ಸಂಭ್ರಮದ ವಿಜಯದಶಮಿ ಆಚರಣೆ

ಹಾವೇರಿ: ಜಿಲ್ಲೆಯಾದ್ಯಂತ ಗುರುವಾರ, ಶುಕ್ರವಾರ ಎರಡು ದಿನಗಳ ಕಾಲ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಹಬ್ಬದಂಗವಾಗಿ 11 ದಿನಗಳ ಕಾಲ ದುರ್ಗಾದೇವಿ, ಗ್ರಾಮದೇವತೆಯ ದೇವಸ್ಥಾನಗಳಲ್ಲಿ ಪುರಾಣ ಪ್ರವಚನ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣ ಭಾಗದಲ್ಲಿ ಗ್ರಾಮದೇವತೆಯ ಭಾವಚಿತ್ರದ ಮೆರವಣಿಗೆ, ಕುಂಭ ಮೆರವಣಿಗೆ, ಭಜನೆ ಹಾಗೂ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆದವು.

ಗುರುವಾರ ಆಯುಧ ಪೂಜೆ ಅಂಗವಾಗಿ ವಾಹನಗಳ ಪೂಜೆ, ಅಂಗಡಿಗಳಲ್ಲಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹಬ್ಬ ಶುಭ ಸೂಚಕವಾಗಿದ್ದರಿಂದ ಹೊಸ ವಾಹನ ಖರೀದಿ, ನೂತನ ಅಂಗಡಿ ಪ್ರಾರಂಭೋತ್ಸವ, ನಿವೇಶನ ಖರೀದಿಯೂ ಕಂಡುಬಂತು.

ಬನ್ನಿ ಮುಡಿಯುವ ಹಬ್ಬ…

ವಿಜಯದಶಮಿ ಹಬ್ಬದ ಅಂಗವಾಗಿ ಅಮವಾಸ್ಯೆ ಪಾಡ್ಯದಿಂದ ಬನ್ನಿಗಿಡದ ಪೂಜೆ ಆರಂಭಿಸಿದ್ದ ಮಹಿಳೆಯರು ಶುಕ್ರವಾರ ನಸುಕಿನ ವೇಳೆಯಲ್ಲಿ ಬನ್ನಿಗಿಡಕ್ಕೆ ಹಸಿರುಸೀರೆ ಉಡಿಸಿ ವಿಶೇಷ ಪೂಜೆ ಸಲ್ಲಿಸಿ ಮುತೆôದೆಯರಿಗೆ ಉಡಿ ತುಂಬಿದರು.

ಶುಕ್ರವಾರ ಬನ್ನಿಗಿಡದ ಎಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಎಲ್ಲ ಸಮಾಜದ ಬಾಂಧವರು ‘ಬನ್ನಿ ತಗೊಂಡು ನಾವು-ನೀವು ಬಂಗಾರದಂಗ ಇರೋಣ’ ಎಂದು ಶುಭ ಕೋರಿದರು. ಸಂಜೆಯಿಂದಲೇ ಆರಂಭಗೊಂಡ ಬನ್ನಿ ಮುಡಿಯುವ ಕಾರ್ಯಕ್ರಮ ರಾತ್ರಿಯಾಗುತ್ತಿದ್ದಂತೆಯೇ ಜೋರಾಯಿತು. ಮೊದಲು ದೇವರಿಗೆ ಬನ್ನಿ ಮುಡಿಸಿ ನಂತರ ಸ್ನೇಹಿತರು, ಬಂಧುಬಾಂಧವರಿಗೆ ಬನ್ನಿ ನೀಡಿ ವಿಜಯದಶಮಿಯ ಶುಭಾಶಯ ಕೋರಿದರು.

ಹಾವೇರಿ ನಗರದಲ್ಲಿ ಮೊದಲಿಗೆ ಪುರಸಿದ್ಧೇಶ್ವರ ದೇವಸ್ಥಾನದಲ್ಲಿ ದೇವರಿಗೆ ಬನ್ನಿ ಅರ್ಪಿಸಲಾಯಿತು. ಅಲ್ಲಿಂದ ಭಕ್ತರು ಹುಕ್ಕೇರಿಮಠದಲ್ಲಿ ಸದಾಶಿವ ಸ್ವಾಮೀಜಿಗೆ ಬನ್ನಿ ನೀಡಿ ಆಶೀರ್ವಾವಾದ ಪಡೆದರು. ನಂತರ ಮನೆಗಳಲ್ಲಿ ಗುರುಹಿರಿಯರಿಗೆ, ಸಹೋದರ, ಸಹೋದರಿಯರಿಗೆ ಬನ್ನಿ ನೀಡಿದರು.

ನಗರದ ಗ್ರಾಮದೇವತೆ ಶ್ರೀದ್ಯಾಮವ್ವ ದೇವಿಯ ಪಾಲಕಿ ಉತ್ಸವವು ದೇವಸ್ಥಾನದಿಂದ ಆರಂಭಗೊಂಡಿತು. ಪ್ರಮುಖ ಬೀದಿಗಳಲ್ಲಿ ಸಾಗಿ ಪ್ರೆಸ್ಸಿಂಗ್​ವಿುಲ್ ಆವರಣಕ್ಕೆ ಆಗಮಿಸಿ ಬನ್ನಿಗಿಡಕ್ಕೆ ಪೂಜೆ ಸಲ್ಲಿಸಲಾಯಿತು. ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಬಸವರಾಜ ಹೂಗಾರ, ಕಾರ್ಯದರ್ಶಿ ಅಶೋಕ ಮುದಗಲ್ಲ, ಗಂಗಾಧರ ಹೂಗಾರ, ಕೊಟ್ರಯ್ಯ ಕಬ್ಬಿಣಕಂತಿಮಠ, ಬೆಟ್ಟಪ್ಪ ಕುಳೇನೂರ, ಪೃಥ್ವಿರಾಜ ಬೆಟಗೇರಿ, ವಿರೇಶ ಮತ್ತಿಹಳ್ಳಿ, ಸದಸ್ಯರಾದ ದೊಡ್ಡದ್ಯಾಮಣ್ಣಾ ಬಡಗೇರ, ಬಸಣ್ಣ ಮುಗದೂರ, ರಾಜಶೇಖರ ಉಪ್ಪಿನ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.