ವಿಜಯದ ಸಂಕಲ್ಪದೆಡೆಗೆ ದೃಢಚಿತ್ತದಿಂದ ಸಾಗೋಣ

ತ್ರೇತಾಯುಗದಲ್ಲಿ ಆಶ್ವಯುಜ ದಶಮಿಯ ದಿನ ಶ್ರೀರಾಮಚಂದ್ರನು ರಾವಣನ ಮೇಲೆ ಯುದ್ಧಕ್ಕಾಗಿ ಹೊರಟು, ರಾವಣನನ್ನು ಸಂಹರಿಸಿ ವಿಜಯವನ್ನು ಪಡೆದನು. ಶ್ರೀರಾಮನ ವಿಜಯವನ್ನು ಸ್ಮರಿಸಲೆಂದೇ `ವಿಜಯ ದಶಮಿ’ಯ ಆಚರಣೆ. ರಾವಣನ ವಧೆ- ಅಂದರೆ ದಶಹರ- `ದಶರ’ ಎಂದು ಕೂಡ ಹೆಸರು ಪಡೆದಿದೆ. ಭಾರತದ ಎಲ್ಲ ಕಡೆಯೂ ಇದನ್ನು ವಿವಿಧ ರೀತಿಯಿಂದ ಕೊಂಡಾಡುತ್ತಾರೆ. ಉತ್ತರ ಪ್ರದೇಶದಲ್ಲಿ `ರಾಮಲೀಲಾ’ ಎಂದು ನಾಟಕವನ್ನು ಕಥಾನಕ ರೂಪದಲ್ಲಿ ಮಾಡಿ, ರಾವಣ ವಧೆಯನ್ನು ಅದ್ಭುತವಾಗಿ ತೋರಿಸುತ್ತಾರೆ. ಇನ್ನೂ ಕೆಲವು ಕಡೆ ಪ್ರಥಮೆಯಿಂದ ಶ್ರೀರಾಮಾಯಣ ಪಾರಾಯಣವನ್ನು ಆರಂಭಿಸಿ ಹತ್ತನೇ ದಿನವಾದ ವಿಜಯದಶಮಿಯಂದು `ಶ್ರೀರಾಮಪಟ್ಟಾಭಿಷೇಕ’ವನ್ನು ವಿಜೃಂಭಣೆಯಿಂದ ಮಾಡುತ್ತಾರೆ. ಶ್ರೀರಾಮನವಮಿಯಂತೆ ಈ ದಿನ ಶ್ರೀರಾಮನಿಗಾಗಿ ಕೊಸಂಬರಿ, ಪಾನಕ, ಪಂಚಾಮೃತ, ಕೊಬ್ಬರಿ ಸಕ್ಕರೆಗಳನ್ನು ಮಾಡುತ್ತಾರೆ.

ಶ್ರೀರಾಮಚಂದ್ರ ವಿಜಯೋತ್ಸವ: ಪ್ರಭು ರಾಮನು, `ಮಾತಲಿ, ರಾವಣ ಎಲ್ಲಿದ್ದಾನೋ ಆ ಸ್ಥಳಕ್ಕೆ ಕ್ಷಿಪ್ರವಾಗಿ ರಥವನ್ನು ನಡೆಸು. ಅದೇ ಸಮಯದಲ್ಲಿ ಬಹಳ ಜಾಗರೂಕನಾಗಿರು’ ಎಂದು ಆಜ್ಞಾಪಿಸಿದ. ಇಂದ್ರನ ಸಾರಥಿಯೊಡನೆ ತಾನು ಮಾತನಾಡುತ್ತಿರುವುದನ್ನು ಜ್ಞಾಪಿಸಿಕೊಂಡ ಪ್ರಭು ರಾಮನಿಗೆ ಸಂಕೋಚವಾಯಿತು. ಅವನು ಕ್ಷಮೆ ಯಾಚಿಸಿದ-`ನಾನು ನಿನ್ನ ಒಡೆಯನೋ ಎನ್ನುವಂತೆ ನಿನಗೆ ಆಜ್ಞೆ ಮಾಡಿದ್ದಕ್ಕೆ ವಿಷಾದವಾಗುತ್ತಿದೆ. ರಾವಣನನ್ನು ಕೊಲ್ಲಬೇಕೆಂಬ ಆತುರದಲ್ಲಿ ಹಾಗೆ ಮಾತಾಡಿದ್ದೇನೆ. ಆದ್ದರಿಂದ ದಯವಿಟ್ಟು ನನ್ನ ಅಪಚಾರವನ್ನು ಕ್ಷಮಿಸು’.

ಪ್ರಭು ರಾಮನ ಅದ್ಭುತ ವಿನಯವನ್ನು ಕಂಡು ಮಾತಲಿಯ ಹೃದಯ ಕರಗಿತು. ಅವನು ಇಂದ್ರನ ರಥವನ್ನು ರಾವಣನಿಗೆ ಸಮೀಪವಾಗುವಂತೆ ನಡೆಸಿದ. ಪ್ರಭು ರಾಮ ಮತ್ತು ಅವನ ಎದುರಾಳಿ ಪರಸ್ಪರ ಬಾಣ ಪ್ರಯೋಗ ಮಾಡತೊಡಗಿದರು. ಅನತಿಕಾಲದಲ್ಲಿಯೇ ಯುದ್ಧ ತೀವ್ರಗೊಂಡಿತು. ಮೋಡಗಳು ರಾವಣನ ರಥದ ಮೇಲೆ ರಕ್ತದ ಮಳೆಗೈದವು.. ಕ್ಷಿಪ್ರವಾಗಿ ತಾನು ಸಾಯುವುದಾಗಿ ರಾವಣನಿಗೆ ಮನದಟ್ಟಾಯಿತು. ಇನ್ನೊಂದು ಕಡೆಯಲ್ಲಿ ಪ್ರಭು ರಾಮನ ಮುಂದೆ ಮಂಗಳಕರವಾದ ಚಿಹ್ನೆಗಳು ಕಾಣಿಸಿಕೊಂಡವು. ಇದರಿಂದ ವಿಜಯವು ಅನತಿ ಕಾಲದಲ್ಲಿಯೇ ಪ್ರಾಪ್ತವಾಗುವುದೆಂದು ಅವನಿಗೆ ದೃಢವಾಯಿತು. ಮುಂದೆ ನಡೆದ ದ್ವಂದ್ವ ಯುದ್ಧದಲ್ಲಿ ಪ್ರಭು ರಾಮ ಮತ್ತು ರಾವಣ ಕ್ರಮೇಣ ತಮ್ಮ ಶೌರ್ಯ ಸಮಸ್ತವನ್ನೂ ಪ್ರದರ್ಶನ ಮಾಡಿದರು.

ಕೆಲವು ಸಲ ರಾವಣನು ತನ್ನ ಹತ್ತು ತಲೆಗಳ ಆಕಾರದಿಂದ ಯುದ್ಧ ಮಾಡುತ್ತಿದ್ದ, ಮತ್ತೆ ಕೆಲವು ಸಲ ಒಂದು ತಲೆಯ ತನ್ನ ಸಾಮಾನ್ಯ ರೂಪದಿಂದ ಹೋರಾಡುತ್ತಿದ್ದ. ಒಂದು ಸಲ ಪ್ರಭು ರಾಮನು ಬಾಣ ಪ್ರಯೋಗ ಮಾಡಿ ರಾವಣನ ಒಂದು ತಲೆಯನ್ನು ಕಡಿದುರುಳಿಸಿದ. ಆದರೆ ಆ ತಲೆ ನೆಲಕ್ಕೆ ಬೀಳುತ್ತಿದ್ದಂತೆಯೇ ಇನ್ನೊಂದು ತಲೆ ಪವಾಡ ಸದೃಶವಾಗಿ ಮೊದಲಿನ ಜಾಗದಲ್ಲಿ ಪುಟಿದೆದ್ದಿತು. ಹಳೆಯ ತಲೆಯ ಜಾಗದಲ್ಲಿ ಪ್ರತಿಸಲವೂ ಹೊಸ ತಲೆ ಕಾಣಿಸಿಕೊಳ್ಳುತ್ತಿದ್ದುದರಿಂದ ಪ್ರಭು ರಾಮನು ನಿಬ್ಬೆರಗಾದ. ದ್ವಂದ್ವ ಯುದ್ಧ ತೀವ್ರ ಗತಿಯಿಂದ ಮುಂದುವರಿಯಿತು.

ಕೊನೆಗೆ, ಪ್ರಭು ರಾಮನು ತನ್ನ ಈಪ್ಸಿತ ವಿಜಯವನ್ನು ಪಡೆಯದುದನ್ನು ಕಂಡ ಮಾತಲಿ `ಏಕೆ ನೀನು ರಕ್ಷಣಾತ್ಮಕವಾಗಿ ಯುದ್ಧ ಮಾಡುತ್ತಿದ್ದೀಯೆ ನನ್ನ ಪ್ರಭುವೇ, ನಿನ್ನ ಅನಂತ ಸಾಮರ್ಥ್ಯದ ಅರಿವು ನಿನಗಿಲ್ಲವೇ? ರಾಕ್ಷಸರ ರಾಜನಿಗೆ ಈಗ ವಿನಾಶದ ಕಾಲ ಸನ್ನಿಹಿತವಾಗಿದೆ. ದಿವ್ಯವಾದ ಬ್ರಹ್ಮಾಸವನ್ನು ನೀನು ಏಕೆ ಪ್ರಯೋಗಿಸಬಾರದು?’ ಎಂದು ಕೇಳಿದ. ಈ ಆತ್ಯಂತಿಕ ಅಸದ ಬಗೆಗೆ ಈ ರೀತಿಯಾಗಿ ನೆನಪಿಸಲ್ಪಟ್ಟವನಾಗಿ ಪ್ರಭು ರಾಮನು ಆ ಅಸವನ್ನು ಕೈಗೆತ್ತಿಕೊಂಡ. ಅಗಸ್ತ್ಯ ಋಷಿ ದಂಡಕಾರಣ್ಯದಲ್ಲಿ ಭೇಟಿಯಾದಾಗ ಅದನ್ನು ಕೊಟ್ಟಿದ್ದರು. ಪ್ರಭು ಬ್ರಹ್ಮನು ಇಂದ್ರನ ಸಲುವಾಗಿ ಆ ಅಸವನ್ನು ಸ್ವತಃ ನಿರ್ಮಾಣ ಮಾಡಿದ್ದ. ಮುಂದೆ ಅದನ್ನು ಅಗಸ್ತ್ಯನಿಗೆ ಕೊಡಲಾಗಿತ್ತು. ಆ ಅದ್ಭುತ ಅಸಕ್ಕೆ ಗರುಡನು ಗರಿಗಳನ್ನು ಒದಗಿಸಿದ್ದ. ಅದರ ಮೊನಚಾದ ಶಿರಭಾಗದಲ್ಲಿ ಅಗ್ನಿ ಮತ್ತು ಸೂರ್ಯರ ಶಕ್ತಿಗಳು ಸಂಲಗ್ನವಾಗಿದ್ದವು. ಮೇರು ಪರ್ವತ ಮತ್ತು ಮಂದಾರ ಪರ್ವತಗಳು ತಮ್ಮ ಗುರುತ್ವವನ್ನು ಆ ಬಾಣದ ಭಾರಕ್ಕೆ ನೀಡಿದ್ದವು. ಅದರ ದಂಡವನ್ನು ಸೂಕ್ಷ್ಮವಾದ ಆಕಾಶ ತತ್ತ್ವದಿಂದ ಮಾಡಲಾಗಿತ್ತು.

ಈ ಬ್ರಹ್ಮಾಸವು ಸರ್ವಶಕ್ತವಾಗಿತ್ತು ಮತ್ತು ಅಪ್ರಮಾದಿಯಾಗಿತ್ತು. ಅಗತ್ಯ ಮಂತ್ರಗಳೊಡನೆ ಬ್ರಹ್ಮಾಸವನ್ನು ಸಚೇತನಗೊಳಿಸಿದ ಪ್ರಭು ರಾಮನು ಅದನ್ನು ತನ್ನ ಧನಸ್ಸಿಗೆ ಹೂಡಿದನು.

ಪ್ರಭು ರಾಮನು ಬಿಲ್ಲಿನ ಹುರಿಯನ್ನು ತನ್ನ ಕಿವಿಯವರೆಗೆ ಎಳೆಯುತ್ತಿದ್ದಂತೆಯೇ ಭೂಮಿ ಕಂಪಿಸಿತು. ಗಗನ ತತ್ತರಿಸಿದಂತೆ ತೋರಿತು. ಪ್ರಭು ರಾಮನು ಬ್ರಹ್ಮಾಸವನ್ನು ಬಿಟ್ಟಾಗ ಅದು ಗಾಳಿಯನ್ನು ಸೀಳಿಕೊಂಡು ಹೋಗಿ ದುರುಳ ರಾವಣನ ಎದೆಗೆ ಬಲವಾಗಿ ಘಾತಿಸಿತು. ರಾಕ್ಷಸರ ರಾಜನ ಹೃದಯವನ್ನು ಸೀಳಿದ ಆ ಉಜ್ವಲವಾದ ಅಸವು ಆ ಪಾಪಿಯ ಜೀವವನ್ನೂ ಸೆಳೆದುಕೊಂಡು ನೆಲವನ್ನು ಭೇದಿಸಿ ಆಳಕ್ಕಿಳಿಯಿತು. ಆ ಭೀಕರ ಬ್ರಹ್ಮಾಸ ಮರಳಿ ಬಂದು ರಾಮನ ಬತ್ತಳಿಕೆ ಪ್ರವೇಶಿಸುತ್ತಿದ್ದಂತೆ, ರಾವಣನು ತನ್ನ ಕೈಯಲ್ಲಿದ್ದ ಬಿಲ್ಲನ್ನು ಕೆಳಗೆ ಕೆಡವಿ, ತನ್ನ ರಥದಿಂದ ಸತ್ತು ಕೆಳಗೆ ಬಿದ್ದನು. ದಿವ್ಯಾನಂದದಿಂದ ವಾನರ ಯೋಧರು ರಾಮನ ವಿಜಯವನ್ನು ಹೆಮ್ಮೆಯಿಂದ ಉದ್ಘೋಷಿಸಿದರು. ಸೂರ್ಯನು ತನ್ನ ಕಿರಣಗಳನ್ನು ಪ್ರಶಾಂತವಾಗಿ ಹರಡಿದನು. ದಶದಿಕ್ಕುಗಳಲ್ಲೂ ಸಂತೋಷವು ಪಸರಿಸಿತು.

ಮೈಸೂರು ದಸರಾ: ದಸರಾ ಹಬ್ಬವನ್ನು ಕರ್ನಾಟಕದಲ್ಲಿ ವಿಶೇಷವಾಗಿ ಕೊಂಡಾಡುವುದರಿಂದ ಇದನ್ನು `ಕರ್ನಾಟಕದ ನಾಡಹಬ್ಬ’ ಎಂದು ಪರಿಗಣಿಸುತ್ತಾರೆ. ಮೈಸೂರಿನಲ್ಲಿ ಮಹಾರಾಜರು ಆಶ್ವಯುಜ ಶುದ್ಧ ಪ್ರಥಮೆಯಂದು ಶುಭ ಮುಹೂರ್ತದಲ್ಲಿ ಸಕಲ ವೈಭವಗಳೊಡನೆ ಚಿನ್ನದ ಸಿಂಹಾಸನವನ್ನೇರುತ್ತಿದ್ದರು. ಅಲ್ಲದೆ ಹತ್ತು ದಿನಗಳೂ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಕತ್ತಿ, ಪಲ್ಲಕ್ಕಿ ಎಲ್ಲವುಗಳಿಗೂ ಶಾಸೋಕ್ತವಾಗಿ ಪೂಜೆ ಮಾಡಿ, ಬ್ರಾಹ್ಮಣರಿಗೂ ಮುತ್ತೈದೆಯರಿಗೂ ಪೂಜೆ ಮಾಡಿ, ಭೂರಿದಕ್ಷಿಣೆಗಳನ್ನಿತ್ತು ಅವರ ಅಶೀರ್ವಾದ ಪಡೆದು ಸಿಂಹಾಸನಾರೋಹಣ ಮಾಡುತ್ತಿದ್ದರು. ಸಂಜೆಯೂ `ದರ್ಬಾರ್’ ನಡೆಯುತ್ತಿತ್ತು. ಸರ್ಕಾರದವರು ಮೈಸೂರು ಅರಮನೆಯನ್ನು ವಹಿಸಿಕೊಳ್ಳುವವರೆಗೂ ಈ ದರ್ಬಾರ್ ಬಹಳ ವಿಶೇಷವಾಗಿ ನಡೆಯುತ್ತಿತ್ತು. ಈ ಸಮಯದಲ್ಲಿ ದರ್ಬಾರಿಗಳು ಅಂದರೆ ಪಂಡಿತರು, ವಿದ್ವಾಂಸರು, ಕಲಾವಿದರು ಮಹಾರಾಜರಿಗೆ `ನಜರ್’ ಒಪ್ಪಿಸುತ್ತಿದ್ದರು. ರಾಜರನ್ನು ಪ್ರತ್ಯಕ್ಷ ದೇವತೆಯೆಂದು ಭಾವಿಸಿ, ಅವರು ಸಿಂಹಾಸನಾರೂಢರಾಗಿರುವಾಗ ಸಾಕ್ಷಾತ್ ವಿಷ್ಣುವೇ ಎಂದು ಅವರನ್ನು ದೈವಸಮಾನರಾಗಿ ಪೂಜಿಸುತ್ತಿದ್ದರು. ಇದು ನಮ್ಮ ಸಂಸ್ಕೃತಿಯ ಹಿರಿಮೆ! ನಂತರ ಮಹಾರಾಜರ ಮುಂದೆ ಸಂಗೀತ ಕಛೇರಿಗಳು, ಪ್ರತಿದಿನವೂ ಗರಡಿ ಆಟ ಇತ್ಯಾದಿ ಮನರಂಜನೆಗಳು ಇರುತ್ತಿದ್ದವು. ಮಹಾನವಮಿಯಂದು ವಿಶೇಷವಾಗಿ ಶಾರದಾಪೂಜೆ, ಆಯುಧ ಪೂಜೆಗಳನ್ನು ಮಾಡುತ್ತಿದ್ದರು. ವಿಜಯದಶಮಿಯಂದು ಶ್ರೀ ಮಹಾರಾಜರು ಚಿನ್ನದ ಅಂಬಾರಿಯಲ್ಲಿ ಮೆರವಣಿಗೆ ಹೊರಟು- ಬನ್ನಿಮಂಟಪಕ್ಕೆ ಹೋಗಿ ಅಲ್ಲಿ ಬನ್ನಿ (ಶಮೀ) ಪೂಜೆ ಮಾಡಿ ಬರುತ್ತಿದ್ದರು. ಪ್ರಜಾಪ್ರಭುತ್ವ ಬಂದ ನಂತರ ವಿಜಯದಶಮಿಯಂದು ರಾಜರ ಮೆರವಣಿಗೆಗೆ ಬದಲು, ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತಿದೆ.

ಶಮೀ (ಬನ್ನಿ) ಮರದ ಪೂಜೆ: ವಿಜಯದಶಮಿ ದಿನ ಬನ್ನಿಮರಕ್ಕೆ ಪೂಜೆ ಮಾಡಿ ಪ್ರದಕ್ಷಿಣೆ ಮಾಡಿದರೆ ವಿಜಯ ಖಂಡಿತ ಎಂದು ನಂಬಿಕೆ. ನಂತರ ಬನ್ನೀ ಎಲೆಗಳನ್ನು ಸ್ವೀಕರಿಸಿ, ಸ್ನೇಹಿತರಿಗೆ, ನೆಂಟರಿಗೆ, ಹಿರಿಯರಿಗೆ ಕೊಟ್ಟು ಆಶೀರ್ವಾದ ಪಡೆಯುವುದು ವಾಡಿಕೆ. ಪಾಂಡವರು ಅಜ್ಞಾತವಾಸಕ್ಕೆ ಮೊದಲು ತಮ್ಮ ದಿವ್ಯಾಸಗಳನ್ನು, ಆಯುಧಗಳನ್ನು ಶಮೀವೃಕ್ಷದಲ್ಲಿ ಮುಚ್ಚಿಟ್ಟಿದ್ದರು. ಅವರ ಅಜ್ಞಾತವಾಸ ಮುಗಿದನಂತರ ಸುರಕ್ಷಿತವಾಗಿ ಆ ಅಸಗಳನ್ನು ಆಯುಧಗಳನ್ನು ಹಿಂದಕ್ಕೆ ಪಡೆದರು. ಅಂದರೆ ಪಾಂಡವರ ದಿವ್ಯಾಸಗಳನ್ನು ಶಮೀ ವೃಕ್ಷವು ಸಂರಕ್ಷಿಸಿ, ಹಿಂದಿರುಗಿಸಿದಳು. ಇದೇನು ಸಾಮಾನ್ಯವಾದ ವಿಷಯವೇ! ಶ್ರೀರಾಮನು ರಾವಣ ವಿಜಯಕ್ಕೆ ಹೊರಡುವ ಮೊದಲು ಈ ಶಮೀದೇವಿಗೆ ಪೂಜೆ ಸಲ್ಲಿಸಿದನು. ಶ್ರೀರಾಮನಿಗೆ ಅಭಯವನ್ನಿತ್ತು ಕಳಿಸಿಕೊಟ್ಟ ಶಮೀಮಾತೆ ವಿಜಯಿಯಾದ ರಾಮನನ್ನು ಹರಸಿದಳು. ಇದರಿಂದ ಅರ್ಜುನನಿಗೆ ಅಂದರೆ ಪಾಂಡವರಿಗೂ ಶ್ರೀರಾಮಚಂದ್ರನಿಗೂ ಹಿತವನ್ನೂ, ಪ್ರಿಯವಾದುದನ್ನೂ ಮಾಡಿ ವಿಜಯಿಯಾಗಿಸಿದಳು `ಮಾತೆ ಶಮೀ.’
ವಿಜಯದಶಮಿಯ ದಿನ ಈ ಶಮೀ ವೃಕ್ಷದ ಪೂಜೆಯಿಂದ, ಎಲೆಗಳ ಸೇವನೆಯಿಂದ, ವಿಶೇಷವಾದ ಫಲಗಳು, ಆಯುರಾರೋಗ್ಯ ಐಶ್ವರ್ಯಾದಿಗಳು ಸಿದ್ಧಿಸುವುವು. `ವಿಜಯದಶಮಿ’ಯಲ್ಲಿ `ಶಮೀ’ ಬೆರೆತಿದೆ. ಇದು ಒಂದು ಆಶ್ಚರ್ಯವಲ್ಲವೆ!

(ಲೇಖಕರು ಬೆಂಗಳೂರು ಇಸ್ಕಾನ್ ಅಧ್ಯಕ್ಷರು)

Leave a Reply

Your email address will not be published. Required fields are marked *