Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಪುಸ್ತಕ ನೋಡಿ ಪರೀಕ್ಷೆ ಬರೀರಿ!

Sunday, 08.07.2018, 3:05 AM       No Comments

ಸದ್ಯದ ಪ್ರಾಥಮಿಕ ಶಿಕ್ಷಣ ಪರೀಕ್ಷಾ ಪದ್ಧತಿ ಅವೈಜ್ಞಾನಿಕವಾಗಿದ್ದು ಮಕ್ಕಳು ನೇರವಾಗಿ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ಪದ್ಧತಿ ಜಾರಿಗೆ ತರಬೇಕಿದೆ ಎಂಬುದಾಗಿ ಪ್ರಾಥಮಿಕ ಶಿಕ್ಷಣ ಸಚಿವ ಎನ್. ಮಹೇಶ್ ಅವರು ನೀಡಿದ ಹೇಳಿಕೆ, ನಾಡಿನೆಲ್ಲೆಡೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಶೈಕ್ಷಣಿಕ ವಲಯದ ಗಣ್ಯರು ಪರ-ವಿರೋಧದ ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಈ ಗಹನ ವಿಷಯದ ಕುರಿತು ಶಿಕ್ಷಣ ಖಾತೆಯ ಇಬ್ಬರು ಮಾಜಿ ಸಚಿವರು, ಓರ್ವ ತಜ್ಞರು, ಮತ್ತೋರ್ವ ಮನೋವೈದ್ಯರ ವಿಶ್ಲೇಷಣೆಗಳು ಇಲ್ಲಿವೆ.

ಮಕ್ಕಳ ಭಯ ನಿವಾರಿಸುವ ಯತ್ನ

| ಎನ್. ಮಹೇಶ್, ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವರು

ಮುಂದಿನ ದಿನಗಳಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ತೆರೆದ ಪುಸ್ತಕ ಪರೀಕ್ಷೆ ನಡೆಸಬೇಕೆಂದು ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದು ನಿಜ. ಎಲ್ಲ ಪೂರ್ವ ತಯಾರಿಗಳನ್ನು ನಡೆಸಿ, ಶಿಕ್ಷಣ ತಜ್ಞರ ಜತೆ ಸಮಾಲೋಚಿಸಿ, ನಂತರವೇ ಈ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂಬ ಆಲೋಚನೆ ಇದೆ. ಇದಕ್ಕಾಗಿ ಈಗಿರುವ ಸಾಂಪ್ರದಾಯಿಕ ಶಿಕ್ಷಣವನ್ನು ದಿಢೀರನೆ ಬದಲಿಸುವುದಿಲ್ಲ. ಹಾಗೆ ಒಮ್ಮೆಲೇ ಕ್ರಾಂತಿ ಮಾಡುವ ಯೋಚನೆ ನನಗಿಲ್ಲ.

ವಾರ್ಷಿಕ ಪರೀಕ್ಷೆಯನ್ನು ಹೊರತುಪಡಿಸಿ ತರಗತಿಗಳಲ್ಲಿ ನಡೆಯುವ ಕಿರು ಪರೀಕ್ಷೆಗಳು, ಮಾದರಿ ಪರೀಕ್ಷೆ, ಮಧ್ಯಕಾಲಿಕ ಪರೀಕ್ಷೆಗಳಲ್ಲಿ ಪುಸ್ತಕ ನೋಡಿಕೊಂಡು ಪ್ರಶ್ನೆಗಳಿಗೆ ಉತ್ತರ ಬರೆಯುವುದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವ ಉದ್ದೇಶವಿದೆ. ನಾಲ್ಕಾರು ಪರೀಕ್ಷೆಗಳನ್ನು ಪುಸ್ತಕ ನೋಡಿಕೊಂಡು ಬರೆಯುವ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯನ್ನು ಪುಸ್ತಕ ನೋಡದೆ ಬರೆಯುವುದು ಕಷ್ಟವಾಗಲಾರದು. ಈಗ ಮಕ್ಕಳು ಭಾರವಾದ ಮನಸ್ಸಿನಿಂದ ಶಾಲೆಗೆ ಹೋಗುತ್ತಾರೆ. ಶಾಲೆ ಬಿಟ್ಟಾಗ ಪಂಜರದಿಂದ ಹೊರ ಬಂದ ಪಕ್ಷಿಯ ಹಾಗೆ ಮನೆಯತ್ತ ಓಡುತ್ತಾರೆ. ಅಲ್ಲದೆ, 10 ತಿಂಗಳು ಓದುವ ಈಗಿನ ಮಕ್ಕಳಿಗೆ ಏಕೆ ಪರೀಕ್ಷೆ ಬಗ್ಗೆ ಭಯವಿದೆ? ವರ್ಷವೆಲ್ಲ ಕಷ್ಟಪಟ್ಟು ಓದಿದ್ದನ್ನು 2-3 ಗಂಟೆಗಳ ಪರೀಕ್ಷೆಯಲ್ಲಿ ಬರೆಯಬೇಕಲ್ಲ ಎಂಬ ಭಾವನೆಯೇ ಈ ಭಯಕ್ಕೆ ಕಾರಣ. ಇಂತಹ ಭಯದಿಂದ ಮಕ್ಕಳನ್ನು ಮುಕ್ತಗೊಳಿಸಲು ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯಿಂದ ಸಾಧ್ಯವಾಗಬಹುದು.

ಹಾಗೆಂದು, ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವುದು ಸುಲಭದ ಕೆಲಸ ಎಂದುಕೊಳ್ಳಬೇಡಿ. ಆ ಪುಸ್ತಕವನ್ನು ಚೆನ್ನಾಗಿ ಓದಿದ್ದರೆ ಮಾತ್ರ ಬರೆಯಲು ಸಾಧ್ಯ. ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಬಡ್ತಿ ಹಾಗೂ ಇತರ ಉದ್ದೇಶಗಳಿಗೆ ಪರೀಕ್ಷೆಗಳನ್ನು ಪುಸ್ತಕ ನೋಡಿಕೊಂಡೇ ಬರೆಯುತ್ತಾರೆ. ಅಧಿಕಾರಿಗಳಿಗೆ ಈಗಾಗಲೇ ಇರುವ ಇಂತಹ ಪದ್ಧತಿಯನ್ನು ಮಕ್ಕಳಿಗೇಕೆ ಅಳವಡಿಸಬಾರದು ಎಂಬುದು ನಮ್ಮ ಚಿಂತನೆ.

ಪಾಠ ಮಾಡಿದ ನಂತರ ಮಕ್ಕಳಿಗೆ ಹೋಂ ವರ್ಕ್ ನೀಡುವುದನ್ನು ಕೈಬಿಡುವ ಚಿಂತನೆಯೂ ಇದೆ. ಪಾಠ ಮಾಡಿದ ಬಳಿಕ ಸಂಜೆ ಶಾಲೆಯಲ್ಲಿಯೇ ಪುಸ್ತಕ ನೋಡಿಕೊಂಡು ಪ್ರಶ್ನೋತ್ತರ ಬರೆಸುವಂತಾಗಬೇಕು. ನಾನು ಜಿಲ್ಲಾ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಮಂಡ್ಯ, ಕೋಲಾರ, ಕೊಡಗು ಜಿಲ್ಲೆಗಳಲ್ಲಿ ಕೆಲಸ ಮಾಡುವಾಗ ಹಾಸ್ಟೆಲ್​ಗಳಲ್ಲಿ ಎಸ್​ಎಸ್​ಎಲ್​ಸಿ ಫಲಿತಾಂಶ ಶೇ.30ರಷ್ಟು ಇರುತ್ತಿತ್ತು. ಮನೆಗಳಲ್ಲಿ ಓದಲು ಮುಕ್ತ ವಾತಾವರಣವಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಹಾಸ್ಟೆಲ್​ಗೆ ಸೇರಿಸಿದರೂ ಅವರು ಓದುತ್ತಿರಲಿಲ್ಲ. ಒತ್ತಡದಿಂದ ಹೊರ ಬಂದು ಮುಕ್ತವಾಗಿ ಓದಲಿ ಎಂದು ಸರ್ಕಾರ ಹಾಸ್ಟೆಲ್ ಸ್ಥಾಪಿಸಿ. ಸೂಕ್ತ ಸವಲತ್ತು ಕೊಟ್ಟರೂ ಉತ್ತಮ ಫಲಿತಾಂಶ ಬರುತ್ತಿರಲಿಲ್ಲ. ಮಕ್ಕಳು ಸದಾ ಕ್ರಿಯಾಶೀಲರಾಗಿರುತ್ತಾರೆ. ಶ್ರದ್ಧೆ ಇರುತ್ತದೆ. ಆದರೂ ಫಲಿತಾಂಶ ಮಾತ್ರ ಏಕೆ ಕಡಿಮೆಯಾಗುತ್ತಿದೆ ಎಂಬ ಚಿಂತೆ ನನ್ನನ್ನು ಕಾಡುತ್ತಿತ್ತು. ಆಗ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವುದನ್ನು ಪ್ರಯೋಗ ಮಾಡಿದರೆ ಹೇಗೆಂದು ಆಲೋಚಿಸಿದ್ದೆ. ಹಾಸ್ಟೆಲ್ ಮಕ್ಕಳಿಗೆ ಈ ಮಾದರಿಯಲ್ಲಿ ಪರೀಕ್ಷೆ ಬರೆಸಲು ಶುರು ಮಾಡಿದೆ. ಇದರ ಪರಿಣಾಮ ಹಾಸ್ಟೆಲ್ ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ಶೇ. 80ರಷ್ಟು ಫಲಿತಾಂಶ ಪಡೆದಿದ್ದರು. ತೆರೆದ ಪುಸ್ತಕ ಪರೀಕ್ಷೆ ಪದ್ಧತಿ ಜಾರಿ ಮಾಡಬೇಕೆಂಬುದಕ್ಕೆ ಇದೇ ಪ್ರೇರಣೆ.

ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವುದು ಕಾಪಿ ಮಾಡಿದಷ್ಟೇ ದೊಡ್ಡ ಅಪರಾಧ ಎಂಬಂತೆ ಕೆಲವರು ಬಿಂಬಿಸುತ್ತಿದ್ದಾರೆ. ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವುದಾದರೆ ಮಕ್ಕಳು ಸ್ವತಂತ್ರರಾಗಿದ್ದು ಕ್ರಿಯಾಶೀಲರಾಗುತ್ತಾರೆ. ಪರೀಕ್ಷಾ ಭಯ ಇರುವುದಿಲ್ಲ. ಇದು ಭಾರತದ ಯಾವ ರಾಜ್ಯಗಳಲ್ಲಿಯೂ ಇಲ್ಲ. ಅಮೆರಿಕ, ಫಿನ್​ಲ್ಯಾಂಡ್, ಕೆನಡಾ ದೇಶಗಳಲ್ಲಿದು ಯಶಸ್ವಿಯಾಗಿದೆ.

ಶಿಕ್ಷಣ ಎಂದರೆ ಹೊರಗಿನದನ್ನು ಹೇಳುವುದಲ್ಲ. ಮಕ್ಕಳಲ್ಲಿರುವ ಅಂತಃಸತ್ವವನ್ನು ಹೊರತರಬೇಕೆಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.

ಒಂದು ವಿಷಯವನ್ನು 10 ಬಾರಿ ಓದುವುದಕ್ಕಿಂತ ಒಂದು ಬಾರಿ ಬರೆಯುವುದು ಸೂಕ್ತ. ಶಿಕ್ಷಣ ವಿದ್ಯಾರ್ಥಿಸ್ನೇಹಿಯಾಗಿರಬೇಕು. ನಲಿ-ಕಲಿ ಕಾರ್ಯಕ್ರಮ ಜಾರಿ ಮಾಡಿರುವುದು ಈ ಕಾರಣದಿಂದಲೇ. ವರ್ಷಕ್ಕೆ 1.01 ಕೋಟಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕಿದೆ. ಇವರೆಲ್ಲ ಓದಿಕೊಂಡು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಸ್ವತಂತ್ರವಾಗಿ ಬದುಕಬೇಕಲ್ಲವೆ? ಬಜೆಟ್ ಅಧಿವೇಶನ ಮುಗಿದ ನಂತರ ಮಕ್ಕಳ ಮನೋವೈದ್ಯರು, ಶಿಕ್ಷಣ ತಜ್ಞರು, ಸ್ವಯಂ ಸೇವಾ ಸಂಸ್ಥೆಗಳ ವಿಷಯ ಪರಿಣತರು, ತಜ್ಞ ಶಿಕ್ಷಕರ ಕಾರ್ಯಾಗಾರ ಏರ್ಪಡಿಸುತ್ತೇನೆ. ಅಲ್ಲಿ ತೆರೆದ ಪುಸ್ತಕ ಪರೀಕ್ಷಾ ಪದ್ದತಿ ಜಾರಿ ಕುರಿತು ಸಮಾಲೋಚಿಸಿ ಮುಂದಿನ ಹೆಜ್ಜೆಯನ್ನು ಸರ್ಕಾರ ಇಡುತ್ತದೆ. ಏಕ ಕಾಲಕ್ಕೆ ಈ ಪದ್ಧತಿಯನ್ನು ಅನುಷ್ಠಾನ ಮಾಡುವ ಭ್ರಮೆಯಲ್ಲಿ ನಾನಿಲ್ಲ. ದೆೆಹಲಿಯಲ್ಲಿರುವ ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್ ಸರ್ಕಾರ ಶೈಕ್ಷಣಿಕವಾಗಿ ಸಾಕಷ್ಟು ಸುಧಾರಣೆ ಮಾಡಿದೆ ಎಂಬುದನ್ನು ಗಮನಿಸಿದ್ದೇನೆ. ಸದ್ಯದಲ್ಲೇ ಅಲ್ಲಿಗೂ ಭೇಟಿ ನೀಡಿ ಅಧ್ಯಯನ ನಡೆಸುತ್ತೇನೆ.

ನಿರೂಪಣೆ: ಪ್ರಸಾದ್ ಲಕ್ಕೂರು ಚಾಮರಾಜನಗರ


ನಮ್ಮ ಶಿಕ್ಷಣ ವ್ಯವಸ್ಥೆಗೆ ಒಗ್ಗುವುದಿಲ್ಲ

| ಕಿಮ್ಮನೆ ರತ್ನಾಕರ್, ಮಾಜಿ ಶಿಕ್ಷಣ ಸಚಿವರು

ಪುಸ್ತಕ ನೋಡಿ ಪರೀಕ್ಷೆ (ಓಪನ್ ಬುಕ್ ಎಕ್ಸಾಮ್ ಬರೆಯುವ ವ್ಯವಸ್ಥೆಯನ್ನು ಜಾರಿಗೆ ತರಲು ಸಚಿವ ಎನ್.ಮಹೇಶ್ ಚಿಂತನೆ ನಡೆಸಿರುವುದು ಸಕಾಲಿಕವಲ್ಲ ಎಂದೇ ನನ್ನ ಅಭಿಪ್ರಾಯ. ಇನ್ನೂ ನಮ್ಮ ದೇಶದ ವ್ಯವಸ್ಥೆ ಶಿಕ್ಷಣ ಸಚಿವರು ಹೇಳಿರುವ ಪದ್ಧತಿಗೆ ಹೊಂದಿಕೊಂಡಿಲ್ಲ. ವಿದ್ಯಾರ್ಥಿಗಳ ಸಾಕ್ಷಿಪ್ರಜ್ಞೆ ಆ ಮಟ್ಟಕ್ಕೆ ಬೆಳೆದಿಲ್ಲ. ಇನ್ನು ಪಾಲಕರು ಕೂಡ ಮಕ್ಕಳನ್ನು ಹೊಸ ವ್ಯವಸ್ಥೆಗೆ ಅಣಿಗೊಳಿಸುವ ಮನಸ್ಥಿತಿ ಬೆಳೆಸಿಕೊಂಡಿಲ್ಲ. ಶಿಕ್ಷಣ ಸಚಿವರು ಹೇಳಿರುವ ವ್ಯವಸ್ಥೆಯನ್ನು ಪಿಯು ನಂತರದ ಶಿಕ್ಷಣದಲ್ಲಿ ಅಳವಡಿಸುವ ಪ್ರಯೋಗ ಮಾಡಬಹುದೇ ಹೊರತು, ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ವ್ಯವಸ್ಥೆ ಈಗಿರುವಂತೆಯೇ ಮುಂದುವರೆಯುವುದು ಒಳಿತು ಎಂಬುದು ನನ್ನ ಖಚಿತ ನಿಲುವು. ನಾವು ಪರೀಕ್ಷೆ ನಡೆಸುವ ಪದ್ಧತಿ ಬಗ್ಗೆ ಚಿಂತೆ ನಡೆಸುವುದನ್ನು ಬಿಟ್ಟು ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವ ಕಾರ್ಯಕ್ರಮ, ಪಠ್ಯ ರೂಪಿಸುವುದು ಒಳ್ಳೆಯದು. ಎಸ್​ಎಸ್​ಎಲ್​ಸಿ ಒಳಗಿನ ಮಕ್ಕಳಲ್ಲಿ ದುಡಿಮೆಯ ಮಾರ್ಗ ತೋರುವ ಬದಲು, ಮುಂದೆ ಯಾವ ವೃತ್ತಿ ಆಯ್ದುಕೊಂಡರೆ ಒಳಿತು ಎಂಬ ಕನಿಷ್ಠ ಜ್ಞಾನ ಬೆಳೆಸಿದರೆ ಸಾಕು. ಓದುವ ಮಕ್ಕಳನ್ನು ದುಡಿಮೆ ಮಾರ್ಗಕ್ಕೆ ಕೊಂಡೊಯ್ಯುವುದು ಕೂಡ ಒಂದರ್ಥದಲ್ಲಿ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದಂತಾಗುತ್ತದೆ. ಇದರ ಬದಲು ನಮ್ಮ ಇತಿಹಾಸ, ವಿಜ್ಞಾನದ ಬಗ್ಗೆ ಅರಿವು ಮೂಡಿಸಬೇಕು. ಯಾರನ್ನು ಅನುಕರಣೆ ಮಾಡಬೇಕೆಂಬ ಅರಿವು ಮೂಡಿಸಬೇಕು. ಓಪನ್ ಬುಕ್ ಎಕ್ಸಾಮ್ ಮಾದರಿಯಿಂದ ಇದೆಲ್ಲವೂ ಅಸಾಧ್ಯ. ಒಂದು ವೇಳೆ ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇ ಆದರೆ ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಗಮನಹರಿಸುತ್ತಾರೆ. ಆಗ ಸರ್ಕಾರವೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪರೋಕ್ಷ ನೆರವು ನೀಡದಂತಾಗುತ್ತದೆ. ಈ ಬಗ್ಗೆ ಇನ್ನಷ್ಟು ಚರ್ಚೆ ನಡೆಯುವುದು ಅವಶ್ಯ.

ನಿರೂಪಣೆ: ಅರವಿಂದ ಅಕ್ಲಾಪುರ


ಓಪನ್ ಬುಕ್ ಕಲ್ಪನೆ ಅತ್ಯುತ್ತಮ

| ಎಚ್. ವಿಶ್ವನಾಥ್, ಮಾಜಿ ಶಿಕ್ಷಣ ಸಚಿವರು

ಶಾಲೆಗಳಲ್ಲಿ ಓಪನ್ ಬುಕ್ ಪರೀಕ್ಷಾ ಪದ್ಧತಿಯನ್ನು ಅಳವಡಿಸುವುದರಿಂದ ಮಕ್ಕಳಲ್ಲಿ ಜ್ಞಾನ ವೃದ್ಧಿಗೆ ಉತ್ತಮ ಅವಕಾಶ ಕಲ್ಪಿಸಿದಂತಾಗುತ್ತದೆ. ನಮ್ಮ ಶಿಕ್ಷಣ ಪದ್ಧತಿಯಲ್ಲಿ ಒಂದನೇ ತರಗತಿಯಿಂದ ಒಂಭತ್ತನೇ ತರಗತಿಯವರೆಗೂ ಶಾಲಾಮಟ್ಟದ ಪರೀಕ್ಷೆಗಳು ನಡೆಯುತ್ತವೆ. ಎಸ್​ಎಸ್​ಎಲ್​ಸಿಯಿಂದ ಆರಂಭಗೊಂಡು ನಂತರದ ಪರೀಕ್ಷೆಗಳು ಪಬ್ಲಿಕ್ ಪರೀಕ್ಷೆಗಳಾಗಿ ನಡೆಸಲ್ಪಡುತ್ತಿವೆ. ಇದರಿಂದ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದ ಆರಂಭಿಸಿ ಸ್ನಾತಕೋತ್ತರ ವ್ಯಾಸಂಗದವರೆಗೂ ನಿಗದಿತ ಅವಧಿಯ ಪರೀಕ್ಷೆಗಳಲ್ಲಿ ಪುಸ್ತಕ ನೋಡದೆ ಉತ್ತರ ಬರೆಯುವ ಪದ್ಧತಿ ಜಾರಿಯಲ್ಲಿದೆ. ಇದು ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ಹಾಗೂ ಪರಿಪೂರ್ಣ ವಿಕಸನಕ್ಕೆ ಅಡ್ಡಿಯಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಪರೀಕ್ಷಾ ವಿಧಾನವನ್ನೇ ಬದಲಾಯಿಸುವ ಅಗತ್ಯವಿದೆ. ಅಂದರೆ ಮೊದಲ ಹಂತವಾಗಿ ಒಂದನೇ ತರಗತಿಯಿಂದ ಒಂಭತ್ತರವರೆಗೆ ವಾರ್ಷಿಕವಾಗಿ ಮೂರು ತಿಂಗಳಿಗೊಂದರಂತೆ ಟೆಸ್ಟ್​ಗಳು ಹಾಗೂ ಅಂತಿಮ ಪರೀಕ್ಷೆಯನ್ನೂ ನಡೆಸುತ್ತೇವೆ. ಈ ವೇಳೆ ವಿದ್ಯಾರ್ಥಿಗಳಿಗೆ ಪ್ರಶ್ನೆಗಳ ಜತೆಗೆ ಉತ್ತರ ಬರೆಯಲು ಪುಸ್ತಕವನ್ನೂ ನೀಡಬೇಕು.

ಉತ್ತರ ಬರೆಯಲು ಅವಶ್ಯವಿದ್ದಲ್ಲಿ ಕ್ಯಾಲ್ಕುಲೇಟರ್, ಲಾಗ್ ಬುಕ್, ನೋಟ್ಸ್ ಹಾಗೂ ಪಠ್ಯಪುಸ್ತಕ… ಇನ್ನಿತರ ಪರಿಕರಗಳನ್ನ್ನೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಒದಗಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಪ್ರಶ್ನೆಯೊಂದಕ್ಕಾಗಿ ಉತ್ತರವನ್ನು ಹುಡುಕುವ ಕುತೂಹಲದೊಂದಿಗೆ ಬುದ್ಧಿವಂತಿಕೆಯೂ ವೃದ್ಧಿಯಾಗುತ್ತದೆ. ಪಠ್ಯದಲ್ಲಿ ಸಂಬಂಧಪಟ್ಟ ವಿಷಯಗಳ ಸಾರಾಂಶವನ್ನು ತಮ್ಮದೇ ಶೈಲಿಯಲ್ಲಿ ಅರ್ಥೈಸಿಕೊಂಡು ಉತ್ತರವನ್ನು ಬರೆಯುವ ಕಲೆ ಸಿದ್ಧಿಸುತ್ತದೆ. ಈ ಹಿಂದೆ ಕಾಪಿ ರೈಟಿಂಗ್ ಅಭ್ಯಾಸ ನಡೆಸುತ್ತಿದ್ದರು. ಈಗ ಇದು ಬಹಳಷ್ಟು ಕಡಿಮೆಯಾಗಿದೆ. ಅದೇ ರೀತಿ ವಿದ್ಯಾರ್ಥಿಗಳಿಗೆ ಯಾವುದೇ ಮೂಲ ವಿದ್ಯೆಯನ್ನೂ ಒದಗಿಸದೆ ಒಂದೇ ಬಾರಿ ಪುಸ್ತಕ ನೋಡದೆ ಉತ್ತರ ಬರೆಯಲು ಹೊರಟಾಗ ವಿಫಲರಾಗುವುದೇ ಹೆಚ್ಚು. ಇದನ್ನು ತಡೆಯಲು ಓಪನ್ ಬುಕ್ ಪದ್ಧತಿ ಅತ್ಯುತ್ತಮ. 10ನೇ ತರಗತಿಯ ಅಂತಿಮ ಪರೀಕ್ಷೆಯವರೆಗೂ ಇಂತಹುದೇ ಪದ್ಧತಿಯನ್ನು ಜಾರಿಗೊಳಿಸಿ ಅಂತಿಮ ಹಂತದ ಪರೀಕ್ಷೆಯನ್ನು ಈಗಿರುವಂತೆ ನಡೆಸಿದಲ್ಲಿ ಉತ್ತಮವಾದೀತು. ಈ ಕುರಿತು ನಾನು ರಾಜ್ಯದ ಶಿಕ್ಷಣ ಮಂತ್ರಿ ಜತೆ ಈಗಾಗಲೇ ಮಾತನಾಡಿದ್ದು, ರಾಜ್ಯಾದ್ಯಂತ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಲು ಸಲಹೆ ನೀಡಿದ್ದೇನೆ. ಸಚಿವರಿಂದ ಸಕಾರಾತ್ಮಕ ಸ್ಪಂದನೆಯೂ ದೊರೆತಿದೆ.

ನಿರೂಪಣೆ: ಶಿವು ಹುಣಸೂರು


ಪ್ರಾಥಮಿಕ ಹಂತದಲ್ಲಿ ಕಷ್ಟ

| ಪ್ರೊ.ಮಹೇಶ್ ದೇಸಾಯಿ. ಮಾನಸಿಕ ತಜ್ಞರು , ನಿರ್ದೇಶಕರು, ಡಿಮ್ಹಾನ್ಸ್, ಧಾರವಾಡ

ಮೆದುಳಿಗೆ ಕೆಲಸ ಕೊಡುವುದರಿಂದ ಮಾತ್ರ ಮೆದುಳಿನ ಬೆಳವಣಿಗೆ ಸಾಧ್ಯ. ಪುಸ್ತಕ ನೋಡಿ ಪರೀಕ್ಷೆ ಬರೆಯುವುದು ಜಸ್ಟ್ ಕಾಪಿ ಮಾಡಿದಂತಾಗುತ್ತದೆ. ಮೆದುಳಿಗೂ ಕೆಲಸ ಕೊಟ್ಟಂತಾಗುವುದಿಲ್ಲ. ಕೌಶಲ(ಸ್ಕಿಲ್) ಅಭಿವೃದ್ಧಿಯಾಗದು. ಜ್ಞಾನ ವೃದ್ಧಿಯಾಗದು. 18 ವರ್ಷದವರೆಗೂ ಮೆದುಳಿನ ಬೆಳವಣಿಗೆಯಾಗುತ್ತದೆ. ಇಂತಹ ಸಮಯದಲ್ಲೇ ಪುಸ್ತಕ ನೋಡಿ ಪರೀಕ್ಷೆ ಬರೆದರೆ ಮೆದುಳು ನಿಷ್ಕಿ್ರುಗೊಂಡು ಮಕ್ಕಳು ದಡ್ಡರಾಗುವ ಸಾಧ್ಯತೆಯೇ ಹೆಚ್ಚು. ವೃತ್ತಿಪರ ಶಿಕ್ಷಣ ಪಡೆಯುವಾಗ ಕಷ್ಟವಾಗಬಹುದು. ಹೀಗಾಗಿ ಪುಸ್ತಕ ನೋಡಿ ಪರೀಕ್ಷೆ ಬರೆಯುವ ವಿಧಾನ ಅಸಮಂಜಸ. ಕಂಠಪಾಠ, ಮನನದ ಮೂಲಕ ಪರೀಕ್ಷೆ ಎದುರಿಸುವುದೇ ಸರಿ. ಸೈಕಲ್ ಹೊಡೆಯವುದನ್ನು ನೋಡಿ

ಕಲಿಯಲಾಗದು. ಪ್ರಾಯೋಗಿಕ ವಾಗಿಯೇ ಕಲಿಯಬೇಕು. ಹಾಗೆಯೇ ಪ್ರಾಥಮಿಕ ಶಿಕ್ಷಣ.


ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ

| ಡಾ. ನಿರಂಜನಾರಾಧ್ಯ ವಿ.ಪಿ. ಶಿಕ್ಷಣ ತಜ್ಞರು

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಕಲಿಕಾ ಪ್ರಕ್ರಿಯೆಯ ದೊಡ್ಡ ದುರಂತವೆಂದರೆ ಕಲಿಕೆಯನ್ನು ಕೇವಲ ಪರೀಕ್ಷೆಯ ದೃಷ್ಟಿಯಿಂದ ನೋಡುವುದು ಮತ್ತು ಅಳೆಯುವುದು. ವಾಸ್ತವದಲ್ಲಿ ನಾವು ಹೆಚ್ಚು ಸಮಯವನ್ನು ಕಲಿಕಾ ಪ್ರಕ್ರಿಯೆಯನ್ನು ಉತ್ತಮಪಡಿಸುವ ಮೂಲಕ ಶಿಕ್ಷಣದ ಒಟ್ಟು ಗುಣಮಟ್ಟ ಸುಧಾರಿಸುವುದಕ್ಕಿಂತ ಹೆಚ್ಚಾಗಿ ಪರೀಕ್ಷೆ ಮತ್ತು ಪರೀಕ್ಷಾ ಪದ್ಧತಿಯ ಬಗ್ಗೆ ಮಾತನಾಡಲು ವ್ಯಯಿಸುತ್ತೇವೆ. ಕಾರಣ, ಪರೀಕ್ಷಿಸುವುದು ಕಲಿಸುವುದಕ್ಕಿಂತ ಅತ್ಯಂತ ಸುಲಭದ ಕೆಲಸ.

ಅರ್ಥಪೂರ್ಣ ಕಲಿಕೆ ಕಷ್ಟಸಾಧ್ಯ ಮಾತ್ರವಲ್ಲ, ಸವಾಲಿನ ಕೆಲಸವೂ ಹೌದು.

ಈ ಬಗ್ಗೆ ಸ್ವತಂತ್ರ ಭಾರತದ ಮೊದಲ ಮೂರು ದಶಕಗಳಲ್ಲಿ ವ್ಯಾಪಕವಾಗಿ ರ್ಚಚಿಸಿದ ನಾವು ಕೇವಲ ಪರೀಕ್ಷೆಗಳ ಬಗ್ಗೆ (ಅದು ಪುಸ್ತಕ ಮುಚ್ಚಿದ ಅಥವಾ ಪುಸ್ತಕ ತೆರೆದ ಪರೀಕ್ಷೆಯಾಗಿರಬಹುದು ಅಥವಾ ಪರೀಕ್ಷೆ ನಡೆಸುವ ವಿಧಾನವಾಗಿರಬಹುದು) ರ್ಚಚಿಸದೆ ಕಲಿಕೆಯ ಬಗ್ಗೆ ರ್ಚಚಿಸಿದೆವು. ಕೇವಲ ಕಲಿಕೆಯನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳುವ ಸಾಧನವಾಗಿ ಪರೀಕ್ಷೆಯನ್ನು ಹೇಗೆ ಬಳಸಬಹುದೆಂಬ ಬಗ್ಗೆ ಯೋಚಿಸಿದೆವು. ಅದಕ್ಕೇ ನಮ್ಮ ನೀತಿ, ಪಠ್ಯಕ್ರಮ ಚೌಕಟ್ಟು ಮತ್ತು ಕಾನೂನಿನಲ್ಲಿ ಒತ್ತು ನೀಡುತ್ತಾ ಬಂದೆವು. ಈ ಹೊಸ ಬದಲಾವಣೆಗಳ ದೃಷ್ಟಿಯಿಂದ, ಕಲಿಸುವುದೆಂದರೆ ವಿದ್ಯಾರ್ಥಿಯನ್ನು ಮಾನಸಿಕವಾಗಿ ಅರ್ಥೈಸಿಕೊಳ್ಳುವುದು; ಕಲಿಕೆಗೆ ಪೂರಕ ವಾತಾವರಣ ಕಟ್ಟಿಕೊಡುವುದು; ಕಲಿಕೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುವುದು; ಕಲಿಕೆಗೆ ಅಗತ್ಯವಾದ ಭೌತಿಕ ಸಂಪನ್ಮೂಲಗಳನ್ನು ಒದಗಿಸುವುದು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಮಕ್ಕಳ ಕಲಿಕೆಯನ್ನು ನಿರಂತರವಾಗಿ ಮತ್ತು ಅಷ್ಟೇ ವ್ಯಾಪಕವಾಗಿ ಮೌಲ್ಯಮಾಪನ ಮಾಡುವ ಮೂಲಕ ಕಲಿಕೆಯಲ್ಲಿನ ಎಡರು-ತೊಡರು, ಕಲಿಕೆಯಲ್ಲಿನ ಅಂತರ ಮತ್ತು ಅದನ್ನು ತೊಡೆದುಹಾಕಲು ತೆಗೆದುಕೊಳ್ಳಬಹುದಾದ ತಕ್ಷಣದ ಕ್ರಮಗಳು.

ಕಲಿಕೆ ಅಥವಾ ಗುಣಾತ್ಮಕ ಕಲಿಕೆಯನ್ನು ಸಾಧಿಸಲು ಅವಶ್ಯಕವಾದ ವಾತಾವರಣವನ್ನು ಕಟ್ಟಿಕೊಡಲು ಸಹಾಯಕವಾಗುವ ರೀತಿಯಲ್ಲಿ ಪೂರಕ ಅಂಶಗಳನ್ನು ತಿಳಿಯಲು ಸಹಾಯಕವಾಗಬಹುದಾದ ಮೇಲಿನ ವಿಶಾಲ ಕಲಿಕಾ ಚೌಕಟ್ಟಿನ ನೀತಿ, ಪಠ್ಯಕ್ರಮ ಹಾಗೂ ಕಾನೂನಿನ ಚೌಕಟ್ಟುಗಳಿಗೆ ಶಿಕ್ಷಣ ಸಚಿವರ ಹೇಳಿಕೆಯನ್ನು ಒರೆಗೆ ಹಚ್ಚಿ ನೋಡಿದರೆ, ಅವರು ಕಲಿಕಾ ವ್ಯವಸ್ಥೆಯನ್ನು ಪರಿಭಾವಿಸುವ ರೀತಿ ಮತ್ತು ಅವರು ಸೂಚಿಸುತ್ತಿರುವ ಮಾಗೋಪಾಯಗಳು ನೀತಿ, ಪಠ್ಯಕ್ರಮ ಹಾಗೂ ಕಾನೂನಿನ ಚೌಕಟ್ಟಿಗೆ ವ್ಯತಿರಿಕ್ತವಾಗಿವೆ.

ವ್ಯಾಪಕ ಶೈಕ್ಷಣಿಕ ಚರ್ಚೆಯ ಮೂಲಕ ರೂಪುಗೊಂಡ ಮೊದಲ ಸಮಗ್ರ ರಾಷ್ಟ್ರೀಯ ಶಿಕ್ಷಣ ನೀತಿಯು ಕಲಿಕಾ ಸಾಮರ್ಥ್ಯ ಮೌಲ್ಯಾಂಕನವು ಯಾವುದೇ ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿರುತ್ತದೆ. ಪರೀಕ್ಷೆಯನ್ನು ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಒಂದು ಉತ್ತಮ ಶೈಕ್ಷಣಿಕ ಕಾರ್ಯತಂತ್ರವಾಗಿ ಬಳಸಬೇಕೆಂಬ ಅಂಶವನ್ನು ಪ್ರತಿಪಾದಿಸಿತು. (ರಾಷ್ಟ್ರೀಯ ಶಿಕ್ಷಣ ನೀತಿ: 1986, ಪ್ಯಾರಾ 8.23)

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮೌಲ್ಯಾಂಕನ ಮತ್ತು ಮೌಲ್ಯಮಾಪನದ ಬಗ್ಗೆ ರ್ಚಚಿಸುತ್ತಾ, ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಮಾಪನ ಎಂಬ ಪದವು ಪರೀಕ್ಷೆ, ಒತ್ತಡ ಮತ್ತು ಆತಂಕಗಳ ಜತೆ ಸಂಯೋಜನೆಯಾಗಿದೆ ಎಂಬ ಅಂಶವನ್ನು ಪ್ರಸ್ತಾಪಿಸಿತು. ಈ ಹಿನ್ನೆಲೆಯಲ್ಲಿ, ಮೌಲ್ಯಮಾಪನದ ಅಗತ್ಯ ಮತ್ತು ಉದ್ದೇಶಗಳನ್ನು ವಿವರಿಸುತ್ತ, ಒಂದು ಉತ್ತಮ ಮೌಲ್ಯಮಾಪನ ವ್ಯವಸ್ಥೆ ಕಲಿಕಾ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದ್ದು, ಅಗತ್ಯ ವಾಸ್ತವಿಕ ಸಲಹೆ-ಸೂಚನೆಗಳ ಮೂಲಕ ಕಲಿಕಾರ್ಥಿ ಮತ್ತು ಶಿಕ್ಷಣ ವ್ಯವಸ್ಥೆ ಎರಡಕ್ಕೂ ಸಹಾಯಕಾರಿಯಾಗುತ್ತದೆ ಎಂಬ ಅಂಶವನ್ನು ಪ್ರತಿಪಾದಿಸಿತು.

ಪೂರ್ವ-ಪ್ರಾಥಮಿಕ ಮತ್ತು ಒಂದು, ಎರಡನೇ ತರಗತಿಗಳಿಗೆ ಮೌಲ್ಯಾಂಕನವು ಕಟ್ಟುನಿಟ್ಟಾಗಿ ಕೇವಲ ಮಕ್ಕಳ ದೈನಂದಿನ ಚಟುವಟಿಕೆಗಳನ್ನು ಗಮನಿಸಿ ಗುಣಾತ್ಮಕವಾಗಿ ತೀರ್ವನಿಸುವ ಮೂಲಕ ಮಕ್ಕಳ ಆರೋಗ್ಯ, ದೈಹಿಕ ಬೆೆಳವಣಿಗೆ ಮತ್ತು ಪ್ರಾರಂಭಿಕ ಕಲಿಕೆಯ ವಸ್ತುಸ್ಥಿತಿಯನ್ನು ಮೌಲ್ಯಾಂಕನ ಮಾಡಬೇಕು. ಅವರನ್ನು ಯಾವುದೇ ರೀತಿಯ ಮೌಖಿಕ ಅಥವಾ ಲಿಖಿತ ಪರೀಕ್ಷೆಗೆ ಒಳಪಡಿಸಬಾರದು. ಮೂರನೇ ತರಗತಿಯಿಂದ 8ನೇ ತರಗತಿಯವರೆಗೆ ಮಕ್ಕಳನ್ನು ಯಾವುದೇ ಒತ್ತಡವಿಲ್ಲದೆ ಸರಳ, ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದ ಮೂಲಕ ಮೌಲ್ಯಾಂಕನ ಮಾಡಿ ಮಕ್ಕಳ ಕಲಿಕೆಗೆ ಪೂರಕವಾಗಿ ಈ ಸಾಧನಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದು ಬಲವಾಗಿ ಪ್ರತಿಪಾದಿಸಿತು. ಮೌಲ್ಯಾಂಕನದ ಮೂಲ ಉದ್ದೇಶ ಮಕ್ಕಳು ಹಾಗೂ ಶಿಕ್ಷಕರು ತಾವು ಸಾಧಿಸಬೇಕಾದ ಉದ್ದೇಶಗಳನ್ನು ಸಾಧಿಸುವ ನಿಟ್ಟಿನಲ್ಲಿ ಎಷ್ಟು ದೂರ ಕ್ರಮಿಸಿದ್ದಾರೆ ಎಂಬ ಪ್ರಗತಿಯನ್ನು ತಿಳಿಯುವುದಕ್ಕೇ ಹೊರತು, ಪರೀಕ್ಷೆ ಅಥವಾ ಮೌಲ್ಯಮಾಪನದ ಹೆಸರಿನಲ್ಲಿ ಮಕ್ಕಳಲ್ಲಿ ಭಯ ಅಥವಾ ಆತಂಕವನ್ನು ಮೂಡಿಸಲು ಬಳಸುವ ಸಾಧನವಾಗಬಾರದು (ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು: 2005, ಪುಟ 75-78).

ಈ ಎಲ್ಲ ನೀತಿ ಮತ್ತು ಪಠ್ಯಕ್ರಮಗಳ ಆಳವಾದ ಸಂಶೋಧನಾಧಾರಿತ ತತ್ವ ಹಾಗೂ ಚೌಕಟ್ಟುಗಳನ್ನು ಅಳವಡಿಸಿಕೊಂಡ ಶಿಕ್ಷಣ ಹಕ್ಕು ಕಾಯಿದೆ 2009, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಕಾನೂನಿನ ಚೌಕಟ್ಟನ್ನು ಅಳವಡಿಸಿ ರಾಷ್ಟ್ರೀಯ ಮಟ್ಟದಲ್ಲಿ ಕಾನೂನನ್ನೇ ಜಾರಿಗೊಳಿಸಿತು. ಶಿಕ್ಷಣ ಹಕ್ಕು ಕಾಯಿದೆ ಸೆಕ್ಷನ್ 29(2)ರ ಅನ್ವಯ ಕಲಿಕಾ ವಿಷಯ ಮತ್ತು ಮೌಲ್ಯಮಾಪನ ವ್ಯವಸ್ಥೆಯು ಸಂವಿಧಾನದ ಮೌಲ್ಯಗಳ ಅನುಸರಣೆ; ಮಕ್ಕಳ ಸರ್ವಾಂಗೀಣ ಅಭಿವೃದ್ಧಿ; ಮಕ್ಕಳ ಜ್ಞಾನ, ಸಾಮರ್ಥ್ಯ ಮತ್ತು ಪ್ರತಿಭೆಯ ಬಲವರ್ಧನೆ; ಪೂರ್ಣ ಪ್ರಮಾಣದಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳ ವಿಕಸನ; ಶಿಶು ಸ್ನೇಹಿ ಮತ್ತು ಶಿಶು ಕೇಂದ್ರೀಕೃತ ವಾತಾವರಣದಲ್ಲಿ ಕಲಿಕಾ ಚಟುವಟಿಕೆಗಳು; ಅನ್ವೇಷಣೆ ಮತ್ತು ಶೋಧನೆ ಮೂಲಕ ಕಲಿಕೆ; ಮಾತೃಭಾಷೆಯಲ್ಲಿ ಶಿಕ್ಷಣ ಮಾಧ್ಯಮ; ಮಗುವಿನ ಭಯ, ಆಘಾತ ಹಾಗೂ ಆತಂಕ ಹೋಗಲಾಡಿಸಿ ಮುಕ್ತವಾಗಿ ಕಲಿಯುವ ಮತ್ತು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ನೆರವಾಗುವ ಕಲಿಕಾ ವಾತಾವರಣ ಮತ್ತು ಮಕ್ಕಳ ಜ್ಞಾನದ ಗ್ರಹಿಕೆ ಮತ್ತು ಅದನ್ನು ಅನ್ವಯಿಸುವ ಸಾಮರ್ಥ್ಯದ ಬಗ್ಗೆ ವ್ಯಾಪಕ ಹಾಗೂ ನಿರಂತರ ಮೌಲ್ಯಮಾಪನವನ್ನು ಒಳಗೊಂಡಿರಬೇಕು (ಶಿಕ್ಷಣ ಹಕ್ಕು ಕಾಯಿದೆ, 2009: ಪ್ರಕರಣ 29.2).

ಈ ಎಲ್ಲ ಅಂಶಗಳ ಜತೆಗೆ ಪರಿಗಣಿಸಬೇಕಾದ ಮತ್ತೊಂದು ಮಹತ್ವದ ಅಂಶವೆಂದರೆ, ಕಲಿಕೆ ಮತ್ತು ಶಿಕ್ಷಣದ ಉದ್ದೇಶಗಳ ವರ್ಗೀಕರಣ ಶಾಸ್ತ್ರದ ಪಿತಾಮಹ ಎನಿಸಿಕೊಂಡಿರುವ ಡಾ.ಬೆಂಜಮಿನ್ ಬ್ಲೂಮ್ ಅವರ ಮೂಲ ಚಿಂತನೆಯ ಪ್ರಕಾರ, ಪ್ರಾರಂಭಿಕ ಕಲಿಕೆ ಅಂದರೆ ಪ್ರಾಥಮಿಕ ಹಂತದಲ್ಲಿ ಕಲಿಕಾ ಪ್ರಕ್ರಿಯೆ ವಿಷಯ ಅಥವಾ ಮಾಹಿತಿಯನ್ನು ಸಂಗ್ರಹಿಸುವ ಅರಿಯುವ ಮೂಲಕ ಸ್ಮರಣೆ, ಅನುಕರಣೆ, ಪುನರುಚ್ಚಾರ, ಪುನರ್ಮನನ, ಅಭ್ಯಾಸ ಇತ್ಯಾದಿ ಕ್ರಿಯೆಗಳನ್ನು ಒಳಗೊಂಡಿರುತ್ತದೆ (ಡಾ.ಬೆಂಜಮಿನ್ ಬ್ಲೂಮ್ 1956, ಲಾರಿನ್ ಆಂಡರ್ಸನ್, 2000). ಒಟ್ಟಾರೆ, ನಮ್ಮ ಶಿಕ್ಷಣ ನೀತಿ, ಪಠ್ಯಕ್ರಮ ಚೌಕಟ್ಟು ಮತ್ತು ಶಿಕ್ಷಣ ಹಕ್ಕು ಕಾಯಿದೆ ಮಕ್ಕಳ ಕಲಿಕಾ ವ್ಯವಸ್ಥೆ ಮತ್ತು ಪ್ರಗತಿಯನ್ನು ಮೌಲ್ಯಾಂಕನ ಮಾಡುವ ಮೌಲ್ಯಮಾಪನ ವ್ಯವಸ್ಥೆ ಹೇಗಿರಬೇಕೆಂಬ ಚೌಕಟ್ಟನ್ನು ವೈಜ್ಞಾನಿಕವಾಗಿ ಮತ್ತು ಶಿಕ್ಷಣ ಶಾಸ್ತ್ರೀಯ ಚೌಕಟ್ಟಿನಲ್ಲಿ ಹಲವು ಚರ್ಚೆ ಸಂಶೋಧನೆಗಳ ನೆಲೆಯಲ್ಲಿ ರೂಪಿಸಿ ಅಳವಡಿಸಿಕೊಂಡಿದೆ.

ನೀತಿಯ ಚೌಕಟ್ಟು ಹೀಗಿರುವಾಗ, ಅದನ್ನು ಜಾರಿಗೊಳಿಸಬೇಕಾದ ಜವಾಬ್ದಾರಿ ಹೊತ್ತಿರುವ ಸಚಿವರು ಶಿಕ್ಷಣ ನೀತಿ, ಪಠ್ಯಕ್ರಮ ಚೌಕಟ್ಟು ಮತ್ತು ಶಿಕ್ಷಣ ಹಕ್ಕು ಕಾಯಿದೆಯಲ್ಲಿನ ಮಾನದಂಡಗಳ ಅರಿವಿಲ್ಲದೆ ಏಕಾಏಕಿ ತೆರೆದ ಪುಸ್ತಕದ ಪರೀಕ್ಷಾ ಪದ್ಧತಿಯನ್ನು ಜಾರಿಗೊಳಿಸಬೇಕೆಂದು ಹೇಳುವುದು ನೀತಿ ಕಾನೂನಿನ ಉಲ್ಲಂಘನೆಯಾದಂತಾಗುತ್ತದೆ. ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೊಬ್ಬರು ತಾವು ಕೆಲಸ ನಿರ್ವಹಿಸುವ ಕ್ಷೇತ್ರದಲ್ಲಿ ಅಗಿರುವ ಸಮಗ್ರ ಬದಲಾವಣೆಗಳ ಬಗ್ಗೆ ಅರಿಯದೆ, ಹಲವು ದಶಕಗಳ ಹಿಂದೆ ಪರೀಕ್ಷೆ ಕುರಿತಂತೆ ನಮಗಿದ್ದ ಅಭಿಪ್ರಾಯವನ್ನು ಆಧರಿಸಿ ಹೇಳಿಕೆಗಳನ್ನು ನೀಡುವುದು ಸಮಂಜಸವೇ ಎಂಬ ಪ್ರಶ್ನೆ ಮೂಡುವುದು ಸಹಜ. ಸಚಿವ ಮಹೇಶ್ ಅವರ ತೆರೆದ ಪುಸ್ತಕ ಪರೀಕ್ಷೆಯ ಚಿಂತನೆ ಶಿಕ್ಷಣ ನೀತಿ, ಪಠ್ಯಕ್ರಮ ಚೌಕಟ್ಟು ಮತ್ತು ಶಿಕ್ಷಣ ಹಕ್ಕು ಕಾಯಿದೆಯಲ್ಲಿನ ಮಾನದಂಡಗಳಿಗೆ ಪೂರವಾಗಿಲ್ಲ. ಜತೆಗೆ, ತೆರೆದ ಪುಸ್ತಕ ಪರೀಕ್ಷೆಯು ಪ್ರಾಥಮಿಕ ಹಂತದಲ್ಲಿನ ಕಲಿಕಾ ಪ್ರಕ್ರಿಯೆ ಮತ್ತು ಆ ಹಂತದಲ್ಲಿ ಮಕ್ಕಳ ಮೌಲ್ಯಾಂಖನಕ್ಕೆ ಬಳಸಲು ಕಾರ್ಯಸಾಧುವಾದ ಸಾಧನವಾಗಲಾರದು.ಈ ಎಲ್ಲ ದೃಷ್ಟಿಯಿಂದ, ಶಿಕ್ಷಣ ಸಚಿವರ ಪ್ರಸ್ತಾವನೆ ಪ್ರಾಥಮಿಕ ಮಕ್ಕಳ ಬೌದ್ಧಿಕ ಮಟ್ಟವನ್ನು ಅಳೆಯಲು ಸೂಕ್ತ ಮೌಲ್ಯಮಾಪನ ಸಾಧನವಾಗುವುದಿಲ್ಲ. ಬದಲಿಗೆ ಸಚಿವರು ಶಿಕ್ಷಣ ಹಕ್ಕು ಕಾಯ್ದೆಯಲ್ಲಿನ ವ್ಯಾಪಕ ಹಾಗೂ ನಿರಂತರ ಮೌಲ್ಯಮಾಪನವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಕ್ತ ಕ್ರಮ ಕೈಗೊಳ್ಳುವುದು ಪ್ರಸ್ತುತ ಶಿಕ್ಷಣ ನೀತಿ, ಪಠ್ಯಕ್ರಮ ಚೌಕಟ್ಟು ಮತ್ತು ಶಿಕ್ಷಣ ಹಕ್ಕು ಕಾಯಿದೆಯಲ್ಲಿನ ಮಾನದಂಡಗಳನ್ನು ಗೌರವಿಸಿದಂತಾಗುತ್ತದೆ.

(ಲೇಖಕರು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ, ಮಗು ಮತ್ತು ಕಾನೂನು ಕೇಂದ್ರದ ಸಮಾನ ಗುಣಮಟ್ಟದ ಶಾಲಾ ಶಿಕ್ಷಣದ ಸಾರ್ವತ್ರೀಕರಣ ಕಾರ್ಯಕ್ರಮದ ಫೆಲೋ ಹಾಗೂ ಮುಖ್ಯಸ್ಥರು.)

Leave a Reply

Your email address will not be published. Required fields are marked *

Back To Top