ತಾಳ್ಮೆ ಇದ್ದಲ್ಲಿ ವಿಶ್ವ ಗೆಲ್ಲಲು ಸಾಧ್ಯ

ವಿಜಯಪುರ: ತಾಳ್ಮೆ ಇದ್ದರೆ ಇಡೀ ವಿಶ್ವವನ್ನೇ ಗೆಲ್ಲಬಹುದು ಎಂಬುವುದಕ್ಕೆ ವೇಮನರೇ ನಿದರ್ಶನ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ನಗರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಂಗಲ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೇಮನರು ಅನೇಕ ಸ್ಥಳಗಳಿಗೆ ತೆರಳಿ ಒಂದು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ತಮ್ಮ ಪ್ರವಚನದ ಮೂಲಕ ಪರಿವರ್ತನೆಯ ಹರಿಕಾರರಾಗಿದ್ದಾರೆ. ಮುಂದೊಂದು ದಿನ ವೇಮನರು ಹೆಮ್ಮರವಾಗಿ ಪರಿವರ್ತನೆಯ ನಕ್ಷತ್ರವಾಗಿ ಮಿನುಗಲಿದ್ದಾರೆ ಎಂದು ಹೇಳಿದರು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಎಲ್ಲ ಮಹನೀಯರ, ಮಹಾ ಪುರುಷರನ್ನು ನಾವು ಒಂದೊಂದು ಜಾತಿಗೆ ಸೀಮಿತ ಗೊಳಿಸಿದ್ದೇವೆ. ಇದು ಉತ್ತಮ ಬೆಳವಣಿಗೆ ಅಲ್ಲ. ವೇಮನರ ಚಿಂತನೆಗಳ ಅವಶ್ಯ ಇಡೀ ಜಗತ್ತಿಗಿದೆ. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದರ ಬದಲು ಎಲ್ಲ ಜಾತಿ-ಜನಾಂಗದವರು ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕರ್ನಾಟಕಕ್ಕೆ ವೇಮನರನ್ನು ಪರಿಚಯಿಸಿದವರು ಎಸ್. ಆರ್. ಪಾಟೀಲರು. ವೇಮನರ ವಚನ ಸಾಹಿತ್ಯವನ್ನು ಒಂದು ಕ್ರಾಂತಿಯಂತೆ ಹೊರಹೊಮ್ಮಿಸಿದ್ದಾರೆ. ಅದರಲ್ಲಿ .ಗು. ಹಳಕಟ್ಟಿ, ಮಹಾಂತ ಗುಲಗಂಜಿಯವರ ಪರಿಶ್ರಮ ಅವಿಸ್ಮರಣೀಯ. ವೇಮನರ ಮತ್ತು ತತ್ವಜ್ಞಾನಿಗಳ ಕುರಿತು ಜ್ಞಾನ ಹೆಚ್ಚಿಸಿಕೊಳ್ಳಲು ಗ್ರಂಥಾಲಯಗಳು ನಿರ್ಮಾಣವಾಗಬೇಕಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ಮಹಾಂತ ಗುಲಗಂಜಿ ಹೇಮರಡ್ಡಿ ಮಲ್ಲಮ್ಮ ಸಂಸ್ಥೆಗೆ 150 ಪುಸ್ತಕಗಳನ್ನು ಕೊಡುಗೆ ನೀಡಿದರು. ಇದೇ ವೇಳೆ ಗಣ್ಯರನ್ನು ಸನ್ಮಾನಿಸಲಾಯಿತು. ಗದಗದ ಅರುಣೋದಯ ಕಲಾತಂಡದವರು ಜಾನಪದ ಕಲೆ ಪ್ರದರ್ಶಿಸಿದರು.

ತಹಸೀಲ್ದಾರ್ ಮೋಹನ ಕುಮಾರಿ, ಎಚ್.ಆರ್.ಬಿರಾದಾರ, ಡಾ.ಕರಿಗೌಡ, ಎಚ್.ಆರ್.ಮಾಚಪ್ಪ, ಪ್ರೇಮಾನಂದ ಬಿರಾದಾರ, ಲಕ್ಷ್ಮಿ ದೇಸಾಯಿ, ಗೌರಮ್ಮ ರೆಡ್ಡಿ, ಗೀತಾ ದೇಸಾಯಿ, ವಿದ್ಯಾವತಿ ಎಚ್.ಬಿ., ಸುರೇಶ ದೇಸಾಯಿ ಇತರರು ಉಪಸ್ಥಿತರಿದ್ದರು.