Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಭಾರತ-ನೇಪಾಳ ಸಂಬಂಧಕ್ಕೆ ಹೊಸ ಆಯಾಮ

Monday, 14.05.2018, 3:03 AM       No Comments

| ತರುಣ್​ ವಿಜಯ್​

ಇದೇ ಮೊದಲಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಲ್ಲದೆ ಪ್ರಧಾನ ಯಾತ್ರಾರ್ಥಿಯಾಗಿ ನೇಪಾಳಕ್ಕೆ ಭೇಟಿ ನೀಡಿದ್ದಾರೆ. ಮೋದಿ ಆಗಮನಕ್ಕಾಗಿ ಕಾಯುತ್ತಿದ್ದ ನೇಪಾಳ ಹುಸಿಮುನಿಸು, ಅಪನಂಬಿಕೆಗಳನ್ನು ತೊರೆದು ಮುಕ್ತಮನಸ್ಸಿನಿಂದ ಸ್ನೇಹಹಸ್ತ ಚಾಚಿದೆ. ಇದರಿಂದ ಉಭಯ ದೇಶಗಳ ಸಂಬಂಧವರ್ಧನೆಯ ದಾರಿಗಳು ಪ್ರಶಸ್ತವಾಗಿವೆ.

ಭಾರತದ ನೆರೆಯಲ್ಲೇ ಪವಡಿಸಿರುವ ನೇಪಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳೆದ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿ ಭೇಟಿ ನೀಡಿದ್ದಾರೆ. ಭಾರತದ ಯಾವುದೇ ಪ್ರಧಾನಿ ನೇಪಾಳಕ್ಕೆ ಇಷ್ಟುಬಾರಿ ಭೇಟಿ ನೀಡಿದ ನಿದರ್ಶನಗಳಿಲ್ಲ. ಅದರಲ್ಲೂ, ಇತ್ತೀಚೆಗೆ ಚೀನಾದ ವುಹಾನ್ ನಗರದಲ್ಲಿ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರೊಡನೆ ಅನೌಪಚಾರಿಕ ಮಾತುಕತೆ ನಡೆಸಿ, ಅದು ಸಕಾರಾತ್ಮಕ ಪರಿಣಾಮ ಬೀರಿದ ಬೆನ್ನಲ್ಲೇ ಮೋದಿ ನೇಪಾಳಕ್ಕೆ ತೆರಳಿದ್ದು ಗಮನಾರ್ಹ. ಏಷ್ಯಾದ ಮಹಾಶಕ್ತಿಯಾಗಿ ಹೊರಹೊಮ್ಮಲು ಹಾತೊರೆಯುತ್ತಿರುವ ಚೀನಾ ಭಾರತವಿರೋಧಿ ಕೃತ್ಯಗಳಿಗೆ ನೇಪಾಳವನ್ನು ಬಳಸಿಕೊಳ್ಳುತ್ತಿದೆ ಎಂಬುದು ಗೊತ್ತಿರುವಂಥದ್ದೇ. ಆದರೆ, ‘ಭಾರತವಿರೋಧಿಗಳಿಗೆ ನಮ್ಮಲ್ಲಿ ಜಾಗ ನೀಡುವುದಿಲ್ಲ’ ಎಂದು ನೇಪಾಳ ಪ್ರಧಾನಿ ಖಡ್ಗಪ್ರಸಾದ್

ಶರ್ಮಾ ಒಲಿ ಮೋದಿ ಸಮ್ಮುಖದಲ್ಲಿಯೇ ಘೋಷಿಸಿರುವುದು ಭಾರತದ ಮಟ್ಟಿಗೆ ದೊಡ್ಡ ಸಮಾಧಾನ ಎನ್ನಬಹುದು. ಒಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಸ್ನೇಹವನ್ನು ಗಟ್ಟಿಗೊಳಿಸುವ ಸೂಚನೆ ನೀಡಿ ಮೋದಿಯವರನ್ನು ತಮ್ಮ ದೇಶಕ್ಕೆ ಆಹ್ವಾನಿಸಿದ್ದರು.

ಕಳೆದ ಹಲವು ವರ್ಷಗಳಿಂದ ಕಾಶ್ಮೀರದ ಜಿಹಾದಿಗಳು ಮತ್ತು ಪಾಕಿಸ್ತಾನದ ಗುಪ್ತಚರ ಸಂಘಟನೆ ಐಎಸ್​ಐ ನೇಪಾಳದ ನೆಲವನ್ನು ಭಾರತವಿರೋಧಿ ಚಟುವಟಿಕೆಗಳಿಗೆ ಬಳಸುತ್ತಿವೆ. ನೇಪಾಳದ ಮೂಲಸೌಕರ್ಯ ವೃದ್ಧಿಸುವ, ಆರ್ಥಿಕ ನೆರವು ನೀಡುವ ನೆಪದಲ್ಲಿ ಚೀನಾ ಕೂಡ ಇದೇ ತೆರನಾದ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂಬುದು ರಹಸ್ಯವೇನಲ್ಲ. ಅಲ್ಲದೆ, ವಿದೇಶಿ ಕ್ರೖೆಸ್ತ ಸಂಘಟನೆಗಳು ಡಚ್, ಜರ್ಮನಿ, ಬ್ರಿಟನ್, ಅಮೆರಿಕ ಮುಂತಾದ ದೇಶಗಳಿಂದ ಆರ್ಥಿಕ ನೆರವು ಪಡೆದು ನೇಪಾಳದಲ್ಲಿ ಮತಾಂತರವನ್ನು ತೀವ್ರಗೊಳಿಸಿವೆ. ಅಲ್ಲಿ ನೋಂದಣಿ ಪಡೆದ 50 ಸಾವಿರ ಎನ್​ಜಿಒಗಳಿದ್ದರೆ ನೋಂದಣಿ, ಅನುಮತಿಯೇ ಇಲ್ಲದೆ ಕಾರ್ಯಾಚರಿಸುತ್ತಿರುವ 1 ಲಕ್ಷಕ್ಕೂ ಅಧಿಕ ಎನ್​ಜಿಒಗಳು ನೇಪಾಳದ ಹಿಂದೂಬಾಹುಳ್ಯ ಚರಿತ್ರೆಯನ್ನು ಕೊನೆಗಾಣಿಸಲು ಹೊರಟಿವೆ. ಇದಕ್ಕಾಗಿ, ನೀರಿನಂತೆ ಹಣ ಹರಿಸಲಾಗುತ್ತಿದೆ. ಭಾರತದ ಉತ್ತರ ಮತ್ತು ಪೂರ್ವಾಂಚಲ ಭಾಗಗಳಲ್ಲಿ ಡಾಲರ್-ಶಿಕ್ಷಣ-ಆಸ್ಪತ್ರೆಗಳ ಆಮಿಷ ತೋರಿಸಿ ಕ್ರೖೆಸ್ತ ಮಿಷನರಿಗಳು ಮತಾಂತರ ಮಾಡುತ್ತಿರುವ ಮಾದರಿಯಲ್ಲೇ ನೇಪಾಳದ ಬುಡಕಟ್ಟು ಜನಾಂಗದವರನ್ನು ಮತಾಂತರಗೊಳಿಸಲಾಗುತ್ತಿದೆ. ಹೀಗೆ ಸಂಸ್ಕೃತಿ, ನಂಬಿಕೆ, ಆಸ್ಥೆಗಳನ್ನು ಪಲ್ಲಟಗೊಳಿಸಿಬಿಟ್ಟರೆ ಅಲ್ಲಿನ ಜನರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಬಹುದು ಎಂಬುದು ಪಾಶ್ಚಾತ್ಯ ರಾಷ್ಟ್ರಗಳ, ಕ್ರೖೆಸ್ತ ಮಿಷನರಿಗಳ ಚಿಂತನೆ. ಆದರೆ, ನೇಪಾಳಿಗರ ಧರ್ಮಶ್ರದ್ಧೆ ಸಾಗರಕ್ಕಿಂತಲೂ ಆಳ, ಪರ್ವತದ ಶೃಂಗಕ್ಕಿಂತಲೂ ಎತ್ತರ ಎಂಬುದು ಅವರಿಗೆ ತಿಳಿದಿಲ್ಲವೇನೋ!

ಅಂತಾರಾಷ್ಟ್ರೀಯ ವಲಯದಲ್ಲಿ ಭಾರತದ ಶಕ್ತಿ ನಿಧಾನವಾಗಿ ಹೆಚ್ಚುತ್ತಿರುವುದನ್ನು ಹಲವು ರಾಷ್ಟ್ರಗಳು ಮನಗಂಡಿವೆ. ಹಾಗಾಗಿ, ಭಾರತವಿರೋಧಿ ಚಟುವಟಿಕೆಗಳಿಗೆ, ಕಾರ್ಯಾಚರಣೆಗಳಿಗೆ ಇಂಬು ಕೊಡುವುದು, ಪ್ರೋತ್ಸಾಹಿಸುವುದು ತಮ್ಮ ಹಿತಾಸಕ್ತಿಗೇ ಮಾರಕ ಎಂಬ ಅರಿವು ಮೂಡುತ್ತಿದೆ. ಅದಕ್ಕೆಂದೆ, ಕ್ಸಿ ಜಿನ್​ಪಿಂಗ್ ಮೋದಿಯವರನ್ನು ಅನೌಪಚಾರಿಕ ಮಾತುಕತೆಗೆ ಆಹ್ವಾನಿಸಿದ್ದು.

ಮೋದಿ ಏಕೆ ಮತ್ತೆ ಮತ್ತೆ ನೇಪಾಳಕ್ಕೆ ಹೋಗುತ್ತಾರೆ ಎಂಬುದು ಅನೇಕರ ಕುತೂಹಲ. ಸಾಮಾನ್ಯವಾಗಿ ಇತರ ರಾಷ್ಟ್ರಗಳೊಂದಿಗಿನ ಸಂಬಂಧ ವ್ಯಾಪಾರ, ರಾಜತಾಂತ್ರಿಕ, ಸಾಮರಿಕ ಹೀಗೆ ಬೇರೆ-ಬೇರೆ ಆಯಾಮಗಳ ಮೇಲೆ ಅವಲಂಬಿಸಿರುತ್ತದೆ. ಆದರೆ, ಭಾರತ-ನೇಪಾಳ ಸಂಬಂಧ ಈ ಭೌತಿಕ ಸಂಗತಿಗಳನ್ನು ಮೀರಿದ್ದು. ಅಂದರೆ ಇಲ್ಲಿ ರಾಜನೀತಿಗಿಂತಲೂ ದೇವನೀತಿ ಪ್ರಮುಖವಾದದ್ದು. ಅದಕ್ಕೆಂದೆ, ಮೋದಿ ನೇಪಾಳಕ್ಕೆ ಪ್ರಧಾನಿಯಾಗಷ್ಟೆ ಅಲ್ಲ ಪ್ರಧಾನ ಯಾತ್ರಾರ್ಥಿ ರೂಪದಲ್ಲಿ ತೆರಳಿ ಅದರ ಸಾರ್ಥಕತೆಯನ್ನು ಕೊಂಡಾಡಿದ್ದಾರೆ.

ಮೋದಿ ಮೇ 11ರಂದು ನೇಪಾಳ ಭೇಟಿ ಆರಂಭಿಸಿದ್ದು ಜನಕಪುರದಿಂದ. ಈ ಊರು ಮಹಾಮಾತೆ ಸೀತೆಯ ತವರೂರು. ಜನಕಪುರದಲ್ಲಿ ಜನಿಸಿದ ಭೂಪುತ್ರಿ ಸೀತೆ ಅಯೋಧ್ಯೆಗೆ ಸೊಸೆಯಾಗಿ ಆಗಮಿಸಿದಾಗ ಶ್ರೀರಾಮನ ಪರಿವಾರ ಪೂರ್ಣವಾಯಿತು. ಇದು ಕೇವಲ ಜನಕಪುರ-ಅಯೋಧ್ಯೆಯ ಸಂಬಂಧವಲ್ಲ; ಇದು ಯುಗ-ಯುಗಗಳಿಂದ ಭಾರತ-ನೇಪಾಳ ನಡುವಿನ ಸಂಬಂಧವನ್ನು ನಿದರ್ಶಿಸುತ್ತದೆ. ಈ ಎರಡೂ ರಾಷ್ಟ್ರಗಳ ಪ್ರತಿಯೊಬ್ಬ ಹಿಂದೂ ‘ಸಿಯಾರಾಮ್ ಸಿಯಾರಾಮ್ ಮಂತ್ರವನ್ನು ಜೀವನಮಂತ್ರವಾಗಿಸಿಕೊಂಡಿದ್ದಾನೆ. ಎಷ್ಟೋ ಸರ್ಕಾರಗಳು, ನೇತಾರರು ಬಂದುಹೋದರೂ ಸಿಯಾ-ರಾಮ್ ಎಂಬ ಈ ಎರಡು ಶಬ್ದಗಳು ಉಭಯ ದೇಶಗಳ ಸಂಬಂಧಗಳನ್ನು, ಭಾವನೆಗಳನ್ನು ಉಳಿಸುತ್ತ, ಬೆಳೆಸುತ್ತ ಬಂದಿರುವ ಪರಿ ಮಾತ್ರ ಅನನ್ಯ.

ಈ ಸಂಬಂಧಗಳನ್ನು ಮತ್ತಷ್ಟು ಬೆಸೆಯುವ ಕೆಲಸ ಎಂದೋ ಆಗಬೇಕಿತ್ತು. ಏಕೆಂದರೆ, ಸೀತೆಯಿಲ್ಲದೆ ರಾಮ ಅಪೂರ್ಣ, ರಾಮ-ಸೀತೆಯಿಲ್ಲದೆ ಅಯೋಧ್ಯೆ ಅಪೂರ್ಣ. ಅಯೋಧ್ಯೆ ಇಲ್ಲದ ಭಾರತ ಆತ್ಮವಿಲ್ಲದ ದೇಹದಂತೆ. ಕಡೆಗೂ, ಈಗಿನ ಸರ್ಕಾರ ಈ ವಾಸ್ತವವನ್ನು ಅರ್ಥ ಮಾಡಿಕೊಂಡಿದೆ. ಅದಕ್ಕೆಂದೆ, ‘ರಾಮಾಯಣ ಸರ್ಕ್ಯೂಟ್’ ಯೋಜನೆಗೆ ಜೀವ ಬಂದಿದೆ. ಜನಕಪುರಿ-ಅಯೋಧ್ಯಾ ನಡುವಿನ ವಿಶೇಷ ಬಸ್ ಸಂಚಾರಕ್ಕೂ ಚಾಲನೆ ದೊರೆತಿದೆ. ಈ ಮೂಲಕ ನೇಪಾಳಿಗರು ಶ್ರೀರಾಮನ ಜನ್ಮಸ್ಥಾನಕ್ಕೆ ಭೇಟಿ ನೀಡಬಹುದಾಗಿದ್ದು, ಭಾರತೀಯರು ಸೀತೆಯ

ತವರನ್ನು ನೋಡಬಹುದಾಗಿದೆ. ಜನಕಪುರಿ ಮಂದಿರ ಆವರಣ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿನ ಸಂಭ್ರಮ ನೋಡಿದರೆ ಈ ಬಸ್ ಸಂಚಾರ ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿ, ಸಂಬಂಧಗಳನ್ನು ಪಕ್ವಗೊಳಿಸುವ ನಿರೀಕ್ಷೆ ಮೂಡಿಸಿದೆ.

ಮಾತೆ ಜಾನಕಿ(ಸೀತೆ) ನೀಡುವ ಭೂಮಿ ಮತ್ತು ಪ್ರಕೃತಿಯನ್ನು ರಕ್ಷಿಸುವ ಸಂದೇಶ ಇಂದು ಹೆಚ್ಚು ಪ್ತಸ್ತುತವಾಗಿದೆ. ಮಾಲಿನ್ಯರೂಪಿ ರಾವಣ ಭೂಮಿಯ ಪಾವಿತ್ರ್ಯ ಮತ್ತು ಶುಚಿತ್ವವನ್ನು ಹಾಳು ಮಾಡದಂತೆ ತಡೆಯುವ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿದ್ದು, ಪರಿಸರವನ್ನು ಸಂರಕ್ಷಿಸುವ ಕೆಲಸಕ್ಕೆ ಸೀತಾಮಾತೆ ಪ್ರೇರಣೆ ನೀಡುತ್ತಾಳೆ. ನಮ್ಮ ಬದುಕಿನ, ರಾಷ್ಟ್ರದ ಬದುಕಿನ ಜೀವನಾಡಿಯಾಗಿರುವ ನದಿಗಳು ಸ್ವಚ್ಛವಾಗಬೇಕಿವೆ, ವಾಯು ಸ್ವಚ್ಛವಾಗಬೇಕಿದೆ. ಕೃಷಿ ಭೂಮಿಗಳಲ್ಲಿ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಮೂಲಕ ಭೂಮಾತೆಯನ್ನು ಪ್ರಸನ್ನಗೊಳಿಸಬೇಕಿದೆ. ಸೀತೆಗೆ ಈ ದೇಶದ ಪ್ರಧಾನಿ ಸಲ್ಲಿಸಿರುವ ಪ್ರಣಾಮ ಪರಿಸರ ಸಂರಕ್ಷಣೆಗೆ ಸಂಕಲ್ಪ ತಳೆಯಲು ಕಾರಣೀಭೂತ ಹಾಗೂ ಪ್ರೇರಣೆ ಆಗಬೇಕಿದೆ.

ಅಂದಹಾಗೆ, ನೇಪಾಳದ ಅಭಿವೃದ್ಧಿಯಲ್ಲಿ ಪ್ರಾದೇಶಿಕ ವಿಕಾಸದ ಸೂತ್ರವೂ ಅಡಗಿದೆ. ಅದಕ್ಕೆಂದೆ, ನೇಪಾಳದ ಅಭಿವೃದ್ಧಿಗೆ ಭಾರತ ಸದಾ ಸಹಕಾರ ನೀಡುತ್ತ ಬಂದಿದ್ದು, ಅದು ಮತ್ತಷ್ಟು ವಿಸ್ತರಣೆಯಾಗಿದೆ. ಜಲವಿದ್ಯುತ್ ಉತ್ಪಾದನೆ, ಮೂಲಸೌಕರ್ಯ ಅಭಿವೃದ್ಧಿ, ಸಾಫ್ಟ್​ವೇರ್​ಗಳ ಅಭಿವೃದ್ಧಿ, ಪ್ರವಾಸಿ ತಾಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆಧುನಿಕ ಸೌಲಭ್ಯಗಳ ತಲುಪಿಸುವಿಕೆ… ಹೀಗೆ ಹಲವು ನೆಲೆಯಲ್ಲಿ ಸಹಕಾರ ನೀಡುತ್ತಿರುವ ಭಾರತ ಭೂಕಂಪಪೀಡಿತರ ಪುನರ್ ವಸತಿಗಾಗಿ 50 ಸಾವಿರ ಮನೆಗಳನ್ನು ನಿರ್ವಿುಸುತ್ತಿದೆ. 375 ಕೋಟಿ ರೂಪಾಯಿಯಿದ್ದ ವಾರ್ಷಿಕ ನೆರವನ್ನು ಶೇಕಡ 73ರಷ್ಟು ಹೆಚ್ಚಿಸಿದ್ದು 650 ಕೋಟಿ ರೂ. ಒದಗಿಸುತ್ತಿದೆ. ಅಲ್ಲದೆ, ಜನಕಪುರ ಮಂದಿರ ಮತ್ತು ಆವರಣದ ಅಭಿವೃದ್ಧಿಗಾಗಿ ಪ್ರಧಾನಿ 100 ಕೋಟಿ ರೂ.ಗಳ ನೆರವು ಘೋಷಿಸಿದ್ದು, ನೇಪಾಳದ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಮಿಥಿಲಾ ಮತ್ತು ಮುಕ್ತಿನಾಥಕ್ಕೂ ಮೋದಿ ಭೇಟಿ ಕೊಟ್ಟರು. ಪವಿತ್ರ ಮುಕ್ತಿನಾಥ ಹಿಂದೂ ಮತ್ತು ಬೌದ್ಧರಿಗೆ ಸಮಾನ ಮಹತ್ವದ ತಾಣವಾಗಿದೆ. ಸಮುದ್ರಮಟ್ಟದಿಂದ 3710 ಮೀಟರ್ ಎತ್ತರದಲ್ಲಿ ಇರುವ ಈ ಕ್ಷೇತ್ರ ರುದ್ರರಮಣೀಯ. ಮಿಥಿಲಾದ ಎಲ್ಲೆಡೆ ಮೋದಿ ಸ್ವಾಗತಕ್ಕಾಗಿ ಕಟೌಟ್, ವಿಶೇಷ ಬರಹಗಳನ್ನು ಅಳವಡಿಸಲಾಗಿತ್ತು. ನೇಪಾಳ ಭಾರತದ ಜತೆ ಸ್ನೇಹ ವರ್ಧಿಸಿಕೊಳ್ಳಲು ಎಷ್ಟೊಂದು ಉತ್ಸುಕವಾಗಿದೆ ಎಂಬುದಕ್ಕೆ ಈ ಎಲ್ಲ ಚಿತ್ರಣಗಳು ಸ್ಪಷ್ಟ ನಿದರ್ಶನ ಒದಗಿಸಿದವು. ಅಲ್ಲಿನ ಮಾಧ್ಯಮಗಳು ಕೂಡ ಮೋದಿಯಾತ್ರೆ ಬೀರಿದ ಪರಿಣಾಮ, ಎರಡೂ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧ ವೃದ್ಧಿ ಕುರಿತಂತೆ ವಾಸ್ತವ ಮತ್ತು ಸಕಾರಾತ್ಮಕ ದೃಷ್ಟಿಕೋನದ ವರದಿಗಳನ್ನು ಪ್ರಕಟಿಸಿದವು, ಪ್ರಸಾರ ಮಾಡಿದವು. ವಿಶೇಷವಾಗಿ, ನೇಪಾಳದ ಮದೇಶಿ-ತರಾಯ್ ಸಮುದಾಯದಲ್ಲಿ ಹೊಸ ಭರವಸೆ ಮೂಡಿದೆ. ಏಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಅವರನ್ನು ನೇಪಾಳದಲ್ಲಿ ದ್ವಿತೀಯ ದರ್ಜೆ ನಾಗರಿಕರಂತೆ ನೋಡಲಾಗುತ್ತಿದ್ದು, ಈ ತಾರತಮ್ಯ ನಿವಾರಣೆಯಾಗುವ ಆಶಾವಾದ ಸೃಷ್ಟಿಯಾಗಿದೆ.

ನೇಪಾಳದ ಲೇಖಕ, ರಾಜಕೀಯ ನೇತಾರ ರಾಕೇಶ ಶರ್ಮಾ ಹೇಳುವಂತೆ, ಮದೇಶಿ ಆಂದೋಲನ ನೇಪಾಳಿ ಆತ್ಮದ ಅಭಿವ್ಯಕ್ತಿಯಾಗಿತ್ತು. ಮೋದಿ ಭೇಟಿ ನೇಪಾಳದ ಮದೇಶಿ-ತರಾಯ್ ಸಮುದಾಯದಲ್ಲಿ ವಿಶ್ವಾಸ ಮೂಡಿಸಿದೆ. ಚೀನಾದ ಆಕ್ರಮಕ ಮನೋಭಾವ ಮತ್ತು ಅದರ ಚಾಣಾಕ್ಷ ನಡೆಗಳು ನೇಪಾಳದ ಗಮನಕ್ಕೂ ಬಂದಿದ್ದು, ಹಳೇ ಮಿತ್ರ ಭಾರತವನ್ನು ನಂಬಿ ನಡೆದರೆ ಸೂಕ್ತ ಎಂಬ ಅಭಿಪ್ರಾಯಗಳು ಅಲ್ಲಿನ ರಾಜನೀತಿಯಲ್ಲಿ ಹೊರಹೊಮ್ಮಿವೆ. ಈ ಅರಿವಿನ ಆಧಾರದ ಮೇಲೆ ನೇಪಾಳ ಮುಂದುವರಿದರೆ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳು ನಿಜಕ್ಕೂ ಹೊಸ ಸ್ವರೂಪ ಪಡೆದು, ಬಲಿಷ್ಠಗೊಳ್ಳುವುದರಲ್ಲಿ ಅನುಮಾನವಿಲ್ಲ.

(ಲೇಖಕರು ನಿಕಟಪೂರ್ವ ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)

Leave a Reply

Your email address will not be published. Required fields are marked *

Back To Top