Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ವೈಚಾರಿಕ ಅಸ್ಪಶ್ಯತೆ ಮೇಲೆ ಗದಾಪ್ರಹಾರಗೈದ ಮುಖರ್ಜಿ

Monday, 18.06.2018, 3:04 AM       No Comments

| ತರುಣ್​ ವಿಜಯ್​

ವಿರೋಧವನ್ನು-ವಿರೋಧಿಗಳನ್ನು ಗೌರವಿಸಲು ತುಂಬ ದೊಡ್ಡ ಮನಸ್ಸು ಬೇಕು. ಅದೆಷ್ಟೋ ಬಾರಿ ವಿರೋಧಿಸಬೇಕು ಎಂಬ ಕಾರಣಕ್ಕಾಗಿಯೇ ವಿರೋಧಿಸಲಾಗುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಷಯದಲ್ಲಿ ಬಹುತೇಕ ಇದೇ ತೆರನಾಗಿ ಆಗಿದೆ. ಸಂಘದ ಮೌಲ್ಯಗಳು, ವಿಚಾರಧಾರೆ, ಸಾಗಿಬಂದ ಕಾರ್ಯ, ಹರಡಿಕೊಂಡಿರುವ ವಿಶಾಲ ಸೇವಾಸಾಮ್ರಾಜ್ಯ… ಇದ್ಯಾವುದನ್ನು ಗಮನಿಸದೆ ಆರೆಸ್ಸೆಸ್ ಅಂದರೆ ಹೀಗೆ, ಹಾಗೇ, ಅವರು ಹಿಂದುತ್ವವನ್ನು ಹರಡುತ್ತಾರೆ, ರಾಮ ಮಂದಿರದ ಬಗ್ಗೆ ಮಾತನಾಡುತ್ತಾರೆ ಎಂದೆಲ್ಲ ಹುಯಿಲು ಎಬ್ಬಿಸುತ್ತಾರೆ. ಹೀಗೆ ಅಬ್ಬರದ ದನಿಗಳ ನಡುವೆ ಎಷ್ಟೋ ಬಾರಿ ವಾಸ್ತವ ಹುದುಗಿ ಹೋಗಿಬಿಡುತ್ತದೆ. ಸಂಘದ ವಿಷಯಕ್ಕೆ ಬಂದರೆ ಅದು ಪ್ರಚಾರಪ್ರಿಯವಲ್ಲ. ಕೆಲಸ ಮಾಡುವುದು ಮಾತ್ರ ಅದಕ್ಕೆ ಗೊತ್ತು. ಸಮಾಜದ ದೀನದಲಿತರು ಮತ್ತು ಯಾರೇ ನೊಂದವರಾಗಿದ್ದರೂ ಅವರ ನೆರವಿಗೆ ಧಾವಿಸಿ ಕಣ್ಣೀರು ಒರೆಸುವ ಮಾನವೀಯ ಧರ್ಮ ಮಾತ್ರ ಸಂಘಕ್ಕೆ ಗೊತ್ತು. ಒಂದು ಸಣ್ಣ ಸಂಸ್ಥೆಯನ್ನು ನಡೆಸುವುದು ಅದೆಷ್ಟೋ ಜನರಿಗೆ ಕಷ್ಟವಾಗಿ ಹೋಗುತ್ತದೆ. ಆದರೆ, ಸಂಘದ ಮಾರ್ಗದರ್ಶನದಲ್ಲಿ 1.70 ಲಕ್ಷಕ್ಕಿಂತಲೂ ಅಧಿಕ ಸೇವಾಕಾರ್ಯಗಳು ನಡೆಯುತ್ತಿವೆ ಎಂದರೆ ಕಾರ್ಯದ ಪರಿಧಿ ಎಷ್ಟು ವಿಶಾಲವಾಗಿರಬಹುದು ಎಂಬುದನ್ನು ಅಂದಾಜಿಸಿ. ಜಮ್ಮುವಿನಿಂದ ಕನ್ಯಾಕುಮಾರಿಯವರೆಗೆ, ಅಸ್ಸಾಂ, ಮಣಿಪುರನಿಂದ ಪಶ್ಚಿಮ ಬಂಗಾಳದವರೆಗೆ, ಉತ್ತರ ಪ್ರದೇಶದಿಂದ ಹಿಡಿದು ಕರ್ನಾಟಕದವರೆಗೆ… ಹೀಗೆ ಎಲ್ಲೆಲ್ಲೂ ಅದರ ಸಮಾಜಮುಖಿ ಚಟುವಟಿಕೆಗಳು ಸದ್ದಿಲ್ಲದೆ ನಡೆದಿವೆ.

ಲಕ್ಷಾಂತರ ಸ್ವಯಂಸೇವಕರ ನಿಷ್ಠೆ, ಪ್ರಚಾರಕರ ತ್ಯಾಗ, ಹಿರಿಯರ ಮಾರ್ಗದರ್ಶನ ಇವೆಲ್ಲವುಗಳ ಒಟ್ಟು ಮಿಳಿತವೇ ಸಂಘವನ್ನು ಶಕ್ತಿಶಾಲಿಯಾಗಿಸಿದೆ. ಅಲ್ಲಿ ಏನಿಲ್ಲ ಹೇಳಿ? ಶಾಖೆಗೆ ಹೋದರೆ ಸಂಸ್ಕಾರವಿದೆ, ರಾಷ್ಟ್ರಭಕ್ತಿಯ ಮೌಲ್ಯಗಳಿವೆ. ಸಂಘಶಿಕ್ಷಾ ವರ್ಗಕ್ಕೆ ಹೋದರೆ ವ್ಯಕ್ತಿತ್ವದ ನಿರ್ವಣವಾಗಿ, ವ್ಯಷ್ಟಿ ಸಮಷ್ಟಿಯ ಹಿತಕ್ಕಾಗಿ ಕೊಡುಗೆ ನೀಡುವ ಸಂಕಲ್ಪ ಕಾಣುತ್ತದೆ. ಸೇವಾ ಚಟುವಟಿಕೆಗಳಲ್ಲಿ ಭಾಗಿಯಾದರೆ ಮಾನವಿಯತೆಯ ಬೆಳಕು ಗೋಚರಿಸುತ್ತದೆ. ದೂರದಿಂದ ನಿಂತು ನೋಡಿದವರಿಗೆ ಸಂಘ ಏನೆಂಬುದು ಅರ್ಥವಾಗುವುದೇ ಇಲ್ಲ. ಅದಕ್ಕೆ, ವಿರೋಧಿಗಳು ದೂರ ನಿಂತುಕೊಂಡೇ ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಕೆಲವೇ ಸ್ವಯಂಸೇವಕರಿಂದ ಪ್ರಾರಂಭವಾದ ಆರೆಸ್ಸೆಸ್ ಪ್ರಸಕ್ತ ವಿಶ್ವದ ಅತಿ ದೊಡ್ಡ ಸ್ವಯಂಸೇವಾ ಸಂಘಟನೆಯಾಗಿ ಬೆಳೆದಿರುವ ಪಯಣ ರೋಮಾಂಚನಕಾರಿಯಾದುದು, ಚೇತೋಹಾರಿಯಾದುದು.

ಹಿಂದೆ ಕೂಡ ಕಾಂಗ್ರೆಸ್ಸಿನ ಹಲವು ನಾಯಕರು ಆರೆಸ್ಸೆಸ್​ನ್ನು ಬಲವಾಗಿ ವಿರೋಧಿಸಿಕೊಂಡು ಬಂದಿದ್ದರು. ಆದರೆ, ಸಮೀಪಕ್ಕೆ ಬಂದು ನೋಡಿದಾಗ ಅವರೂ ‘ಆರೆಸ್ಸೆಸ್ ಶಿಸ್ತಿನ ಸಂಘಟನೆ’ ಎಂದು ಬಹಿರಂಗವಾಗಿಯೇ ಸಾರಿದರು. ಜೂನ್ 7ರಂದು ಸಂಘದ ಮುಖ್ಯಾಲಯ ನಾಗಪುರದಲ್ಲಿ ತೃತೀಯ ವರ್ಷದ ಶಿಕ್ಷಾ ವರ್ಗ ಸಮಾರೋಪಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ ಎಂಬ ಸುದ್ದಿ ಬಂದಾಗ ಕಾಂಗ್ರೆಸ್ಸಿಗರಿಗೆ ಆತಂಕವಾಗಿದ್ದು ನಿಜವೇ. ಕಳೆದ ಏಳು ದಶಕಗಳ ವೈಚಾರಿಕ ಅಸ್ಪಶ್ಯತೆ ಈ ಮೂಲಕ ನಿವಾರಣೆ ಆಗುತ್ತೆ ಎಂದೆನಿಸಿದಾಗ ವಿರೋಧಿಗಳು ಕಳವಳಗೊಂಡಿದ್ದು ವಾಸ್ತವ.

ಪ್ರಣಬ್ ಮುಖರ್ಜಿಯವರ ಈ ನಿಲುವಿಗೆ ಕಾರಣವೇನು ಎಂಬ ಬಗ್ಗೆ ಸಾಕಷ್ಟು ಚರ್ಚೆ-ಜಿಜ್ಞಾಸೆಗಳು ನಡೆದವು. ವಾಸ್ತವವೆಂದರೆ, ಕಳೆದ ಕೆಲ ವರ್ಷಗಳಿಂದ ಮುಖರ್ಜಿ ಆರೆಸ್ಸೆಸ್​ನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ. ಆ ಮೂಲಕ ಅವರಿಗೆ ಸತ್ಯದ ದರ್ಶನವಾಗಿದೆ, ದೂರದಿಂದ ನೋಡಿದ್ದು, ಪೂರ್ವಗ್ರಹದಿಂದ ನೋಡಿದ್ದು ನಿಜವಲ್ಲ ಎನಿಸಿದೆ. ಆದರೆ, ಕೆಲ ಕಾಂಗ್ರೆಸ್ಸಿಗರು ಮುಖರ್ಜಿಯ ನಿರ್ಧಾರವೇ ತಪು್ಪ ಎಂದು ಹೇಳುವ ಧಾಷ್ಟರ್್ಯ ತೋರಿದರು. ಅಷ್ಟೇ ಅಲ್ಲ, ಮುಖರ್ಜಿಯವರ ವಿವೇಕದ ಬಗ್ಗೆಯೇ ಪ್ರಶ್ನೆ ಎತ್ತಿದರು. ರಕ್ಷಣಾ ಸಚಿವ, ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿ (ಎರಡು ಬಾರಿ ಪ್ರಧಾನಿಯಾಗುವ ಅವಕಾಶವೂ ಇತ್ತೆನ್ನಿ, ‘10 ಜನಪಥ್’ ಅವಕೃಪೆಯಿಂದ ಅದು ಕೈತಪ್ಪಿತು) ಐದು ವರ್ಷಗಳ ಕಾಲ ದೇಶದ ರಾಷ್ಟ್ರಪತಿ ಆಗಿ ಸೇವೆಸಲ್ಲಿಸದ ಹಿರಿಮೆ ಮುಖರ್ಜಿ ಅವರದ್ದು. ಅಂಥ ಮುತ್ಸದ್ಧಿ ಹಿಂದೆ-ಮುಂದೆ ಆಲೋಚಿಸದೆ ಇಂಥ ನಿರ್ಣಯಕ್ಕೆ ಬರಲು ಸಾಧ್ಯವುಂಟೇನು?

ನಿಕಟಪೂರ್ವ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಕೇರಳದಲ್ಲಿ ನಡೆದ ಪಿಎಫ್​ಐ (ಇದು ಸಮಾಜಕಂಟಕ ಸಂಘಟನೆ ಎಂಬುದು ಹಲವು ಘಟನೆ, ಪ್ರಕರಣಗಳಿಂದ ಸಾಬೀತಾಗಿದೆ) ಸಂಘಟನೆಯ ಸಭೆಯಲ್ಲಿ ಪಾಲ್ಗೊಂಡಾಗ ಅವರನ್ನು ‘ಜಾತ್ಯತೀತ’ ಎಂದು ಕರೆಯಲಾಯಿತು. ಆದರೆ, ಮುಖರ್ಜಿ ರಾಷ್ಟ್ರನಿಷ್ಠ ಸಂಘಟನೆ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಇಷ್ಟು ವಿರೋಧ ಏಕೆ? ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ಹಲವರು ಸಲಹೆ ನೀಡಿದರು, ಕೊನೆಗೆ ಒತ್ತಡ ತಂತ್ರವೂ ಅನುಸರಿಸಿದರು. ಇದ್ಯಾವುದಕ್ಕೂ ಬಗ್ಗದೆ ಮುಖರ್ಜಿ ಜೂನ್ 7ರಂದು ಸಂಘ ಶಿಕ್ಷಾ ವರ್ಗದ ಸಮಾರೋಪದಲ್ಲಿ ಭಾಗವಹಿಸಿ ಸ್ವಯಂಸೇವಕರ ಶಿಸ್ತು, ಸಮರ್ಪಣೆ, ತ್ಯಾಗ ಮನೋಭಾವವನ್ನು ಕಣ್ಣಾರೆ ತುಂಬಿಕೊಂಡರು. ಆರೆಸ್ಸೆಸ್ ಬಲಿಷ್ಠ ಸಂಘಟನೆಯಾಗಿ ಬೆಳೆದಿರುವ ಪರಿಯನ್ನು ಅರಿತುಕೊಂಡರು. ರಾಷ್ಟ್ರೀಯತೆ, ರಾಷ್ಟ್ರವಾದದ ಕುರಿತಂತೆ ಮನಬಿಚ್ಚಿ ಮಾತನಾಡಿದರು.

ಇತಿಹಾಸ ಅವಲೋಕಿಸಿದರೆ ವಿರೋಧಿ ವಿಚಾರಧಾರೆಯವರನ್ನೂ ಗೌರವಿಸುವ ಪರಂಪರೆ ನಮ್ಮದು. ಆದರೆ, ಸಾರ್ವಜನಿಕ ಬದುಕಿನಲ್ಲಿ ವೈಚಾರಿಕ ಶತ್ರುತ್ವದ ಕೊಡುಗೆ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ಸಿಗರದ್ದು. ನಾನು ‘ಪಾಂಚಜನ್ಯ’ ಪತ್ರಿಕೆಯ ಸಂಪಾದಕನಾಗಿದ್ದಾಗ ಸಿಪಿಐ ಮುಖಂಡರಾದ ಸಿ.ರಾಜಶೇಖರ್ ರಾವ್, ಎ.ಬಿ.ಬರ್ಧನ್, ಡಿ.ರಾಜಾ, ಸೈಯ್ಯದ್ ಶಹಾಬುದ್ದಿನ್, ಕಾಂಗ್ರಸ್ಸಿನ ಮಣಿಶಂಕರ್ ಅಯ್ಯರ್, ಹೇಮವತಿ ನಂದನ್ ಬಹುಗುಣ ಸೇರಿದಂತೆ ಹಲವು ಮುಖಂಡರ ವಿಚಾರಗಳನ್ನು, ಸಂದರ್ಶನಗಳನ್ನು ಪ್ರಾಮುಖ್ಯ ಕೊಟ್ಟು ಪ್ರಕಟ ಮಾಡಿದೆ. ‘‘ಇವರೆಲ್ಲ ನಮ್ಮ ವಿಚಾರಧಾರೆ ವಿರುದ್ಧ ಮಾತನಾಡುವವರು, ಇವರಿಗೇಕೆ ‘ಪಾಂಚಜನ್ಯ’ದಲ್ಲಿ ಸ್ಥಾನ?’ ಎಂದು ಯಾರೂ ನನ್ನನ್ನು ಪ್ರಶ್ನಿಸಲಿಲ್ಲ. ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಅವರ ಮೊದಲ ಸಂದರ್ಶನ ಪ್ರಕಟವಾಗಿದ್ದೂ ‘ಪಾಂಚಜನ್ಯ’ದಲ್ಲೇ. ಇದನ್ನು ನೋಡಿ ದೆಹಲಿ ರಾಜಕೀಯ ಅಂಗಳದಲ್ಲಿ, ವಿಶೇಷವಾಗಿ ಕಾಂಗ್ರೆಸ್ ವಲಯದಲ್ಲಿ ಕೋಲಾಹಲವೇ ಸೃಷ್ಟಿಯಾಯಿತು. ಹಲವು ದಿನಗಳ ಕಾಲ ಚರ್ಚೆ ನಡೆದು ‘ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಡಾ.ಮನಮೋಹನ್ ಸಿಂಗ್ ಪ್ರಧಾನಿ ಆಗುತ್ತಿದ್ದಂತೇ ಮೊದಲ ಸಂದರ್ಶನವನ್ನು ಆರೆಸ್ಸೆಸ್ ಪತ್ರಿಕೆಗೇ ನೀಡಿದ್ದೇಕೆ? ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಆಗಲೂ ಕಾಂಗ್ರೆಸ್ ನಾಯಕರು ಅಸಮಾಧಾನ, ಅತೃಪ್ತಿ ಹೊರಹಾಕಿದ್ದರು.

ಆರೆಸ್ಸೆಸ್ ವೈಚಾರಿಕ ಅಸ್ಪಶ್ಯತೆಯಲ್ಲಿ ನಂಬಿಕೆ ಇಟ್ಟಿಲ್ಲ. 1950ರ ಆಸುಪಾಸಿನಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಲಂಡನ್ ಪ್ರವಾಸಕ್ಕೆ ತೆರಳಿದರು. ಆಗ ಅಲ್ಲಿನ ಅನಿವಾಸಿ ಭಾರತೀಯರು ನೆಹರುರ ಪಾಕಿಸ್ತಾನ ನೀತಿ ಮತ್ತು ಹಿಂದೂಗಳ ಬಗೆಗಿನ ಭೇದಭಾವವನ್ನು ವಿರೋಧಿಸಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದರು. ಸಂಘದ ಆಗಿನ ಸರಸಂಘಚಾಲಕ ಗೋಳ್ವಲಕರ್ ಗುರೂಜಿ ಮಧ್ಯಪ್ರವೇಶಿಸಿ- ‘ಭಾರತದ ಹೊರಗಡೆ ಪ್ರಧಾನಮಂತ್ರಿಯ ಗೌರವವೆಂದರೆ ಅದು ರಾಷ್ಟ್ರದ ಗೌರವ. ಅವರ (ನೆಹರು) ವಿರುದ್ಧ ಒಂದು ಶಬ್ದ ಕೂಡ ಮಾತನಾಡುವಂತಿಲ್ಲ. ನಿಮಗೆ ಏನು ಹೇಳಬೇಕಿದೆಯೋ ಅದನ್ನು ಭಾರತಕ್ಕೆ ಬಂದು ಮುಕ್ತವಾಗಿ ಹೇಳಿ’ ಎಂದು ತೀಕ್ಷ್ಣವಾಗಿ ನುಡಿದಿದ್ದರು.

2014ರಲ್ಲಿ ನಾನು ಜಪಾನ್ ಸರ್ಕಾರದ ಆಹ್ವಾನದ ಮೇರೆಗೆ ಟೋಕಿಯೊದಲ್ಲಿ ‘ಭಾರತದ ಅರ್ಥನೀತಿ ಮತ್ತು ಜಪಾನ್ ಜತೆಗಿನ ಭಾರತದ ಸಂಬಂಧ’ ಕುರಿತು ವಿಶೇಷ ಉಪನ್ಯಾಸ ನೀಡಲು ತೆರಳಿದ್ದೆ. ಉಪನ್ಯಾಸದ ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಭಿಕರು ಡಾ.ಮನಮೋಹನ್ ಸಿಂಗ್​ರ ಆರ್ಥಿಕ ನೀತಿಗಳ ಬಗ್ಗೆ ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳಿದರು. ಆದರೆ ನಾನು ಟೋಕಿಯೊದಲ್ಲಿ ಮನಮೋಹನ್ ಸಿಂಗ್ ಅವರನ್ನಾಗಲಿ, ಅವರ ಆರ್ಥಿಕ ನೀತಿಗಳನ್ನಾಗಲಿ ವಿರೋಧಿಸಲಿಲ್ಲ. ಬದಲಿಗೆ ರಾಷ್ಟ್ರೀಯ ಆರ್ಥಿಕ ನೀತಿಯನ್ನು ಸಮರ್ಥಿಸಿಕೊಂಡು ಉದ್ಯೋಗ ಖಾತ್ರಿ ಯೋಜನೆಯನ್ನು ಶ್ಲಾಘಿಸಿದ್ದೆ. ವಿದೇಶಿ ನೆಲದಲ್ಲಿ ಭಾರತದ ವಿರೋಧವನ್ನು ಸಂಘ ಎಂದಿಗೂ ಬಯಸುವುದಿಲ್ಲ, ಬದಲಿಗೆ ಭಾರತದ ಘನತೆಯನ್ನು ವಿದೇಶಗಳಲ್ಲಿ ಎತ್ತಿ ಹಿಡಿಯಲು ಅದು ಪ್ರೇರಣೆ ನೀಡುತ್ತದೆ.

ಶತ್ರುತ್ವ ಇರಬೇಕಾದ್ದು ದೇಶದ ಶತ್ರುಗಳೊಂದಿಗೆ ಹೊರತು ವೈಚಾರಿಕ ಶತ್ರುಗಳೊಂದಿಗಲ್ಲ. ಈ ಸತ್ಯ ಅರಿತುಕೊಂಡರೆ ಸಾಮರಸ್ಯ, ಸಹಬಾಳ್ವೆಯ ಹಾದಿ ಸುಗಮಗೊಳ್ಳಬಲ್ಲದು. ಅಲ್ಲವೇ?

Leave a Reply

Your email address will not be published. Required fields are marked *

Back To Top