Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಸ್ವಪ್ರಶಂಸೆಯ ಹಿಂದಿರುವ ಸುಳ್ಳುಗಳು

Monday, 12.03.2018, 3:05 AM       No Comments

ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಕಾಂಗ್ರೆಸ್​ನ ಪಾತ್ರ ಮಹತ್ವದ್ದು ಎಂದು ಹೇಳುತ್ತಿರುತ್ತಾರೆ. ಆದರೆ ದೇಶ ವಿಭಜನೆ, ಭ್ರಷ್ಟಾಚಾರ ತಾಂಡವಕ್ಕೆ ಆ ಪಕ್ಷವೇ ಕಾರಣ ಅಲ್ಲವೆ? ನೆಹರು ಆಡಳಿತದಲ್ಲಂತೂ ನಮ್ಮ ದೇಶದ ಭಾಗವನ್ನು ಪಾಕಿಸ್ತಾನ, ಚೀನಾಗೆ ಬಿಟ್ಟುಕೊಟ್ಟಿದ್ದನ್ನು ಮರೆಯಲಾದೀತೆ?

 ಕಾಂಗ್ರೆಸ್ ತನ್ನ ಹೋರಾಟದ ಕಾರಣದಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತೆಂದು ಹೇಳಿಕೊಂಡು ಬೀಗುತ್ತದೆ. ಆದರೆ ಸತ್ಯವೇನೆಂದರೆ ಕಾಂಗ್ರೆಸ್​ನ ಕಾರಣದಿಂದ ಭಾರತವನ್ನು ಇಬ್ಭಾಗ ಮಾಡುವಂತಾಯಿತು. ದೇಶಕ್ಕೆ ಸ್ವಾತಂತ್ರ್ಯ ಸಿಗುವಂತಾಗಿದ್ದು, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್​ರಂತಹ ಸಾವಿರಾರು ಕ್ರಾಂತಿಕಾರಿಗಳ ಕಾರಣದಿಂದ. ಆದರೆ ಇದು ಯಾವತ್ತೂ ಮಹತ್ವಪೂರ್ಣ ವಿಚಾರವಾಗಲೇ ಇಲ್ಲ. 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಂದರ್ಭದಲ್ಲಾದ ದೇಶ ವಿಭಜನೆಯಲ್ಲಿ ಲಕ್ಷಾಂತರ ಜನರ ಮಾರಣಹೋಮ ನಡೆಯಿತು. ಭಾರತ ಇನ್ನೂ ಆ ನೋವಿನಿಂದ ಚೇತರಿಸಿಕೊಳ್ಳುವ ಮೊದಲೇ ಸೆಪ್ಟೆಂಬರ್​ನಲ್ಲಿ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿತು. ಮತ್ತೊಂದೆಡೆ ಚೀನಾ ಅಕ್ಸಾಯ್ ಚಿನ್ ಭಾಗವನ್ನು ಆಕ್ರಮಿಸಿಕೊಂಡಿತು. ಆಗಿನ ಪ್ರಧಾನಿ ಜವಾಹರಲಾಲ್ ನೆಹರು ನೀತಿನಿಲುವಿನಿಂದಾಗಿ ಭಾರತದ 1.25 ಲಕ್ಷ ಚದರ ಕಿಮೀ ಪ್ರದೇಶ ಪಾಕಿಸ್ತಾನ ಮತ್ತು ಚೀನಾದ ಪಾಲಾಗುವಂತಾಯಿತು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷಗಳು ಕಳೆದಿವೆ. ಆದರೆ ಪಾಕಿಸ್ತಾನ ಮತ್ತು ಚೀನಾಗೆ ಬಿಟ್ಟುಕೊಟ್ಟ 1.25 ಲಕ್ಷ ಚದರ ಕಿಮೀ ಭೂಮಿಯ ಬಗ್ಗೆ ಇಲ್ಲಿಯವರೆಗೆ ಯಾರೂ ಪ್ರಶ್ನೆ ಎತ್ತಿಲ್ಲ ಎನ್ನುವುದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ. ಕಾಂಗ್ರೆಸ್ ಇಲ್ಲಿಯವರೆಗೆ ಆ ಬಗ್ಗೆ ಒಂದಕ್ಷರವನ್ನೂ ಮಾತನಾಡಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಿಲ್ಲ. ಆ ಭೂಮಿಯನ್ನು ಹಿಂದಕ್ಕೆ ಪಡೆದುಕೊಳ್ಳುತ್ತೇವೆ ಎನ್ನುವ ಬಗೆಗೆ ಯಾವುದೇ ಸಂಕಲ್ಪವನ್ನೂ ಮಾಡಲಿಲ್ಲ. ಹಾಗಾದರೆ ಕಾಂಗ್ರೆಸ್ ನಾಯಕರು ಚೀನಾ ಪ್ರವಾಸ ಮಾಡಿಲ್ಲವೇ? ಮಾಡಿದ್ದಾರೆ. ಆದರೆ ಎಷ್ಟು ಜನರು ಚೀನಾ ನಾಯಕರೊಂದಿಗಿನ ಚರ್ಚೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ? ಗಡಿ ವಿವಾದ ಪರಿಹಾರಕ್ಕೆ ಪ್ರಯತ್ನಿಸಿದವರು ಅಟಲ್ ಬಿಹಾರಿ ವಾಜಪೇಯಿಯವರು. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಇದಕ್ಕಾಗಿಯೇ ಆಯೋಗ ರೂಪಿಸಿದ್ದರು.

ಪಂಡಿತ್ ನೆಹರು ಪ್ರಧಾನಿಯಾಗಿದ್ದಾಗ ಶ್ರೀನಗರದಲ್ಲಿ ಭಾರತೀಯ ಜನಸಂಘದ ಪ್ರಥಮ ಅಧ್ಯಕ್ಷ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ರಹಸ್ಯಮಯ ರೀತಿಯಲ್ಲಿ ಸಾವನ್ನಪ್ಪಿದ್ದರು. ಲೋಕಸಭೆಯಲ್ಲಿ ಈ ಬಗ್ಗೆ ರ್ಚಚಿಸಿದ್ದ ಅಟಲ್ ಬಿಹಾರಿ ವಾಜಪೇಯಿ ನೆಹರು ಮತ್ತು ಶೇಖ್ ಅಬ್ದುಲ್ಲಾ ಸಂಚಿನ ಪರಿಣಾಮವಾಗಿ ಈ ಹತ್ಯೆ ನಡೆಯಿತು ಎಂದು ಆರೋಪಿಸಿದ್ದರು. ನೆಹರು ಸಮಯದಲ್ಲಿ ಸಂಸತ್ತಿನಲ್ಲಾದ ಚರ್ಚೆಗಳು ಮತ್ತು ಭಾಷಣದಲ್ಲಿ ಶ್ಯಾಮ ಪ್ರಸಾದ್​ರದ್ದು ಹತ್ಯೆ ಎಂದೇ ಹೇಳಲಾಗುತ್ತಿತ್ತು.

ನೆಹರು ಚೀನಾದೊಂದಿಗೆ ಹೊಂದಿದ್ದ ಸ್ನೇಹವೂ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. 1948ರಲ್ಲಿ ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯತ್ವ ಸಿಗುವುದರಲ್ಲಿತ್ತು. ಆದರೆ ಕಮ್ಯೂನಿಸ್ಟ್ ಚೀನಾದ ಸ್ನೇಹದ ಆಸೆಯಿಂದ ಆ ದೇಶಕ್ಕೆ ನೆಹರು ಬೆಂಬಲ ಸೂಚಿಸಿದರು. ಇದರಿಂದ ಚೀನಾಗೆ ಭದ್ರತಾ ಮಂಡಳಿ ಸದಸ್ಯತ್ವ ಸಿಕ್ಕಿತು. ಚೀನಾದ ಪ್ರಧಾನಿಯಾಗಿದ್ದ ಚೌ ಎನ್ ಲೈ ಈ ವೇಳೆ ಒಂದೇ ವರ್ಷದ ಅವಧಿಯಲ್ಲಿ ಆರು ಬಾರಿ ಭಾರತಕ್ಕೆ ಆಗಮಿಸಿದ್ದರು. ಮತ್ತು ಕೆಂಪುಕೋಟೆಯಲ್ಲಿ ಅವರಿಗೆ ಸಾರ್ವಜನಿಕ ಅಭಿನಂದನೆಯೂ ನಡೆದಿತ್ತು.

ಇದರ ಪರಿಣಾಮ ಏನಾಯಿತು? 1962ರ ಯುದ್ಧ. ಇದಕ್ಕೆ ಭಾರತ ಮಾಡಿಕೊಂಡಿದ್ದ ತಯಾರಿ ಹೇಗಿತ್ತೆಂದರೆ, ಸೈನಿಕರಿಗೆ ಚಳಿಯಲ್ಲಿ ಹಾಕುವಂತಹ ಶೂ, ಸಾಕ್ಸ್ ಅಷ್ಟೇಕೆ ಸರಿಯಾದ ಶಸ್ತ್ರಾಸ್ತ್ರಗಳೂ ಇರಲಿಲ್ಲ. ಜನರಲ್ ಕೌಲ್ ಅದಕ್ಷತೆ, ಪ್ರಧಾನಿ ನೆಹರುರ ಅವ್ಯಾವಹಾರಿಕ ನೀತಿಯಿಂದ ನಫಾ ಮತ್ತು ಲಡಾಖ್ ಅನ್ನು ಚೀನಾ ತನ್ನ ಮುಷ್ಟಿಯಲ್ಲಿರಿಸಿಕೊಳ್ಳುವಂತಾಯಿತು. ನೆಹರು ಅವರಂತೂ ಆಲ್ ಇಂಡಿಯಾ ರೇಡಿಯೊ ಮೂಲಕ ಅಸ್ಸಾಂನ ತೇಜ್​ಪುರದ ನಿವಾಸಿಗಳಿಗೆ ವಿದಾಯ ಹೇಳಿಯೇಬಿಟ್ಟಿದ್ದರು. ನಿಜವೆಂದರೆ ಆ ಯುದ್ಧದಲ್ಲಿ ಭಾರತೀಯ ಸೇನೆ ಜಯಗಳಿಸಿತ್ತು. ಮೇಜರ್ ಶೇತಾನ್ ಸಿಂಗ್ ಶೌರ್ಯ, ರೈಫಲ್ ಮ್ಯಾನ್ ಜಸ್ಬತ್ ಸಿಂಗ್ ರಾವತ್​ರ ಪರಾಕ್ರಮ ಮೆರೆದಿತ್ತು. ಆದರೆ ದೆಹಲಿಯ ರಾಜಕೀಯ ನೇತೃತ್ವ ಯುದ್ಧದಲ್ಲಿ ಭಾರತವನ್ನು ಸೋಲಿಸಿತ್ತು.

ಭಾರತದ ಮೊದಲ ಭ್ರಷ್ಟಾಚಾರಕಾಂಡ ಜೀಪ್ ಹಗರಣ ಎಂದೇ ಕುಖ್ಯಾತಿ ಪಡೆದಿದೆ. ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿತ್ತು. ಆದರೆ ಭಾರತದ ಸೈನ್ಯದ ಬಳಿ ಜೀಪ್​ಗಳೇ ಇರಲಿಲ್ಲ. ಕೂಡಲೇ ಜೀಪ್ ಖರೀದಿಗೆ ಆದೇಶಿಸಲಾಗಿತ್ತು. ಆಗ ಲಂಡನ್​ನಲ್ಲಿದ್ದ ಭಾರತೀಯ ಹಿರಿಯ ಅಧಿಕಾರಿ ಟಿ.ಟಿ.ಕೃಷ್ಣಮಾಚಾರಿ ನೇತೃತ್ವದಲ್ಲಿ ವಿಲಿ ಮಾರ್ಕ್ ಜೀಪ್ ಖರೀದಿಸಲಾಯಿತು. ಆದರೆ ಜೀಪ್ ಭಾರತ ತಲುಪಿದ್ದು ಯುದ್ಧ ಮುಗಿದು 18 ತಿಂಗಳುಗಳು ಕಳೆದ ಮೇಲೆ! ಈ ವಿಚಾರ ಸಂಸತ್ತಿನಲ್ಲಿ ಭಾರಿ ಚರ್ಚೆಯಾಯಿತು. ಇದೂ ನೆಹರು ಕೊಡುಗೆಯೇ.

ನೆಹರುಗೆ ಹಿಂದುತ್ವ ಮತ್ತು ಹಿಂದು ಜೀವನ ಪದ್ಧತಿಯ ಮೇಲೆ ಎಷ್ಟೊಂದು ವಿರೋಧವಿತ್ತೆಂದರೆ ಅವರು ಅಹಿಂದುವಾದಿಯಾಗಿಯೇ ಗುರುತಿಸಿಕೊಂಡಿದ್ದರು. ಆಗಿನ ಮಾಧ್ಯಮಗಳ ಮೇಲೆ ನೆಹರು ಪ್ರಭಾವ ಇದ್ದುದರಿಂದ ನೆಹರು ಸಮರ್ಥನೆಯ ವಿಚಾರಗಳನ್ನು ಹೊರತುಪಡಿಸಿ ಬೇರೆ ಏನೂ ಮುದ್ರಿಸುತ್ತಿರಲಿಲ್ಲ. ಈ ಕಾರಣದಿಂದಲೇ ಅಂದು ಆರೆಸ್ಸೆಸ್​ನ ಸರಸಂಘಚಾಲಕರಾಗಿದ್ದ ಗೋಳ್ವಲಕರ ಅವರು ದೇಶದ ವಿಭಿನ್ನ ಭಾಷೆಗಳಲ್ಲಿ ರಾಷ್ಟ್ರೀಯತೆ ವಿಚಾರಗಳಿಗೆ ಮಹತ್ವ ನೀಡುವ ಪತ್ರಿಕೆಗಳ ಪ್ರಕಾಶನ ಆರಂಭಿಸಿದರು. ಪಾಂಚಜನ್ಯ, ಆರ್ಗನೈಸರ್, ಸ್ವದೇಶ್, ರಾಷ್ಟ್ರಧರ್ಮ, ಸಾಧನಾ, ಕೇಸರಿ, ಜನ್ಮಭೂಮಿ, ರಾಷ್ಟ್ರದೀಪ, ಜಾಗೃತಿ, ವಿಕ್ರಮ ಮುಂತಾದ ಪತ್ರಿಕೆಗಳ ಮೂಲಕ ಭಾರತೀಯ ವಿಚಾರಗಳ ಮುಕ್ತ ಹರಿವು ಸಾಧ್ಯವಾಯಿತು.

ಅಸಹಿಷ್ಣುತೆಯ ಛಾಯೆ ಕಾಂಗ್ರೆಸ್ ರಾಜನೀತಿಯ ಪ್ರತಿ ಹೆಜ್ಜೆಯಲ್ಲೂ ಕಂಡುಬಂತು. ದೇಶದ ಜನತೆಯಿಂದ ಗೌರವ ಪಡೆದುಕೊಂಡ ನಾಯಕರಿಗೆ ಕಾಂಗ್ರೆಸ್ ಮನ್ನಣೆಯನ್ನೇ ಕೊಟ್ಟಿಲ್ಲ. ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಪುರುಷೋತ್ತಮ ದಾಸ್ ಟಂಡನ್, ಡಾ. ಸಂಪೂರ್ಣಾನಂದ, ಕ.ಮಾ.ಮುನ್ಶಿ, ಲಾಲ್ ಬಹದ್ದೂರ್ ಶಾಸ್ತ್ರಿ, ಮುಂತಾದ ನಾಯಕರಿಗೆ ಪ್ರಖರ ರಾಷ್ಟ್ರವಾದದ ಕಾರಣದಿಂದ ಜವಮಾನಸದಲ್ಲಿ ಸ್ಥಾನ ಸಿಕ್ಕಿತೇ ಹೊರತು ನೆಹರು ಮುಂದಾಳತ್ವದ ಕಾಂಗ್ರೆಸ್ ಇವರನ್ನು ಕಡೆಗಣಿಸಿತ್ತು.

ನೆಹರು ನೇತೃತ್ವದಲ್ಲಿ ಭಾರತದ ಭೂಮಿಯನ್ನು ವಿದೇಶಿಯರಿಗೆ ಬಿಟ್ಟುಕೊಟ್ಟಿದ್ದು ಮಾತ್ರವಲ್ಲ ಭ್ರಷ್ಟಾಚಾರ ಬೃಹದಾಕಾರದಲ್ಲಿ ವ್ಯಾಪಿಸಲು ಕಾರಣವಾಯಿತು. ಜೀಪ್ ಹಗರಣ, ವಿಮಾ ಹಗರಣ, ನಗರ್​ವಾಲಾ ಹಗರಣ, ಲಲಿತ್ ನಾರಾಯಣ ಮಿಶ್ರಾ ಹತ್ಯಾಕಾಂಡ, ಕಾಶ್ಮೀರ ಸಮಸ್ಯೆಯ ಹುಟ್ಟು, 370ನೇ ವಿಧಿ ಜಾರಿ, ಜಮ್ಮು ಕಾಶ್ಮೀರಕ್ಕೆ ಬೇರೆ ಧ್ವಜಕ್ಕೆ ಅನುಮತಿ, ವಿದೇಶಿ ಸಿದ್ಧಾಂತ ಮತ್ತು ಹಣದಿಂದ ಬೆಳೆಯುತ್ತಿದ್ದ ಕಮ್ಯೂನಿಸ್ಟ್​ಗಳೊಂದಿಗೆ ಸ್ನೇಹ, ಆರೆಸ್ಸೆಸ್​ಗೆ ನಿರ್ಬಂಧ, ತುರ್ತಪರಿಸ್ಥಿತಿ ಘೋಷಿಸಿ ಅಭಿವ್ಯಕ್ತಿ ಸ್ವಾತಂತ್ರ್ಯ್ಕೆ ಧಕ್ಕೆ. ಬೋಫೋರ್ಸ್ ಹಗರಣ, ಜಲಾಂತರ್ಗಾಮಿ ಹಗರಣ, ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ, 2ಜಿ, 3ಜಿ ಹಗರಣ- ಹೀಗೆ ಕಾಂಗ್ರೆಸ್ ಆಡಳಿತಗಳ ಹಗರಣಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಇದೆಲ್ಲವೂ ನೆಹರು ವಂಶಸ್ಥರ ಅಧಿಕಾರ ಮತ್ತು ಸುಖಕ್ಕಾಗಿ ಮಾಡಿದ್ದು ಎನ್ನದೆ ವಿಧಿಯಿಲ್ಲ.

ಭಾರತದ ರಾಜನೀತಿಯ ದೇಹ ಸೆಕ್ಯುಲರ್ ಆಗಿರಬಹುದು ಆದರೆ ಮನಸ್ಸು ಮಾತ್ರ ಶುದ್ಧ, ಪ್ರಬುದ್ಧ ಹಿಂದುವಾಗಿದೆ. ಕಾಂಗ್ರೆಸ್ ಇಂತಹ ಹಿಂದು ಮನಸ್ಸಿಗೆ ಘಾಸಿ ಮಾಡಿದೆ. ಹಿಂದು ಬಾಹುಳ್ಯವುಳ್ಳ ರಾಷ್ಟ್ರದಲ್ಲಿಯೇ ಹಿಂದು ಜೀವನ ಮತ್ತು ಪದ್ಧತಿಗಳ ಬಗ್ಗೆ ರ್ಚಚಿಸುವುದು ಅಪರಾಧ ಎಂಬ ಮಟ್ಟಿಗೆ ಆಗಿದೆ.

ವಿದೇಶಿ ಮೂಲದ ಕ್ರೖೆಸ್ತ ಧರ್ವಿುಯರೊಬ್ಬರು ಭಾರತದ ರಾಜಕೀಯದಲ್ಲಿ ಪ್ರಮುಖ ಸ್ಥಾನದಲ್ಲಿರುವುದು ಹಿಂದುಗಳ ಉದಾರ ಮನಸ್ಸಿನ ಪ್ರತೀಕವಲ್ಲದೆ ಇನ್ನೇನು? ಬೇರೆ ದೇಶಗಳಲ್ಲಿ ಇದು ಕಲ್ಪನೆಗೂ ನಿಲುಕದ ವಿಚಾರ. ಆದರೆ ಜನಮಾನಸದಲ್ಲಿ ರಾಷ್ಟ್ರೀಯತೆ ಪ್ರವಹಿಸುತ್ತಲೇ ಇದೆ. ಆ ಪ್ರವಾಹದಲ್ಲಿ ಈಗ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದೆ. ದೇಶದ ಹಲವು ಭಾಗಗಳಲ್ಲಿ ಕಾಂಗ್ರೆಸ್ ಪ್ರಭಾವ ಕಳೆಗುಂದಿರುವುದೇ ಇದಕ್ಕೆ ಸಾಕ್ಷಿ. ಆ ಪಕ್ಷ ಇನ್ನಾದರೂ ಎಚ್ಚೆತ್ತುಕೊಳ್ಳುವುದೇ?

(ಲೇಖಕರು ನಿಕಟಪೂರ್ವ ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)

Leave a Reply

Your email address will not be published. Required fields are marked *

Back To Top