ಸೇವೆಯ ಆದರ್ಶದಿಂದ ಮೈದಳೆದ ಕ್ಯಾನ್ಸರ್ ಸಂಸ್ಥಾನ

ಆರೆಸ್ಸೆಸ್ ಬಗ್ಗೆ ತಪ್ಪುಕಲ್ಪನೆ ಹೊಂದಿರುವವರು ಅದನ್ನೊಂದು ಕೋಮುಸಂಘಟನೆಯಾಗಿ ಕಾಣುತ್ತಾರೆ. ಸಂಘದ ಎಷ್ಟೋ ಉತ್ತಮ ಕಾರ್ಯಗಳು ಇವರ ಗಮನಕ್ಕೆ ಬರುತ್ತಿಲ್ಲ. ಇದಕ್ಕೆ ಒಂದು ಉದಾಹರಣೆ ನಾಗ್ಪುರದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥಾನ. ಸ್ವಯಂಸೇವಕರ ಕನಸಿನಿಂದಲೇ ಹುಟ್ಟಿಕೊಂಡ ಈ ಸಂಸ್ಥೆ ಇಂದು ಅದೆಷ್ಟೋ ಕ್ಯಾನ್ಸರ್ ರೋಗಿಗಳಿಗೆ ಆಶಾಕಿರಣವಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಈ ಸಲದ ಗಣರಾಜ್ಯೋತ್ಸವದಂದು ಕೇರಳದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಿದರು. ಇದು ಎಂತಹ ಕೋಲಾಹಲ ಸೃಷ್ಟಿಸಿತೆಂದರೆ ಏನಾದರೂ ಅವಘಡವಾಯಿತೇ ಎನ್ನುವ ಅನುಮಾನ ಹುಟ್ಟಿಕೊಂಡಿತ್ತು. ಕೇರಳದ ಕಮ್ಯೂನಿಸ್ಟ್ ಸರ್ಕಾರವಂತೂ ಭಾಗವತ್ ಅವರಿಗೆ ರಾಜ್ಯದ ಯಾವ ಶಾಲೆಯಲ್ಲೂ ಧ್ವಜಾರೋಹಣಕ್ಕೆ ಅವಕಾಶ ನೀಡಬಾರದೆಂಬ ಉದ್ದೇಶದಿಂದ ಆದೇಶವನ್ನೂ ಹೊರಡಿಸಿತ್ತು. ಓರ್ವ ಭಾರತೀಯ ನಾಗರಿಕ ಶಾಲೆಯಲ್ಲಿ ತ್ರಿವರ್ಣ ಧ್ವಜ ಹಾರಿಸಬಾರದು ಎಂದರೆ?! 1962ರ ಚೀನಾ ಆಕ್ರಮಣ ಸಂದರ್ಭದಲ್ಲಿ ಪಂಡಿತ್ ನೆಹರು ಸರ್ಕಾರ ಕಮ್ಯೂನಿಸ್ಟ್ ನಾಯಕರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಿತ್ತು. ಅಂತಹವರ ಮನಸ್ಸಿನಲ್ಲಿ ಅಚಾನಕ್ ಆಗಿ ತ್ರಿವರ್ಣ ಧ್ವಜದ ಮೇಲೆ ಭಕ್ತಿ ಮತ್ತು ನಿಷ್ಠೆ ಮೂಡಿದ್ದು ಅಚ್ಚರಿ ವಿಚಾರವಲ್ಲವೇ? ತಮ್ಮ ವೈಚಾರಿಕ ವಿರೋಧಿ ಆರೆಸ್ಸೆಸ್ ಪ್ರಮುಖರಿಗೆ ಕೇರಳದಲ್ಲಿ ಧ್ವಜಾರೋಹಣಕ್ಕೆ ಅವಕಾಶ ನೀಡಬಾರದು ಎನ್ನುವುದನ್ನು ಹೊರತುಪಡಿಸಿದರೆ ಇದಕ್ಕೆ ಮತ್ತಾವುದೇ ಕಾರಣ ಸಿಗುವುದಿಲ್ಲ. ಇದಕ್ಕಾಗಿ ಅವರು ಸಂವಿಧಾನವನ್ನು ಉಲ್ಲಂಘಿಸಿದರು.

ಸಂಘದ ಹೆಸರಿನಲ್ಲಿ ಹಿಂದುಗಳ ವಿರುದ್ಧದ ವಾತಾವರಣ ಸೃಷ್ಟಿಸುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಆದರೆ ಯಾವ ಸಂಘದ ವಿರುದ್ಧ ಇವರು ಈ ಮಟ್ಟಿಗೆ ವಿಷಕಾರುತ್ತಿದ್ದಾರೋ ಅದರ ವಾಸ್ತವವನ್ನು ಇವರು ಬಲ್ಲರೇನು? ಯಾರು ಸಂಘದ ಬಗ್ಗೆ ಏನನ್ನೂ ತಿಳಿದಿರುವುದಿಲ್ಲವೋ ಅವರು ವಿರೋಧ ವ್ಯಕ್ತಪಡಿಸುತ್ತಾರೆ ಮತ್ತು ಸಂಘದ ವಿರುದ್ಧ ಬರೆಯುತ್ತಾರೆ. ಸಂಘದ ಬಗ್ಗೆ ತಿಳಿದಿರುವವರಿಗೆ ಅದರ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ. ಕೆಲ ದಿನಗಳ ಹಿಂದೆ ನಾನು ನಾಗ್ಪುರದ ಸ್ಮೃತಿ ಮಂದಿರದ ಪುಣ್ಯಪ್ರಭೆಯ ದರ್ಶನ ಪಡೆದೆ ಮತ್ತು ಶ್ರೀರಾಮ ಜೋಶಿಯವರನ್ನು ಭೇಟಿಯಾದೆ. ಈ ಹಿಂದೆ 1997ರ ಜೂನ್ 19ರಂದು ನಾನು ಅವರನ್ನು ಭೇಟಿಯಾಗಿದ್ದೆ. ಆಗ ‘ಪಾಂಚಜನ್ಯ’ಕ್ಕಾಗಿ ಪ್ರಚಾರಕರ ಮಾತೆಯರನ್ನು ಕೇಂದ್ರಿತವಾಗಿಟ್ಟುಕೊಂಡು ಲೇಖನ ಬರೆಯಲಾಗಿತ್ತು. ಈ ಸಂದರ್ಭದಲ್ಲಿ ಸವಿತಾ ಶ್ರೀರಾಮ್ ಜೋಶಿಯವರನ್ನು ಭೇಟಿಯಾಗಿದ್ದೆವು. ಕೆಲ ದಿನಗಳ ಹಿಂದೆ ಆ ಪುಣ್ಯಶಾಲಿ ಮಾತೆಯ ನಿಧನವಾಯಿತು. ಇವರ ಪುತ್ರ ಸಂಘದ ಪ್ರಚಾರಕನಾಗಿ ಭಾರತ ಮಾತೆಯ ಸೇವೆಗೆ ಹೋಗಿದ್ದಾನೆ. ಶ್ರೀರಾಮ್ ಜೋಶಿಯವರಿಗೆ ಈಗ 84 ವರ್ಷ. ಆದರೆ ಇಂದಿಗೂ ಅವರು ಸಿಂಹಸಾಹಸಿ ಸ್ವಯಂಸೇವಕ. ಇತ್ತೀಚೆಗೆ ಅವರನ್ನು ಭೇಟಿಯಾದಾಗ ಆಬಾ ಜಿ ಥತ್ತೆ ಸ್ಮಾರಕ ಕ್ಯಾನ್ಸರ್ ಸಂಸ್ಥಾನದ ವಿಚಾರ ಚರ್ಚೆಗೆ ಬಂತು. ಆಬಾ ಜಿ ಥತ್ತೆ ಅರ್ಥಾತ್ ಡಾ. ವಾಸುದೇವ ಕೇಶವ್ ಥತ್ತೆ ಸಂಘದ ಪ್ರಚಾರಕರಾಗಿದ್ದರು. ಪೂಜ್ಯ ಗುರೂಜಿ (ಬಾಳಾ ಸಾಹೇಬ್ ದೇವರಸ್) ಅವರ ಆಪ್ತ ಸಹಾಯಕರಾಗಿ 45 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರು ಎನ್​ಎಂಓ ಅಂದರೆ ರಾಷ್ಟ್ರೀಯ ಮೆಡಿಕೋಸ್ ಸಂಘಟನೆಯ ಸಂಸ್ಥಾಪಕರೂ ಹೌದು. ಅವರ ಸ್ಮರಣಾರ್ಥವಾಗಿಯೇ ನಾಗ್ಪುರದಲ್ಲಿ ಡಾ. ಆಬಾಜಿ ಥತ್ತೆ ಸೇವಾ ಮತ್ತು ಅನುಸಂಧಾನ ಸಂಸ್ಥೆ ಆರಂಭಿಸಲಾಗಿದೆ. ದೇವೇಂದ್ರ ಫಡ್ನವೀಸ್ ಅವರು ಹಲವು ವರ್ಷಗಳ ಕಾಲ ಇದರ ಅಧ್ಯಕ್ಷರಾಗಿದ್ದರು. ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ನಂತರ ಜವಾಬ್ದಾರಿಯನ್ನು ಮನೋಹರ್ ಹೆಗಲಿಗೆ ವರ್ಗಾಯಿಸಲಾಯಿತು.

ದೇವೇಂದ್ರ ಫಡ್ನವೀಸ್​ರ ತಂದೆ ಗಂಗಾಧರ ರಾವ್ ಕ್ಯಾನ್ಸರ್​ನಿಂದಾಗಿ ಮೃತರಾಗಿದ್ದರು. ಸಂಘದ ಸ್ವಯಂಸೇವಕ ಶೈಲೇಶ್ ಜೋಗಳೆಕರ್ ಅವರ ಪತ್ನಿಯೂ ಕ್ಯಾನ್ಸರ್​ನಿಂದಾಗಿ ಯುವಾವಸ್ಥೆಯಲ್ಲಿಯೇ ಕೊನೆಯುಸಿರೆಳೆದಿದ್ದರು. ಇಂತಹ ಸಾವಿರಾರು ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ, ಕ್ಯಾನ್ಸರ್ ಚಿಕಿತ್ಸೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಸಂಸ್ಥೆಯನ್ನು ಕಟ್ಟುವ ಕನಸು ಕಾಣಲಾಯಿತು. ಇಲ್ಲಿ ಕಡಿಮೆ ಖರ್ಚಿನಲ್ಲಿ ಅತ್ಯುನ್ನತ ಗುಣಮಟ್ಟದ ಚಿಕಿತ್ಸೆ ಕೊಡಿಸುವುದು ಅವರ ಗುರಿಯಾಗಿತ್ತು. 20 ವರ್ಷಗಳಿಂದ ಆ ಕನಸನ್ನು ಕಾರ್ಯರೂಪಕ್ಕೆ ತರಲು ಹಲವರು ಶ್ರಮಿಸಿದರು. ಆರೆಸ್ಸೆಸ್​ನ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಜತೆಗೂ ಚರ್ಚೆ ನಡೆಸಲಾಯಿತು. ಸ್ವಯಂಸೇವಕರ ಮನಸ್ಸಿನಲ್ಲಿ ಸಂಕಲ್ಪವೊಂದು ಮೂಡಿದರೆ ಅದು ಸಾಕಾರ ಪಡೆದೇ ಪಡೆಯುತ್ತದೆ. ಇದಕ್ಕೆ ಉದಾಹರಣೆ ದೇವೇಂದ್ರ- ಶೈಲೇಶ್- ಮನೋಹರ್ ಅವರಂತಹ ಸಾವಿರಾರು ಕಾರ್ಯಕರ್ತರ ಶ್ರಮದ ಪರಿಣಾಮವಾಗಿ ಹುಟ್ಟಿಕೊಂಡಿತು- ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥಾನ. ಇದು 26 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. 2015ರಲ್ಲಿ ಇದರ ಪ್ರಥಮ ಚರಣದ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ದೇವೇಂದ್ರ ಫಡ್ನವೀಸ್ ಮಾಡಿದ ಭಾಷಣ ಕೇಳಿದರೆ ಇದರ ಪೂರ್ಣ ಪರಿಕಲ್ಪನೆ ಮನದಟ್ಟಾಗುತ್ತದೆ. ಇದು ನಾಗ್ಪುರ ವಿಮಾನ ನಿಲ್ದಾಣದಿಂದ 10 ಕಿಮೀ ದೂರದಲ್ಲಿದೆಯಷ್ಟೆ. ಹಂತಹಂತವಾಗಿ ಬೆಳೆಯುತ್ತ ಹೋದ ಕ್ಯಾನ್ಸರ್ ಸಂಸ್ಥಾನ ಈಗ 500 ಬೆಡ್​ಗಳ ಆಸ್ಪತ್ರೆ 7 ಲಕ್ಷ ಚದರ ಅಡಿ ಪ್ರದೇಶದಲ್ಲಿ ಪಸರಿಸಿದೆ. 400ಕ್ಕೂ ಅಧಿಕ ಡಾಕ್ಟರ್​ಗಳು, ನರ್ಸ್​ಗಳು ಇದ್ದಾರೆ.

ಈ ಮುಂಚೆ, ಆ ಭಾಗದ ಕ್ಯಾನ್ಸರ್ ಪೀಡಿತರು ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆದುಕೊಳ್ಳಲು ಟಾಟಾ ಅಥವಾ ದೆಹಲಿಯ ರಾಜೀವ್ ಗಾಂಧಿಯಂತಹ ಸಂಸ್ಥೆಗಳಿಗೆ ಬರಬೇಕಿತ್ತು. ಭಾರತದಲ್ಲಿ ಪ್ರತಿವರ್ಷ ಸುಮಾರು 7 ಲಕ್ಷ ಕ್ಯಾನ್ಸರ್ ಪೀಡಿತರು ಸರಿಯಾದ ಚಿಕಿತ್ಸೆ ಲಭ್ಯವಾಗದೆ ಅಥವಾ ಸರಿಯಾದ ಸಮಯದಲ್ಲಿ ಅದರ ಬಗ್ಗೆ ತಿಳಿದು ಬಾರದೆ ಸಂಕಷ್ಟ ಅನುಭವಿಸುತ್ತಾರೆ. ಈ ಸಂಕಟ ಹಾಗೂ ಆರ್ಥಿಕ ಹೊರೆಯ ಕಾರಣದಿಂದ ರೋಗಿಯ ಕುಟುಂಬಸ್ಥರಿಗೆ ಭವಿಷ್ಯವೇ ಅಂಧಕಾರದಲ್ಲಿ ಮುಳುಗಿಹೋದಂತೆ ಭಾಸವಾಗುತ್ತದೆ. ಅವರಿಗೆ ಚಿಕಿತ್ಸಾಲಯದಲ್ಲಿ ಉಳಿದುಕೊಳ್ಳಲು ಸ್ಥಳವಿರುವುದಿಲ್ಲ. ಅವರು ಜಮೀನು, ಮನೆ ಮಾರಾಟ ಮಾಡಿಯೋ, ಗಿರವಿ ಇಟ್ಟೋ ತಮ್ಮ ಪ್ರೀತಿಪಾತ್ರರನ್ನು ಉಳಿಸುವ ಪ್ರಯತ್ನ ಮಾಡುತ್ತಾರೆ. ಹೀಗಿರುವಾಗ ಪಂಚತಾರಾ ಹೋಟೆಲ್​ಗಳಂತಿರುವ ದೊಡ್ಡ ಆಸ್ಪತ್ರೆಗಳಲ್ಲಿ ಹೋಗಿ ಚಿಕಿತ್ಸೆ ಕೊಡಿಸಲು ಸಾಧ್ಯವೆ?

ಡಾ. ಹೆಡಗೆವಾರ್ ಮತ್ತು ಆಬಾಜಿ ಥತ್ತೆ ಸ್ಮರಣೆಯಲ್ಲಿ ಸ್ವಯಂಸೇವಕರು ಕ್ಯಾನ್ಸರ್ ಶೋಧ ಸಂಸ್ಥೆಗೆ ಮೂರ್ತರೂಪ ನೀಡಲು ಮುಂದಾದರು. ಶೈಲೇಶ್ ಜೋಗಳೆಕರ್ ಹೇಳುತ್ತಾರೆ- ಬಾಲರೋಗಿಗಳಿಗಾಗಿ ಪ್ರತ್ಯೇಕ ವಿಭಾಗ ಹೊಂದಿರುವ ಆಸ್ಪತ್ರೆ ಇದಾಗಿದ್ದು, ದೇಶದಲ್ಲೇ ಮೊದಲ ಬಾರಿ ಇಂತಹ ಪ್ರಯತ್ನ ಮಾಡಲಾಗಿದೆ. ಅಲ್ಲದೆ ಬಾಲರೋಗಿಗಳಿಗೆ ಶುಲ್ಕರಹಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಯ ಮನೆಯವರು ಸಿರಿವಂತರಾಗಿದ್ದರೂ ಉಚಿತವಾಗಿಯೇ ಚಿಕಿತ್ಸೆ ಸಿಗುತ್ತದೆ. ಅವರು ತೀರಾ ಇಚ್ಛೆ ವ್ಯಕ್ತಪಡಿಸಿದಲ್ಲಿ ಧನರೂಪದಲ್ಲಿ ಟ್ರಸ್ಟ್್ಟೆ ನಿಧಿ ನೀಡಬಹುದು. ಇಲ್ಲಿ ಕ್ಯಾನ್ಸರ್ ರೋಗಿ ಸೇವಕರನ್ನು ಹೊಂದುವ ಅವಕಾಶವಿದೆ. ಇವರು ರೋಗಿಗಳಿಗೆ ಸಲಹೆ ನೀಡುತ್ತಾರೆ. ಅವರ ಹಿಂದಿನ ದಾಖಲೆಗಳು, ಚಿಕಿತ್ಸಾಕ್ರಮ ಉಳಿದ ಎಲ್ಲ ರೀತಿಯ ಸೇವೆಗಳಿಗೆ ಇಲ್ಲಿ ಸ್ವಯಂಸೇವಾ ಸಹಾಯಕರಿರುತ್ತಾರೆ. ಇವರಿಗೆ ಕ್ಯಾನ್ಸರ್ ಯೋಧರು ಎಂದು ಹೇಳಲಾಗುತ್ತದೆ. ಇಲ್ಲಿನ ಡಾಕ್ಟರ್​ಗಳು ಕೂಡಾ ಕ್ಯಾನ್ಸರ್ ರೋಗಕ್ಕಿರುವ ನವೀನ ಔಷಧೋಪಚಾರಗಳು, ಚಿಕಿತ್ಸಾ ವಿಧಾನಗಳ ಬಗ್ಗೆ ಅರಿತುಕೊಂಡು ಚಿಕಿತ್ಸೆ ನೀಡುತ್ತಾರೆ. ಅಲ್ಲದೆ ರೋಗಿಗಳಿಗೆ ಮಾನಸಿಕ ಶಾಂತಿ ಕೊಡಿಸುವಂತಹ ಪ್ರಯತ್ನಗಳನ್ನೂ ಮಾಡಲಾಗುತ್ತದೆ.

ರೋಗಿಗಳು ಆಸ್ಪತ್ರೆಗೆ ಸೇರಿದಾಗ ಅವರ ಸಹಾಯಕ್ಕೆಂದು ಬರುವ ಅವರ ಮನೆಯವರು ಉಳಿದುಕೊಳ್ಳುವುದು ದೊಡ್ಡ ಸಮಸ್ಯೆ. ಇದಕ್ಕೂ ಇಲ್ಲಿ ಉತ್ತರವಿದೆ ಆಸ್ಪತ್ರೆಯ ಪಕ್ಕದಲ್ಲೇ 50 ಅಪಾರ್ಟ್​ವೆುಂಟ್​ಗಳಿದ್ದು ಅವರು ಅಲ್ಲಿರಲು ಅವಕಾಶವಿದೆ. ಉಳಿದೆಡೆ ಸಿಟಿ ಸ್ಕಾ್ಯನ್, ಎಂಆರ್​ಐಗೆ 3-4 ಸಾವಿರದಿಂದ 7-8 ಸಾವಿರ ರೂ.ವರೆಗೆ ಖರ್ಚು ಮಾಡಬೇಕಾಗುತ್ತದೆ. ಹಾಗೇ ಹೊಟ್ಟೆಯ ಸ್ಕಾ್ಯನ್​ಗೆ

22ರಿಂದ 27 ಸಾವಿರ ರೂ.ವರೆಗೆ ವ್ಯಯಿಸಬೇಕಾಗುತ್ತದೆ. ಅದೇ ಇಲ್ಲಿ ಸಿಟಿ ಸ್ಕಾ್ಯನ್ ಮತ್ತು ಎಂಆರ್​ಐಗೆ 1,200 ರೂ.ನಿಂದ 3 ಸಾವಿರ ರೂ. ಖರ್ಚಾದರೆ, ಹೊಟ್ಟೆಯ ಸ್ಕಾ್ಯನ್ 12ರಿಂದ 15 ಸಾವಿರ ರೂ.ನಲ್ಲಿ ಆಗುತ್ತದೆ. ಆದರೆ ಈ ಎಲ್ಲ ಸೇವೆಗಳು ಕ್ಯಾನ್ಸರ್ ರೋಗಿಗಳಿಗೆ ಸೀಮಿತವಾದುದು.

ನಾನು ಡಾಕ್ಟರ್ ಅಲ್ಲ, ಆದರೆ ಈ ಎಲ್ಲ ವಿಚಾರಗಳನ್ನು ಓರ್ವ ಸ್ವಯಂಸೇವಕನಾಗಿ ಕೇಳಿದಾಗ ನನ್ನ ಕಣ್ಣುಗಳು ತೇವಗೊಂಡವು. ಎಷ್ಟೋ ರೋಗಿಗಳಿಗೆ ಡಾ. ಹೆಡಗೆವಾರ್ ಮತ್ತು ಆಬಾಜಿ ಥತ್ತೆ ಹೊಸ ಹುರುಪೊಂದನ್ನು ತುಂಬುತ್ತಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆ ಕೊಡಿಸುತ್ತಿದ್ದಾರೆ. ದೇವೇಂದ್ರ ಫಡ್ನವೀಸ್, ಶೈಲೇಶ್ ಜೋಗಳೆಕರ್, ಸತೀಶ್ ಸಲ್ಪೇಕರ್, ಅಧಿವಕ್ತಾ ಮನೋಹರ್ ಇವರೆಲ್ಲರೂ ಈ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಡಾ. ಹೆಡಗೇವಾರರ ಆದರ್ಶವನ್ನು ನೀವು ಈ ಆಸ್ಪತ್ರೆಯಲ್ಲಿ ನೋಡಬಹುದು. ಅರ್ಥಾತ್ ಅವರನ್ನು ಅಲ್ಲಿ ಜೀವಂತವಾಗಿ ಕಾಣಬಹುದು. ಫೆ.4 ರಾಷ್ಟ್ರೀಯ ಕ್ಯಾನ್ಸರ್ ದಿನ. ಆ ನೆವದಲ್ಲಿ ಇದನ್ನೆಲ್ಲ ಹೇಳಬೇಕೆನಿಸಿತು.

(ಲೇಖಕರು ನಿಕಟಪೂರ್ವ ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)

Leave a Reply

Your email address will not be published. Required fields are marked *