ತರುಣಿಯರ ಕನಸುಗಳ ಯಾನ

ನಟ/ನಿರ್ಮಾಪಕ ಜೈಜಗದೀಶ್ ಮತ್ತು ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ದಂಪತಿ ತಮ್ಮ ಪುತ್ರಿಯರಾದ ವೈಭವಿ, ವೈಸಿರಿ, ವೈನಿಧಿ ಅವರನ್ನು ‘ಯಾನ’ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಒಂದೇ ಕುಟುಂಬದ ಮೂವರು ಒಟ್ಟಿಗೆ ಸಿನಿಮಾಗೆ ಬರುತ್ತಿರುವುದು ಮತ್ತು ಆ ಸಿನಿಮಾವನ್ನು ತಾಯಿಯೇ ನಿರ್ದೇಶನ ಮಾಡುತ್ತಿರುವುದು ಬಹುಶಃ ಇದೇ ಮೊದಲಿರಬೇಕು. ಯುವಜನಾಂಗವನ್ನೇ ಗಮನದಲ್ಲಿಟ್ಟುಕೊಂಡು ಸಿದ್ಧವಾಗಿರುವ ‘ಯಾನ’ ಚಿತ್ರವು (ಜು.12) ಶುಕ್ರವಾರ ತೆರೆಗೆ ಬರುತ್ತಿದೆ. ಈ ಕುರಿತು ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ಸಿನಿವಾಣಿ ಜತೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

| ಅವಿನಾಶ್ ಜಿ. ರಾಮ್, ಬೆಂಗಳೂರು,

‘ಇದೆಲ್ಲ ಒಂದು ರೀತಿಯ ಮ್ಯಾಜಿಕ್ ಅನ್ನಿಸ್ತಿದೆ. ಹಿಂದೆ ತಿರುಗಿ ನೋಡಿದಾಗ, ಹೇಗಾಯ್ತು ಅಂತಾನೇ ಗೊತ್ತಾಗ್ತಿಲ್ಲ’- ‘ಯಾನ’ ಸಿನಿಮಾ ಆಗಿದ್ದರ ಬಗ್ಗೆ ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ನೀಡುವ ಒನ್​ಲೈನ್ ವ್ಯಾಖ್ಯಾನವಿದು. ತಮ್ಮ ಮೂವರು ಪುತ್ರಿಯರಾದ ವೈಭವಿ, ವೈಸಿರಿ, ವೈನಿಧಿ ಅವರನ್ನು ಈ ಒಂದೇ ಸಿನಿಮಾದ ಮೂಲಕ ಅವರು ಲಾಂಚ್ ಮಾಡುತ್ತಿದ್ದಾರೆ. ಇದರ ಕಥೆ ಬರೆಯುವಾಗ ಮನೆಯಲ್ಲಿ ಓಡಾಡಿಕೊಂಡಿದ್ದ ಮಕ್ಕಳೇ ನಾಯಕಿಯರಾಗಿ ಆಯ್ಕೆ ಆದರಂತೆ. ‘ಮೊದಲು ‘ಯಾನ’ದ ಕಥೆ ನನ್ನೊಳಗೆ ಮೂಡಿದಾಗ ನನ್ನ ಸುತ್ತಮುತ್ತವೇ ಓಡಾಡಿಕೊಂಡಿದ್ದ ನನ್ನ ಮಕ್ಕಳು ನನಗೆ ಕಾಣಿಸಿದರು. ಕಥೆಯಲ್ಲಿ ಇದ್ದ ಅಂಶಗಳಿಗೆ ತಕ್ಕಂತೆ ಮೂವರು ಸೂಕ್ತ ಎನಿಸುವುದಕ್ಕೆ ಆರಂಭವಾಯಿತು. ಅವರು ಕೂಡ ಯೂತ್ಸ್ ಆಗಿದ್ದರಿಂದ ಕಥೆ ಬರೆಯುವುದಕ್ಕೂ ಮಕ್ಕಳೇ ಸ್ಪೂರ್ತಿ ಆದರು’ ಎನ್ನುತ್ತಾರೆ ವಿಜಯಲಕ್ಷ್ಮೀ. ಈ ಹಿಂದೆ ಸಾಕಷ್ಟು ಸಿನಿಮಾಗಳಿಗೆ ವಿಜಯಲಕ್ಷ್ಮೀ ನಿರ್ದೇಶನ ಮಾಡಿದ್ದಾರೆ. ಆದರೆ, ಅಲ್ಲೆಲ್ಲ ಬೇರೆ ಬೇರೆ ಕಲಾವಿದರು ಬಣ್ಣ ಹಚ್ಚಿದ್ದರು. ಈ ಬಾರಿ ಪುತ್ರಿಯರಿಗೇ ನಿರ್ದೇಶನ ಮಾಡಬೇಕೆಂದಾಗ ಅವರಿಗೆ ಅಂಥ ವ್ಯತ್ಯಾಸವೇನು ಕಾಣಿಸಿಲ್ಲವಂತೆ. ‘ಮನೆಯವರೇ ಕಲಾವಿದರಾಗಿದ್ದಾಗ, ಅಲ್ಲಿ ಒಂದು ಸಲುಗೆ ಇದ್ದೇ ಇರುತ್ತದೆ. ಅದುಬಿಟ್ಟರೆ, ನಾನು ಬರೆದ ಪಾತ್ರಗಳಿಗೆ ಯಾರೇ ಆಗಲಿ ಜೀವ ತುಂಬಲೇ ಬೇಕು. ಅದು ನಮ್ಮ ಮನೆಯವರಾಗಲೀ, ಬೇರೆಯವರಾಗಲಿ. ಯುವಜನತೆಗೆ ತಕ್ಕಂಥ ಕಥೆ ಬರೆದಿದ್ದೇನೆ, ಅವರಿಗೆ ಹತ್ತಿರವಾಗುವಂತಹ ಕಥೆ ಇದಾಗಿದೆ’ ಎಂದು ಕಥೆಯ ಗುಟ್ಟನ್ನೂ ಬಿಚ್ಚಿಡುತ್ತಾರೆ ನಿರ್ದೇಶಕರು.

40 ಪ್ರತಿಭಾವಂತರಿಗೆ ಅವಕಾಶ

‘ಯಾನ’ ಚಿತ್ರದಲ್ಲಿ ಬರೀ ಜೈಜಗದೀಶ್-ವಿಜಯಲಕ್ಷ್ಮೀ ಪುತ್ರಿಯರು ಮಾತ್ರವಲ್ಲ, ಅವರ ಜತೆಗೆ ಇನ್ನೂ 40 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ‘ಯಾನ’ಕ್ಕಾಗಿ ರಾಜ್ಯದ ಅಂದಾಜು 1600 ಜನರಿಗೆ ಆಡಿಷನ್ ಮಾಡಿ, ಅದರಲ್ಲಿ 40 ಜನರನ್ನು ಆಯ್ಕೆ ಮಾಡಲಾಗಿದೆ. ಚಿತ್ರದ ಮೂವರು ಹೀರೋಗಳು ಸಹ ಆಡಿಷನ್ ಮೂಲಕವೇ ಆಯ್ಕೆಯಾಗಿರುವುದು. ‘ನಮ್ಮ ಮಕ್ಕಳ ಎದುರು ನಟಿಸಿರುವ ನಾಯಕ ನಟರು ಹೊಸಬರೇ. ನನ್ನ ಬರಹಗಾರರ ತಂಡ ಕೂಡ ಹೊಸಬರಿಂದಲೇ ಕೂಡಿದೆ. ಹಾಗಂತ, ಅನುಭವಿಗಳು ಇಲ್ಲವೆಂದಲ್ಲ. ಅನಂತ್ ನಾಗ್, ಸುಹಾಸಿನಿ ಮುಂತಾದವರು ಇದ್ದಾರೆ. ನಮ್ಮ ಪುತ್ರಿಯರಿಗೆ ನೀಡಿದಂತಹ ಸವಲತ್ತುಗಳನ್ನೇ ಉಳಿದ ಹೊಸ ಕಲಾವಿದರಿಗೂ ನೀಡಿದ್ದೇವೆ.

ಜತೆಗೆ ಯಾರಿಗೂ ಯಾವುದೇ ತರಬೇತಿ ನೀಡಿಲ್ಲ. ಯಾಕೆಂದರೆ, ನನಗೆ ನೈಜವಾದ ನಟನೆ ಬೇಕಾಗಿತ್ತು. ಅದಕ್ಕಾಗಿ ಸೆಟ್​ನಲ್ಲೇ ಎಲ್ಲರಿಗೂ ಸೀನ್​ಗಳ ಬಗ್ಗೆ ಹೇಳುತ್ತಿದ್ದೆವು. ಪೂರ್ವತಯಾರಿ ಆಗತ್ಯತೆ ಇರಲಿಲ್ಲ’ ಎಂದು ಮಾಹಿತಿ ನೀಡುತ್ತಾರೆ ವಿಜಯಲಕ್ಷ್ಮೀ.

ತೃಪ್ತಿ ಕೊಟ್ಟ ಸಿನಿಮಾವಿದು

ವಿಜಯಲಕ್ಷ್ಮೀ ಅವರಿಗೆ ‘ಯಾನ’ ಅತೀ ತೃಪ್ತಿ ನೀಡಿದ ಸಿನಿಮಾವಂತೆ. ಅಂದುಕೊಂಡಂತೆ ಸಿನಿಮಾ ಮೂಡಿಬಂದಿರುವುದೇ ಅದಕ್ಕೆ ಕಾರಣ. ಎಲ್ಲವು ಪ್ಲಾ್ಯನ್ ಪ್ರಕಾರವೇ ಆಗಿದ್ದರೆ ಇಷ್ಟೊತ್ತಿಗಾಗಲೇ ಈ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ, ಅದ್ಯಾಕೋ ತಡವಾಗುತ್ತಲೇ ಹೋಯಿತು. ‘ಚಿತ್ರೀಕರಣಕ್ಕೂ ಮುನ್ನ 45 ದಿನ ಪ್ಲಾ್ಯನ್ ಮಾಡಿಕೊಂಡಿದ್ದೆವು. ಆದರೆ, ಅದು 75-80 ದಿನಗಳನ್ನು ಮುಟ್ಟಿತು. ತಡವಾಗಿದ್ದಕ್ಕೆ ಸಾಕಷ್ಟು ಕಾರಣಗಳಿವೆ. ಇದರ ಜತೆಗೆ ಮಕ್ಕಳು ಓದುತ್ತಿದ್ದರು. ಮೂವರ ಕಾಲೇಜ್ ರಜೆಯನ್ನು ನೋಡಿಕೊಂಡು ಶೂಟಿಂಗ್ ಮಾಡಬೇಕಿತ್ತು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಜಗದೀಶ್​ಗೆ ತುಂಬ ಕಾಳಜಿ. ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗಬಾರದು ಎಂಬುದೇ ಅವರ ಮೊದಲ ಕಂಡಿಷನ್ ಆಗಿತ್ತು. ಹಾಗಾಗಿ, ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಕೆಲಸ ಆರಂಭಿಸಿದೆವು. ಈಗ ಮಕ್ಕಳು ತಮ್ಮ ಭುಜದ ಮೇಲೆ ಸಿನಿಮಾವನ್ನು ಇಟ್ಟುಕೊಂಡು ಸಾಗುತ್ತಿದ್ದಾರೆ. ಶಿಕ್ಷಣ-ಸಿನಿಮಾ ಹೀಗೆ ಎರಡು ದೋಣಿ ಮೇಲೆ ಕಾಲಿಟ್ಟು ಕೆಲಸ ಮಾಡುತ್ತಿದ್ದಾರೆ’ ಎಂದು ತಮ್ಮ ಪುತ್ರಿಯರ ಬಗ್ಗೆ ಮೆಚ್ಚುಗೆ ಮಾತನಾಡುತ್ತಾರೆ ಅವರು. ಈಗಾಗಲೇ ಮೈಸೂರು, ಹುಬ್ಬಳ್ಳಿ, ದಾವಣಗೆರೆ ಮುಂತಾದ ಕಡೆ ವೈಭವಿ, ವೈಸಿರಿ, ವೈನಿಧಿ ಮುಂದೆ ನಿಂತು ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಯುಜನತೆಯನ್ನು ಕೇಂದ್ರಿಕರಿಸಿ ಮಾಡಿರುವ ಸಿನಿಮಾ ಇದಾಗಿರುವುದರಿಂದ ಅವರಿಗೆ ಸಿನಿಮಾ ತಲುಪಬೇಕು ಎಂಬುದು ಚಿತ್ರತಂಡದ ಉದ್ದೇಶ. ಹಾಗಂತ, ಯಾವುದೋ ಒಂದು ವರ್ಗಕ್ಕೆ ಸಿನಿಮಾವನ್ನು ಸೀಮಿತ ಮಾಡುವುದು ವಿಜಯಲಕ್ಷ್ಮೀಗೆ ಇಷ್ಟವಿಲ್ಲ. ‘ಇಲ್ಲಿ ಎಲ್ಲ ರೀತಿಯ ಮನರಂಜನೆ ಇದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗಲಿದೆ. ಫ್ಯಾಮಿಲಿ ಪ್ರೇಕ್ಷಕರಿಗೆ ಈ ಸಿನಿಮಾ ಬಹುವಾಗಿ ಇಷ್ಟವಾಗಲಿದೆ. ಇಲ್ಲಿ ಯಾವುದೇ ಅಶ್ಲೀಲತೆ ಇಲ್ಲ. ಡಬಲ್ ಮೀನಿಂಗ್ ಸಂಭಾಷಣೆಯಂತೂ ಇಲ್ಲವೇ ಇಲ್ಲ’ ಎನ್ನುತ್ತಾರೆ ಅವರು.

ಮಕ್ಕಳ ಮೇಲೆ ಒತ್ತಡವಿಲ್ಲ

‘ಯಾನ’ ನಂತರ ವೈಭವಿ, ವೈಸಿರಿ, ವೈನಿಧಿ ಅವರ ಸಿನಿ ಬದುಕು ಯಾವ ರೀತಿ ಇರುತ್ತದೆ? ‘ಆ ಬಗ್ಗೆ ನಾವು ಪ್ಲಾ್ಯನ್ ಮಾಡಿಯೇ ಇಲ್ಲ’ ಎಂಬ ಉತ್ತರ ನೀಡುತ್ತಾರೆ ವಿಜಯಲಕ್ಷ್ಮೀ. ‘ಮಕ್ಕಳು ತಮ್ಮ ಇಷ್ಟದಂತೆ ಹೇಗೆ ಬೇಕಾದರೂ ಇರಬಹುದು. ‘ಯಾನ’ ಮೂಲಕ ಅವರ ಸಿನಿಬದುಕಿಗೆ ನಾವು ನಾಂದಿ ಹಾಡಿದ್ದೇವೆ. ಮುಂದೆ ಯಾವ ರೀತಿ ವೃತ್ತಿಜೀವನವನ್ನು ಬೆಳೆಸಿಕೊಳ್ಳಬೇಕು ಎಂಬುದು ಅವರಿಗೆ ಬಿಟ್ಟಿದ್ದು. ಈ ಸಿನಿಮಾ ತೆರೆಕಂಡ ಮೇಲೆ ಅವರಿಗೆ ಇನ್ನಷ್ಟು ಅವಕಾಶ ಬರಬಹುದು. ಒಳ್ಳೆಯ ನಿರ್ದೇಶಕರು, ಕಥೆ, ಪಾತ್ರಗಳನ್ನೇ ಆಯ್ಕೆ ಮಾಡಿ ಎಂಬ ಸಲಹೆ ನಮ್ಮ ಕಡೆಯಿಂದ ಯಾವಾಗಲೂ ಇದ್ದೇ ಇರುತ್ತದೆ. ಸುಮ್ಮನೆ ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳಲು ಸಿನಿಮಾ ಮಾಡುವುದಕ್ಕಿಂತ ಒಳ್ಳೆಯ ಸಿನಿಮಾಗಳನ್ನೇ ಮಾಡಲಿ ಎಂಬುದು ನನ್ನ ಅನಿಸಿಕೆ. ಜನ ನೆನಪು ಇಟ್ಟುಕೊಳ್ಳುವಂತಹ ಸಿನಿಮಾಗಳನ್ನು ಮಾಡಬೇಕು. ಸಹೋದರ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೂಡ ಮಕ್ಕಳಿಗೆ ಸಲಹೆ ನೀಡಿದ್ದಾರೆ. ಕೆಲಸವನ್ನು ಪ್ರೀತಿಸಿ. ಚಿತ್ರರಂಗ ನಮಗೆ ಹೊಸದೇನಲ್ಲ. ನೀವು ಹೇಗೆ ಇರುತ್ತೀರೋ, ಹಾಗೆ ಇರುವಂತೆ ಹೇಳಿದ್ದಾರೆ. ನಾವು ಮಕ್ಕಳ ಮೇಲೆ ಎಲ್ಲೂ ಒತ್ತಡ ಹಾಕಿಲ್ಲ’ ಎನ್ನುತ್ತಾರೆ ವಿಜಯಲಕ್ಷ್ಮೀ ಸಿಂಗ್.

Leave a Reply

Your email address will not be published. Required fields are marked *