರ ತೋರುವ ಮುಖರ್ಜಿ ಚಿಂತನೆ

Monday, 09.07.2018, 3:03 AM       No Comments

| ತರುಣ್​ ವಿಜಯ್​

ಸ್ವಾರ್ಥವನ್ನು ಬದಿಗಿರಿಸಿ, ರಾಷ್ಟ್ರ-ರಾಷ್ಟ್ರ ಎಂದು ಜಪಿಸುತ್ತ ಅಸಂಖ್ಯ ಜನರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿದ, ಅದ್ಭುತ ಚಿಂತನೆಗಳ ಮೂಲಕ ಸಶಕ್ತ ಸಮಾಜದ ಮಾದರಿಯನ್ನು ಮುಂದಿಟ್ಟ ಶ್ಯಾಮಾಪ್ರಸಾದ್ ಮುಖರ್ಜಿಯಂಥ ಧೀಮಂತ ನಾಯಕ ಕೂಡ ರಾಜಕೀಯ ಅಸ್ಪಶ್ಯತೆಗೆ ಗುರಿಯಾಗಬೇಕಾಯಿತು ಎಂಬುದು ಕಠೋರ ಸತ್ಯ. ಮುಖರ್ಜಿ ವ್ಯಕ್ತಿತ್ವ ಮತ್ತು ಚಿಂತನೆಗಳು ಸದಾ ಪ್ರೇರಣಾದಾಯಿ ಅಲ್ಲದೆ ರಾಷ್ಟ್ರ ಕಟ್ಟುವ ಕೈಂಕರ್ಯದಲ್ಲಿ ದಾರಿದೀವಿಗೆಯಾಗುವಂಥವು.

ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಈ ದೇಶ ಕಂಡ ಅಪೂರ್ವ ಶಿಕ್ಷಣತಜ್ಞ. ಮೌಲ್ಯಯುತ ಶಿಕ್ಷಣದ ಮೂಲಕ ವ್ಯಕ್ತಿ ಹಾಗೂ ಸಮಾಜದ ನಿರ್ಮಾಣ ಆಗಬೇಕು ಎಂಬ ಆಶಯದ ಜತೆಗೆ ಆ ದಾರಿಯನ್ನು ಪರಿಚಯಿಸಿಕೊಟ್ಟರು ಮುಖರ್ಜಿ. ಬ್ರಿಟಿಷ್ ಆಳ್ವಿಕೆ ಸಮಯದಲ್ಲಿ ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರೆಲ್ಲ ಇಂಗ್ಲಿಷರೇ(ಆಂಗ್ಲರು) ಆಗಿರುತ್ತಿದ್ದರು. ಆದರೆ, ಮುಖರ್ಜಿ ವಿದ್ವತ್ತು, ಪ್ರತಿಭೆಗೆ ಬ್ರಿಟಿಷ್ ಆಡಳಿತವೂ ಮಂತ್ರಮುಗ್ಧಗೊಂಡಿತ್ತು. ಅದಕ್ಕೆಂದೇ 33ನೇ ವಯಸ್ಸಿಗೆ ಶ್ಯಾಮಾಪ್ರಸಾದ್​ರನ್ನು ಕಲ್ಕತ್ತ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ನೇಮಿಸಲಾಯಿತು. ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಪಾಂಡಿತ್ಯದ ಪರಿಚಯ ಮುಖರ್ಜಿಗಿತ್ತು. ಅದಕ್ಕೆಂದೆ ಅವರನ್ನು ಬೆಂಗಳೂರಿನಿಂದ ಕರೆಸಿಕೊಂಡು ವಿದ್ವತ್ ಕ್ಷೇತ್ರದಲ್ಲಿ ಪ್ರತಿಭೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟರು ಮತ್ತು ಇದನ್ನು ರಾಧಾಕೃಷ್ಣನ್ ಹಲವು ವೇಳೆ ಕೃತಜ್ಞತೆಯ ಭಾವದಲ್ಲಿ ಸ್ಮರಿಸಿದ್ದರು. ತಮ್ಮನ್ನು ಘಟಿಕೋತ್ಸವ ಭಾಷಣಕ್ಕೆ ಆಹ್ವಾನಿಸಿದಾಗ ‘ಬಂಗಾಳಿಯಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟರೆ ಮಾತ್ರ ಬರುವೆ’ ಎಂದು ಕವಿಗುರು ರವೀಂದ್ರನಾಥ ಟ್ಯಾಗೋರ್ ಹೇಳಿದ್ದರು. ‘ನಮ್ಮ ಆಹ್ವಾನವನ್ನು ಒಪ್ಪಿರುವುದೇ ಭಾಗ್ಯ, ಬಂದು ಬಂಗಾಳಿಯಲ್ಲಿ ಮಾತನಾಡಿ’ ಎಂದು ಮುಖರ್ಜಿ ವಿನಯದಿಂದ ಪ್ರತಿಕ್ರಿಯಿಸಿದರು. ಪರಿಣಾಮ, ಕಲ್ಕತ್ತ ವಿ.ವಿ.ಯ ಘಟಿಕೋತ್ಸವ ಭಾಷಣ ಮೊದಲ ಬಾರಿ ಭಾರತೀಯ ಭಾಷೆಯಲ್ಲಿ ಸಂಪನ್ನಗೊಂಡಿತು. ಮಾತ್ರವಲ್ಲ, ಉನ್ನತ ಶಿಕ್ಷಣದಲ್ಲಿ ಭಾರತೀಯ ಭಾಷೆಗಳ ಪರಿಣಾಮಕಾರಿ ಬಳಕೆ, ಅನುಷ್ಠಾನಕ್ಕೂ ಶ್ಯಾಮಾಪ್ರಸಾದ್ ಆದ್ಯತೆ ಕೊಟ್ಟರು.

23ನೇ ವಯಸ್ಸಿಗೆ ಬಹುತೇಕ ಯುವಕರು ನೌಕರಿಯ ಅಲೆದಾಟದಲ್ಲಿರುತ್ತಾರೆ. ಆದರೆ, ಆ ವಯಸ್ಸಿಗೇ ಮುಖರ್ಜಿ ಕಲ್ಕತ್ತ ವಿವಿ ಫೆಲೋ ಆಗಿ ಆಯ್ಕೆಯಾದರು. 26ನೇ ವಯಸ್ಸಿಗೆ ಬ್ಯಾರಿಸ್ಟರ್ ಪದವಿಗೇರಿದರು. 28ನೇ ವಯಸ್ಸಿಗೆ ರಾಜಕೀಯ ರಂಗಕ್ಕೆ ಬಂದು, ಕಾಂಗ್ರೆಸ್ಸಿನಿಂದ ಚುನಾವಣೆಗೆ ಸ್ಪರ್ಧಿಸಿ ಬಂಗಾಳ ವಿಧಾನಸಭೆ ಪ್ರವೇಶಿಸಿದರು. ಮುಂದೆ, ಕೆಲ ವರ್ಷಗಳಲ್ಲೇ ಕಲ್ಕತ್ತ ವಿ.ವಿ.ಯ ಉಪ ಕುಲಪತಿಯಾಗಿ ನಿಯುಕ್ತಿಯಾದರು. ಈ ಅವಧಿಯಲ್ಲಿ ಶೈಕ್ಷಣಿಕ ಸುಧಾರಣೆಗಳನ್ನು ಎಷ್ಟು ತ್ವರಿತ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರು ಎಂದರೆ ಮತ್ತೆ ಎರಡು ಅವಧಿಗೆ (1934-38) ಇವರನ್ನೇ ಉಪಕುಲಪತಿಯಾಗಿ ಮುಂದುವರಿಸಲಾಯಿತು. 1938ರಲ್ಲಿ ಪ್ರತಿಷ್ಠಿತ ಬನಾರಸ್ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಿತು. ಆಗ ಮುಖರ್ಜಿ ವಯಸ್ಸು 37 ಅಷ್ಟೇ.

ಅದು ದೇಶದಲ್ಲಿ ಸಂಕಷ್ಟದ ಕಾಮೋಡ ಕವಿದ ಕಾಲ. ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದಲ್ಲಿ ಹಿಂಸೆ, ರಕ್ತಪಾತ ನಡೆಯುತ್ತಿತ್ತು. ಹಿಂದೂಗಳು ಶೋಷಣೆಗೆ ಒಳಗಾಗಿ, ಭಯಭೀತರಾಗಿದ್ದರು. ಮುಸ್ಲಿಂಲೀಗ್ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿತ್ತು. ಈ ಹಿಂಸೆ, ಜನರ ಆಕ್ರಂದನ ಕಂಡು ಶ್ಯಾಮ್ೕ ಮನಸ್ಸು ಪ್ರಕ್ಷುಬ್ಧವಾಯಿತು. ಪರಿಹಾರದ ನಿಟ್ಟಿನಲ್ಲಿ ಸಾಮರಸ್ಯ, ಸಮನ್ವಯ ಹೆಚ್ಚಿಸಬೇಕು ಎಂದು ಯೋಚಿಸಿದ ಅವರು ಸ್ವಾತಂತ್ರ್ಯವೀರ ಸಾವರ್ಕರರ ಹಿಂದೂ ಮಹಾಸಭಾಗೆ ಸೇರಿದರು. ಇವರ ವಿದ್ವತ್ತು, ಕಾರ್ಯಕ್ಷಮತೆಯ ಅರಿವಿದ್ದ ಸಾವರ್ಕರರು ಮುಖರ್ಜಿಯವರನ್ನು ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿಸಿದರು. ನಾಲ್ಕು ವರ್ಷಗಳ ಕಾಲ ಈ ಜವಾಬ್ದಾರಿ ನಿರ್ವಹಿಸಿದರು. ಈ ಅವಧಿಯಲ್ಲಿ ದೇಶದ ಹಲವು ಸ್ಥಳಗಳಿಗೆ ಭೇಟಿ ನೀಡಿದರು. ಅಲ್ಲದೆ, ಸಂವಿಧಾನ ಸಭೆ ರಚನೆಯಾದಾಗ ಬಂಗಾಳದಿಂದ ಇವರನ್ನು ಸದಸ್ಯರನ್ನಾಗಿ ನಿಯೋಜಿಸಲಾಯಿತು.

ಶ್ಯಾಮಾಜಿಯವರು ಗಾಂಧಿ ಜತೆ ಕೂಡ ಉತ್ತಮ ಒಡನಾಟ ಹೊಂದಿದ್ದರು. ಗಾಂಧಿ ಮಾತಿಗೆ ಒಪ್ಪಿಯೇ ಅವರು ನೆಹರು ಸಂಪುಟಕ್ಕೆ ಸೇರಿ ದೇಶದ ಮೊದಲ ಉದ್ಯೋಗ ಮಂತ್ರಿಯಾದರು. ಉದ್ಯೋಗ ಕ್ಷೇತ್ರಕ್ಕೆ ಸಮರ್ಥ ನೀತಿಗಳನ್ನು ರೂಪಿಸಿ, ಭದ್ರ ಅಡಿಪಾಯ ಹಾಕಿದರು. ದೇಶಹಿತದ ವಿಷಯ ಬಂದಾಗ ಯಾವುದೇ ಮುಲಾಜಿಗೆ ಒಳಗಾಗುತ್ತಿರಲಿಲ್ಲ. ಲಿಯಾಕತ್ ಅಲಿ ಒಪ್ಪಂದ ಪಾಕಿಸ್ತಾನ ಸಮರ್ಥಕ ಮತ್ತು ಹಿಂದೂ-ವಿರೋಧಿಯಾಗಿದೆ ಎಂದು ಹೇಳಿದ ಮುಖರ್ಜಿ ಈ ನೀತಿಯನ್ನು ಖಂಡಿಸಿ ನೆಹರು ಸಂಪುಟದಿಂದ ಹೊರಬಂದರು. ರಾಷ್ಟ್ರೀಯ ವಿಚಾರಗಳ ಅನುಷ್ಠಾನ, ಭಾರತೀಯ ಸಂಸ್ಕೃತಿಯ ಶ್ರೇಷ್ಠ ಚಿಂತನೆಗಳ ಪ್ರಸಾರ ಮತ್ತು ಹಿಂದೂಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿತ್ತು. ಇದನ್ನು ಹತ್ತಿರದಿಂದ ಗಮನಿಸಿದ ಮುಖರ್ಜಿ ಆರೆಸ್ಸೆಸ್​ನ ಆಗಿನ ಸರಸಂಘಚಾಲಕ ಗೋಳ್ವಲಕರ್ ಗುರೂಜಿ ಅವರನ್ನು ಭೇಟಿ ಮಾಡಿ, ರ್ಚಚಿಸಿದ ಬಳಿಕ ಜನಸಂಘವನ್ನು ಸ್ಥಾಪಿಸಿದರು.

ದೇಶಹಿತದ ಪ್ರತಿ ಮಹತ್ವದ ವಿಷಯಕ್ಕಾಗಿ ಹೋರಾಡಿದ, ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಅವಿರತವಾಗಿ ಶ್ರಮಿಸಿದ ಧೀಮಂತ ಮುಖರ್ಜಿಯವರನ್ನು ಕಾಂಗ್ರೆಸ್ ಹತ್ತಿರಕ್ಕೆ ಸೇರಿಸಿಕೊಳ್ಳಲಿಲ್ಲ. ಏಕೆ ಗೊತ್ತೇನು? ಅವರು ನೆಹರು ಚಿಂತನೆಗಳನ್ನು ವಿರೋಧಿಸಿದರು ಎಂಬ ಒಂದೇ ಕಾರಣಕ್ಕಾಗಿ. ರಾಜಕೀಯ ನಾಯಕರಾಗಿ ನೆಹರು ವಿಮರ್ಶೆಗೆ ಅತೀತರೇನಲ್ಲ ಎಂಬ ಸಂಗತಿಯನ್ನು ಕಾಂಗ್ರೆಸ್ಸಿಗರು ಅದೇಕೆ ಮರೆತರೋ!

ಅದೊಮ್ಮೆ ಲೋಕಸಭೆಯಲ್ಲಿ ನೆಹರು ಮಾತನಾಡುತ್ತ- ‘ನಾನು ಜನಸಂಘದ ಬೇರುಗಳನ್ನೇ ಕಿತ್ತೆಸೆಯುತ್ತೇನೆ’ ಎಂದು ಆರ್ಭಟಿಸಿದರು. ಆಗ ಮುಖರ್ಜಿ ಎದ್ದುನಿಂತು ಶಾಂತವಾಗಿ ಹೇಳಿದರು-‘ನಾನು ಇಂಥ ಮಾನಸಿಕತೆಯನ್ನೇ ಕಿತ್ತೊಗೆಯುತ್ತೇನೆ’! ಅಂದಹಾಗೆ, ಆಗ ಲೋಕಸಭೆಯಲ್ಲಿ ಜನಸಂಘದ ಮೂವರೇ ಸದಸ್ಯರಿದ್ದರು. ಬಹುಶಃ, ಜನಸಂಘದ ರಾಜಕೀಯ ಶಕ್ತಿಗೆ ನೆಹರು ಆಗಲೇ ದಿಗಿಲುಗೊಂಡಿದ್ದರೇನೋ. ಕಾಶ್ಮೀರ ಪ್ರವೇಶಿಸಲು ಪರ್ವಿುಟ್ ಬೇಕು ಎಂಬ ನೆಹರು-ಶೇಖ್ ಅಬ್ದುಲ್ಲಾ ನೀತಿಯನ್ನು ಬಲವಾಗಿ ವಿರೋಧಿಸಿದರು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಹೀಗಿರುವಾಗ ನಮ್ಮದೇ ಭೌಗೋಳಿಕ ಪ್ರದೇಶಕ್ಕೆ ನಮ್ಮವರೇ ಭೇಟಿ ನೀಡಲು ಪರ್ವಿುಟ್​ನ ಅವಶ್ಯಕತೆ ಏನಿದೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರಲ್ಲದೆ ಈ ಹುನ್ನಾರದಲ್ಲಿ ವಿಭಜನೆಯ ಬೀಜ ಅಡಗಿದೆ ಎಂದು ಆಗಲೇ ಗುರುತಿಸಿದರು. ಪರ್ವಿುಟ್ ಇಲ್ಲದೆ ಕಾಶ್ಮೀರ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಆಂದೋಲನವನ್ನೇ ಕೈಗೊಂಡರು. ಮಾಧೇಪುರದಿಂದ ಜಮ್ಮು-ಕಾಶ್ಮೀರ ಗಡಿಯನ್ನು ಪ್ರವೇಶಿಸಿದರು. ಜೂನ್ 27ರಂದು ದುಃಖದಾಯಕ ವಾರ್ತೆ ಬಂತು. ಜೈಲಿನಲ್ಲಿ ಶ್ಯಾಮ್ೕ ನಿಗೂಢವಾಗಿ ಮೃತಪಟ್ಟರು. ಅವರ ಸಾವಿನ ಕಾರಣ ಇಂದಿಗೂ ರಹಸ್ಯವಾಗಿಯೇ ಉಳಿದಿದೆ.

ಕಾಂಗ್ರೆಸ್ ಮೊದಲಿನಿಂದಲೂ ರಾಷ್ಟ್ರಭಕ್ತರನ್ನು ಅವಮಾನಿಸಿಕೊಂಡೇ ಬಂದಿದೆ. ವೀರ ಸಾವರ್ಕರ್, ನೇತಾಜಿ ಸುಭಾಷ್​ಚಂದ್ರ ಬೋಸ್, ಲಾಲ್ ಬಹಾದ್ದೂರ್ ಶಾಸ್ತ್ರಿ… ಹೀಗೇ ಶ್ಯಾಮಾಪ್ರಸಾದ್ ಮುಖರ್ಜಿ ಅವರನ್ನು ಕೂಡ. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಒಮ್ಮೆಯೂ ಮುಖರ್ಜಿ ಸ್ಮೃತಿದಿನವನ್ನು ಆಚರಿಸಿರಲಿಲ್ಲ. ಬೇಡದ ಕಾರಣಗಳಿಗಾಗಿ ಸುದ್ದಿಯಲ್ಲಿರುತ್ತಿದ್ದ ಈ ವಿ.ವಿ.ಯಲ್ಲಿ ಇದೇ ಜೂನ್ 27ರಂದು ಮುಖರ್ಜಿ ಸ್ಮೃತಿದಿನ ಆಚರಿಸಲ್ಪಟ್ಟಾಗ ಅದಕ್ಕೂ ‘ಜಾತ್ಯತೀತ’ ಮುಖವಾಡ ತೊಟ್ಟ ಮಾಧ್ಯಮಗಳು ವಿರೋಧ ತೋರಿದವು. ವಿ.ವಿ.ಯ ಉಪಕುಲಪತಿ ಪ್ರೊ.ಜಗದೀಶ್ ಕುಮಾರ್ ನೆಹರು ಬಗ್ಗೆ ಹೇಳಿದ ಸಹಜ ಮತ್ತು ಸತ್ಯವಾದ ಮಾತನ್ನು ವಿನಾಕಾರಣ ವಿವಾದ ಮಾಡಲಾಯಿತು.

ಶ್ಯಾಮಾಪ್ರಸಾದ್ ಮುಖರ್ಜಿ 1951ರ ಜೂನ್ 2ರಂದು ಲೋಕಸಭೆಯಲ್ಲಿ ಮಾಡಿದ ಭಾಷಣದ ಸಾಲುಗಳಿವು- ‘ದೇಶದಲ್ಲಿ ಬಡತನ, ಹಸಿವು, ಕುಶಾಸನ, ಭ್ರಷ್ಟಾಚಾರ ಮತ್ತು ಪಾಕಿಸ್ತಾನದೆದುರು ಶರಣಾಗತಿಯಂಥ ಸ್ಥಿತಿ ಇರುವಾಗ, ಈ ಸಮಸ್ಯೆಗಳೆಲ್ಲ ತೀವ್ರ ಸ್ವರೂಪ ಪಡೆದು ಕಾಡುತ್ತಿರುವಾಗ ನೆಹರು ಸಾಂಪ್ರದಾಯಿಕತೆ/ಜಾತೀಯತೆ ವಿಷಯವನ್ನು ಪ್ರಸ್ತಾಪಿಸುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’. ಈ ಮಾತನ್ನೇ ವರ್ತಮಾನದ ಸ್ಥಿತಿಗೆ ಹೋಲಿಸಿ ಮಾತನಾಡಿದ ಪ್ರೊ.ಜಗದೀಶ್ ಕುಮಾರ್, ‘ದೇಶ ಈಗ ವಿಕಾಸದ ಹಾದಿಯಲ್ಲಿ ಸಾಗುತ್ತಿದೆ. ಆದರೆ, ದೇಶದೊಳಗಿನ ಮತ್ತು ಹೊರಗಿನ ಕೆಲ ಶಕ್ತಿಗಳು ದೇಶದ ಗಮನವನ್ನು ಬೇರೆಡೆ ಮತ್ತು ಬೇಡವಾದ ಸಂಗತಿಗಳತ್ತ ಸೆಳೆಯಲು ಯತ್ನಿಸುತ್ತಿವೆ’ ಎಂದರು. ಇದರಲ್ಲೇನು ವಿವಾದದ ಅಂಶವಿದೆ ಹೇಳಿ? ಭಾರತ ಅಭಿವೃದ್ಧಿ ಪಥದಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವುದನ್ನು ಸಹಿಸಲಾಗದ ಕೆಲ ಶಕ್ತಿಗಳು ನಿರಂತರ ಅಡ್ಡಿ ಉಂಟು ಮಾಡಲು ಯತ್ನಿಸುತ್ತಿರುವುದು ಸುಳ್ಳೇನು?

ಇದೇ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜೀತೇಂದ್ರ ಸಿಂಗ್, ‘ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಏಕತೆ ಮತ್ತು ದೇಶಭಕ್ತಿಯ ಕೇಂದ್ರಗಳಾಗಬೇಕು’ ಎಂದರು. ಅಲ್ಲದೆ, ಪರಮವೀರ ಚಕ್ರ ವಿಜೇತರ ಚಿತ್ರಗಳನ್ನು ವಿವಿ ಆವರಣದಲ್ಲಿ ಅಳವಡಿಸಿ, ಪುಷ್ಪಾರ್ಚನೆ ಸಲ್ಲಿಸಲಾಯಿತು. ಸೈನಿಕರ ವಿರುದ್ಧ ಮತ್ತು ದೇಶದ್ರೋಹಿ ಘೋಷಣೆ ಕೇಳಿಬಂದಿದ್ದ ಜೆಎನ್​ಯುುನಲ್ಲಿ ಮೊದಲ ಬಾರಿಗೆ ದೇಶಭಕ್ತಿಯ ಸಂಚಲನ ಉಂಟಾಗಿ, ಯುವಮನಸ್ಸುಗಳು ಪುಳಕಿತಗೊಂಡವು. ಇದಕ್ಕೆಲ್ಲ ಪ್ರೇರಣೆ ತುಂಬಿದ್ದು ಶ್ಯಾಮಾಪ್ರಸಾದ್ ಮುಖರ್ಜಿ ಚಿಂತನೆಗಳು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

Leave a Reply

Your email address will not be published. Required fields are marked *

Back To Top