Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಗೊತ್ತುಗುರಿ, ಸ್ಪಷ್ಟ ಕಾರ್ಯಸೂಚಿ ಇಲ್ಲದ ಮೈತ್ರಿಕೂಟ

Monday, 04.06.2018, 3:04 AM       No Comments

ವಿರೋಧಕ್ಕಾಗಿ ವಿರೋಧ ಎಂಬ ನೀತಿ ಬೇಡ. ಕರ್ನಾಟಕದಲ್ಲಿ ಜನಮತವನ್ನು ಅವಮಾನಿಸಲಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಅಪವಿತ್ರ ಮೈತ್ರಿ ಏರ್ಪಟ್ಟಿದೆ. ಪ್ರತಿಪಕ್ಷಗಳು ಸ್ವಾರ್ಥಕ್ಕಾಗಿ ‘ಒಗ್ಗಟ್ಟಿ’ನ ಪ್ರಹಸನ ನಡೆಸಿದ್ದು, ಮುಂದಿನ ದಿನಗಳಲ್ಲಿ ಇದರ ಸ್ಪಷ್ಟಚಿತ್ರಣ ದೊರೆಯಲಿದೆ.

ಕೆಲ ದಿನಗಳ ಹಿಂದಷ್ಟೇ ಎಚ್.ಡಿ. ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಚುನಾವಣಾ ಪ್ರಚಾರದುದ್ದಕ್ಕೂ ಅವರು ಕಾಂಗ್ರೆಸ್ ಪಕ್ಷವನ್ನು ಮತ್ತು ಕಾಂಗ್ರೆಸ್ ಸರ್ಕಾರವನ್ನು ತೆಗಳಿದರು. ಈಗ ಆ ಕಾಂಗ್ರೆಸ್ ಸರ್ಕಾರಕ್ಕಿಂತ ಒಳ್ಳೆ ಆಡಳಿತ ನೀಡಲಿ ಎಂಬುದು ಆಶಯ. ಯಾವುದೇ ಕಾರಣಕ್ಕೂ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಘಂಟಾಘೋಷವಾಗಿ ಹೇಳಿದ್ದ ಕುಮಾರಸ್ವಾಮಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತಿದ್ದಂತೆ, ಕಾಂಗ್ರೆಸ್​ನ ‘ಕೈ’ ಹಿಡಿದು ರಾಜಭವನದತ್ತ ದೌಡಾಯಿಸಿದರು. ಮುಂದೆ, ಹಲವು ನಾಟಕೀಯ ವಿದ್ಯಮಾನಗಳು ನಡೆದವು.

ಕಡೆಗೂ, ಅತಿದೊಡ್ಡ ಪಕ್ಷ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಿದೆ. ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟ ಪಕ್ಷ ಆಡಳಿತ ನಡೆಸುತ್ತಿದೆ! ಎರಡನೇ ದೊಡ್ಡಪಕ್ಷ ಇದಕ್ಕೆ ಸಹಕಾರ ನೀಡುತ್ತಿದೆ! ಇಲ್ಲಿ ಯಾರು ಗೆದ್ದರು, ಯಾರು ಸೋತರು…? ಗೊಂದಲ ಬಗೆಹರಿದಿಲ್ಲ. ಕಾರಣ, ಜನ ಹೆಚ್ಚು ಒಲವು ತೋರಿದ್ದು ಬಿಜೆಪಿಯೆಡೆಗೆ. ಈಗ ಆಡಳಿತ ನಡೆಸುತ್ತಿರುವುದು ಜೆಡಿಎಸ್-ಕಾಂಗ್ರೆಸ್. 104 ಸ್ಥಾನಗಳನ್ನು ಪಡೆದರೂ ಬಿಜೆಪಿ ಅಧಿಕಾರದಿಂದ ವಂಚಿತವಾಗಿದೆ. ಕರ್ನಾಟಕದ ಈ ಬೆಳವಣಿಗೆಗಳು ರಾಷ್ಟ್ರಮಟ್ಟದಲ್ಲಿ ಕೂಡ ಚರ್ಚೆಗೆ ಗ್ರಾಸವಾಗಿವೆ.

ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭದ ದಿನವನ್ನು ಭವಿಷ್ಯದಲ್ಲಿ ‘ಮೋದಿ ವಿರೋಧಿ ಏಕತಾ ದಿವಸ್’ ಅಂತ ಆಚರಿಸಿದರೂ ಅಚ್ಚರಿ ಪಡಬೇಕಿಲ್ಲ! ರಾಜಕೀಯದಲ್ಲಿ ಮತ್ತೆ ನೆಲೆ ಹುಡುಕಲು ಹೊರಟವರು, ಜನರಿಂದ ತಿರಸ್ಕೃತಗೊಂಡವರು, ಪರಸ್ಪರ ವಾಚಾಮಗೋಚರವಾಗಿ ಬೈದುಕೊಂಡವರು… ಹೀಗೆ ಇವರೆಲ್ಲ ಒಂದಾಗಿ ‘ಗೆಲುವಿನ ನಗೆ’ ಬೀರಿದರು. ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಮತ್ತು ಮಾಯಾವತಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಸಿಪಿಎಂನ ಸೀತಾರಾಂ ಯೆಚೂರಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನಿಕಟಪೂರ್ವ ಅಧ್ಯಕ್ಷೆ ಸೋನಿಯಾ ಗಾಂಧಿ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆರ್​ಜೆಡಿಯ ತೇಜಸ್ವಿ ಯಾದವ್…. ಇವರೆಲ್ಲ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ‘ಪ್ರತಿಪಕ್ಷಗಳ ಏಕತೆ’ಯನ್ನು ಸಾರಿದರು.

ಇಷ್ಟು ದಿನ ಒಬ್ಬರಿಗೊಬ್ಬರು ಟೀಕಿಸಿ, ತೆಗಳುತ್ತಿದ್ದವರು ಹೀಗೆ ಏಕಾಏಕಿ ಒಂದಾಗಿದ್ದಕ್ಕೆ ಕಾರಣವೇನು? ಬೇರೇನೂ ಅಲ್ಲ, ಮೋದಿಭಯ ಸ್ವಾಮೀ ಮೋದಿಭಯ! ಬಿಜೆಪಿ ಹಾಗೂ ಅದರ ಮೈತ್ರಿಕೂಟ ಈಗ 20 ರಾಜ್ಯಗಳಲ್ಲಿ ಸರ್ಕಾರ ಹೊಂದಿದ್ದು, 2019ರ ಲೋಕಸಭಾ ಚುನಾವಣೆಯಲ್ಲೂ ‘ಮೋದಿ ಅಲೆ’ ಮುಂದುವರಿಯುವ ಸ್ಪಷ್ಟ ಲಕ್ಷಣಗಳು ಗೋಚರಿಸಿವೆ. ಹಾಗಾಗಿಯೇ, ಇವರು ಧೃತಿಗೆಟ್ಟಿದ್ದಾರೆ. ಅದಕ್ಕೆಂದೆ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ಮಾಡಲು ಮೋದಿವಿರೋಧಿ ಗುಂಪು ಒಂದಾಗಿದೆ.

ಕರ್ನಾಟಕದ ಈ ಪ್ರಯೋಗವನ್ನು ಲೋಕಸಭಾ ಚುನಾವಣೆಗೂ ಮುಂದುವರಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ. ಹಾಗಾಗಿ, ಬರುವ ಲೋಕಸಭಾ ಚುನಾವಣೆಯ ಕಣ ಮತ್ತಷ್ಟು ಜಿದ್ದಾಜಿದ್ದಿಯಿಂದ ಕೂಡಿರಲಿದ್ದು, ಕುತೂಹಲ ಕೆರಳಿಸಲಿದೆ. ಭಾರತದ ರಾಜನೀತಿಯಲ್ಲಿ ಇದು ಹೊಸದೇನಲ್ಲ. ತೃತೀಯ ರಂಗದ ಆಲಾಪ-ಪ್ರಲಾಪ ಆಗೊಮ್ಮೆ-ಈಗೊಮ್ಮೆ ಕೇಳಿಬರುತ್ತದೆ. ಇವರ ಸಭೆ ಆಯೋಜನೆಗೊಳ್ಳುವುದಕ್ಕೂ ಮುಂಚೆಯೇ ಪ್ರಧಾನಿ ಸ್ಥಾನಕ್ಕೆ ಮೂರ್ನಾಲ್ಕು ಅಭ್ಯರ್ಥಿಗಳು ಹುಟ್ಟಿಕೊಳ್ಳುತ್ತಾರೆ. ಕಡೆಗೆ, ಸಭೆ ಆಯೋಜಿಸಿದವರೇ ಸಭೆಗೆ ಗೈರಾಗುತ್ತಾರೆ. ಬಂದ ಬೆರಳೆಣಿಕೆ ನಾಯಕರು ಫೋಟೋಗೆ ಪೋಸ್ ಕೊಟ್ಟು ತೆರಳುತ್ತಾರೆ. ಆದರೆ, ಇಂಥ ಮೈತ್ರಿಕೂಟಕ್ಕೆ ಸ್ಪಷ್ಟವಾದ ಚಿಂತನೆ, ಪ್ರಣಾಳಿಕೆ, ತತ್ತ್ವಸಿದ್ಧಾಂತ ಯಾವುದೂ ಇಲ್ಲ. ತಮ್ಮ ವಿರೋಧಿಗಳು ಅಧಿಕಾರಕ್ಕೆ ಬರದಂತೆ ತಡೆಯುವುದಷ್ಟೇ ಇವರ ಏಕಸೂತ್ರ.

ಕರ್ನಾಟಕದಲ್ಲಿ ಏನಾಯಿತು ನೋಡಿದ್ದೀರಿ. ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ಸಿಗರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಅವಮಾನಿಸಿದರು. ಎಷ್ಟರ ಮಟ್ಟಿಗೆ ಎಂದರೆ ಸಿದ್ದರಾಮಯ್ಯ ಅವರು ದೇವೇಗೌಡರನ್ನು ಏಕವಚನದಲ್ಲಿ ಸಂಬೋಧಿಸಿದರು. ಆದರೆ, ಕರ್ನಾಟಕದಲ್ಲಿ ಪ್ರಚಾರ ಕೈಗೊಂಡ ನರೇಂದ್ರ ಮೋದಿ ಅವರು ದೇವೇಗೌಡರ ಹಿರಿತನವನ್ನು, ಮುತ್ಸದ್ದಿತನವನ್ನು ಶ್ಲಾಘಿಸಿ, ಗೌರವಿಸಿದರು. ಕುಮಾರಸ್ವಾಮಿ ಅವರಂತೂ ತಮ್ಮ ಪ್ರಚಾರ ಭಾಷಣಗಳಲ್ಲಿ ಸಿದ್ದರಾಮಯ್ಯನವರನ್ನು ತೆಗಳುವುದನ್ನೇ ಕಾರ್ಯಸೂಚಿಯಂತೆ ಮಾಡಿಕೊಂಡರು.

ಮೇ 15ರಂದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್-ಜೆಡಿಎಸ್ ತರಾತುರಿಯಲ್ಲಿ ಒಂದಾದವು. ಈ ಅಪವಿತ್ರ ಮೈತ್ರಿ ಬಗ್ಗೆ ಜನರು ಏನೆಂದುಕೊಳ್ಳುತ್ತಾರೆ ಎಂಬ ಬಗ್ಗೆ ಕೊಂಚವೂ ಯೋಚನೆ ಮಾಡಲಿಲ್ಲ. ಕಾರಣ, ಬಿಜೆಪಿ ಅಧಿಕಾರಕ್ಕೆ ಬಂದುಬಿಟ್ಟರೆ ತಮ್ಮೆಲ್ಲ ಅವ್ಯವಹಾರಗಳು, ಭ್ರಷ್ಟಾಚಾರಗಳು ಆಚೆಗೆ ಬಂದುಬಿಡುತ್ತವೆ ಎಂಬ ಆತಂಕ.

ನಿಲುವು ಮುಂದಿಡಲಿ: ರಾಷ್ಟ್ರ ರಾಜಕಾರಣದಲ್ಲೂ ಮೋದಿ ಭಯದಿಂದ ಪ್ರತಿಪಕ್ಷಗಳು ಒಂದಾಗುತ್ತಿವೆ ಎಂಬುದು ಗೊತ್ತಿರುವಂಥದ್ದೇ. ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ, ಸಂಸದೀಯ ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಗೆ ಬಲಿಷ್ಠ ಪ್ರತಿಪಕ್ಷ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳಿಗೆ ತಮ್ಮದೇ ಆದ ಮಹತ್ವವಿದೆ. ಆದರೆ, ಹೀಗೆ ಒಟ್ಟಾಗುತ್ತಿರುವ ಪ್ರತಿಪಕ್ಷಗಳು ರಾಷ್ಟ್ರವಿಕಾಸದ ಬಗೆಗಿನ ತಮ್ಮ ದೃಷ್ಟಿಕೋನ ಮಂಡಿಸಬೇಕಲ್ಲವೆ? ಮೋದಿ ಉತ್ತಮ ಆಡಳಿತ ನೀಡಲು ವಿಫಲರಾಗಿದ್ದಾರೆ ಎಂದಾದರೆ ತಾವು ಯಾವ ಮಾದರಿಯ ಆಡಳಿತ ನೀಡಲು ಚಿಂತನೆ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಬೇಕಲ್ಲವೇ? ದೇಶದ ವಿವಿಧ ರಂಗಗಳ, ಸಮಸ್ಯೆಗಳ ಕುರಿತಾಗಿ ಇವರ ಅಭಿಪ್ರಾಯವೇನು? ಮೋದಿ ಸರ್ಕಾರವನ್ನು ವಿರೋಧಿಸಲು ಇರುವ ಬಲವಾದ ಕಾರಣಗಳೇನು? ಇದ್ಯಾವುದನ್ನೂ ಸ್ಪಷ್ಟಪಡಿಸದೆ ‘ಒಗ್ಗಟ್ಟು’ ಅಂತ ಹೇಳಿದರೆ ಏನರ್ಥ?

ಈ ಪಕ್ಷಗಳ, ನಾಯಕರ ವರ್ತನೆ ನೋಡಿದರೆ ಇವರ ‘ಒಗ್ಗಟ್ಟು’ ಕೇವಲ ಪರಸ್ಪರರ ಭ್ರಷ್ಟಾಚಾರದ ಬಗ್ಗೆ ಮೌನ ತಳೆಯಲು, ಚುನಾವಣೆಗಳಲ್ಲಿ ಅಕ್ರಮಗಳನ್ನು ನಡೆಸಲು, ಟಿಕೆಟ್​ಗಳನ್ನು ಮಾರಾಟ ಮಾಡಿಕೊಳ್ಳಲು, ಅರಾಜಕತೆ ಪ್ರೋತ್ಸಾಹಿಸಲು, ಮೊದಲು ತೆಗಳಿ ಆಮೇಲೆ ಅಪ್ಪಿಕೊಳ್ಳಲು ಮಾತ್ರ ಎನ್ನುವಂತಿದೆ. ದುರದೃಷ್ಟ ಎಂದರೆ, ಜನತೆ ಇದನ್ನೆಲ್ಲ ಮೌನವಾಗಿ ನೋಡಬೇಕು, ಸಹಿಸಿಕೊಳ್ಳಬೇಕು. ಹೀಗೆ ಭಯಭೀತಗೊಂಡಿರುವ ವಿಪಕ್ಷಗಳ ಸಮೂಹ ಜನ-ಗಣ-ಮನವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ. ಕೇವಲ ಅವಕಾಶವಾದಿತನಕ್ಕೆ ಒಂದಾಗಿರುವ ಇವರಿಂದ ದೇಶದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತ ತುಂಬ ದುರ್ಗಮ ಹಾದಿಯಲ್ಲಿ ಸಾಗಿ, ಆರ್ಥಿಕ ಭಯೋತ್ಪಾದನೆಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಆರ್ಥಿಕ ಭಯೋತ್ಪಾದನೆ ಪರಿಣಾಮ ಇಡೀ ಅರ್ಥವ್ಯವಸ್ಥೆಯೇ ನಲುಗಿಹೋಗಿತ್ತು. ನಕಲಿ ನೋಟು ದಂಧೆ, ಕಾಳಧನ ಸಂಗ್ರಹದಂಥ ಅಪಸವ್ಯಗಳಿಗೆ ನೋಟು ಅಮಾನ್ಯೀಕರಣ ಕೊಡಲಿಪೆಟ್ಟು ನೀಡಿಯಾಗಿದೆ. ಪರಿಣಾಮ, ಆರ್ಥಿಕ ಪ್ರಗತಿಯ ಪ್ರಕ್ರಿಯೆ ವೇಗ ಪಡೆದುಕೊಳ್ಳತೊಡಗಿದೆ. ಒಂದು ದೇಶ-ಒಂದು ತೆರಿಗೆ (ಜಿಎಸ್​ಟಿ) ಪದ್ಧತಿಯಿಂದ ಪಾರದರ್ಶಕತೆ ಹೆಚ್ಚಿ, ತೆರಿಗೆ ಸಂಗ್ರಹ ಹೆಚ್ಚಳಗೊಂಡಿದೆ. ಈಗ ಕಾಳಧನ ಮುಚ್ಚಿಡಲು ರಹಸ್ಯತಾಣಗಳು ಉಳಿದುಕೊಂಡಿಲ್ಲ, ತೆರಿಗೆ ಕದಿಯುವ ಮಾರ್ಗಗಳು ಗೋಚರಿಸುತ್ತಿಲ್ಲ.

ಈ ಎಲ್ಲ ಬದಲಾವಣೆ ಮತ್ತು ಬೆಳವಣಿಗೆಗಳನ್ನು ಅಂತಾರಾಷ್ಟ್ರೀಯ ಸಮುದಾಯ ತದೇಕಚಿತ್ತದಿಂದ ಗಮನಿಸುತ್ತಿದೆ. ಹಾಗಾಗಿಯೇ, ಜಾಗತಿಕ ರಂಗದಲ್ಲಿ ಭಾರತದ ವರ್ಚಸ್ಸು ಹೆಚ್ಚಿದೆ. ಆರ್ಥಿಕ ಸುಧಾರಣೆಯಿಂದ ಹಿಡಿದು ಭಯೋತ್ಪಾದನೆ ನಿಗ್ರಹದವರೆಗಿನ ಕ್ರಮಗಳವರೆಗೆ ಜಗತ್ತು ಭಾರತದತ್ತ ನೋಡುತ್ತಿದೆ. ಮಾತ್ರವಲ್ಲ, ವಿಶ್ವದ ಬಲಾಢ್ಯ ಶಕ್ತಿಗಳು ಭಾರತದ ಸಹಭಾಗಿತ್ವವನ್ನು, ಸಹಕಾರವನ್ನು ಹೆಚ್ಚೆಚ್ಚು ಬಯಸುತ್ತಿವೆ. ತುಂಬ ದೀರ್ಘಾವಧಿಯ ನಂತರ ಭಾರತ ಮತ್ತೆ ಇಂಥ ಗೌರವಕ್ಕೆ, ಹಿರಿಮೆಗೆ ಪಾತ್ರವಾಗುತ್ತಿದೆ.

ದೇಶದಲ್ಲಿ ಕೋಟ್ಯಂತರ ಬಡಜನರಿಗೆ ಬ್ಯಾಂಕ್ ಖಾತೆಗಳು ಲಭ್ಯವಾಗಿವೆ. ಕೋಟ್ಯಂತರ ಮನೆಗಳ ತಾಯಂದಿರು ‘ಉಜ್ವಲಾ’ದ ಪ್ರಯೋಜನ ಪಡೆದು ಗ್ಯಾಸ್​ಒಲೆಗಳಲ್ಲಿ ಅಡುಗೆ ಮಾಡುತ್ತಿದ್ದಾರೆ. ಜನೌಷಧ ಕೇಂದ್ರಗಳ ಮೂಲಕ ಅಗ್ಗದ ದರದಲ್ಲಿ ಔಷಧಗಳು ದೊರೆಯುತ್ತಿವೆ. ಹೀಗಿರುವಾಗ, ದೇಶದ ಚಿತ್ರಣ ಬದಲಾಗುತ್ತಿರುವಾಗ ಅಭಿವೃದ್ಧಿಯ ಕಾರ್ಯಸೂಚಿ ಮೇಲೆಯೇ ಚರ್ಚೆಗಳು ನಡೆಯಬೇಕು. ಪ್ರತಿಪಕ್ಷಗಳು ಈ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು. ಹಿಂದಿನ ಬಾಗಿಲಿನಿಂದ ಅಧಿಕಾರ ಹಿಡಿಯುವ, ಮೋದಿಯನ್ನು ವಿರೋಧಿಸಲು ಚರ್ಚ್​ಗಳಲ್ಲಿ ಪ್ರಾರ್ಥಿಸುವ ನಡೆಗಳಿಂದ ಯಾರಿಗೂ ಹಿತವಾಗದು.

ಭಾರತದ ರಾಜನೀತಿಯು ಮೌಲ್ಯಾಧಾರಿತವಾಗಿ, ಜನರ ಕಷ್ಟಕೋಟಲೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಅಭಿವೃದ್ಧಿಯ ಮಂತ್ರದೊಂದಿಗೆ ರಾಷ್ಟ್ರವನ್ನು ಬಲಾಢ್ಯವಾಗಿಸುವ ನಿಟ್ಟಿನಲ್ಲಿ ಮುಂದುವರಿಯಲಿ. ಇಂಥ ಆರೋಗ್ಯಕರ ರಾಜನೀತಿಯಿಂದ ಮಾತ್ರ ಉತ್ಕರ್ಷ ಸಾಧ್ಯ ಎಂಬ ವಾಸ್ತವವನ್ನು ಪ್ರತಿಪಕ್ಷಗಳು ಮನಗಂಡಲ್ಲಿ ಪ್ರಜಾತಂತ್ರದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಅಲ್ಲವೇ?

(ಲೇಖಕರು ನಿಕಟಪೂರ್ವ ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)

Leave a Reply

Your email address will not be published. Required fields are marked *

Back To Top