Friday, 16th November 2018  

Vijayavani

Breaking News

ಹೀರೋ-ಝೀರೋ ನಡುವೆಯೂ ಬದುಕು

Sunday, 08.07.2018, 3:04 AM       No Comments

ಖ್ಯಾತ ಲೇಖಕಿ, ಚಿಂತಕಿ, ಸಾಮಾಜಿಕ ಕಾರ್ಯಕರ್ತೆ, ವಾಗ್ಮಿ, ‘ಬಾಪು ಕುಟಿ’ ಕೃತಿ ಮೂಲಕ ‘ಸ್ವದೇಶ’ ಚಿತ್ರಕಥೆಗೆ ಪ್ರೇರಣೆ ನೀಡಿದ ರಜನಿ ಬಕ್ಷಿ ಪ್ರಸಕ್ತ ಸಾಮಾಜಿಕ ನವೋದ್ಯಮ, ಆರ್ಥಿಕ ಸುಧಾರಣೆ ಕ್ಷೇತ್ರದಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದಾರೆ. ಪ್ರತಿಷ್ಠಿತ ಗೇಟ್​ವೇ ಹೌಸ್​ನ ಫೆಲೋ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಪನ್ಯಾಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಇವರು ವಿಜಯವಾಣಿಯೊಂದಿಗೆ ಹಲವು ಮಹತ್ವದ ವಿದ್ಯಮಾನಗಳ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ.

| ರವೀಂದ್ರ ದೇಶಮುಖ್

# ಭಾರತದ ಯುವಶಕ್ತಿ ಬಗ್ಗೆ ಸಾಕಷ್ಟು ಭರವಸೆಗಳು ಇವೆ, ಮತ್ತೊಂದು ಮುಖ ಗಮನಿಸಿದರೆ ಅಷ್ಟೇ ಕಳವಳಗಳೂ ಇವೆ. ಹೀಗಿರುವಾಗ ಭಾರತದ ಭವಿಷ್ಯದ ಚಹರೆ ಹೇಗೆ ರೂಪುಗೊಳ್ಳಲಿದೆ?

ಯುವಕ, ಯುವತಿಯರಲ್ಲಿ ತುಂಬ ಶಕ್ತಿ ಇದೆ. ಅವರಲ್ಲಿ ಕುತೂಹಲವೂ ಮನೆಮಾಡಿದ್ದು, ಅದರಿಂದ ಹೊಸದನ್ನು ಮಾಡಲು ಪ್ರೇರಣೆ ಪಡೆಯುತ್ತಿದ್ದಾರೆ. ವಿಶೇಷವೆಂದರೆ ರಚನಾತ್ಮಕವಾದಂಥ ಹುಡುಕಾಟ ಮತ್ತು ಕೆಲಸ ಇವರಿಂದ ನಡೆಯುತ್ತಿದೆ. ತಾವು ಅನುಭವಿಸಿದ ಕಷ್ಟಗಳನ್ನು ಇತರರು ಅನುಭವಿಸಬಾರದು ಎಂಬ ಕಳಕಳಿಯೂ ಇದೆ. ಇಂಥ ಬದ್ಧತೆ, ಸಂಕಲ್ಪಗಳು ಯುವಸಮೂಹದ ಶಕ್ತಿ ಹೆಚ್ಚಿಸುತ್ತಿವೆ ಎಂಬುದು ನಿರ್ವಿವಾದ. ನಾನು ಹಿಂದೊಮ್ಮೆ ಗುಜರಾತ್​ನ ಗಾಂಧಿನಗರ ಐಐಟಿಗೆ ಹೋಗಿದ್ದೆ. ಅಲ್ಲಿನ ತರುಣರನ್ನು ಉದ್ದೇಶಿಸಿ ಮಾತನಾಡುವಾಗ- ‘ನಿಮ್ಮ ಕನಸು ಏನು, ಏನೆಲ್ಲ ಮಾಡುವ ಗುರಿ ಹೊಂದಿದ್ದೀರಿ?’ ಎಂದು ಪ್ರಶ್ನಿಸಿದಾಗ ತುಂಬ ಸ್ವಾರಸ್ಯಕರವಾದ ಉತ್ತರಗಳು ದೊರೆತವು. ಒಬ್ಬ ವಿದ್ಯಾರ್ಥಿಯಂತೂ ‘ನಾನು ನನ್ನ ಹಳ್ಳಿಗೆ, ಪ್ರದೇಶಕ್ಕೆ 24 ಗಂಟೆ ವಿದ್ಯುತ್ ಸಿಗುವಂತೆ ಮಾಡುತ್ತೇನೆ’ ಎಂದ. ಏಕೆಂದರೆ, ಆ ಹುಡುಗ ಕತ್ತಲೆಯಲ್ಲೇ ಓದಿದ್ದ, ಕತ್ತಲೆ ಏನು ಎಂಬ ಅನುಭವವಾಗಿತ್ತು. ಹಾಗಾಗಿ, ಆ ಸಂಕಷ್ಟ ಮತ್ತೆ ಮುಂದುವರಿಯಬಾರದು, ಯುವಕರ ಭವಿಷ್ಯ ಕಮರಬಾರದು ಎಂಬ ತುಡಿತ ಅವನನ್ನು ಇಂಥದ್ದೊಂದು ಕನಸಿಗೆ, ಸಾಹಸಕ್ಕೆ ಪ್ರೇರೇಪಿಸಿತ್ತು. ಒಳ್ಳೆ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುವ, ಸಮಸ್ಯೆಗಳೊಂದಿಗೆ ಹೋರಾಡುವ ಸ್ವಾರ್ಥದ ಚೌಕಟ್ಟನ್ನು ಮೀರಿ ಸಮಾಜಮುಖಿಯಾಗಿ ಸ್ಪಂದಿಸುವವರ ಸಂಖ್ಯೆ ಹೆಚ್ಚುತ್ತಿರುವುದು ಸಕಾರಾತ್ಮಕ ಬೆಳವಣಿಗೆ.

ಯುವಸಮೂಹದ ಮತ್ತೊಂದು ಮುಖವನ್ನೂ ಗಮನಿಸಬೇಕು. ಅದೆಷ್ಟೋ ಜನರಲ್ಲಿ ಆತ್ಮವಿಶ್ವಾಸದ ತೀವ್ರ ಕೊರತೆ ಕಾಡುತ್ತಿದೆ. ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ, ಅವಲಂಬನೆ ಹೊಸ ಸಮಸ್ಯೆ ಸೃಷ್ಟಿಸಿದೆ. ಸಕಾಲಕ್ಕೆ ಅರಿವು ಮೂಡಿಸಿಕೊಂಡವರು ಸಮಸ್ಯೆಯಿಂದ ಬಚಾವಾಗಿದ್ದಾರೆ. ಇತ್ತೀಚೆಗೆ ನನ್ನ ಪರಿಚಯದ ಯುವತಿಯೇ ‘ಈಗ ಎಲ್ಲ ಸಾಮಾಜಿಕ ಮಾಧ್ಯಮಗಳಿಂದ ಹೊರಬಂದಿದ್ದೇನೆ. ಅದು ಗೀಳು, ಚಟ ಆಗಿ ಪರಿವರ್ತನೆಯಾಗುತ್ತಿದೆ ಎಂದು ಗೊತ್ತಾಯಿತು. ಹಾಗಾಗಿ, ಅದರಿಂದ ಆಚೆ ಬರುವುದೇ ಪರಿಹಾರ ಅಂತ ನಿರ್ಧರಿಸಿದೆ’ ಎಂದು ಹೇಳಿದಳು. ಸಾಮಾಜಿಕ ಮಾಧ್ಯಮಗಳ ಬಳಕೆ ತಪು್ಪ ಅಂತ ನಾನು ಹೇಳುತ್ತಿಲ್ಲ. ಆದರೆ, ವಿವೇಚನೆ ಕಳೆದುಕೊಂಡು ಬಳಸಿದರೆ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ. ಡಿಜಿಟಲ್ ದುನಿಯಾದ ಅತೀ ಆಕರ್ಷಣೆ ಹೊಸ ಆತಂಕ ಸೃಷ್ಟಿಸಿದ್ದು, ಮುಂದೆ ಇದು ಯಾವ ಹಂತಕ್ಕೆ ತಲುಪಲಿದೆ ಎಂದು ಹೇಳಲಾಗದು. ಒಂದಂತೂ ಸ್ಪಷ್ಟ, ಸಾಮಾಜಿಕ ಮಾಧ್ಯಮಗಳನ್ನು ನಾವು ನಿಯಂತ್ರಿಸಬೇಕೆ ಹೊರತು ಅವು ನಮ್ಮನ್ನು ನಿಯಂತ್ರಿಸುವಂತಾಗಬಾರದು. ಭಾರತದ ಒಟ್ಟಾರೆ ಭವಿಷ್ಯದ ಬಗ್ಗೆಯಂತೂ ಆಶಾವಾದವಿದೆ. ಸಣ್ಣಪುಟ್ಟ ಕೊರತೆಗಳನ್ನು ನೀಗಿಸಿ, ಯುವಸಮೂಹದಲ್ಲಿ ಆತ್ಮವಿಶ್ವಾಸ ತುಂಬಿದರೆ ಅಸಾಧಾರಣ ಸಾಧನೆಗಳನ್ನು ಸಾಕಾರಗೊಳಿಸಬಹುದು.

# ಒಂದೆಡೆ ಯುವಕರ ಬಳಿ ಬಹಳಷ್ಟು ಕನಸುಗಳಿವೆ. ಇನ್ನೊಂದೆಡೆ ಅವರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ, ವ್ಯವಸ್ಥೆಯ ಅಪಸವ್ಯಗಳಿಂದ ಚಿಂತಿತರಾಗಿದ್ದಾರೆ. ಹೀಗಿರುವಾಗ ಯುವಸಮೂಹದ ಮುಂದೆ ಇರುವ ದಾರಿ ಏನು?

ಇತ್ತೀಚೆಗೆ ಸಮಾಜದಲ್ಲೊಂದು ವಿಚಿತ್ರ ರೀತಿಯ ಮನೋಧರ್ಮ ಕಂಡುಬರುತ್ತಿದೆ. ಎಲ್ಲದಕ್ಕೂ ಸ್ಟಾರ್​ಗಿರಿ ಅನ್ವಯಿಸಲಾಗುತ್ತಿದೆ. ನೀವು ಯಾವುದೇ ರಂಗ-ಕ್ಷೇತ್ರದ ಉದಾಹರಣೆ ತೆಗೆದುಕೊಂಡರೂ ಸ್ಟಾರ್ ಅಲ್ಲ ಅಂದರೆ ನೀವು ಏನೂ ಅಲ್ಲ ಎಂಬಂತೆ ಕಾಣಲಾಗುತ್ತಿದೆ. ಇದು ಬಹು ಅಪಾಯಕಾರಿ ಮನೋಧರ್ಮ. ನಮ್ಮೆಲ್ಲರ ಜೀವನ ಹೀಗೇ ಸಾಗುವುದಿಲ್ಲ. ಒಂದೋ ಹೀರೋ ಆಗಿರಬೇಕು ಇಲ್ಲವೆ ಝೀರೋ ಆಗಿರಬೇಕು!-ವಾಸ್ತವ ಬದುಕು ಹೀಗಿಲ್ಲ, ಹೀಗಿರಲು ಸಾಧ್ಯವೂ ಇಲ್ಲ. ಆದರೂ ಈ ಬಗೆಯ ಭ್ರಮೆಗಳನ್ನು ಸೃಷ್ಟಿಸಲಾಗುತ್ತದೆ. ಸೃಷ್ಟಿಕರ್ತ ಎಲ್ಲರಲ್ಲೂ ಒಂದೊಂದು ಶಕ್ತಿಯನ್ನು ಇರಿಸಿದ್ದಾನೆ, ಈ ಭೂಮಿಯ ಪ್ರತಿಯೊಂದು ಜೀವವೂ ಅಮೂಲ್ಯ. ಆ ಪ್ರತಿ ವ್ಯಕ್ತಿಗೂ ತನ್ನದೇ ಆದ ಮೌಲ್ಯವಿದೆ, ಘನತೆ ಇದೆ, ಕನಸುಗಳಿವೆ, ಪ್ರಯತ್ನಗಳಿವೆ, ಜೀವನದಾರಿಗಳಿವೆ. ಎಲ್ಲರ ಬದುಕಿನ ಪಯಣ ಭಿನ್ನ. ಈ ವಾಸ್ತವವನ್ನು ಮನಗಾಣಬೇಕು.

ಸಮಾಜದಲ್ಲಿಂದು ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಯುವಸಮುದಾಯ ಒತ್ತಡ, ನಿರಾಸೆ, ಖಿನ್ನತೆಗಳಿಗೆ ಹಿಂದೆಂದಿಗಿಂತಲೂ ಹೆಚ್ಚು ಈಗ ಗುರಿಯಾಗುತ್ತಿದೆ ಏಕೆಂದರೆ, ವಿಚಿತ್ರವಾದ ಮತ್ತು ಅರ್ತಾಕವಾದ ಮಾಯಾಜಾಲ ನಿರ್ವಿುಸಲಾಗಿದೆ. ಆ ಮಾಯಾಜಾಲ ‘ಹೀರೋ’ ಆಗಲು ಒತ್ತಡ ತರುತ್ತದೆ. ‘ಸ್ಟಾರ್​ಗಿರಿ’ಯ ಹಪಹಪಿಗೆ ಇಳಿಯುತ್ತದೆ. ಯುವಸಮುದಾಯ ಈ ಮಾಯಾಜಾಲದಿಂದ ಹೊರಬರಲು ಯತ್ನಿಸಿದರೆ ಖಂಡಿತವಾಗಿಯೂ ‘ರೋಟಿ, ಕಪ್ಡಾ’ ಪ್ರಶ್ನೆಗೆ ಪರಿಹಾರ ಕಂಡುಕೊಳ್ಳುತ್ತದೆ. ಹೀರೋ-ಝೀರೋದ ನಡುವೆಯೂ ಅದ್ಭುತವಾದ ಬದುಕಿದೆ. ಅದನ್ನು ಇಂದಿನ ಹೊಸಪೀಳಿಗೆ ಅರ್ಥಮಾಡಿಕೊಳ್ಳಬೇಕು. ಅಲ್ಲದೆ, ಯಶಸ್ಸು ರೇಡಿಮೇಡ್ ಆಗಿ ದೊರೆಯುವುದಿಲ್ಲ. ಅದಕ್ಕೆ ತುಂಬ ಕಾಯಬೇಕು, ತಪಸ್ಸಿನಂತೆ ಕಾರ್ಯನಿರ್ವಹಿಸಬೇಕು. ಅಂದಾಗ ಮಾತ್ರ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಈ ತಾಳ್ಮಯೇ ಯುವಸಮುದಾಯದಲ್ಲಿ ಕಡಿಮೆಯಾಗುತ್ತಿದ್ದು, ದಿಢೀರ್ ಯಶಸ್ಸು ಬಯಸುತ್ತಿದ್ದಾರೆ. ಅದು ಸಿಗದಿದ್ದಾಗ ಒತ್ತಡ, ಖಿನ್ನತೆಗೆ ಹೋಗುತ್ತಾರೆ. ಜೀವನವನ್ನು ಅದು ಇರುವ ಹಾಗೆ ಸ್ವೀಕರಿಸಿ, ಸವಾಲುಗಳ ಜತೆಯೇ ಮುಂದಡಿ ಇಡಲು ಸಜ್ಜಾದರೆ ಗೆಲುವಿನಪಥ ತಲುಪಬಹುದು.

ಅಲ್ಲದೆ, ಆರ್ಥಿಕತೆಯ ಸ್ವರೂಪ ಬದಲಾಗುವರೆಗೂ ಬರೀ ಜಾಬ್ ಸ್ಕೀಮ್ಸ್​ಗಳಿಂದ ಪ್ರಯೋಜನವಿಲ್ಲ. ಮುಂದಿನ ಏಳೆಂಟು ವರ್ಷಗಳಲ್ಲಂತೂ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಬೃಹತ್ ರೂಪ ಪಡೆದುಕೊಳ್ಳಲಿದೆ. ಪರಿಸ್ಥಿತಿಗಳು ಮತ್ತಷ್ಟು ಬದಲಾಗಲಿವೆ. ನಾನು ಕೃತಕ ಬುದ್ಧಿಮತ್ತೆಯ ವಿರೋಧಿಯಲ್ಲ. ಆದರೆ, ಸದ್ಯದ ಸಂದರ್ಭದಲ್ಲಿ ನಾವು ತುರ್ತಾಗಿ ಯಾವುದಕ್ಕೆ ಆದ್ಯತೆ ನೀಡಬೇಕೋ ಅದಕ್ಕೆ ಆದ್ಯತೆ ನೀಡುತ್ತಿಲ್ಲ ಎಂಬ ಕೊರಗು ನನಗೆ ಕಾಡುತ್ತಿದೆ. ಇಂದಿಗೂ ಮ್ಯಾನ್​ಹೋಲ್​ಗಳಲ್ಲಿ ಮನುಷ್ಯರನ್ನೇ ಇಳಿಸಿ, ಸ್ವಚ್ಛಗೊಳಿಸುವ ವಿಕೃತಿ ಕಾಣುತ್ತಿದ್ದೇವೆ. ಎಷ್ಟೋ ಕಡೆ ಕಾರ್ವಿುಕರು ಮ್ಯಾನ್​ಹೋಲ್​ಗಳಲ್ಲಿ ಸಿಲುಕಿ ಮೃತಪಟ್ಟ ದುರದೃಷ್ಟಕರ ಘಟನೆಗಳನ್ನು ನೋಡಿದ್ದೇವೆ. ಸಮುದ್ರದ ಆಳದಲ್ಲಿ ಸಂಶೋಧನೆ ಮಾಡುವಂಥ ಮಾನವರಹಿತ ಸಬ್​ವೆುರಿನ್​ಗಳನ್ನು, ಅಂತರಿಕ್ಷದಲ್ಲಿ ಕಾರ್ಯನಿರ್ವಹಿಸುವಂಥ ಉಪಗ್ರಹಗಳನ್ನು ಅಭಿವೃದ್ಧಿ ಮಾಡಿರುವ ನಮಗೆ ಈ ಕಾರ್ವಿುಕರಿಗಾಗಿ ಸುರಕ್ಷಿತ ಮಾಸ್ಕ್​ಗಳನ್ನು ನಿರ್ವಿುಸಲು ಆಗುತ್ತಿಲ್ಲ ಏಕೆ? ಇನ್ನೆಷ್ಟು ಬಡ ಕಾರ್ವಿುಕರು ಚರಂಡಿಯಲ್ಲಿ ಉಸಿರುಗಟ್ಟಿ ಪ್ರಾಣ ಬಿಡಬೇಕು? ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರುವಾಗ ಮ್ಯಾನ್​ಹೋಲ್​ಗಳಲ್ಲಿ ಮನುಷ್ಯರು ಏಕೆ ಇಳಿಯಬೇಕು? ಕೃಕತ ಬುದ್ಧಿಮತ್ತೆಯಿಂದ ರೋಬಾಟ್ ತಯಾರಿಸಿ ಮ್ಯಾನ್​ಹೋಲ್ ಸ್ವಚ್ಛತೆಗೆ ಬಳಸಬೇಕಲ್ಲವೇ? ತಂತ್ರಜ್ಞಾನದ ಲಾಭ ಇಂಥ ಕ್ಷೇತ್ರಗಳಿಗೆ ತಲುಪಿದಾಗ ನಿಜವಾದ ಅಭಿವೃದ್ಧಿ ಸಾಧ್ಯ.

# ಬಾಲಿವುಡ್​ನಲ್ಲಿ ‘ಸ್ವದೇಶ್’ ಚಿತ್ರ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಈ ಚಿತ್ರಕಥೆಗೆ ನಿಮ್ಮ ‘ಬಾಪುಕುಟಿ’ ಕೃತಿ ಪ್ರೇರಣೆಯಾಯಿತು. ಈ ಬರವಣಿಗೆಯ ಪಯಣದ ಬಗ್ಗೆ, ಪ್ರೇರಣೆ ಬಗ್ಗೆ ವಿವರಿಸಿ.

-ಇದು ಸ್ವಾರಸ್ಯಕರ ಪ್ರಸಂಗ. ನಾನು ಕುಟುಂಬದವರೊಡನೆ ‘ಲಗಾನ್’ ಚಿತ್ರ ನೋಡಲು ಟಾಕೀಸ್​ಗೆ ಹೋಗಿದ್ದೆ. ಆಮಿರ್ ಖಾನ್ ಅಭಿನಯ ಮತ್ತು ಆಶುತೋಶ್ ಗೊವಾರಿಕರ್ ನಿರ್ದೇಶನ ಬಹಳ ಇಷ್ಟವಾಯಿತು. ಅದೊಂದು ದಿನ ಆಶುತೋಶ್​ರನ್ನು ಭೇಟಿಯಾಗಿ, ಮೆಚ್ಚುಗೆ ಸೂಚಿಸಿದೆ, ‘ಬಾಪುಕುಟಿ’ ಕೃತಿ ನೀಡಿದೆ. ಅವರು ಆ ಪುಸ್ತಕ ನೋಡುತ್ತಿದ್ದಂತೆ ಅಚ್ಚರಿ ಮತ್ತು ಸಂತೋಷದಿಂದ ‘ನನಗೆ ಬೇಕಾದ ಬಹಳಷ್ಟು ವಿಷಯಗಳು ಇದರಲ್ಲಿವೆ, ಮುಂದೆ ಕೆಲಸ ಮಾಡೋಣ’ ಎಂದರು. ಆ ಬಳಿಕ ಹಲವು ಸಭೆಗಳು, ಚರ್ಚೆಗಳು ಆದವು. ‘ಬಾಪುಕುಟಿ’ಯ ಹಲವು ಪ್ರೇರಣಾದಾಯಿ ಅಂಶಗಳನ್ನು ಸ್ವದೇಶ್​ದಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರ ಹಿಟ್ ಆದ ಮೇಲೆ ನನಗೂ ಖುಷಿಯಾಯಿತು.

# ಪತ್ರಕರ್ತೆಯಾಗಿ ಅನುಭವಿಸಿದ ಸವಾಲುಗಳೇನು?

-ಟೆಲಿಗ್ರಾಫ್, ಇಂಡಿಯನ್ ಎಕ್ಸ್​ಪ್ರೆಸ್ ಮುಂತಾದ ಪತ್ರಿಕೆಗಳಲ್ಲಿ ಕೆಲಸ ಮಾಡುವಾಗ ಹಲವು ಸವಾಲುಗಳು ಬಂದವು. ಆದರೂ, ತನಿಖಾ ಪತ್ರಿಕೋದ್ಯಮ ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದೆ. ಭೂಗತ ದೊರೆ ಹಾಜಿ ಮಸ್ತಾನ್ ಸಂದರ್ಶನ ಮಾಡಿದ್ದು, ಮಾಫಿಯಾ ಡಾನ್ ಯೂಸುಫ್ ಪಟೇಲ್​ನೊಂದಿಗೆ ಮುಖಾಮುಖಿಯಾಗಿದ್ದು ಮರೆಯಲಾಗದ ಅನುಭವಗಳು. ಕೆಲವರು ಮಹಿಳೆ ಎಂಬ ಕಾರಣಕ್ಕೆ ಅವಕಾಶ ನಿರಾಕರಿಸಿದರೆ, ಮತ್ತೆ ಕೆಲವರು ಅವಕಾಶ ನೀಡಿದರು.

# ಆರ್ಥಿಕ ಪ್ರಜಾಪ್ರಭುತ್ವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ, ಸ್ವಾತಂತ್ರ್ಯ ಪ್ರಾಪ್ತಿಯ ಏಳು ದಶಕಗಳ ನಂತರವೂ ಆರ್ಥಿಕ ಅಸಮತೋಲನ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈ ಬಗ್ಗೆ ಪರಿಹಾರದ ದಾರಿಯೇನು?

-ನಿಜವಾದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವವರು ಮತ್ತು ಕೊಳ್ಳುವವರ ನಡುವೆ ಪ್ರಶ್ನೆ, ಸಂವಾದಗಳು ಏರ್ಪಡುವುದನ್ನು ನೋಡಿದ್ದೇವೆ. ಆದರೆ, ರೈತರ ಭೂಮಿ ಖರೀದಿಸುವ ಪ್ರಕ್ರಿಯೆ ನೋಡಿ. ಇಲ್ಲಿ ಮಾರುಕಟ್ಟೆಗಿಂತ ಅಗ್ಗವಾದ ದರವನ್ನು ರೈತರಿಗೆ ನೀಡಿ ಅವರ ಕೃಷಿಭೂಮಿ ಖರೀದಿಸಲಾಗುತ್ತದೆ. ಅದೆಷ್ಟೋ ರೈತರು ಭವಿಷ್ಯದ ಬಗ್ಗೆ ಯೋಚಿಸದೆ ಜಮೀನು ಮಾರಾಟ

ಮಾಡುತ್ತಾರೆ. ಇದು ಬರೀ ಜಮೀನು ಕಳೆದುಕೊಳ್ಳುವ ಪ್ರಶ್ನೆಯಲ್ಲ ಜತೆಗೆ ಅವರ ಮೂಲಕಸುಬು ಕೂಡ ಮರೆಯಾಗುತ್ತದೆ. ಸಾವಿರಾರು ರೈತರು ಕೃಷಿಯಿಂದ ವಿಮುಖರಾಗಿರುವುದು ಇದೇ ಕಾರಣಕ್ಕೆ. ಅಲ್ಲದೆ, ಸಮಾಜದ ಬಹಳಷ್ಟು ಜನರಿಗೆ ಆರ್ಥಿಕ ನಿರ್ವಹಣೆ ದೊಡ್ಡ ಸವಾಲು. ರೈತರು ಬಂದ ಹಣವನ್ನು ಖರ್ಚು ಮಾಡಿ, ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ತುತ್ತಾಗುತ್ತಾರೆ. ಇಲ್ಲೊಂದು ಸೂಕ್ಷ್ಮವನ್ನು ಗಮನಿಸಬೇಕು-ರೈತರಿಂದ ಖರೀದಿಸಿದ ಜಮೀನಿನ ಮೌಲ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಹೋಗುತ್ತದೆ, ಅದೇ ದುಡ್ಡಿನ ಮೌಲ್ಯ ಕುಸಿಯುತ್ತ ಹೋಗುತ್ತದೆ. ಹೀಗಿರುವಾಗ ಅಸಮತೋಲನ ಹೆಚ್ಚುತ್ತದೆ.

ಆರ್ಥಿಕ ಪ್ರಜಾಪ್ರಭುತ್ವ ಸಾಧಿಸಲು ಪ್ರಬಲ ಇಚ್ಛಾಶಕ್ತಿಯ ಅಗತ್ಯವಿದೆ. ಈ ದಾರಿಯಲ್ಲಿ ಕ್ರಮಿಸುವಾಗ ‘ಲಾಭ’ ಅನ್ನುವುದು ಮಾಧ್ಯಮವಾಗಬೇಕೆ ಹೊರತು ಅದೇ ಪರಮೊಚ್ಚ ಗುರಿಯಾಗಬಾರದು.

Leave a Reply

Your email address will not be published. Required fields are marked *

Back To Top