ರಾಜ್ಯ ಬಾಲಕಿಯರ ಸೈಕ್ಲಿಂಗ್ ತಂಡಕ್ಕೆ ಚಿನ್ನ

ವಿಜಯಪುರ: ರಾಜಸ್ಥಾನದ ಜೈಪುರದಲ್ಲಿ ಭಾನುವಾರ ಮುಕ್ತಾಯ ಗೊಂಡ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್​ಷಿಪ್​ನಲ್ಲಿ ಕರ್ನಾಟಕದ ಸೈಕ್ಲಿಸ್ಟ್​ಗಳು ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಪಡೆದಿದ್ದಾರೆ. ಒಟ್ಟಾರೆ 2 ಚಿನ್ನ, 6 ಬೆಳ್ಳಿ ಮತ್ತು 8 ಕಂಚಿನ ಪದಕಗಳನ್ನು ಪಡೆಯುವುದರೊಂದಿಗೆ ಕೊನೆಯ ದಿನದ ಅಂತ್ಯಕ್ಕೆ ಒಟ್ಟು 16 ಪದಕಗಳು ರಾಜ್ಯದ ಮಡಿಲಿಗೆ ಸೇರಿವೆ.

18 ವರ್ಷದೊಳಗಿನ ಬಾಲಕಿಯರ ತಂಡವು 4 ಕಿ.ಮೀ. ಟೀಂ ಪರ್ಶ್ಯೂಟ್​ನ ಫೈನಲ್​ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ತಂಡದಲ್ಲಿ ದಾನಮ್ಮ ಚಿಚಖಂಡಿ, ಸಹನಾ ಕುಡಿಗಾನೂರ, ಕೀರ್ತಿ ರಂಗಸ್ವಾಮಿ ಮತ್ತು ಸೌಮ್ಯ ಅಂತಾಪುರ ಅತ್ಯಂತ ಹೊಂದಾಣಿಕೆಯಿಂದ ಪೆಡಲ್ ತುಳಿದು 5 ನಿಮಿಷ 56 ಸೆಕೆಂಡ್​ನಲ್ಲಿ ಗುರಿ ತಲುಪಿದರು.

ಪುರುಷರ ವಿಭಾಗದಲ್ಲಿ 30 ಕಿ. ಮೀ. ಪಾಯಿಂಟ್ ರೇಸ್​ನಲ್ಲಿ ಒಟ್ಟು 37 ಪಾಯಿಂಟ್ ಕಲೆ ಹಾಕಿದ ಬಾಗಲಕೋಟೆ ತಾಲೂಕಿನ ತುಳಸಿಗೇರಿಯ ವೆಂಕಪ್ಪ ಕೆಂಗಲಗುತ್ತಿ ಬೆಳ್ಳಿಯ ಪದಕಕ್ಕೆ ಮುತ್ತಿಕ್ಕಿದರು. ಇಲ್ಲಿಯವರೆಗೆ ವೆಂಕಪ್ಪ ಕೆಂಗಲಗುತ್ತಿ ಈ ಚಾಂಪಿಯನ್​ಷಿಪ್​ನಲ್ಲಿ ವೈಯಕ್ತಿಕವಾಗಿ 3 ಬೆಳ್ಳಿ ಮತ್ತು 1 ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಕಳೆದ ವರ್ಷ 2018ರ ಜ.2ರಿಂದ 6 ರವರೆಗೆ ನವದೆಹಲಿಯ ಇಂದಿರಾಗಾಂಧಿ ಇಂಡೋರ್ ಸೈಕ್ಲಿಂಗ್ ವೆಲೋಡ್ರೋಮನಲ್ಲಿ ಜರುಗಿದ 70ನೇ ಹಿರಿಯರ 47ನೇ ಕಿರಿಯರ ಮತ್ತು 33ನೇ ಅತೀ ಕಿರಿಯರ ರಾಷ್ಟ್ರೀಯ ಟ್ರಾ್ಯಕ್ ಸೈಕ್ಲಿಂಗ್ ಚಾಂಪಿಯನ್​ಷಿಪ್​ನಲ್ಲಿ ಕರ್ನಾಟಕದ ಸೈಕ್ಲಿಸ್ಟ್​ಗಳು ಒಟ್ಟು 5 ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳೊಂದಿಗೆ ಒಟ್ಟು 11 ಪದಕಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದರು.